
13 ವರ್ಷಗಳಿಂದ ವೆಂಟಿಲೇಟರ್ ಸಹಾಯದಿಂದ ಕೃತಕ ಜೀವಾಧಾರಕ ವ್ಯವಸ್ಥೆಯಲ್ಲಿದ್ದ ಹರೀಶ್ ರಾಣಾ ಅವರಿಗೆ ದಯಾಮರಣ ನೀಡಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. 2018ರಲ್ಲಿ ದಯಾಮರಣ ಕಾನೂನುಬದ್ಧಗೊಂಡ ನಂತರ ದೇಶದಲ್ಲಿ ಅನುಮತಿ ಪಡೆದ ಮೊದಲ ಪ್ರಕರಣ ಇದಾಗಿದೆ.
ದೆಹಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ ದಯಾಮರಣಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. 13 ವರ್ಷಗಳಿಂದ ವೆಂಟಿಲೇಟರ್ ಸಹಾಯದಿಂದ ಕೃತಕ ಜೀವಾಧಾರಕ ವ್ಯವಸ್ಥೆಯಲ್ಲಿರುವ ಹರೀಶ್ ರಾಣಾ ಎಂಬುವವರಿಗೆ ದಯಾಮರಣ ನೀಡುವುದಕ್ಕೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. ಹರೀಶ್ ರಾಣಾ ಅವರಿಗೆ ಅಳವಡಿಸಿದ ಕೃತಕ ಉಸಿರಾಟ ಯಂತ್ರವನ್ನು ತೆಗೆದು ಅವರಿಗೆ ನೈಸರ್ಗಿಕವಾಗಿ ಸಾಯಲು ಅವಕಾಶ ನೀಡಲಾಗುತ್ತಿದೆ. ಅವರ ವೃದ್ಧ ಪೋಷಕರ ಅರ್ಜಿಯ ಮೇರೆಗೆ ನ್ಯಾಯಾಲಯ ಈ ಅನುಮತಿ ನೀಡಿದೆ.
ಕೇವಲ ಯಂತ್ರದ ಬೆಂಬಲದಿಂದ ಜೀವನವನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ ಎಂಬ ವೈದ್ಯರ ಅಭಿಪ್ರಾಯವನ್ನೂ ಅದು ಪರಿಗಣಿಸಿದ ನ್ಯಾಯಾಲಯವು ಹರೀಶ್ ರಾಣಾ ಅವರಿಗೆ ನೀಡಲಾಗುತ್ತಿರುವ ವೆಂಟಿಲೇಟರ್ ಬೆಂಬಲವನ್ನು ಹಿಂಪಡೆಯಬಹುದು ಮತ್ತು ಚಿಕಿತ್ಸೆಯನ್ನು ಹಂತ ಹಂತವಾಗಿ ನಿಲ್ಲಿಸಬಹುದು ಎಂದು ಸ್ಪಷ್ಟಪಡಿಸಿದೆ.
ದೇಶದಲ್ಲಿ ದಯಾಮರಣವನ್ನು 2018ರಲ್ಲಿ ಸುಪ್ರೀಂಕೋರ್ಟ್ ಕಾನೂನುಬದ್ಧಗೊಳಿಸಿತ್ತು. ದಯಾಮರಣ ಕಾನೂನುಬದ್ಧ ಗೊಂಡ ನಂತರ ಮೊದಲ ದಯಾಮರಣ ಪ್ರಕರಣ ಇದಾಗಿದೆ. ದಯಾಮರಣಕ್ಕೆ ಒಳಗಾಗುತ್ತಿರುವ ಹರೀಶ್ ರಾಣೆ 2013 ರಲ್ಲಿ ಈ ಸ್ಥಿತಿಗೆ ತಲುಪಿದ್ದರು. ಚಂಡೀಗಢದ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಹರೀಶ್ ರಾಣೆ ಕಟ್ಟಡದಿಂದ ಬಿದ್ದು ಅವರ ತಲೆಗೆ ಗಾಯವಾಗಿತ್ತು. ಪರಿಣಾಮ ಸುಮಾರು 13 ವರ್ಷಗಳಿಂದಲೂ ಹರೀಶ್ ರಾಣೆ ಅವರು ವೆಂಟಿಲೇಟರ್ ಸಹಾಯದಿಂದ ಬದುಕಿದ್ದಾರೆ.