ಕೆಪಿಎಸ್‌ಸಿ ಪರೀಕ್ಷೆ ಅಕ್ರಮ ಆರೋಪಕ್ಕೆ 3 ಕಾಸಿನ ಕಿಮ್ಮತ್ತಿಲ್ಲ; ದೂರಿಗೆ ಕ್ಯಾರೇ ಎನ್ನದೇ ದಾಖಲಾತಿ ಪರಿಶೀಲನೆ ಆರಂಭ! | Kpsc 384 Gazetted Probationers Exam Scam Allegations K Jyothi Interview Dates Announced Sat

ಕೆಪಿಎಸ್‌ಸಿ ಪರೀಕ್ಷೆ ಅಕ್ರಮ ಆರೋಪಕ್ಕೆ 3 ಕಾಸಿನ ಕಿಮ್ಮತ್ತಿಲ್ಲ; ದೂರಿಗೆ ಕ್ಯಾರೇ ಎನ್ನದೇ ದಾಖಲಾತಿ ಪರಿಶೀಲನೆ ಆರಂಭ! | Kpsc 384 Gazetted Probationers Exam Scam Allegations K Jyothi Interview Dates Announced Sat



ಕೆಪಿಎಸ್‌ಸಿ ಪರೀಕ್ಷೆ ಅಕ್ರಮ ಆರೋಪಕ್ಕೆ 3 ಕಾಸಿನ ಕಿಮ್ಮತ್ತಿಲ್ಲ; ದೂರಿಗೆ ಕ್ಯಾರೇ ಎನ್ನದೇ ದಾಖಲಾತಿ ಪರಿಶೀಲನೆ ಆರಂಭ! | Kpsc 384 Gazetted Probationers Exam Scam Allegations K Jyothi Interview Dates Announced Sat

ಕೆಪಿಎಸ್‌ಸಿಯ 2023-24ನೇ ಸಾಲಿನ 384 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ನೇಮಕಾತಿಯಲ್ಲಿ ಗಂಭೀರ ಅಕ್ರಮದ ಆರೋಪ ಕೇಳಿಬಂದಿದೆ. ಒಂದೇ ಪರೀಕ್ಷಾ ಕೊಠಡಿಯ 11 ಅಭ್ಯರ್ಥಿಗಳು ಉತ್ತೀರ್ಣರಾದರೂ, ಆಯೋಗವು 1:3 ಅನುಪಾತದಲ್ಲಿ ವ್ಯಕ್ತಿತ್ವ ಪರೀಕ್ಷೆಗೆ ದಿನಾಂಕ ನಿಗದಿಪಡಿಸಿ ನೇಮಕಾತಿ ಪ್ರಕ್ರಿಯೆ ಮುಂದುವರಿಸಿದೆ.

ಬೆಂಗಳೂರು (ಮಾ.11): ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ 2023-24ನೇ ಸಾಲಿನ 384 ಗೆಜೆಟೆಡ್ ಪ್ರೊಬೇಷನರ್ (ಗ್ರೂಪ್ ಎ ಮತ್ತು ಬಿ) ಹುದ್ದೆಗಳ ನೇಮಕಾತಿಯಲ್ಲಿ ಒಂದೇ ಕೊಠಡಿಯಲ್ಲಿ 11 ಅಭ್ಯರ್ಥಿಗಳು ಉತ್ತೀರರ್ಣರಾಗುವ ಮೂಲಕ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಉದ್ಯೋಗ ಆಕಾಂಕ್ಷಿಗಳು, ವಿದ್ಯಾರ್ಥಿ ಸಂಘಟನೆಗಳಿಂದ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಆದರೆ, ಇದ್ಯಾವುದನ್ನೂ ಕೇರ್ ಮಾಡದ ಆಯೋಗವು, 1:3 ಆಧಾರದಲ್ಲಿ ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆ (Personality Test) ಮತ್ತು ದಾಖಲಾತಿ ಪರಿಶೀಲನೆಗೆ ದಿನಾಂಕ ನಿಗದಿಪಡಿಸಿದೆ. ಈ ಮೂಲಕ ಅಕ್ರಮ ಆರೋಪಕ್ಕೆ ಮೂರು ಕಾಸಿನ ಕಿಮ್ಮತ್ತನ್ನೂ ನೀಡದೇ ನಡುವೆಯೂ ನೇಮಕಾತಿಯನ್ನು ಮುಂದುವರೆಸಿದೆ.

ಏನಿದು ಅಕ್ರಮದ ಆರೋಪ?

2023-24ನೇ ಸಾಲಿನಲ್ಲಿ ನಡೆದ 384 ಹುದ್ದೆಗಳ ಪರೀಕ್ಷೆಯಲ್ಲಿ ಅಸಹಜ ವಿದ್ಯಮಾನವೊಂದು ಕಂಡುಬಂದಿತ್ತು. ಪರೀಕ್ಷಾ ಕೇಂದ್ರವೊಂದರ ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದ 11 ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಸಾಗಿದ್ದರು. ಇದು ಕಾಕತಾಳೀಯವೋ ಅಥವಾ ವ್ಯವಸ್ಥಿತ ಸಂಚೋ ಎಂಬ ಸಂಶಯ ಹುಟ್ಟಿಸಿತ್ತು. ಈ ಬಗ್ಗೆ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆಯು ಸೂಕ್ತ ದಾಖಲೆಗಳನ್ನು ಬಿಡುಗಡೆ ಮಾಡಿ, ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಬಹಿರಂಗವಾಗಿ ಆರೋಪಿಸಿತ್ತು. ಅಷ್ಟೇ ಅಲ್ಲದೆ, ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ರಾಜ್ಯಪಾಲರಿಗೂ ದೂರು ಸಲ್ಲಿಕೆಯಾಗಿತ್ತು.

