
ಕ್ರೈಮಿಯಾ ಪರ್ಯಾಯ ದ್ವೀಪದಲ್ಲಿ ರಷ್ಯಾದ ಅಂಟೊನೊವ್-26 ಮಿಲಿಟರಿ ಸಾರಿಗೆ ವಿಮಾನವು ಪರ್ವತಕ್ಕೆ ಡಿಕ್ಕಿ ಹೊಡೆದು ಪತನಗೊಂಡಿದೆ. ಈ ದುರಂತದಲ್ಲಿ ವಿಮಾನದಲ್ಲಿದ್ದ 23 ಪ್ರಯಾಣಿಕರು ಮತ್ತು 6 ಸಿಬ್ಬಂದಿ ಸೇರಿದಂತೆ ಒಟ್ಟು 29 ಜನರು ಸಾವನ್ನಪ್ಪಿದ್ದು, ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ.
ಮಾಸ್ಕೋ (ಮಾ.1): ರಷ್ಯಾದ ಅಂಟೊನೊವ್-26 (An-26) ಮಿಲಿಟರಿ ಸಾರಿಗೆ ವಿಮಾನವು ಕ್ರೈಮಿಯಾ ಪರ್ಯಾಯ ದ್ವೀಪದ ಕಡಿದಾದ ಪರ್ವತದ ಕಂದಕಕ್ಕೆ ಡಿಕ್ಕಿ ಹೊಡೆದು ಪತನಗೊಂಡಿದೆ. ಈ ಭೀಕರ ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲಾ 29 ಜನರು ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಬುಧವಾರ ಬೆಳಿಗ್ಗೆ ಖಚಿತಪಡಿಸಿದೆ. ರಷ್ಯಾದ ಮಾಧ್ಯಮ ಸಂಸ್ಥೆ ‘ಟಾಸ್’ (Tass) ವರದಿಯ ಪ್ರಕಾರ, ಬ್ಲ್ಯಾಕ್ ಸೀ ಪಕ್ಕದಲ್ಲಿರುವ ಕ್ರೈಮಿಯಾ ಪ್ರಾಂತ್ಯದಲ್ಲಿ ಈ ವಿಮಾನ ಪತನ ಸಂಭವಿಸಿದೆ. ವಿಮಾನದಲ್ಲಿದ್ದ 23 ಪ್ರಯಾಣಿಕರು ಮತ್ತು 6 ಸಿಬ್ಬಂದಿ ಸೇರಿದಂತೆ ಒಟ್ಟು 29 ಜನರು ಮೃತಪಟ್ಟಿದ್ದಾರೆ. ಮಂಗಳವಾರ ಸಂಜೆ ಸುಮಾರು 6 ಗಂಟೆಯ ಸುಮಾರಿಗೆ ವಿಮಾನದೊಂದಿಗಿನ ಸಂಪರ್ಕ ಕಡಿತಗೊಂಡಿತ್ತು. ನಿಗದಿತ ಹಾರಾಟ ನಡೆಸುತ್ತಿದ್ದ ವಿಮಾನವು ಬೆಟ್ಟದ ತುದಿಗೆ ಡಿಕ್ಕಿ ಹೊಡೆದು ಪಪಾತಕ್ಕೆ ಬಿದ್ದಿದೆ.
ತಾಂತ್ರಿಕ ದೋಷವೇ ಕಾರಣ?
ಪ್ರಾಥಮಿಕ ವರದಿಗಳ ಪ್ರಕಾರ, ತಾಂತ್ರಿಕ ದೋಷವೇ ಈ ದುರಂತಕ್ಕೆ ಕಾರಣ ಎಂದು ಅಂದಾಜಿಸಲಾಗಿದೆ. ವಿಮಾನವು ಕಂದಕಕ್ಕೆ ಅಪ್ಪಳಿಸಿದ ತೀವ್ರತೆಗೆ ಯಾರು ಕೂಡ ಬದುಕುಳಿದಿಲ್ಲ ಎಂದು ರಷ್ಯಾದ ಆರ್‌ಐಎ (RIA) ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಬಗ್ಗೆ ರಕ್ಷಣಾ ಸಚಿವಾಲಯವು ಅಧಿಕೃತ ತನಿಖೆಗೆ ಆದೇಶಿಸಿದೆ.
ಹಳೆಯ ಮಾದರಿಯ ವಿಮಾನ
An-26 ಮಾದರಿಯ ವಿಮಾನಗಳು 1960ರ ದಶಕದ ಉತ್ತರಾರ್ಧದಿಂದ ಸೇವೆಯಲ್ಲಿದ್ದು, ಇವುಗಳನ್ನು ಮುಖ್ಯವಾಗಿ ಸರಕು ಸಾಗಣೆ ಮತ್ತು ಮಿಲಿಟರಿ ಕಾರ್ಯಾಚರಣೆಗೆ ಬಳಸಲಾಗುತ್ತದೆ. ಆದರೆ, ಕಳೆದ ಒಂದು ದಶಕದಲ್ಲಿ ಈ ಮಾದರಿಯ ವಿಮಾನಗಳು ಹಲವಾರು ಬಾರಿ ಭೀಕರ ಅಪಘಾತಗಳಿಗೆ ಈಡಾಗಿವೆ.
2022: ಉಕ್ರೇನ್‌ನ ಜಪೋರಿಝಿಯಾ ಪ್ರದೇಶದಲ್ಲಿ An-26 ಪತನಗೊಂಡು ಒಬ್ಬರು ಸಾವನ್ನಪ್ಪಿದ್ದರು.
2020: ಉಕ್ರೇನ್‌ನಲ್ಲಿ ತರಬೇತಿ ವಿಮಾನ ಪತನಗೊಂಡು 26 ಜನರು ಮೃತಪಟ್ಟಿದ್ದರು.
2020: ದಕ್ಷಿಣ ಸುಡಾನ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಐವರು ರಷ್ಯನ್ನರು ಸೇರಿದಂತೆ ಎಂಟು ಜನರು ಬಲಿಯಾಗಿದ್ದರು.
2017: ಪಶ್ಚಿಮ ಆಫ್ರಿಕಾದ ಕೋಟ್ ಡಿ ಐವರಿ ಎಂಬಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ಪತನಗೊಂಡು ನಾಲ್ವರು ಮೃತಪಟ್ಟಿದ್ದರು.