
ಲಂಡನ್ ಅಂಡರ್‌ಗ್ರೌಂಡ್ ಮತ್ತು ಬೆಂಗಳೂರು ಮೆಟ್ರೋವನ್ನು ಹೋಲಿಸಿ ಮಹಿಳೆಯೊಬ್ಬರು ಮಾಡಿದ ವೀಡಿಯೊ ವೈರಲ್ ಆಗಿದೆ. ಲಂಡನ್ ಮೆಟ್ರೋದಲ್ಲಿ ಹವಾನಿಯಂತ್ರಣ ಇಲ್ಲದಿರುವುದು ಮತ್ತು ಕೆಟ್ಟ ವಾಸನೆಯ ಬಗ್ಗೆ ಅವರು ದೂರಿದರೆ, ಬೆಂಗಳೂರು ಮೆಟ್ರೋದ ಸ್ವಚ್ಛತೆ ಮತ್ತು ಸೌಕರ್ಯವನ್ನು ಶ್ಲಾಘಿಸಿದ್ದಾರೆ. ಈ ಹೋಲಿಕೆಯು ಜಾಗತಿಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
ಲಂಡನ್‌ನ ಪ್ರಸಿದ್ಧ ಅಂಡರ್‌ಗ್ರೌಂಡ್ ವ್ಯವಸ್ಥೆಯನ್ನು ಭಾರತದ ಮೆಟ್ರೋ ವ್ಯವಸ್ಥೆಗಳೊಂದಿಗೆ ಹೋಲಿಸಿ ಮಹಿಳೆಯೊಬ್ಬರು ವಿಡಿಯೋ ಮಾಡಿರುವುದು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. “ಯಾರೂ ಮಾತನಾಡದ ಮೆಟ್ರೋ ಹೋಲಿಕೆ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವ ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ, ಅವರು ವಿಶೇಷವಾಗಿ ಬೆಂಗಳೂರು ಮೆಟ್ರೋ ಮತ್ತು ಲಂಡನ್ ಅಂಡರ್‌ಗ್ರೌಂಡ್ ನಡುವಿನ ವ್ಯತ್ಯಾಸಗಳನ್ನು ಹೈಲೈಟ್ ಮಾಡಿದ್ದಾರೆ.
ವೀಡಿಯೊದಲ್ಲಿ ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, “ನೀವು ಇದನ್ನು ನಂಬುವುದಿಲ್ಲ, ಆದರೆ ಯುಕೆಯಲ್ಲಿ ನನಗೆ ನಿಜವಾಗಿಯೂ ಆಶ್ಚರ್ಯವಾದ ಕ್ಷಣವೆಂದರೆ ನಾನು ಲಂಡನ್‌ನಿಂದ ಟವರ್ ಬ್ರಿಡ್ಜ್ ಕಡೆಗೆ ಮೆಟ್ರೋ ಪ್ರಯಾಣ ಮಾಡಿದ್ದು, ಆ ಪ್ರಯಾಣದ ವೇಳೆ ತಮಗೆ ಆದ ಅಸಾಧಾರಣ ಅನುಭವವನ್ನು ವಿಡಿಯೋದಲ್ಲಿ ವಿವರಿಸಿದ್ದಾರೆ. ಮೆಟ್ರೋದ ಒಳಗೆ ಕುಳಿತ ತಕ್ಷಣ ಬೆವರಲು ಆರಂಭಿಸಿದೆ, ಕೆಟ್ಟ ವಾಸನೆ ಇದರಿಂದ ನಾನು ಅಚ್ಚರಿ ಪಟ್ಟೆ. ಲಂಡನ್ ಅಂಡರ್‌ಗ್ರೌಂಡ್‌ನ ಹಲವಾರು ರೈಲುಗಳು ಮತ್ತು ನಿಲ್ದಾಣಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆಯೇ ಇಲ್ಲದಿರುವುದು ತಿಳಿದು ನಾನು ಶಾಕ್ ಆದೆ. ಅಂಡರ್ ಗ್ರೌಂಡ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸೆಕೆ ಮತ್ತು ಜನಸಂದಣಿ ಹೆಚ್ಚಿರುವುದರಿಂದ ಪ್ರಯಾಣವು ಅತ್ಯಂತ ಕಷ್ಟ ಎಂಬುದನ್ನು ಹೇಳಿದ್ದಾರೆ
ಬೆಂಗಳೂರು ಮೆಟ್ರೋ ಹೊಗಳಿದ ಮಹಿಳೆ
ಇದಕ್ಕೆ ವಿರುದ್ಧವಾಗಿ, ಅವರು ಬೆಂಗಳೂರು ಮೆಟ್ರೋ ವ್ಯವಸ್ಥೆಯನ್ನು ಮೆಚ್ಚಿಕೊಂಡಿದ್ದಾರೆ. “ಬೆಂಗಳೂರು ಮೆಟ್ರೋಗೆ ಕಾಲಿಟ್ಟ ತಕ್ಷಣವೇ ನಿಲ್ದಾಣಗಳು ಮತ್ತು ರೈಲುಗಳು ಸಂಪೂರ್ಣವಾಗಿ ಹವಾನಿಯಂತ್ರಿತವಾಗಿದ್ದು, ಪ್ರಯಾಣಿಕರಿಗೆ ತಂಪಾದ ಮತ್ತು ಆರಾಮದಾಯಕ ಅನುಭವವನ್ನು ಒದಗಿಸುತ್ತವೆ. ಸ್ಥಳೀಯ ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿರುವುದು ವಿಶೇಷ, ಜೊತೆಗೆ ಅತ್ಯಂತ ಸ್ವಚ್ಚತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ ಎಂದು ಹೇಳಿದ್ದಾರೆ.
