
ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾವು ಕ್ರೈಸ್ತ ಧರ್ಮದ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪದ ಮೇಲೆ ವಿವಾದಕ್ಕೆ ಸಿಲುಕಿದೆ. ಚಿತ್ರದಲ್ಲಿನ ಕೆಲವು ದೃಶ್ಯಗಳು ದೇವದೂತರಿಗೆ ಅಪಮಾನ ಮಾಡಿವೆ ಎಂದು ರಾಷ್ಟ್ರೀಯ ಕ್ರೈಸ್ತ ಒಕ್ಕೂಟ ಆರೋಪಿಸಿದ್ದು, ದೃಶ್ಯಗಳನ್ನು ತೆಗೆದುಹಾಕಲು ಪಟ್ಟು ಹಿಡಿದಿದೆ.
ಬೆಂಗಳೂರು (ಫೆ.11): ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಹಾಗೂ ಸ್ಟಾರ್ ನಟ ಯಶ್ ಅಭಿನಯದ ‘ಟಾಕ್ಸಿಕ್’ (Toxic) ಸಿನಿಮಾ ಬಿಡುಗಡೆಗೂ ಮುನ್ನವೇ ದೊಡ್ಡ ವಿವಾದದ ಸುಳಿಗೆ ಸಿಲುಕಿದೆ. ಸಿನಿಮಾದ ದೃಶ್ಯಗಳಲ್ಲಿ ಕ್ರೈಸ್ತ ಧರ್ಮದ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿರುವ ‘ರಾಷ್ಟ್ರೀಯ ಕ್ರೈಸ್ತ ಒಕ್ಕೂಟ’ (NCF), ಚಿತ್ರತಂಡದ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆ ನೀಡಿದೆ.
ಧರ್ಮದ ದೇವದೂತರಿಗೆ ಅಪಮಾನ:
ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ರಾಷ್ಟ್ರೀಯ ಕ್ರೈಸ್ತ ಒಕ್ಕೂಟದ ಅಧ್ಯಕ್ಷ ಪ್ರದೀಪ್ ಕುಮಾರ್, ‘ಕನ್ನಡ ಸಿನಿಮಾ ಬೆಳೆಯಬೇಕು ಎನ್ನುವುದು ನಮ್ಮ ಆಸೆ. ಆದರೆ, ಚಿತ್ರದ ಯಶಸ್ಸಿನ ಹೆಸರಿನಲ್ಲಿ ಯಾವುದೇ ಧರ್ಮಕ್ಕೆ ಅಪಮಾನ ಮಾಡಬಾರದು. ಟಾಕ್ಸಿಕ್ ಸಿನಿಮಾದಲ್ಲಿ ನಮ್ಮ ಧರ್ಮದ ಪವಿತ್ರ ದೇವದೂತ ಸಂತ ಮಿಕಯೇಲ್ (Archangel Michael) ಅವರ ಪುತ್ಥಳಿಯ ಮುಂದೆ ಲೈಂಗಿಕ ಚಟುವಟಿಕೆ ಹಾಗೂ ಅಶ್ಲೀಲ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಇದು ಇಡೀ ಕ್ರೈಸ್ತ ಸಮುದಾಯಕ್ಕೆ ಮಾಡಿರುವ ಅಪಮಾನ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ರೈಲರ್‌ನಲ್ಲೇ ಅಶ್ಲೀಲತೆ ಹೆಚ್ಚಿದೆ:
