63 ದನಕರುಗಳೊಂದಿಗೆ ನಾಲ್ವರು ಅವಿವಾಹಿತ ಸಹೋದರಿಯ ಸಹಜೀವನ; ಗೋಪ್ರೇಮಕ್ಕೆ ಇವರೇ ಮಾದರಿ | The Symbiotic Relationship Of Four Unmarried Sisters With 63 Cattle Golitottu Village Uppinangady Dakshina Kannada Mrq

63 ದನಕರುಗಳೊಂದಿಗೆ ನಾಲ್ವರು ಅವಿವಾಹಿತ ಸಹೋದರಿಯ ಸಹಜೀವನ; ಗೋಪ್ರೇಮಕ್ಕೆ ಇವರೇ ಮಾದರಿ | The Symbiotic Relationship Of Four Unmarried Sisters With 63 Cattle Golitottu Village Uppinangady Dakshina Kannada Mrq



63 ದನಕರುಗಳೊಂದಿಗೆ ನಾಲ್ವರು ಅವಿವಾಹಿತ ಸಹೋದರಿಯ ಸಹಜೀವನ; ಗೋಪ್ರೇಮಕ್ಕೆ ಇವರೇ ಮಾದರಿ | The Symbiotic Relationship Of Four Unmarried Sisters With 63 Cattle Golitottu Village Uppinangady Dakshina Kannada Mrq

ಗೋಳಿತೊಟ್ಟು ಗ್ರಾಮದ ನಾಲ್ವರು ಅವಿವಾಹಿತ ಸಹೋದರಿಯರು 63 ಮಲೆನಾಡ ಗಿಡ್ಡ ದನಕರುಗಳೊಂದಿಗೆ ಶೋಚನೀಯ ಬದುಕು ಸಾಗಿಸುತ್ತಿದ್ದಾರೆ. ತಮ್ಮ ಕಷ್ಟದ ನಡುವೆಯೂ, ಜಾನುವಾರುಗಳನ್ನು ತಮ್ಮ ಮಕ್ಕಳಂತೆ ಪ್ರೀತಿಸುತ್ತಾ, ಮನೆಯೊಳಗೆ ಆಶ್ರಯ ನೀಡಿರುವ ಇವರ ಗೋಪ್ರೇಮ ನಾಗರಿಕ ಸಮಾಜಕ್ಕೆ ಮಾದರಿಯಾಗಿದೆ.

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಗೋಳಿತೊಟ್ಟು ಗ್ರಾಮದ ತಿರ್ಲೆ ಎಂಬಲ್ಲಿನ ನಿವಾಸಿಗರಾದ ನಾಲ್ವರು ಸಹೋದರಿಯರ ಗೋಪ್ರೇಮ ಅಪರೂಪವಾದುದು. ಮಲೆನಾಡ ಗಿಡ್ಡ ತಳಿಯ ಬರೋಬ್ಬರಿ 63 ದನ ಕರುಗಳೊಂದಿಗೆ ಇವರು ಜೀವನ ಸಾಗಿಸುತ್ತಿದ್ದಾರೆ. ನಾಗರಿಕ ಸಮಾಜದ ಕರ್ತವ್ಯ ಪ್ರಜ್ಞೆಯನ್ನು ನೆನಪಿಸುವಂತಿದೆ ಈ ಸಹೋದರಿಯರ ಜೀವನ ಕಥನ.

ಮಾ. 11ರಂದು ತನ್ನ ತೋಟಕ್ಕೆ ಬಂದಿದ್ದ ಜಾನುವಾರುಗಳನ್ನು ಓಡಿಸಲು ಹೋದ ಮಹಿಳೆಯೊಬ್ಬರು ಬಿದ್ದು ಮೃತಪಟ್ಟ ಸುದ್ದಿಯ ಬೆನ್ನೇರಿ ಹೋದಾಗ ಅನಾವರಣಗೊಂಡಿರುವುದೇ ಈ ನಾಲ್ವರು ಅವಿವಾಹಿತ ಸಹೋದರಿಯರ ಶೋಚನೀಯ ಬದುಕು ಮತ್ತು ಅವರ ಗೋ ಪ್ರೇಮದ ಜೀವನ ಕಥನ.

