16 ವರ್ಷದೊಳಗಿನ ಮಕ್ಕಳಿಗೆ ರಾಜ್ಯದಲ್ಲಿ ಮೊಬೈಲ್‌ ನಿಷೇಧ? ಆಸ್ಟ್ರೇಲಿಯಾ ರೀತಿ ಕ್ರಮಕ್ಕೆ ಸರ್ಕಾರ ಚಿಂತನೆ | Mobile Phone Ban For Children Under 16 In The Karnataka

16 ವರ್ಷದೊಳಗಿನ ಮಕ್ಕಳಿಗೆ ರಾಜ್ಯದಲ್ಲಿ ಮೊಬೈಲ್‌ ನಿಷೇಧ? ಆಸ್ಟ್ರೇಲಿಯಾ ರೀತಿ ಕ್ರಮಕ್ಕೆ ಸರ್ಕಾರ ಚಿಂತನೆ | Mobile Phone Ban For Children Under 16 In The Karnataka



16 ವರ್ಷದೊಳಗಿನ ಮಕ್ಕಳಿಗೆ ರಾಜ್ಯದಲ್ಲಿ ಮೊಬೈಲ್‌ ನಿಷೇಧ? ಆಸ್ಟ್ರೇಲಿಯಾ ರೀತಿ ಕ್ರಮಕ್ಕೆ ಸರ್ಕಾರ ಚಿಂತನೆ | Mobile Phone Ban For Children Under 16 In The Karnataka

ಶಾಲಾ ಮಕ್ಕಳಲ್ಲಿ ಮೊಬೈಲ್‌ ಗೀಳು ಹೆಚ್ಚುತ್ತಿರುವುದನ್ನು ತಡೆಯಲು ರಾಜ್ಯದಲ್ಲಿ 16 ವರ್ಷದೊಳಗಿನವರಿಗೆ ಮೊಬೈಲ್‌ ಬಳಕೆ ನಿಷೇಧಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು : ಶಾಲಾ ಮಕ್ಕಳಲ್ಲಿ ಮೊಬೈಲ್‌ ಗೀಳು ಹೆಚ್ಚುತ್ತಿರುವುದನ್ನು ತಡೆಯಲು ರಾಜ್ಯದಲ್ಲಿ 16 ವರ್ಷದೊಳಗಿನವರಿಗೆ ಮೊಬೈಲ್‌ ಬಳಕೆ ನಿಷೇಧಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸರ್ಕಾರದ ಈ ಚಿಂತನೆಗೆ ಶನಿವಾರ ನಡೆದ ರಾಜ್ಯದ ವಿಶ್ವವಿದ್ಯಾಲಯಗಳ ಪ್ರಗತಿಪರಿಶೀಲನಾ ಸಭೆಯಲ್ಲಿ ಅಭಿಪ್ರಾಯ ಪಡೆದಿದ್ದು ಬಹುತೇಕ ಕುಲಪತಿಗಳು ಸಹಮತ ವ್ಯಕ್ತಪಡಿಸಿದ್ದಾರೆ.

ಉನ್ನತ ಶಿಕ್ಷಣ ಪರಿಷತ್‌ನಲ್ಲಿ ಇಡೀ ದಿನ ನಡೆದ ಕುಲಪತಿಗಳ ಸಮ್ಮೇಳನದ ಬಳಿಕ ಸಂಜೆ ಸಮಾರೋಪದ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ಈಗಾಗಲೇ ಆಸ್ಟ್ರೇಲಿಯಾ, ಯೂರೋಪ್‌ನ ಕೆಲ ರಾಷ್ಟ್ರಗಳಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್‌ ಬ್ಯಾನ್‌ ಮಾಡಲಾಗಿದೆ. ನಮ್ಮ ರಾಜ್ಯದಲ್ಲೂ ಬಹಳಷ್ಟು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ವೀಕ್ಷಣೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಇದರಿಂದ ಅವರು ತರಗತಿ ಓದಿನ ಜೊತೆ ವೈಚಾರಿಕ, ವೈಜ್ಞಾನಿಕ ಹಾಗೂ ಮೌಲ್ಯಾಧಾರಿತ ಶಿಕ್ಷಣದಿಂದ ವಂಚಿತರಾಗಿ ಹಾಳಾಗುತ್ತಿರುವುದನ್ನು ಕಾಣುತ್ತಿದ್ದೇವೆ ಎಂದರು.

