
ರಾಜಸ್ಥಾನ ರಾಯಲ್ಸ್‌ನಿಂದ 18 ಕೋಟಿ ರೂಪಾಯಿಗೆ ಚೆನ್ನೈ ಸೂಪರ್ ಕಿಂಗ್ಸ್‌ಗೆ ಬಂದಿರುವ ಕನ್ನಡಿಗ ಸಂಜು ಸ್ಯಾಮ್ಸನ್‌ಗೆ ಹಿಂದಿನಿಂದಲೂ CSK ಪರ ಆಡುವ ಆಸೆಯಿತ್ತು ಎಂದು ನಾಯಕ ಋತುರಾಜ್ ಗಾಯಕ್ವಾಡ್ ಬಹಿರಂಗಪಡಿಸಿದ್ದಾರೆ. ಮೂರು ವರ್ಷಗಳ ಹಿಂದೆಯೇ ಸಂಜು ತನ್ನ ನಾಯಕತ್ವದಲ್ಲಿ ಆಡುವ ಇಚ್ಛೆ ವ್ಯಕ್ತಪಡಿಸಿದ್ದರು ಎಂದು ಋತುರಾಜ್ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.
ಚೆನ್ನೈ: ರಾಜಸ್ಥಾನ ರಾಯಲ್ಸ್ ತಂಡದಿಂದ 18 ಕೋಟಿ ರೂಪಾಯಿಗೆ ಚೆನ್ನೈ ಸೂಪರ್ ಕಿಂಗ್ಸ್‌ಗೆ ಬಂದಿರುವ ಕನ್ನಡಿಗ ಸಂಜು ಸ್ಯಾಮ್ಸನ್ ಬಗ್ಗೆ, CSK ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್ ಒಂದು ಇಂಟ್ರೆಸ್ಟಿಂಗ್ ವಿಚಾರವನ್ನು ಹಂಚಿಕೊಂಡಿದ್ದಾರೆ. ಸಂಜುಗೆ ಬಹಳ ಹಿಂದಿನಿಂದಲೂ CSK ಪರ ಆಡುವ ಆಸೆಯಿತ್ತು ಮತ್ತು ತನ್ನ ನಾಯಕತ್ವದಲ್ಲಿ ಆಡಲು ಅವರು ಬಯಸಿದ್ದರು ಎಂದು ಋತುರಾಜ್ ಗಾಯಕ್ವಾಡ್ ಹೇಳಿದ್ದಾರೆ. CSK ಪಾಡ್‌ಕಾಸ್ಟ್‌ನಲ್ಲಿ ಅಭಿನವ್ ಮುಕುಂದ್ ಜೊತೆ ಮಾತನಾಡುತ್ತಾ ಅವರು ಈ ವಿಷಯವನ್ನು ಬಹಿರಂಗಪಡಿಸಿದರು.
ಚೆನ್ನೈ ತಂಡ ಕೂಡಿಕೊಳ್ಳಲು ಒಲವು ತೋರಿದ್ದ ಸಂಜು ಸ್ಯಾಮ್ಸನ್
“ಮೂರು ವರ್ಷಗಳ ಹಿಂದೆ ಇಂಗ್ಲೆಂಡ್‌ನಲ್ಲಿ ಸಂಜು ನನ್ನನ್ನು ಭೇಟಿಯಾಗಿದ್ದ. ಆಗ ಎಂ.ಎಸ್. ಧೋನಿ ನಮ್ಮ ತಂಡದ ನಾಯಕರಾಗಿದ್ದರು. ಆಗ ಸಂಜು, ‘ಮಹಿ ಭಾಯ್ ಹೇಗಿದ್ದಾರೆ? CSK ವಾತಾವರಣ ಹೇಗಿದೆ? ಅಲ್ಲಿನ ಪದ್ಧತಿಗಳೇನು?’ ಎಂದು ಕೇಳುತ್ತಿದ್ದ. ಅದಕ್ಕೆ ನಾನು, ‘ನೀನು ದಕ್ಷಿಣ ಭಾರತದವನು, ಈ ಅವಕಾಶ ಬಳಸಿಕೊಂಡು ಚೆನ್ನೈಗೆ ಬರಬೇಕು’ ಅಂತ ಹೇಳಿದ್ದೆ” ಎಂದು ಋತುರಾಜ್ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
Scroll to load tweet…
ಆಗ ಸಂಜು, ಗಾಯಕ್ವಾಡ್‌ಗೆ “ನೀನು ಮುಂದೆ CSK ಕ್ಯಾಪ್ಟನ್ ಆಗ್ತೀಯಾ?” ಎಂದು ಕೇಳಿದ್ದರಂತೆ. ಅದಕ್ಕೆ ಋತುರಾಜ್, “ನಾನು ಕ್ಯಾಪ್ಟನ್ಸಿ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ತಂಡದ ವಾತಾವರಣವೇ ನನಗೆ ಮುಖ್ಯ” ಎಂದು ಉತ್ತರಿಸಿದ್ದರಂತೆ. “ಆಗ ಸಂಜು, ‘ನನಗೂ ಅಲ್ಲಿ ಕ್ಯಾಪ್ಟನ್ ಆಗೋ ಆಸೆಯಿಲ್ಲ. ನಿನ್ನ ಕೆಳಗೆ ಒಬ್ಬ ಆಟಗಾರನಾಗಿ ಆಡೋಕೆ ಇಷ್ಟ. ಅದು ನಿನ್ನ ಟೀಮ್, ನಿನ್ನ ಫ್ರಾಂಚೈಸಿ. ಅವಕಾಶ ಸಿಕ್ಕರೆ ಖಂಡಿತ ಬರ್ತೀನಿ’ ಅಂತ ಹೇಳಿದ್ದ” ಎಂದು ಋತುರಾಜ್ ತಿಳಿಸಿದರು.
ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಸಂಜು ಚೆನ್ನೈ ತಂಡಕ್ಕೆ ಸೇರಿದ್ದಾರೆ. ವಿಶ್ವಕಪ್‌ನಲ್ಲಿ ‘ಸರಣಿ ಶ್ರೇಷ್ಠ’ ಪ್ರಶಸ್ತಿ ಗೆದ್ದಿದ್ದ ಸಂಜು, ಟಿ20 ವಿಶ್ವಕಪ್ ಟೂರ್ನಿಯ ವೆಸ್ಟ್ ಇಂಡೀಸ್, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧ ಸತತ ಮೂರು ಅರ್ಧಶತಕಗಳನ್ನು ಬಾರಿಸಿ, ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದರು.
ಕಳೆದ ಸೀಸನ್‌ನಲ್ಲಿ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಚೆನ್ನೈ ತಂಡಕ್ಕೆ ಈ ಬಾರಿಯ ಐಪಿಎಲ್ ಪ್ರತಿಷ್ಠೆಯ ಕಣವಾಗಿದೆ. ಗಾಯದ ಕಾರಣ ಕಳೆದ ಬಾರಿ ಅರ್ಧದಲ್ಲೇ ಸರಣಿಯಿಂದ ಹೊರಗುಳಿದಿದ್ದ ಋತುರಾಜ್‌ಗೂ ಈ ಸೀಸನ್ ನಿರ್ಣಾಯಕವಾಗಿದೆ. ಮಾರ್ಚ್ 30, ಸೋಮವಾರದಂದು ಗುವಾಹಟಿಯಲ್ಲಿ ಸಂಜು ಅವರ ಹಳೆಯ ತಂಡವಾದ ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮೊದಲ ಪಂದ್ಯವನ್ನು ಆಡಲಿದೆ.
ಆರನೇ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಸಿಎಸ್‌ಕೆ:
ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೂಡಾ ಒಂದು ಎನಿಸಿಕೊಂಡಿದೆ. ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐದು ಬಾರಿ ಐಪಿಎಲ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ 2023ರ ಐಪಿಎಲ್ ಟೂರ್ನಿಯ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ರೋಚಕವಾಗಿ ಮಣಿಸಿ ಐದನೇ ಬಾರಿಗೆ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿತ್ತು. ಇದಾದ ಬಳಿಕ ಕಳೆದೆರಡು ಸೀಸನ್‌ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಲೀಗ್ ಹಂತದಲ್ಲೇ ಹೊರಬೀಳುತ್ತಿದೆ. ಆದರೆ ಇದೀಗ ಸಿಎಸ್‌ಕೆ ತಂಡಕ್ಕೆ ಸಂಜು ಸ್ಯಾಮ್ಸನ್ ಸೇರ್ಪಡೆ ಮತ್ತಷ್ಟು ಬಲ ತಂದುಕೊಟ್ಟಿದ್ದು, ಆರನೇ ಟ್ರೋಫಿ ಜಯಿಸುವ ಕನವರಿಕೆಯಲ್ಲಿದೆ. ಅಂದಹಾಗೆ ಈ ಬಾರಿ ಕಪ್ ಗೆದ್ದು ಧೋನಿಗೆ ಐಪಿಎಲ್‌ಗೆ ಸ್ಮರಣೀಯ ವಿದಾಯ ನೀಡಲು ಎದುರು ನೋಡುತ್ತಿದೆ ಎನ್ನಲಾಗುತ್ತಿದೆ.