ಗೋಳಿತೊಟ್ಟು ಗ್ರಾಮದ ತಿರ್ಲೆ ಮರಂದೆ ಮನೆಯ ನಾಗಮ್ಮ ಗೌಡ, ಚೆನ್ನಮ್ಮ ಗೌಡ, ರೇವತಿ ಗೌಡ, ಲಲಿತಾ ಗೌಡ ಎಂಬ ನಾಲ್ವರು ಸಹೋದರಿಯರು ಸುಮಾರು 5 ಎಕರೆ ಕೃಷಿ ಭೂಮಿ ಮತ್ತು ಅದರಲ್ಲಿನ ಸಣ್ಣ ಮನೆಯೊಂದರಲ್ಲಿ ವಾಸವಾಗಿದ್ದಾರೆ.

ಎಷ್ಟಿದೆಯಮ್ಮ ದನ ಕರುಗಳು ಎಂದರೆ, ಹೆಚ್ಚಿಲ್ಲ ಸುಮಾರು 35 ಇರಬಹುದು ಎನ್ನುತ್ತಾರೆ. ಆದರೆ ಊರಿನವರಲ್ಲಿ ಕೇಳಿದರೆ ನಮಗೆ ಲೆಕ್ಕ ಮಾಡುವಾಗ 63 ಸಿಕ್ಕಿದೆ. ಹೆಚ್ಚಲ್ಲದೆ ಕಡಿಮೆ ಇರಲಿಕ್ಕಿಲ್ಲ ಎನ್ನುತ್ತಾರೆ.

ದನ ಕರುಗಳ ಮುಕ್ತ ಜೀವನ!:

ಕಾಡಿನ ಪ್ರಾಣಿಗಳು ಕಾಡೊಳಗೆ ಹೇಗೆ ಜೀವನ ನಡೆಸುತ್ತಿವೆಯೋ ಅಂತೆಯೇ ಇವರ ಜಾನುವಾರುಗಳು ಇಲ್ಲಿ ಸ್ವಚ್ಛಂದವಾಗಿರುತ್ತವೆ. ಇವರ ಗದ್ದೆ, ತೋಟ, ರಬ್ಬರ್ ತೋಟದ ವಿಶಾಲ ಪರಿಸರದಲ್ಲಿ ಮನಸೋ ಇಚ್ಚೆ ಅಲೆದಾಡುವ ದನ ಕರುಗಳು ಮನಸ್ಸಾದರೆ ಮನೆಯೊಳಗೆ ಬಂದು ಮಲಗುತ್ತವೆ. ಮನಸ್ಸಾದರೆ ತಂಡೋಪ ತಂಡವಾಗಿ ಊರಿನ ಪರಿಸರದಲ್ಲಿ ಮೇಯಲು ಹೋಗುತ್ತವೆ. 

ಕಾಂಪೌಂಡ್ , ಬೇಲಿ ಇದ್ಯಾವುದೂ ಇದಕ್ಕೆ ಅಡೆತಡೆ ಎನಿಸದು. ತೋಟಕ್ಕೆ ನುಗ್ಗ ಬೇಕೆನಿಸಿದರೆ ತಡೆಬೇಲಿಯನ್ನು ಹಾರಿಯಾದರೂ ನುಗ್ಗುತ್ತವೆ. ಈ ಮಟ್ಟದ ಸ್ವಾತಂತ್ರ್ಯ ಜೀವನ ಇವುಗಳದ್ದು. ಗುಂಪಿನ ಹೋರಿಗಳು ಉಳಿದೆಲ್ಲ ದನಕರುಗಳ ರಕ್ಷಣೆಗೆ ಸದಾ ಸಿದ್ದ. ಗುಂಪಿನ ಯಾವುದಾದರೂ ಕರು ರಕ್ಷಣೆಗೆ ಕೂಗಿದರೆ ಹೋರಿಗಳು ತಕ್ಷಣ ಆಕ್ರಮಣಕಾರಿಯಾಗಿ ಮುಂದೆಜ್ಜೆ ಇರಿಸುತ್ತವೆ. ಈ ಕಾರಣಕ್ಕೆ ಇವರ ದನಕರುಗಳು ಬೇರಾವ ರಕ್ಷಣೆ ಇಲ್ಲದಿದ್ದರೂ ಸುರಕ್ಷಿತವಾಗಿವೆ.