ಗಂಭೀರ ಚರ್ಚೆ:

ರಾಜ್ಯದಲ್ಲೂ 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್‌ ಬಳಕೆಗೆ ನಿಷೇಧ ಹೇರುವ ಚಿಂತನೆ ಇದ್ದು, ಗಂಭೀರ ಚರ್ಚೆ ನಡೆಸಿದ್ದೇವೆ. ಇದಕ್ಕೆ ಶಿಕ್ಷಣ ತಜ್ಞರೂ ಆಗಿ ನಿಮ್ಮ ಅಭಿಪ್ರಾಯವೇನು ಎಂದು ಕುಲಪತಿಗಳನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಹುತೇಕ ಕುಲಪತಿಗಳು ಸಹಮತ ವ್ಯಕ್ತಪಡಿಸಿ ಇಂತಹದ್ದೊಂದು ನಿರ್ಧಾರವನ್ನು ಸರ್ಕಾರ ಮಾಡಿದರೆ ಬಹಳ ಒಳ್ಳೆಯ ನಿರ್ಧಾರ. 16 ವರ್ಷದೊಳಗಿನ ಅಂದರೆ ಎಸ್ಸೆಸ್ಸೆಲ್ಸಿ ವರೆಗಿನ ಮಕ್ಕಳಿಗೆ ಅನ್ವಯಿಸುತ್ತದೆ. ಅದೇ ರೀತಿ ಪಿಯುಸಿ ಹಾಗೂ ಪದವಿ ಕಾಲೇಜು ಮಕ್ಕಳಿಗೂ ಕನಿಷ್ಠ ತರಗತಿಯೊಳಗೆ ಮೊಬೈಲ್‌ ಬಳಕೆ ನಿಷೇಧಿಸುವ ಕೆಲಸ ಆಗಬೇಕು. ಈಗ ಪರೀಕ್ಷಾ ಕೇಂದ್ರಕ್ಕೆ ಅಷ್ಟೇ ಮೊಬೈಲ್‌ ನಿಷೇಧ ಮಾಡಲಾಗಿದೆ. ಅದನ್ನು ತರಗತಿಗೂ ವಿಸ್ತರಿಸಬೇಕು ಎಂದು ಸಲಹೆ ನೀಡಿದರು.

ಕುಲಪತಿಯೊಬ್ಬರು, ಕಾಲೇಜಿಗೆ ಮೊಬೈಲ್‌ ತರಬಾರದು ಎಂದರೆ ಪೋಷಕರಿಂದ ವಿರೋಧ ವ್ಯಕ್ತವಾಗಬಹುದು. ಇನ್ನು, ಬಹುತೇಕ ಖಾಸಗಿ ಹಾಗೂ ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ಮೊಬೈಲ್‌ ಕಡ್ಡಾಯ ಮಾಡಿದ್ದಾರೆ. ಮೊಬೈಲ್‌ನಲ್ಲೇ ಹೋಮ್‌ ವರ್ಕ್‌ ಮಾಡಿಸಲಾಗುತ್ತಿದೆ. ಹಾಗಾಗಿ ಮೊಬೈಲ್‌ ಬಳಕೆಯಿಂದ ಮಕ್ಕಳ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಎಲ್ಲರ ಸಹಮತದೊಂದಿಗೆ ನಿಷೇಧಿಸುವ ಕೆಲಸ ಮಾಡಬಹುದು ಎಂದು ಅಭಿಪ್ರಾಯ ತಿಳಿಸಿದರು.

