ವಿಶಾಖಪಟ್ಟಣದಲ್ಲಿ ನಡೆದ ಜಂಟಿ ನೌಕಾ ಸಮರಾಭ್ಯಾಸದಲ್ಲಿ ಭಾಗವಹಿಸಿದ್ದ ಇರಾನ್‌ನ ಯುದ್ಧನೌಕೆ IRIS ಲಾವನ್‌ಗೆ ಭಾರತ ಕೊಚ್ಚಿಯಲ್ಲಿ ಲಂಗರು ಹಾಕಲು ಅನುಮತಿ ನೀಡಿದೆ. ಅಮೆರಿಕ ಇರಾನ್‌ನ ಮತ್ತೊಂದು ಹಡಗನ್ನು ಮುಳುಗಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ದೆಹಲಿ (ಮಾ.7): ವಿಶಾಖಪಟ್ಟಣದಲ್ಲಿ ನಡೆದ ಜಂಟಿ ನೌಕಾ ಸಮರಾಭ್ಯಾಸಕ್ಕೆ ಬಂದಿದ್ದ ಇರಾನ್‌ನ ಒಂದು ಹಡಗು ಈಗ ಕೊಚ್ಚಿಯಲ್ಲಿದೆ ಅನ್ನೋದು ಖಚಿತಪಟ್ಟಿದೆ. IRIS ಲಾವನ್ ಹೆಸರಿನ ಈ ಹಡಗನ್ನು ಕೊಚ್ಚಿಯಲ್ಲಿ ನಿಲ್ಲಿಸಲು ಭಾರತ ಅನುಮತಿ ನೀಡಿದೆ.
ಇಸ್ರೇಲ್ ಮತ್ತು ಅಮೆರಿಕ ಸೇರಿ ಇರಾನ್ ಮೇಲೆ ದಾಳಿ ನಡೆಸಿದ 28ನೇ ತಾರೀಖಿನಂದೇ ಇರಾನ್, ತನ್ನ ಹಡಗನ್ನು ಭಾರತದಲ್ಲಿ ನಿಲ್ಲಿಸಲು ಅನುಮತಿ ಕೇಳಿತ್ತು. ಸರ್ಕಾರಿ ಮೂಲಗಳ ಪ್ರಕಾರ, ಭಾರತವು 1ನೇ ತಾರೀಖು ಅನುಮತಿ ನೀಡಿದ್ದು, ಹಡಗು 4ನೇ ತಾರೀಖು ಕೊಚ್ಚಿ ತೀರಕ್ಕೆ ಬಂದಿದೆ.
ಇದನ್ನೂ ಓದಿ: US Iran conflict: 4 ದಿನದ ಯುದ್ಧದಲ್ಲಿ ಅಮೆರಿಕದ ₹18000 ಕೋಟಿ, ಇಸ್ರೇಲ್‌ಗೆ ವಾರಕ್ಕೆ ₹2.74 ಲಕ್ಷ ಕೋಟಿ ನಷ್ಟ!
ಹಡಗಿನಲ್ಲಿರುವ 183 ಸಿಬ್ಬಂದಿಗೆ ಭಾರತೀಯ ನೌಕಾಪಡೆಯು ತನ್ನ ನೆಲೆಯಲ್ಲಿ ಸೌಲಭ್ಯಗಳನ್ನು ಒದಗಿಸಿದೆ. ಇದೇ ಗುಂಪಿನಲ್ಲಿದ್ದ IRIS ದೇನಾ ಹಡಗನ್ನು ಇತ್ತೀಚೆಗೆ ಅಮೆರಿಕ ಮುಳುಗಿಸಿತ್ತು. ಮತ್ತೊಂದು ಹಡಗಾದ IRIS ಬುಶಹರ್ ಶ್ರೀಲಂಕಾ ತೀರದಲ್ಲಿ ಲಂಗರು ಹಾಕಿತ್ತು. ಅಮೆರಿಕವು IRIS ದೇನಾವನ್ನು ನಾಶಪಡಿಸುವ ಮೊದಲೇ, ಭಾರತವು ಇರಾನ್‌ನ ಮತ್ತೊಂದು ಹಡಗಿಗೆ ಆಶ್ರಯ ನೀಡಿತ್ತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
