
ಮಹಾರಾಷ್ಟ್ರದ ಕಲ್ಯಾಣ್ ಬಳಿ 49 ವರ್ಷದ ವ್ಯಕ್ತಿಯೊಬ್ಬರು ಕೌಟುಂಬಿಕ ಕಲಹದಿಂದ ಬೇಸತ್ತು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಸಿಕ್ಕ ಡೆತ್ ನೋಟ್‌ನಲ್ಲಿ, ತನ್ನ ಸಾವಿಗೆ ಪತ್ನಿ ಮತ್ತು ಆಕೆಯ ಸಂಬಂಧಿಕರ ಮಾನಸಿಕ ಹಾಗೂ ದೈಹಿಕ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದಾರೆ.
ಕಲ್ಯಾಣ್ (ಏ.8): ಮಹಾರಾಷ್ಟ್ರದ ಕಲ್ಯಾಣ್ ಬಳಿಯ ಅಂಬರನಾಥ್ ಮತ್ತು ಬದ್ಲಾಪುರ್ ರೈಲು ನಿಲ್ದಾಣಗಳ ನಡುವೆ, ಏಪ್ರಿಲ್ 3ರ ನಸುಕಿನ ಜಾವ 49 ವರ್ಷದ ರವಿಕಾಂತ್ ಅಡಂಗಲೆ ಎಂಬುವವರು ರೈಲಿಗೆ ತಲೆಕೊಟ್ಟು ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಸಣ್ಣದಾದ ಕೌಟುಂಬಿಕ ಕಲಹವು ಕೊನೆಗೆ ವ್ಯಕ್ತಿಯೊಬ್ಬನ ಪ್ರಾಣವನ್ನೇ ತೆಗೆದಿರುವುದು ಇದೀಗ ಬೆಳಕಿಗೆ ಬಂದಿದೆ. ಮೃತ ರವಿಕಾಂತ್ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಇವರು ತಮ್ಮ ಪತ್ನಿ, ತಾಯಿ ಮತ್ತು ಸಹೋದರಿಯೊಂದಿಗೆ ವಾಸಿಸುತ್ತಿದ್ದರು. ಮೃತರು 15 ವರ್ಷದ ಮಗುವನ್ನು ಅಗಲಿದ್ದಾರೆ. ಏಪ್ರಿಲ್ 3ರಂದು ರಾತ್ರಿ 1 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಸ್ಥಳದಲ್ಲಿ ಪೊಲೀಸರಿಗೆ ರವಿಕಾಂತ್ ಅವರು ಬರೆದಿದ್ದ ಡೆತ್ ನೋಟ್ ದೊರೆತಿದೆ.
ಡೆತ್ ನೋಟ್‌ನಲ್ಲಿ ಪತ್ನಿ ಹಾಗೂ ಸಂಬಂಧಿಕರ ಮೇಲೆ ಆರೋಪ
ಮೃತ ವ್ಯಕ್ತಿ ತಮ್ಮ ಡೆತ್‌ನೋಟ್‌ನಲ್ಲಿ ತಮ್ಮ ಪತ್ನಿ ರಶ್ಮಿ, ಅತ್ತೆ ಅರುಣಾ ನಿರ್ಭವನೆ ಮತ್ತು ಅವರ ತಂಗಿ ಸುನಿತಾ ರಾಜೇಂದ್ರ ಗಾಯಕ್ವಾಡ್ ಅವರೇ ತನ್ನ ಸಾವಿಗೆ ಕಾರಣ ಎಂದು ಉಲ್ಲೇಖಿಸಿದ್ದಾರೆ. ಈ ಮೂವರು ಸೇರಿ ತನಗೆ ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.
ಜಗಳದ ಮೂಲ ಕಾರಣವೇನು?
ಪೊಲೀಸರ ಮಾಹಿತಿ ಪ್ರಕಾರ, ದಂಪತಿಗಳ ನಡುವೆ ಹಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯವಿತ್ತು. ಪತ್ನಿ ರಶ್ಮಿ ತನಗೂ ಮತ್ತು ತನ್ನ ತಾಯಿ ಹಾಗೂ ಸಹೋದರಿಗೂ ಅಡುಗೆ ಮಾಡಿಕೊಡಲು ನಿರಾಕರಿಸುತ್ತಿದ್ದರು. ಇದರಿಂದಾಗಿ ಅನಿವಾರ್ಯವಾಗಿ ಹೊರಗಡೆಯೇ ಊಟ ಮಾಡುವಂತಾಗಿತ್ತು ಎಂದು ರವಿಕಾಂತ್ ಆರೋಪಿಸಿದ್ದರು. ಪತ್ನಿ ಮನೆಯ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುತ್ತಿರಲಿಲ್ಲ ಎಂದು ದೂರಿದ್ದಾರೆ. ಪತ್ನಿ ರಶ್ಮಿ, ರವಿಕಾಂತ್ ತನ್ನ ತಾಯಿ ಮತ್ತು ಸಹೋದರಿಯನ್ನು ಬಿಟ್ಟು ತನ್ನೊಂದಿಗೆ ಪ್ರತ್ಯೇಕವಾಗಿ ವಾಸಿಸಬೇಕೆಂದು ಒತ್ತಾಯಿಸುತ್ತಿದ್ದರು. ಆದರೆ, ರವಿಕಾಂತ್ ಇದಕ್ಕೆ ಒಪ್ಪಿರಲಿಲ್ಲ. ಇದೇ ವಿಚಾರಕ್ಕೆ ಮನೆಯಲ್ಲಿ ಪದೇ ಪದೇ ಜಗಳ ನಡೆಯುತ್ತಿತ್ತು.
ಕಲ್ಯಾಣ್ ಸರ್ಕಾರಿ ರೈಲ್ವೆ ಪೊಲೀಸರು (GRP) ಡೆತ್ ನೋಟ್ ಆಧರಿಸಿ, ಆರೋಪಿಗಳಾದ ಪತ್ನಿ, ಅತ್ತೆ ಮತ್ತು ಅವರ ತಂಗಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯಡಿ (BNS) ಸೆಕ್ಷನ್ 108, 352 ಮತ್ತು 3(5) ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಪಂಢರಿ ಕಂದೆ ಅವರು ಮಾತನಾಡಿ, “ಆ*ತ್ಮಹ*ತ್ಯಾ ಪತ್ರದಲ್ಲಿ ಕೌಟುಂಬಿಕ ಕಲಹದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ನಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮುಂದಿನ ತನಿಖೆಯನ್ನು ನಡೆಸುತ್ತಿದ್ದೇವೆ,” ಎಂದು ತಿಳಿಸಿದ್ದಾರೆ.