ತಮಗೆ ತಾವೇ ಕ್ಲೀನ್ ಚಿಟ್ ಕೊಟ್ಟುಕೊಂಡರೇ ಕಾರ್ಯದರ್ಶಿ?

ಈ ಗಂಭೀರ ಆರೋಪಗಳ ಬೆನ್ನಲ್ಲೇ ಕೆಪಿಎಸ್‌ಸಿ ಕಾರ್ಯದರ್ಶಿ ಕೆ. ಜ್ಯೋತಿ ಅವರು 24 ಗಂಟೆಗಳಲ್ಲಿ ಆಂತರಿಕ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಆದರೆ ಈ ವರದಿಯಲ್ಲಿ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಉಲ್ಲೇಖಿಸಲಾಗಿತ್ತು. ಆರೋಪ ಎದುರಿಸುತ್ತಿರುವ ಸಂಸ್ಥೆಯೇ ತನಿಖೆ ನಡೆಸಿ ‘ನಾವೇನೂ ತಪ್ಪು ಮಾಡಿಲ್ಲ’ ಎಂದು ವರದಿ ನೀಡಿರುವುದು ಅಭ್ಯರ್ಥಿಗಳ ಮತ್ತು ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ. ಅಚ್ಚರಿಯೆಂದರೆ, ರಾಜ್ಯ ಸರ್ಕಾರವು ಈ ವರದಿಯನ್ನು ಅಂಗೀಕರಿಸಿದ್ದು, ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಲು ಹಸಿರು ನಿಶಾನೆ ತೋರಿಸಿದೆ.

ವ್ಯಕ್ತಿತ್ವ ಪರೀಕ್ಷೆಯ ವೇಳಾಪಟ್ಟಿ ಪ್ರಕಟ:

ಸರ್ಕಾರದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆಯೇ ಕೆಪಿಎಸ್‌ಸಿ ಕಾರ್ಯಪ್ರವೃತ್ತವಾಗಿದೆ. ಅಕ್ರಮದ ಆರೋಪಗಳನ್ನು ಬದಿಗಿಟ್ಟಿರುವ ಆಯೋಗವು, 1:3 ಅನುಪಾತದಲ್ಲಿ ಅರ್ಹರಾದ 1152 ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಮಾರ್ಚ್ 23, 2026 ರಿಂದ ಮೇ 4, 2026 ರವರೆಗೆ ಬೆಂಗಳೂರಿನ ‘ಉದ್ಯೋಗ ಸೌಧ’ದಲ್ಲಿ ವ್ಯಕ್ತಿತ್ವ ಪರೀಕ್ಷೆ ಹಾಗೂ ಮೂಲ ದಾಖಲೆಗಳ ಪರಿಶೀಲನೆ ನಡೆಸಲು ದಿನಾಂಕ ನಿಗದಿಪಡಿಸಿ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಅಭ್ಯರ್ಥಿಗಳ ಆತಂಕ ಮತ್ತು ಆಕ್ರೋಶ:

ಒಂದೆಡೆ ಪರೀಕ್ಷೆಯಲ್ಲಿ ಪಾರದರ್ಶಕತೆ ಇಲ್ಲ ಎಂಬ ಕೂಗು ಕೇಳಿಬರುತ್ತಿದ್ದರೆ, ಮತ್ತೊಂದೆಡೆ ಆಯೋಗವು ಯಾವುದಕ್ಕೂ ಕ್ಯಾರೇ ಎನ್ನದೆ ಸಂದರ್ಶನಕ್ಕೆ ಮುಂದಾಗಿದೆ. ಪ್ರಾಮಾಣಿಕವಾಗಿ ಓದಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಈ ಪ್ರಕ್ರಿಯೆಯಿಂದ ನಮಗೆ ಅನ್ಯಾಯವಾಗಬಹುದು ಎಂಬ ಆತಂಕದಲ್ಲಿದ್ದಾರೆ. ‘ಅಕ್ರಮದ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗುವ ಮೊದಲೇ ಸಂದರ್ಶನ ನಡೆಸುವುದು ಎಷ್ಟು ಸರಿ?’ ಎಂದು ಪ್ರಶ್ನಿಸುತ್ತಿದ್ದಾರೆ.

ಒಟ್ಟಾರೆಯಾಗಿ, ಕೆಪಿಎಸ್‌ಸಿ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಸರ್ಕಾರದ ಬೆಂಬಲದೊಂದಿಗೆ ನಡೆಯುತ್ತಿರುವ ಈ ನೇಮಕಾತಿ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.



Source link

Leave a Reply

Your email address will not be published. Required fields are marked *