
ಏಷ್ಯಾಕಪ್‌ನಲ್ಲಿ ಭಾರತದೆದುರು ಪಾಕಿಸ್ತಾನ ಸೋತಿದ್ದಕ್ಕೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವ್ಯಂಗ್ಯವಾಡಿದ್ದಾರೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಮತ್ತು ಸೇನಾ ಮುಖ್ಯಸ್ಥ ಆಸೀಮ್ ಮುನೀರ್ ಆರಂಭಿಕರಾಗಿ ಆಡಿದರೆ ಮಾತ್ರ ಭಾರತವನ್ನು ಸೋಲಿಸಲು ಸಾಧ್ಯ ಎಂದು ಅವರು ಹೇಳಿದ್ದಾರೆ.
ಲಾಹೋರ್ (ಸೆ.23): ಏಷ್ಯಾಕಪ್‌ನಲ್ಲಿ ಭಾರತ ವಿರುದ್ಧ ಸೋತಿರುವ ಪಾಕಿಸ್ತಾನ ತಂಡವನ್ನು ಮಾಜಿ ಕ್ರಿಕೆಟಿಗ, ಪಾಕ್‌ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವ್ಯಂಗ್ಯವಾಡಿದ್ದು, ‘ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಮತ್ತು ಸೇನಾ ಮುಖ್ಯಸ್ಥ ಜ. ಆಸೀಮ್ ಮುನೀರ್ ಆರಂಭಿಕ ಆಟಗಾರರಾಗಿ ಆಡಿದರೆ ಮಾತ್ರ ಭಾರತವನ್ನು ಸೋಲಿಸಲು ಸಾಧ್ಯ’ ಎಂದಿದ್ದಾರೆ.
ಸದ್ಯ ಜೈಲಿನಲ್ಲಿರುವ ಇಮ್ರಾನ್ ಈ ರೀತಿ ಹೇಳಿದ್ದಾರೆ ಎಂದು ಸಹೋದರಿ ಅಲೀಮಾ ಖಾನ್ ಹೇಳಿಕೊಂಡಿದ್ದಾರೆ. ಇದರ ಜತೆಗೆ ‘ಭಾರತವನ್ನು ಸೋಲಿಸಬೇಕಾದರೆ ನಿವೃತ್ತ ಮುಖ್ಯ ನ್ಯಾಯಮೂರ್ತಿ ಖಾಜಿ ಫೈಜ್ ಇಸಾ ಮತ್ತು ಮುಖ್ಯ ಚುನಾವಣಾ ಆಯುಕ್ತ ಸಿಕಂದರ್ ಸುಲ್ತಾನ್ ರಾಜಾ ಅಂಪೈರ್‌ಗಳಾಗಬೇಕು’ ಎಂದೂ ಇಮ್ರಾನ್ ಹೇಳಿದ್ದಾರೆ ಎಂದು ಅವರು ಹೇಳಿದ್ದಾರೆ.
ಇಮ್ರಾನ್ ಖಾನ್ ಹೇಳಿದ್ದೇನು?
ಭಾರತದ ವಿರುದ್ಧ ಪಾಕಿಸ್ತಾನದ ಹೀನಾಯ ಸೋಲಿನ ವಿಚಾರವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರನ್ನ ಟೀಕಿಸಿ, ‘ಭಾರತದ ವಿರುದ್ಧ ಪಾಕ್ ಗೆಲ್ಲಬೇಕು ಎಂದರೆ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರೊಂದಿಗೆ ಆರಂಭಿಕ ಆಟಗಾರನಾಗಿ ಬ್ಯಾಟಿಂಗ್ ಮಾಡಬೇಕು. ಅದೇ ರೀತಿ ಮೂರನೇ ಅಂಪೈರ್ ಇಸ್ಲಾಮಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸರ್ಫರಾಜ್ ದೋಗರ್ ಆಗಿರಬೇಕು ಎಂದು ಲೇವಡಿ ಮಾಡಿದ್ದರು.
ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್‌ನಲ್ಲಿ ಭಾರತವು ಪಾಕಿಸ್ತಾನವನ್ನು ಎರಡು ಪಂದ್ಯಗಳಲ್ಲಿ ಆರಾಮವಾಗಿ ಸೋಲಿಸಿದ ನಂತರ ಖಾನ್ ಅವರ ವ್ಯಂಗ್ಯಾತ್ಮಕ ಹೇಳಿಕೆಗನ್ನ ನೀಡಿದ್ದಾರೆ. ಇಮ್ರಾನ್ ಹೇಳಿಕೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.