ಇದಕ್ಕೆ ಮುಖ್ಯಮಂತ್ರಿ ಅವರು, ಖಾಸಗಿ ಶಾಲೆಗಳು ಮಾಡಿದರೆ ಅವರೇನು ಸ್ವತಂತ್ರ ಸಂಸ್ಥೆಗಳಲ್ಲ. ಸರ್ಕಾರ ಏನು ತೀರ್ಮಾನ ಮಾಡಬೇಕು ಎಂಬುದು ಹೇಳಿ ಎಂದರು. ಆಗ ಬಹುತೇಕ ಕುಲಪತಿಗಳು ಮೊಬೈಲ್‌ ನಿಷೇಧ ಚಿಂತನೆ ಉತ್ತಮವಾದುದು ಎಂದರು.

ಕ್ಯಾಂಪಸ್‌ಗಳನ್ನು ಡ್ರಗ್ಸ್‌ ಮುಕ್ತಗೊಳಿಸಲು ಸೂಚನೆ

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಕನಿಷ್ಠ ಪಕ್ಷ ನಿಮ್ಮ ಕ್ಯಾಂಪಸ್‌ಗಳನ್ನು ಡ್ರಗ್ಸ್‌ ಮುಕ್ತಗೊಳಿಸಲು ಗಂಭೀರವಾಗಿ ಕ್ರಮ ವಹಿಸಿ ಎಂದು ಸೂಚಿಸಿದ್ದಾರೆ.

ಕ್ಯಾಂಪಸ್‌ನಲ್ಲಿ ನಡೆಯುವ ಡ್ರಗ್ಸ್‌ ಪೂರೈಕೆ, ಮಾರಾಟದ ಮಾಫಿಯಾಗಳಿಗೆ ಕಡಿವಾಣ ಹಾಕಿ. ಅಂಥವರನ್ನು ಗುರುತಿಸಿ ತಕ್ಷಣ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿ, ಪೊಲೀಸರು ಮುಂದಿನ ಕ್ರಮ ವಹಿಸುತ್ತಾರೆ. ಅದೇ ರೀತಿ ಡ್ರಗ್ಸ್‌ ಸೇವಿಸುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಮಾರ್ಪಾಡು ಮಾಡುವ ಕೆಲಸ ಮಾಡಿ. ಇದರಿಂದ ಉತ್ತಮ ನಾಗರಿಕರನ್ನು ತಯಾರಿಸಿ ಸಮಾಜಕ್ಕೆ ಅನುಕೂಲ ಮಾಡಿದಂತಾಗುತ್ತದೆ ಎಂದು ನಿರ್ದೇಶನ ನೀಡಿದರು.