ವಿದೇಶ ಪ್ರವಾಸವು ನಮ್ಮ ದೇಶದ ಮೂಲಸೌಕರ್ಯಗಳ ಬಗ್ಗೆ ಹೊಸ ದೃಷ್ಟಿಕೋನ ನೀಡುತ್ತದೆ, ನಾವು ಭಾರತದಲ್ಲಿ ಸಾಮಾನ್ಯವಾಗಿ ಲಘುವಾಗಿ ಪರಿಗಣಿಸುವ ಸೌಲಭ್ಯಗಳು, ಪ್ರಪಂಚದ ಇತರ ಭಾಗಗಳಲ್ಲಿ ಐಷಾರಾಮಿಗಳಂತೆ ಕಾಣಬಹುದು ಎಂಬ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಈ ವೀಡಿಯೊ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರು ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಪಾಶ್ಚಿಮಾತ್ಯ ದೇಶಗಳಲ್ಲಿ ಕಾರು ಮತ್ತು ತೈಲ ಲಾಬಿಗಳ ಪ್ರಭಾವದಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ನವೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿಲ್ಲ ಎಂದು ಟೀಕಿಸಿದ್ದಾರೆ. ಇನ್ನೂ ಕೆಲವರು ಭಾರತ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳು ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಸುಧಾರಿಸಲು ದೊಡ್ಡ ಮಟ್ಟದ ಹೂಡಿಕೆ ಮಾಡುತ್ತಿರುವುದನ್ನು ಉಲ್ಲೇಖಿಸಿದ್ದಾರೆ.
ನಿಜವಾದ ಲಂಡನ್ ತೋರಿಸಿದ ವ್ಲಾಗರ್!
ಇದರ ನಡುವೆಯೇ, ಇತ್ತೀಚೆಗೆ ಮತ್ತೋರ್ವ ಟ್ರಾವೆಲ್ ವ್ಲೋಗರ್ ಲಂಡನ್‌ನ ಪ್ರಯಾಣ ಅನುಭವವನ್ನು ಪ್ರಶ್ನಿಸುವ ಮತ್ತೊಂದು ವೀಡಿಯೊ ಹಂಚಿಕೊಂಡಿದ್ದು, ಅಲ್ಲಿ ಪ್ಲಾಟ್‌ಫಾರ್ಮ್‌ಗಳು ಮತ್ತು ರೈಲುಗಳಲ್ಲಿ ಸ್ವಚ್ಛತೆ ಕೊರತೆ, ದುರ್ವಾಸನೆ ಮತ್ತು ಅಸಮರ್ಪಕ ನಿರ್ವಹಣೆ ಇರುವುದನ್ನು ಬಹಿರಂಗಪಡಿಸಿದ್ದರು. ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬಗ್ಗೆ ಹೆಮ್ಮೆಪಡುವ ನಗರದಲ್ಲಿ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದು ಚರ್ಚೆಗೆ ಕಾರಣವಾಗಿದೆ.
ಒಟ್ಟಾರೆ, ಈ ಘಟನೆಗಳು ಜಾಗತಿಕ ಮಟ್ಟದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಗುಣಮಟ್ಟ, ನಿರ್ವಹಣೆ ಮತ್ತು ಪ್ರಯಾಣಿಕರ ಅನುಭವದ ಬಗ್ಗೆ ಹೊಸ ಚರ್ಚೆಯನ್ನು ಪ್ರಾರಂಭಿಸಿವೆ. ಭಾರತದಂತಹ ದೇಶಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಈ ಕ್ಷೇತ್ರದಲ್ಲಿ ಉತ್ತಮ ಮಾದರಿಯನ್ನು ರೂಪಿಸುತ್ತಿರುವುದು ಸ್ಪಷ್ಟವಾಗುತ್ತಿದೆ.