ಹಾಲೆಷ್ಟು ಸಿಗುತ್ತದೆ?:

ಇಷ್ಟೊಂದು ದನಕರುಗಳು ಮನೆಯಲ್ಲಿರುವಾಗ ದಿನಂಪ್ರತಿ ಎಷ್ಟು ಹಾಲು ಸಿಗುತ್ತದೆ ಎಂದು ಪ್ರಶ್ನಿಸಿದರೆ, ಮನೆಯ ಹಿರಿಯರಾದ ನಾಗಮ್ಮ ನೀಡಿದ ಉತ್ತರ ಗಮನಾರ್ಹವಾಗಿತ್ತು. ಮಳೆಗಾಲದಲ್ಲಿ ನಾವು ಮೇವುಗಳನ್ನು ತಂದು ಹಾಕುತ್ತಿದ್ದೆವು. ಈಗ ಬೇಸಿಗೆ ಕಾಲ ನಮಗೆ ಮೇವು ಸಿಗುತ್ತಿಲ್ಲ. ಹೀಗಾಗಿ ನೀರನ್ನಷ್ಟೇ ನೀಡುತ್ತೇವೆ. ಅವುಗಳೇ ಪರಿಸರದಲ್ಲಿ ಮೇಯಲು ಹೋಗಿ ತಿಂದುಂಡು ಬರುತ್ತಿವೆ. ನಾವು ಮೇವು ಕೊಡದೆ ಅದರ ಹಾಲನ್ನು ಕರೆಯುವುದು ಸರಿಯಾ? ಗುಂಪಿನ ಕರುಗಳಿಗೆಲ್ಲ ಅದರ ಹಾಲು ಬೇಕಾಗುತ್ತದೆ. ಹೀಗಾಗಿ ಬೇಸಿಗೆ ಪ್ರಾರಂಭವಾದಂದಿನಿಂದ ನಾವು ಹಾಲು ಕರೆಯುತ್ತಿಲ್ಲ. ದನ ಕರುಗಳ ಸೆಗಣಿ, ಮೂತ್ರದಿಂದ ಭೂಮಿಯ ಫಲವತ್ತತೆ ಹೆಚ್ಚಾಗುತ್ತಿದೆ. ಅದೇ ನಮಗೆ ಈಗ ಸಿಗುತ್ತಿರುವ ಪ್ರಯೋಜನ ಎನ್ನುತ್ತಾರೆ.

ಬೆಡ್ ರೂಂ ಕೂಡ ಜಾನುವಾರುಗಳಿಗೆ ಮೀಸಲು:

ಸಹೋದರಿಯರ ಮನೆಯನ್ನು ವೀಕ್ಷಿಸುತ್ತಿದ್ದಾಗ ಬೆಡ್ ರೂಂನ ನೆಲದಲ್ಲಿ ಗುಂಡಿಗಳಿರುವುದನ್ನು ಕಂಡು ಇದೇಕೆ ಹೀಗೆ ಎಂದು ಪ್ರಶ್ನಿಸಿದರೆ. ಇಲ್ಲಿ ಕರುಗಳು ಬಂದು ಮಲಗುತ್ತವೆ. ಬಚ್ಚಲು ಮನೆಯಲ್ಲೂ ದನ ಕರುಗಳು ಬಂದು ಮಲಗುತ್ತಿರುವುದರಿಂದ ನಾವು ಮನೆಯ ಹೊರಗಡೆ ಸ್ನಾನ ಮಾಡುತ್ತೇವೆ. ಅಡುಗೆ ಮನೆಯಲ್ಲಿ ಸಿದ್ದಪಡಿಸಿದ ಆಹಾರವನ್ನು ದನಕರುಗಳು ಬಂದು ಸೇವಿಸಿದರೂ ಇವರ ಆಕ್ಷೇಪವಿಲ್ಲ. ಇವು ಮನೆ ಮಕ್ಕಳಂತೆ ಓಡಾಡುತ್ತಿರುತ್ತವೆ.

ಪೋಷಕರಿಲ್ಲದ ಬದುಕು:

ಮನೆಯಲ್ಲಿ ನಮಗೆ ಇಬ್ಬರು ಸಹೋದರರಿದ್ದರು. ಅನಾರೋಗ್ಯದಿಂದ ಅವರು ನಿಧನರಾಗಿದ್ದಾರೆ. ನಮ್ಮ ಹೆತ್ತವರು ತೀರಿದ ಬಳಿಕ ನಮಗೆ ಮುಂದೆ ನಿಲ್ಲುವವರು ಯಾರೂ ಇಲ್ಲದೆ ನಮ್ಮ ಬದುಕು ಹೀಗಾಯಿತು ಎಂದು ದುಃಖದಿಂದ ನುಡಿದರು.

