
ದಕ್ಷಿಣ ಆಫ್ರಿಕಾ ವಿರುದ್ಧ ವೆಸ್ಟ್ ಇಂಡೀಸ್ ತಂಡದ ಹೀನಾಯ ಸೋಲಿನ ಬಗ್ಗೆ ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಫಿಕ್ಸಿಂಗ್ ಅನುಮಾನ ವ್ಯಕ್ತಪಡಿಸಿದ್ದಾರೆ. ವಿಂಡೀಸ್ ಆಟಗಾರರ ಬೇಜವಾಬ್ದಾರಿ ಆಟ ಮತ್ತು ಐಪಿಎಲ್ ಹಿತಾಸಕ್ತಿಗಳನ್ನು ಅವರು ಉಲ್ಲೇಖಿಸಿದ್ದಾರೆ.
ಇಸ್ಲಾಮಾಬಾದ್ (ಫೆ.26): ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಕಳಪೆ ಪ್ರದರ್ಶನವನ್ನು ಕಂಡು ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಪಂದ್ಯದ ಕುರಿತು ಐಸಿಸಿ (ICC) ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುರುವಾರ ನಡೆದ ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವೆಸ್ಟ್ ಇಂಡೀಸ್ 9 ವಿಕೆಟ್‌ಗಳ ಹೀನಾಯ ಸೋಲು ಕಂಡಿದೆ. ಈ ಪಂದ್ಯದ ಬಗ್ಗೆ ಪಾಕಿಸ್ತಾನ ಟಿವಿ ಚಾನೆಲ್‌ನಲ್ಲಿ ನಡೆದ ಚರ್ಚೆಯಲ್ಲಿ ಸಕ್ಲೇನ್ ಮುಷ್ತಾಕ್ ಫಿಕ್ಸಿಂಗ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಸಕ್ಲೇನ್ ಮುಷ್ತಾಕ್ ಹೇಳಿದ್ದೇನು?
ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಹೇಳುವ ಪ್ರಕಾರ, ‘ಪಿಚ್ ಬ್ಯಾಟಿಂಗ್‌ಗೆ ಪೂರಕವಾಗಿದ್ದರೂ ವೆಸ್ಟ್ ಇಂಡೀಸ್ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್ ಬೀಳುತ್ತಿದ್ದರೂ ಬ್ಯಾಟರ್‌ಗಳು ಬೇಜವಾಬ್ದಾರಿಯುತ ಶಾಟ್ ಆಡಿ ಔಟಾಗಿದ್ದು ಅಚ್ಚರಿ ಮೂಡಿಸಿದೆ’ ಎಂದಿದ್ದಾರೆ.
‘ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯು ಆರ್ಥಿಕವಾಗಿ ಅಷ್ಟೇನು ಸಬಲವಾಗಿಲ್ಲ. ಆದರೆ ಅವರ ಬಹಳಷ್ಟು ಆಟಗಾರರು ಐಪಿಎಲ್‌ನಲ್ಲಿ ದೊಡ್ಡ ಮೊತ್ತದ ಒಪ್ಪಂದಗಳನ್ನು ಹೊಂದಿದ್ದಾರೆ. ಆಟಗಾರರ ಈ ಐಪಿಎಲ್ ಹಿತಾಸಕ್ತಿಯಿಂದಾಗಿ ಅಥವಾ ಮಂಡಳಿಯ ಆರ್ಥಿಕ ಲಾಭಕ್ಕಾಗಿ ಈ ಪಂದ್ಯವನ್ನು ಮೊದಲೇ ನಿರ್ಧರಿಸಿದಂತೆ ಆಡಲಾಗಿದೆಯೇ ಎಂಬ ಸಂಶಯ ಕಾಡುತ್ತಿದೆ’ ಎಂದು ಹೇಳಿದ್ದಾರೆ.
‘ಇಂತಹ ಪಿಚ್‌ನಲ್ಲಿ ವೆಸ್ಟ್ ಇಂಡೀಸ್ ಬೌಲರ್‌ಗಳು ಕನಿಷ್ಠ ಹೋರಾಟದ ಮನೋಭಾವವನ್ನೂ ತೋರಿಸಲಿಲ್ಲ. ಅವರ ಬೌಲಿಂಗ್‌ನಲ್ಲಿ ಯಾವುದೇ ಶ್ರದ್ಧೆ ಕಾಣಿಸಲಿಲ್ಲ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ, ಐಸಿಸಿ ಈ ಪಂದ್ಯದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ನಾನು ಬಯಸುತ್ತೇನೆ’ ಎಂದು ಮಾಧ್ಯಮ ಸಂವಾದದಲ್ಲಿ ಹೇಳಿದ್ದಾರೆ.
ಪಂದ್ಯದಲ್ಲಿ ಆಗಿದ್ದೇನು?
ಇಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಿಂಡೀಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಒಂದು ಹಂತದಲ್ಲಿ 83 ರನ್ನಿಗೆ 7 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ರೊಮಾರಿಯೋ ಶೆಫರ್ಡ್ (52)* ಮತ್ತು ಜೇಸನ್ ಹೋಲ್ಡರ್ (49) ದಾಖಲೆಯ 8ನೇ ವಿಕೆಟ್ ಜೊತೆಯಾಟದ ಮೂಲಕ ಆಸರೆಯಾದರು. ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್ಗಿಡಿ 3 ವಿಕೆಟ್ ಪಡೆದರು. 177 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಹರಿಣಗಳು ಕೇವಲ 16.1 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿದವು. ನಾಯಕ ಏಡನ್ ಮಾರ್ಕ್ರಾಮ್ (82)* ಅಬ್ಬರದ ಆಟವಾಡಿದರೆ, ಕ್ವಿಂಟನ್ ಡಿ ಕಾಕ್ (47) ಮತ್ತು ರಿಯಾನ್ ರಿಕೆಲ್ಟನ್ (45*) ಭರ್ಜರಿ ಸಾಥ್ ನೀಡಿದರು.