ವಿದ್ಯಾರ್ಥಿ ಚುನಾವಣೆಗೆ ವಿಸಿಗಳಿಂದ ಮಿಶ್ರ ಪ್ರತಿಕ್ರಿಯೆ

ಇನ್ನು ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾವು ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಚುನಾವಣೆ ನಡೆಸಬೇಕೆಂದು ಯೋಚಿಸಿದ್ದೇವೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು ಎಂದು ಪ್ರಶ್ನಿಸಿದಾಗ, ಕೆಲ ಕುಲಪತಿಗಳು ಈಗಾಗಲೇ ಕ್ಯಾಂಪಸ್‌ನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ವಿದ್ಯಾರ್ಥಿ ಚುನಾವಣೆ ನಡೆಸಿದರೆ ಇನ್ನಷ್ಟು ಸಮಸ್ಯೆಗಳು ಹೆಚ್ಚಾಗುತ್ತವೆ. ಅದು ರಾಜಕೀಯ ಪಕ್ಷಾಧಾರಿತ ಚುನಾವಣೆಯಾಗಿ ಮಾರ್ಪಡಬಹುದು. ಅಲ್ಲದೆ, ಸರ್ಕಾರವೇ ಪಠ್ಯ ಬೋಧನೆ, ಸೆಮಿಸ್ಟರ್‌ ಪರೀಕ್ಷೆ, ಫಲಿತಾಂಶ ಎಲ್ಲದಕ್ಕೂ ವೇಳಾಪಟ್ಟಿ ನಿಗದಿಪಡಿಸಿ ಅದನ್ನು ಪಾಲಿಸುವುದು ಕಡ್ಡಾಯ. ಇದರ ನಡುವೆ ಚುನಾವಣೆ ನಡೆಸಿದರೆ ಮತಪ್ರಚಾರ, ಮತದಾನ, ಸಂಭ್ರಮಾಚರಣೆ ಅಂತ ಕನಿಷ್ಠ ಮೂರು ತಿಂಗಳು ಬೇಕಾಗುತ್ತದೆ. ಶೈಕ್ಷಣಿಕ ಚಟುವಟಿಕೆಗಳಿಗೆ ಸಮಸ್ಯೆಯಾಗುವುದರಿಂದ ಬೇಡ ಎಂದರು. ಕೆಲವರು ಚುನಾವಣೆಗಿಂತ ವಿದ್ಯಾರ್ಥಿ ಅಣಕು ಸಂಸತ್‌ನಂಥ ಚಟುವಟಿಕೆಗಳಿಗೆ ಒತ್ತು ನೀಡಿದರೆ ಒಳಿತು ಎಂದರು.

ಇನ್ನು ಕೆಲವರು ಯುವಕರಲ್ಲಿ ರಾಜಕೀಯ ಪ್ರಜ್ಞೆ ಕಡಿಮೆ ಆಗುತ್ತಿದೆ. ಅವರಲ್ಲಿ ಈ ಪ್ರಜ್ಞೆ ಹೆಚ್ಚಿಸಲು ನಿಯಮಗಳನ್ನು ರೂಪಿಸಿ, ನಿಗದಿತ ಕಾಲಮಿತಿಯಲ್ಲಿ ಸೆಮಿಸ್ಟರ್‌ ಜೊತೆಗೆ ಚುನಾವಣೆ ಮುಗಿಸುವುದಾದರೆ ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಆಗ, ಮುಖ್ಯಮಂತ್ರಿ ಅವರು, ಚುನಾವಣೆ ಬೇಡ ಎನ್ನುವವರು ಏಕೆ ಬೇಡ ಎನ್ನುತ್ತಿದ್ದೀರಿ ತಿಳಿಸಿ. ಈಗ ಜೆಎನ್‌ಯುನಲ್ಲಿ ಇದೆಯಲ್ಲಾ? ನಮ್ಮ ಕಾಲದಲ್ಲೂ ವಿದ್ಯಾರ್ಥಿ ಚುನಾವಣೆಗಳಿದ್ದವು. ನಾವೆಲ್ಲಾ ಕಾಲೇಜು ದಿನಗಳಲ್ಲಿ ಆ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿಯೇ ಮೇಲೆ ಬಂದಿದ್ದು, ಈಗ ನಾನು ಮುಖ್ಯಮಂತ್ರಿ ಆಗಿಲ್ಲವೇನ್ರಿ? ಚುನಾವಣೆ ಆಗದೆ ಹೋದರೆ ವಿದ್ಯಾರ್ಥಿ ದಿಸೆಯಿಂದ ನಾಯಕರು ಬೆಳೆಯುವುದು ಹೇಗೆ? ಈಗ ಬಹಳ ಜನ ವಿದ್ಯಾರ್ಥಿ ನಾಯಕರು ಇಲ್ಲವೇ ಇಲ್ಲ ಎಂದರು.

ಈ ವೇಳೆ, ಉನ್ನತ ಶಿಕ್ಷಣ ಸಚಿವರು, ಯುಜಿಸಿ ಕೂಡ ಚುನಾವಣೆಗೆ ಪ್ರೋತ್ಸಾಹ ನೀಡಬೇಕೆಂದು ಹೇಳಿದೆ ಎಂದು ಮುಖ್ಯಮಂತ್ರಿ ಅವರ ಗಮನಕ್ಕೆ ತಂದರು. ಇದಕ್ಕೆ ಮುಖ್ಯಮಂತ್ರಿ ಅವರು ಚುನಾವಣೆಗೆ ಷರತ್ತು, ಸಮಯ, ನಿಯಮ ಎಲ್ಲವನ್ನೂ ವಿವಿಗಳೇ ರೂಪಿಸಿ ನಡೆಸಬಹುದಲ್ಲಾ ಎಂದರು.

