
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಹಂತ ಆಧಾರಿತ ಟಿಕೆಟ್ ದರ ಪದ್ಧತಿಯಿಂದಾಗಿ ಪ್ರಯಾಣಿಕರು ಕಡಿಮೆ ದೂರಕ್ಕೂ ಹೆಚ್ಚು ಹಣ ಪಾವತಿಸುವಂತಾಗಿದೆ. ಜಿಪಿಎಸ್ ತಂತ್ರಜ್ಞಾನ ಲಭ್ಯವಿದ್ದರೂ, ಬಿಎಂಟಿಸಿ ಹಳೆಯ ಪದ್ಧತಿಯನ್ನೇ ಮುಂದುವರಿಸಿದೆ.
ಬೆಂಗಳೂರು (ಫೆ.25): ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ‘ಹಂತ ಆಧಾರಿತ’ (Stage-based) ಟಿಕೆಟ್ ದರ ಪದ್ಧತಿಯಲ್ಲಿನ ಲೋಪದೋಷಗಳ ವಿರುದ್ಧ ಪ್ರಯಾಣಿಕರ ದೂರುಗಳು ಹೆಚ್ಚಾಗುತ್ತಿವೆ. ಜಿಪಿಎಸ್ (GPS) ತಂತ್ರಜ್ಞಾನ ಲಭ್ಯವಿರುವ ಈ ಕಾಲದಲ್ಲಿ ಬಿಎಂಟಿಸಿ ಇನ್ನು ಕಿಲೋಮೀಟರ್ ಆಧಾರಿತ ದರ ಪದ್ಧತಿಗೆ ಬದಲಾಗಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಬಿಎಂಟಿಸಿ ಈಗ ಹಂತ ಆಧಾರಿತ ಶುಲ್ಕ ವ್ಯವಸ್ಥೆಯನ್ನು ಅನುಸರಿಸುತ್ತಿದೆ, ಅಲ್ಲಿ ನಗರವನ್ನು ತಲಾ 2 ಕಿ.ಮೀ.ಗಳ ಸ್ಥಿರ ‘ಹಂತ’ಗಳಾಗಿ ವಿಂಗಡಿಸಲಾಗಿದೆ. ಪ್ರಯಾಣಿಕರು ದಾಟಿದ ಹಂತಗಳ ಸಂಖ್ಯೆಯನ್ನು ಅವಲಂಬಿಸಿ ಪಾವತಿ ಮಾಡುತ್ತಾರೆ. ಇದರರ್ಥ 2.5 ಕಿ.ಮೀ. ಪ್ರಯಾಣಿಸುವ ಪ್ರಯಾಣಿಕರು ಮುಂದಿನ ಹಂತಕ್ಕೆ ಹೋದಾಗ 4 ಕಿ.ಮೀ.ಗೆ ಸಮಾನವಾದ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ಏನಿದು ದರ ವ್ಯತ್ಯಾಸದ ವಿವಾದ?
ಪ್ರಸ್ತುತ ಬಿಎಂಟಿಸಿ ಪ್ರತಿ 2 ಕಿಲೋಮೀಟರ್‌ಗಳನ್ನು ಒಂದು ‘ಹಂತ’ (Stage) ಎಂದು ಪರಿಗಣಿಸುತ್ತದೆ.
- ಸ್ಟೇಜ್ 1 (2 ಕಿ.ಮೀ): ₹6
- ಸ್ಟೇಜ್ 2 (4 ಕಿ.ಮೀ): ₹12
- ಸ್ಟೇಜ್ 3 (6 ಕಿ.ಮೀ): ₹18
ಸಮಸ್ಯೆ ಎಲ್ಲಿ?: ಒಬ್ಬ ಪ್ರಯಾಣಿಕ ಕೇವಲ 2.5 ಕಿಲೋಮೀಟರ್ ಪ್ರಯಾಣಿಸಿದರೂ, ಆತ ಎರಡನೇ ಸ್ಟೇಜ್‌ಗೆ ಪ್ರವೇಶಿಸಿದ್ದಾನೆ ಎಂಬ ಕಾರಣಕ್ಕೆ ಪೂರ್ತಿ 4 ಕಿಲೋಮೀಟರ್‌ನ ದರ ಅಂದರೆ ₹12 ನೀಡಬೇಕಾಗುತ್ತದೆ. ಇದು ಪ್ರಯಾಣಿಕರ ಜೇಬಿಗೆ ಹೊರೆಯಾಗುತ್ತಿದೆ.