ಸಿನಿಮಾದ ಟ್ರೈಲರ್‌ನಲ್ಲಿ ಈಗಾಗಲೇ ಇಷ್ಟೊಂದು ಲೈಂಗಿಕ ಮತ್ತು ಅಶ್ಲೀಲ ದೃಶ್ಯಗಳು ಕಂಡುಬಂದಿವೆ. ಇನ್ನು ಪೂರ್ಣ ಸಿನಿಮಾದಲ್ಲಿ ಇನ್ನೇನಿದೆಯೋ ಎಂಬ ಆತಂಕ ನಮ್ಮನ್ನು ಕಾಡುತ್ತಿದೆ. ದೇವದೂತರ ಪುತ್ಥಳಿಯ ಎದುರು ಇಂತಹ ದೃಶ್ಯಗಳನ್ನು ಇಟ್ಟಿರುವುದು ಉದ್ದೇಶಪೂರ್ವಕವಾಗಿ ಧರ್ಮವನ್ನು ಹೀಯಾಳಿಸುವಂತಿದೆ. ಕೂಡಲೇ ಚಿತ್ರತಂಡ ಈ ದೃಶ್ಯಗಳನ್ನು ತೆಗೆದುಹಾಕಬೇಕು ಮತ್ತು ಯೂಟ್ಯೂಬ್‌ನಲ್ಲಿರುವ ವಿವಾದಿತ ಪೋಸ್ಟ್‌ಗಳನ್ನು ಡಿಲೀಟ್ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಹಲವು ಮಂಡಳಿಗಳಿಗೆ ದೂರು ಸಲ್ಲಿಕೆ:
ಈಗಾಗಲೇ ಒಕ್ಕೂಟದ ವತಿಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC), ಕೇಂದ್ರ ಸೆನ್ಸಾರ್ ಬೋರ್ಡ್ (CBFC), ರಾಜ್ಯ ಮಹಿಳಾ ಆಯೋಗ, ಗೃಹ ಸಚಿವರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಅಧಿಕೃತ ದೂರು ಸಲ್ಲಿಸಲಾಗಿದೆ. ಸಿನಿಮಾದಲ್ಲಿರುವ ವಿವಾದಿತ ದೃಶ್ಯಗಳನ್ನು ಕತ್ತರಿಸುವಂತೆ (Censor) ಒತ್ತಾಯಿಸಲಾಗಿದೆ. ‘ನಾವು ನೀಡಿದ ದೂರಿನ ಮೇರೆಗೆ ಸೆನ್ಸಾರ್ ಬೋರ್ಡ್ ಮತ್ತು ಚಲನಚಿತ್ರ ಮಂಡಳಿ ಪ್ರತಿಕ್ರಿಯಿಸಿದ್ದು, ಸಿನಿಮಾ ಸರ್ಟಿಫಿಕೇಶನ್ ನೀಡುವ ಮುನ್ನ ಈ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸುವುದಾಗಿ ಭರವಸೆ ನೀಡಿವೆ’ ಎಂದು ಪ್ರದೀಪ್ ಮಾಹಿತಿ ನೀಡಿದ್ದಾರೆ.
ಕಾನೂನು ಹೋರಾಟದ ಎಚ್ಚರಿಕೆ:
ಚಿತ್ರತಂಡ ಕೂಡಲೇ ಕ್ರೈಸ್ತ ಸಮುದಾಯದ ಕ್ಷಮೆ ಕೇಳಬೇಕು. ಒಂದು ವೇಳೆ ಸೆನ್ಸಾರ್ ಬೋರ್ಡ್ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಅಥವಾ ಚಿತ್ರತಂಡ ದೃಶ್ಯಗಳನ್ನು ತೆಗೆಯದಿದ್ದರೆ, ಸಿನಿಮಾ ಬಿಡುಗಡೆಯ ಸಮಯದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು. ಅಲ್ಲದೆ, ನ್ಯಾಯಾಲಯದ ಮೂಲಕ ಕಾನೂನು ಹೋರಾಟ ಮಾಡುವುದು ನಮಗೆ ಅನಿವಾರ್ಯವಾಗುತ್ತದೆ ಎಂದು ಒಕ್ಕೂಟದ ಅಧ್ಯಕ್ಷರು ಎಚ್ಚರಿಸಿದ್ದಾರೆ.
ಒಟ್ಟಾರೆಯಾಗಿ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ‘ಟಾಕ್ಸಿಕ್’ ಸಿನಿಮಾ ಈಗ ಧಾರ್ಮಿಕ ವಿವಾದದ ಕೇಂದ್ರಬಿಂದುವಾಗಿದ್ದು, ಚಿತ್ರತಂಡ ಈ ಬಗ್ಗೆ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.