Headlines

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ವಿರುದ್ಧದ ಬಿ-ರಿಪೋರ್ಟ್ ಪ್ರಶ್ನಿಸಿ ವಾದ; ವಿಚಾರಣೆ ಜ.13ಕ್ಕೆ ಮುಂದೂಡಿಕೆ! | Muda Scam Hearing On B Report Against Cm Siddaramaiah Postponed To Jan 13

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ವಿರುದ್ಧದ ಬಿ-ರಿಪೋರ್ಟ್ ಪ್ರಶ್ನಿಸಿ ವಾದ; ವಿಚಾರಣೆ ಜ.13ಕ್ಕೆ ಮುಂದೂಡಿಕೆ! | Muda Scam Hearing On B Report Against Cm Siddaramaiah Postponed To Jan 13



ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ವಿರುದ್ಧದ ಬಿ-ರಿಪೋರ್ಟ್ ಪ್ರಶ್ನಿಸಿ ವಾದ; ವಿಚಾರಣೆ ಜ.13ಕ್ಕೆ ಮುಂದೂಡಿಕೆ! | Muda Scam Hearing On B Report Against Cm Siddaramaiah Postponed To Jan 13

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ನಿವೇಶನ ಹಂಚಿಕೆ ಹಗರಣದ ತನಿಖಾ ವರದಿಗೆ ದೂರುದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತನಿಖಾ ಸಂಸ್ಥೆ ಸಲ್ಲಿಸಿರುವ ‘ಬಿ-ರಿಪೋರ್ಟ್’ ಅನ್ನು ತಿರಸ್ಕರಿಸಬೇಕೆಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಾದ ಮಂಡಿಸಿದರು, ವಿಚಾರಣೆ ಜ.13ಕ್ಕೆ ಮುಂದೂಡಿಕೆ.

ಬೆಂಗಳೂರು (ಜ.8): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಮುಡಾ (MUDA) ನಿವೇಶನ ಹಂಚಿಕೆ ಹಗರಣದ ತನಿಖಾ ವರದಿಯ ಕುರಿತು ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆಯಿತು. ತನಿಖಾ ಸಂಸ್ಥೆ ಸಲ್ಲಿಸಿರುವ ವರದಿಯನ್ನು ಆಕ್ಷೇಪಿಸಿ ದೂರುದಾರ ಸ್ನೇಹಮಯಿ ಕೃಷ್ಣ ತಮ್ಮ ವಾದ ಮಂಡಿಸಿದರು.

132 ಪ್ರಕರಣಗಳ ಉಲ್ಲೇಖ: ಸ್ನೇಹಮಯಿ ಕೃಷ್ಣ ವಾದ

ವಿಚಾರಣೆ ವೇಳೆ ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲರು ವಾದ ಮಂಡಿಸಿ, ತನಿಖಾ ಸಂಸ್ಥೆ ಸಲ್ಲಿಸಿರುವ ಅಂತಿಮ ವರದಿಯಲ್ಲಿ ಒಟ್ಟು 132 ಪ್ರಕರಣಗಳ ಬಗ್ಗೆ ಉಲ್ಲೇಖಿಸಲಾಗಿದೆ. ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಅವಕಾಶ ನೀಡಬೇಕು ಎಂದು ವರದಿಯಲ್ಲೇ ಹೇಳಲಾಗಿದೆ. ಆದರೆ, ಒಂದೇ ಪ್ರಕರಣದಲ್ಲಿ ಅರ್ಧ ಭಾಗಕ್ಕೆ ‘ಬಿ-ರಿಪೋರ್ಟ್’ (B-Report) ಸಲ್ಲಿಸಿ, ಇನ್ನರ್ಧ ಭಾಗಕ್ಕೆ ಚಾರ್ಜ್ ಶೀಟ್ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಹೈಕೋರ್ಟ್ ಆದೇಶದ ಉಲ್ಲೇಖ

ವಾದದ ಸಂದರ್ಭದಲ್ಲಿ ದೂರುದಾರರು ಹೈಕೋರ್ಟ್ ನೀಡಿದ್ದ ಹಿಂದಿನ ಆದೇಶವನ್ನು ಪ್ರಸ್ತಾಪಿಸಿದರು. ಎ1 ಆರೋಪಿಯಾಗಿರುವ ಸಿದ್ದರಾಮಯ್ಯ ಅವರು ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ಸಾಕಷ್ಟು ಸಾಕ್ಷ್ಯಗಳು ಇವೆ ಎಂದು ಹೈಕೋರ್ಟ್ ಹೇಳಿತ್ತು ಎಂದು ಪೀಠದ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ‘ಹೈಕೋರ್ಟ್ ಅಂದು ಸಾಕ್ಷ್ಯಗಳಿವೆ ಎಂದು ಹೇಳಿದ್ದು ಕೇವಲ ಮೇಲ್ನೋಟಕ್ಕೆ ಕಂಡುಬಂದ ಅಂಶಗಳ ಆಧಾರದ ಮೇಲೆ ತನಿಖೆಗೆ ಆದೇಶಿಸುವಾಗ ಮಾತ್ರ. ಈಗ ನಡೆದಿರುವ ತನಿಖಾ ವರದಿಯ ಆಧಾರದ ಮೇಲೆ ವಾದ ಮಂಡಿಸಿ’ ಎಂದು ಸೂಚಿಸಿದರು.

ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾದ ವರದಿ?

ದೂರುದಾರ ಸ್ನೇಹಮಯಿ ಕೃಷ್ಣ ಅವರು ತನಿಖಾ ಸಂಸ್ಥೆಯ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ‘ನ್ಯಾಯಾಲಯವು ತನಿಖೆಗೆ ಆದೇಶ ನೀಡುವಾಗ ಕೆಲವು ಗಂಭೀರ ಅಂಶಗಳನ್ನು ಗಮನಿಸಿತ್ತು. ಆದರೆ ತನಿಖಾಧಿಕಾರಿಗಳು ನ್ಯಾಯಾಲಯದ ಆದೇಶದ ಆಶಯಕ್ಕೆ ವಿರುದ್ಧವಾಗಿ ಅಂತಿಮ ವರದಿಯನ್ನು ಸಲ್ಲಿಸಿದ್ದಾರೆ. ಹೀಗಾಗಿ ಈ ಬಿ-ರಿಪೋರ್ಟ್ ಅನ್ನು ತಿರಸ್ಕರಿಸಬೇಕು’ ಎಂದು ಮನವಿ ಮಾಡಿದರು.

ವಿಚಾರಣೆ ಜನೆವರಿ 13ಕ್ಕೆ ಮುಂದೂಡಿಕೆ

ಉಭಯ ಕಡೆಯ ಪ್ರಾಥಮಿಕ ವಾದಗಳನ್ನು ಆಲಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿ 13ಕ್ಕೆ ಮುಂದೂಡಿದೆ. ಅಂದು ಬಿ-ರಿಪೋರ್ಟ್ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಮೇಲೆ ಹೆಚ್ಚಿನ ವಾದ-ಪ್ರತಿವಾದಗಳು ನಡೆಯುವ ಸಾಧ್ಯತೆಯಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಈ ಪ್ರಕರಣದಲ್ಲಿ ರಿಲೀಫ್ ಸಿಗುತ್ತದೆಯೇ ಅಥವಾ ಕಾನೂನು ಸಂಕಷ್ಟ ಹೆಚ್ಚಾಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.



Source link

Leave a Reply

Your email address will not be published. Required fields are marked *