ಪ್ರಾಯೋಗಿಕ ಸಮಸ್ಯೆಗಳ ನೆಪವೊಡ್ಡುವ ಬಿಎಂಟಿಸಿ
ದೂರ ಆಧಾರಿತ ದರ ಪದ್ಧತಿ ಅಳವಡಿಸಲು ಕೆಲವು ತಾಂತ್ರಿಕ ಸಮಸ್ಯೆಗಳಿವೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದು ಅತ್ಯಂತ ಹಳೇ ಪದ್ದತಿಯಾಗಿದ್ದು, ಹೆಚ್ಚಿನ ಹಂತಗಳನ್ನು 25 ವರ್ಷಗಳ ಹಿಂದೆಯೇ ನಿಗದಿಪಡಿಸಲಾಗಿದೆ. ಪ್ರತಿ 2 ಕಿ.ಮೀ ಗೊಂದು ಸ್ಟೇಜ್ ಇರುವುದರಿಂದ ನಿರ್ವಾಹಕರಿಗೆ ಟಿಕೆಟ್ ನೀಡಲು ಸಮಯ ಸಿಗುತ್ತದೆ. ಪ್ರತಿ ನಿಲ್ದಾಣಕ್ಕೂ ದರ ಬದಲಾದರೆ ಟಿಕೆಟ್ ನೀಡುವುದು ವಿಳಂಬವಾಗಬಹುದು ಎಂದು ಬಿಎಂಟಿಸಿ ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ. ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳು (ETM) ಕೈಕೊಟ್ಟರೆ ಮ್ಯಾನ್ಯುವಲ್ ಟಿಕೆಟ್ ನೀಡಲು ಸ್ಟೇಜ್ ಆಧಾರಿತ ಪದ್ಧತಿಯೇ ಸುಲಭ ಎಂದಿದ್ದಾರೆ.
ತಂತ್ರಜ್ಞಾನದ ಯುಗದಲ್ಲಿ ಇದು ಸಾಧ್ಯವಿಲ್ಲವೇ?
ಬಿಎಂಟಿಸಿ ಈಗ 100% ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳನ್ನು (ETM) ಬಳಸುತ್ತಿದೆ. ಇವು ಆಂಡ್ರಾಯ್ಡ್ ಆಧಾರಿತವಾಗಿದ್ದು ಜಿಪಿಎಸ್ ಸೌಲಭ್ಯ ಹೊಂದಿವೆ. ಹಾಗಾಗಿ ಕಿಲೋಮೀಟರ್ ಲೆಕ್ಕಾಚಾರ ಮಾಡುವುದು ಕಷ್ಟವಲ್ಲ ಎನ್ನುತ್ತಾರೆ ತಜ್ಞರು. ಸಾರಿಗೆ ತಜ್ಞರ ಪ್ರಕಾರ, ಭಾರತದಲ್ಲಿ ಚಂಡೀಗಢ ಹೊರತುಪಡಿಸಿ ಉಳಿದೆಲ್ಲಾ ನಗರಗಳು ಸ್ಟೇಜ್ ಆಧಾರಿತ ಪದ್ಧತಿಯನ್ನೇ ಅನುಸರಿಸುತ್ತಿವೆ. ಆದರೆ ‘ಟೆಕ್ ಸಿಟಿ’ ಬೆಂಗಳೂರು ಈ ಬದಲಾವಣೆಗೆ ಮುನ್ನುಡಿ ಬರೆಯಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಯಾಣಿಕರು ನೀಡುತ್ತಿರುವ ಉದಾಹರಣೆಗಳು
‘ಫ್ರೆಂಡ್ಸ್ ಆಫ್ ಬಿಎಂಟಿಸಿ’ ಗುಂಪಿನ ಸದಸ್ಯ ಅಮೋಘ್ ಅವರು ಹೊಸೂರು ರಸ್ತೆಯ ಕೆಲವು ಲೋಪಗಳನ್ನು ಪಟ್ಟಿ ಮಾಡಿದ್ದಾರೆ. ಕೃಪಾನಿಧಿ ಕಾಲೇಜಿನಿಂದ ಮಡಿವಾಳ ನಡುವಿನ ದೂರ ಕೇವಲ 900 ಮೀಟರ್ ಇದ್ದರೂ ಸ್ಟೇಜ್ ಆಧಾರದಲ್ಲಿ ದರ ಬದಲಾಗುತ್ತದೆ. ಕೋನಪ್ಪನ ಅಗ್ರಹಾರದಿಂದ ಎಲೆಕ್ಟ್ರಾನಿಕ್ಸ್ ಸಿಟಿ: ಇಲ್ಲಿಯೂ 1 ಕಿ.ಮೀ ಗಿಂತ ಕಡಿಮೆ ದೂರಕ್ಕೆ ಪೂರ್ತಿ ಸ್ಟೇಜ್‌ನ ದರ ವಿಧಿಸಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಟಿಕೆಟ್ ದರ ವ್ಯವಸ್ಥೆಯ ಪುನರ್ ವಿಮರ್ಶೆಯ ಬೇಡಿಕೆಯನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ.