
ಭಾರತದ ಸ್ವದೇಶಿ ದಿಕ್ಸೂಚಿ ವ್ಯವಸ್ಥೆಯಾದ ‘ನಾವಿಕ್’ನಲ್ಲಿ ಭಾರೀ ದೋಷ ಕಂಡುಬಂದಿದೆ. ಕಾರ್ಯನಿರ್ವಹಣೆಯಲ್ಲಿದ್ದ ನಾಲ್ಕು ಉಪಗ್ರಹಗಳಲ್ಲಿ ಒಂದಾದ ಐಆರ್‌ಎನ್‌ಎಸ್‌ಎಸ್-1ಎಫ್ ಸಂಪೂರ್ಣ ನಿಷ್ಕ್ರಿಯವಾಗಿದ್ದು, ಇದು ರೈಲ್ವೆ ಸೇನಾ ಸೇವೆಗಳ ಮೇಲೆ ಪರಿಣಾಮ ಬೀರಿ ರಾಷ್ಟ್ರೀಯ ಭದ್ರತೆಯ ಬಗ್ಗೆ ಕಳವಳ ಮೂಡಿಸಿದೆ.
ನವದೆಹಲಿ (ಮಾ.15): ರೈಲ್ವೆ, ಭಾರತೀಯ ಸೇನೆ ಮೊದಲಾದ ಸರ್ಕಾರಿ ಸಂಸ್ಥೆಗಳಿಗೆ ದಿಕ್ಸೂಚಿ (ಜಿಪಿಎಸ್ ರೀತಿ) ಸೇವೆಗಳನ್ನು ನೀಡಲು ಅಭಿವೃದ್ಧಿಪಡಿಸಿರುವ ‘ನಾವಿಕ್’ (ನ್ಯಾವಿಗೇಷನ್ ವಿತ್ ಇಂಡಿಯನ್ ಕಾನ್ಸ್ಟಲೇಷನ್) ಉಪಗ್ರಹ ವ್ಯವಸ್ಥೆಯಲ್ಲಿ ಭಾರೀ ದೋಷವುಂಟಾಗಿದೆ. ಇದರಲ್ಲಿ ಕಾರ್ಯನಿರ್ವಹಣೆಯಲ್ಲಿದ್ದ 4 ಉಪಗ್ರಹಗಳಲ್ಲಿ ಒಂದು ಉಪಗ್ರಹ ಸಂಪೂರ್ಣ ಹಾಳಾಗಿದ್ದು, ಸೇವೆ ನೀಡುವಲ್ಲಿ ವಿಫಲವಾಗಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ನಾವಿಕ್ ಎಂಬುದು ಭಾರತದ ಸ್ವದೇಶಿ ದಿಕ್ಸೂಚಿ ಉಪಗ್ರಹ ವ್ಯವಸ್ಥೆ. ಇದು ಸರ್ಕಾರಿ ಸಂಸ್ಥೆಗಳಿಗೆ ಜಿಪಿಎಸ್ ರೀತಿಯಲ್ಲಿ ದಿಕ್ಸೂಚಿಯಾಗಿ ಕೆಲಸ ಮಾಡುತ್ತದೆ. ಇದರ ಕನಿಷ್ಠ 4 ಉಪಗ್ರಹಗಳು ಸಂಪೂರ್ಣ ಕಾರ್ಯನಿರ್ವಹಣೆಯಲ್ಲಿರಬೇಕು. ಆದರೆ 10 ವರ್ಷಗಳ ಹಿಂದೆ, 2016ರ ಮಾ.10ರಂದು ಉಡಾವಣೆ ಮಾಡಲಾಗಿದ್ದ ಐಆರ್‌ಎನ್‌ಎಸ್‌ಎಸ್-1ಎಫ್ ಉಪಗ್ರಹವು ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಇದು ರಾಷ್ಟ್ರೀಯ ಭದ್ರತೆಯ ಬಗ್ಗೆ ಕಳವಳ ಉಂಟುಮಾಡಿದೆ.
ರೈಲ್ವೆ ಮತ್ತು ಸೇನಾ ಕಾರ್ಯಾಚರಣೆಗಳ ಮೇಲೆ ಇದರ ಪರಿಣಾಮವೇನು?
ರೈಲುಗಳಿಗೆ ಸಮಯ, ಮಾರ್ಗ, ಸುರಕ್ಷತಾ ವ್ಯವಸ್ಥೆ ಇತ್ಯಾದಿಗಳ ಮಾಹಿತಿ ನೀಡುವಲ್ಲಿ ನಾವಿಕ್ ವ್ಯವಸ್ಥೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಇದೀಗ ಈ ವ್ಯವಸ್ಥೆ ಹಾನಿಗೊಂಡಿರುವುದರಿಂದ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಇನ್ನು ಇದು ಭಾರತೀಯ ಸೇನೆಗೆ ಕ್ಷಿಪಣಿ, ಡ್ರೋನ್, ಸೈನಿಕ ಕಾರ್ಯಾಚರಣೆ ಮೊದಲಾದವುಗಳಿಗೆ ಜಿಪಿಎಸ್ ರೀತಿಯಲ್ಲಿ ಮಾರ್ಗದರ್ಶನ ಮಾಡುತ್ತದೆ. ನಾವಿಕ್ ಕೈಕೊಟ್ಟರೆ ರಾಷ್ಟ್ರೀಯ ಭದ್ರತೆಗೂ ಅಪಾಯ ಉಂಟಾಗುವ ಆತಂಕವಿದೆ.