ಆಸ್ಟ್ರೇಲಿಯಾ, ಯುರೋಪ್‌ನ ಕೆಲ ದೇಶಗಳಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್‌ ಬಳಕೆ ನಿಷೇಧವಿದೆ

ನಮ್ಮ ರಾಜ್ಯದಲ್ಲೂ ಹಲವು ವಿದ್ಯಾರ್ಥಿಗಳೂ ಸಾಮಾಜಿಕ ಜಾಲತಾಣಗಳ ವೀಕ್ಷಣೆಯಲ್ಲಿ ಕಾಲ ಕಳೆಯುತ್ತಿದ್ದಾರೆ

ಇದರಿಂದ ಅವರ ತರಗತಿ ಓದಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ನಿಮ್ಮ ಸಲಹೆ ತಿಳಿಸಿ ಎಂದು ಕೇಳಿದ ಸಿಎಂ

ಪಿಯುಸಿ, ಪದವಿ ವಿದ್ಯಾರ್ಥಿಗಳಿಗೂ ತರಗತಿಯಲ್ಲಿ ಮೊಬೈಲ್‌ ಬಳಕೆಗೆ ನಿಷೇಧ ಹೇರಿ ಎಂದು ವೀಸಿಗಳ ಸಲಹೆ

ವಿದ್ಯಾರ್ಥಿ ಚುನಾವಣೆ ಬೇಡ: ಕುಲಪತಿಗಳು

ಕಾಲೇಜುಗಳಲ್ಲಿ ನಡೆಸಲು ಉದ್ದೇಶಿಸಿರುವ ಚುನಾವಣೆ ಬಗ್ಗೆ ಕುಲಪತಿಗಳ ಸಲಹೆಯನ್ನು ಮುಖ್ಯಮಂತ್ರಿಗಳು ಕೇಳಿದರು. ಇದರಿಂದ ಸಮಸ್ಯೆ ಹೆಚ್ಚಾಗುತ್ತದೆ ಎಂದು ಕೆಲವು ಕುಲಪತಿಗಳು ಹೇಳಿದರು. ಅದಕ್ಕೆ ಉತ್ತರಿಸಿದ ಸಿಎಂ, ಚುನಾವಣೆ ಆಗದೆ ಹೋದರೆ ವಿದ್ಯಾರ್ಥಿ ದಿಸೆಯಿಂದ ನಾಯಕರು ಬೆಳೆಯುವುದು ಹೇಗೆ? ಈಗ ಬಹಳ ಜನ ವಿದ್ಯಾರ್ಥಿ ನಾಯಕರು ಇಲ್ಲವೇ ಇಲ್ಲ ಎಂದರು.

ಕ್ಯಾಂಪಸ್‌ಗಳನ್ನು ಡ್ರಗ್‌ಮುಕ್ತಗೊಳಿಸಿ

ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಕನಿಷ್ಠ ಕ್ಯಾಂಪಸ್‌ಗಳನ್ನು ಡ್ರಗ್ಸ್‌ ಮುಕ್ತಗೊಳಿಸಲು ಕುಲಪತಿಗಳು ಗಂಭೀರವಾಗಿ ಕ್ರಮ ವಹಿಸಬೇಕು. ಡ್ರಗ್ಸ್‌ ಪೂರೈಕೆ ಕಂಡುಬಂದರೆ ಪೊಲೀಸರಿಗೆ ದೂರು ನೀಡಬೇಕು.

– ಸಿದ್ದರಾಮಯ್ಯ, ಮುಖ್ಯಮಂತ್ರಿ



Source link

Leave a Reply

Your email address will not be published. Required fields are marked *