ಸ್ಥಳೀಯಾಡಳಿತ ನೆರವಾಗಬೇಕು:

ಸ್ಥಳಕ್ಕೆ ಭೇಟಿ ನೀಡಿ ಸಹೋದರಿಯರ ಜೊತೆ ಮಾತುಕತೆಯಾಡಿದ ವಿಶ್ವ ಹಿಂದೂ ಪರಿಷತ್ ಮುಂದಾಳು ನವೀನ್ ನೆರಿಯಾ ಅವರು, ಈ ಮನೆಯ ಸಹೋದರಿಯರು ದನ ಕರುಗಳೊಂದಿಗೆ ಬದುಕು ಬೆಸೆದುಕೊಂಡಿದ್ದಾರೆ. ಮುಕ್ತವಾಗಿ ಬದುಕುತ್ತಿರುವ ದನ ಕರುಗಳನ್ನು ಕಟ್ಟಿಹಾಕಿ ಸಾಕುವುದು ತ್ರಾಸದಾಯಕ. ಇರುವ ಭೂಮಿಯಲ್ಲೇ ಸ್ಥಳಿಯಾಡಳಿತ ಮುತುವರ್ಜಿ ವಹಿಸಿ ದನ ಕರುಗಳು ಮುಕ್ತವಾಗಿ ಬದುಕುವಂತೆ ಹಾಗೂ ಹೊರಗಡೆ ಹೋಗದಂತೆ ಯೋಜನೆ ರೂಪಿಸಿದರೆ ಪ್ರಯೋಜನಕಾರಿಯಾಗಬಹುದು ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಇತಿಹಾಸ ಪುಟ ಸೇರಲಿದೆ ಬೆಳ್ತಂಗಡಿ ಸೋಮಾವತಿ ಸೇತುವೆ; 70 ವರ್ಷವಾದರೂ ಶಿಥಿಲವಾಗಿಲ್ಲ

ನಾಗರಿಕ ಸಮಾಜ ಕಣ್ತೆರೆಯಬೇಕು:

ನಮ್ಮಲ್ಲಿ ಎಲ್ಲ ಸಂಘಟನೆಗಳಿಗಿಂತಲೂ ಜಾತಿ ಸಂಘಟನೆಗಳು ಬಲವಾಗಿವೆ. ಆದರೆ ಸಮಾಜದ ಕಟ್ಟಕಡೆಯ ಇಂತಹ ಅಗತ್ಯವುಳ್ಳ ಜನರ ಸಹಾಯಕ್ಕೆ ಯಾವ ಸಂಘಟನೆಗಳೂ ಕೆಲಸ ಮಾಡುವುದಿಲ್ಲ. ಅಪ್ಪ ಅಮ್ಮನನ್ನು ಕಳೆದುಕೊಂಡ ಬಳಿಕ ಈ ಸಹೋದರಿಯರಿಗೆ ಯಾರೊಬ್ಬರೂ ಸಹಾಯಕ್ಕೆ ಮುಂದಾಗದಿರುವುದು ನಾಗರಿಕ ಸಮಾಜಕ್ಕೆ ಶೋಭೆಯಲ್ಲ. ಖಂಡಿತವಾಗಿಯೂ ಇಂತಹ ವಿಚಾರದಲ್ಲಿ ನಾಗರಿಕ ಸಮಾಜ ಕಣ್ತೆರೆಯಬೇಕಾಗಿದೆ. ಸಹಕಾರದ ಮನೋಭಾವ ಬೆಳೆಸಬೇಕಾಗಿದೆ ಎಂದು ಯುವ ಸಾಮಾಜಿಕ ಕಾರ್ಯಕರ್ತ ಮೂಲಚಂದ್ರ ಕಾಂಚನ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಯುಗಾದಿ ಸಂಭ್ರಮದಲ್ಲಿ ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ! ಬೆಂಗಳೂರು-ಮಂಗಳೂರು-ಗೋವಾ ಈ ದಿನದಂದು ವಿಶೇಷ ರೈಲು



Source link

Leave a Reply

Your email address will not be published. Required fields are marked *