
ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ನಡುವಿನ ಐಪಿಎಲ್ ಪಂದ್ಯದಲ್ಲಿ, ಹಾರ್ದಿಕ್ ಪಾಂಡ್ಯ ಔಟಾದಾಗ ಅವರ ಅಣ್ಣ ಕೃನಾಲ್ ಪಾಂಡ್ಯ ಅತಿಯಾಗಿ ಸಂಭ್ರಮಿಸಿದ್ದಾರೆ. ಈ ಘಟನೆ ಮತ್ತು ಹಾರ್ದಿಕ್ ಅವರ ಕೋಪದ ನೋಟವು, ಇಬ್ಬರು ಸಹೋದರರ ಸಂಬಂಧದಲ್ಲಿ ಬಿರುಕು ಮೂಡಿದೆಯೇ ಎಂಬ ಅನುಮಾನಗಳಿಗೆ ಕಾರಣವಾಗಿದೆ.
ಮುಂಬೈ: ಐಪಿಎಲ್ ಅಂದ್ರೆನೇ ಹಾಗೆ, ಇಲ್ಲಿ ಸಂಬಂಧಗಳಿಗಿಂತ ಪೈಪೋಟಿಯೇ ದೊಡ್ಡದು. ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಇಂಥದ್ದೇ ಒಂದು ದೃಶ್ಯ ಕಂಡುಬಂತು. ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ವಿಕೆಟ್ ಬಿದ್ದಾಗ, ಎದುರಾಳಿ ತಂಡದಲ್ಲಿದ್ದ ಅವರ ಅಣ್ಣ ಕೃನಾಲ್ ಪಾಂಡ್ಯ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ.
ಆರ್‌ಸಿಬಿ ನೀಡಿದ 241 ರನ್‌ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್ ಪರ ಹಾರ್ದಿಕ್ ಪಾಂಡ್ಯ 22 ಎಸೆತಗಳಲ್ಲಿ 40 ರನ್ ಗಳಿಸಿ ಹೋರಾಡುತ್ತಿದ್ದರು. ಈ ವೇಳೆ, ಆರ್‌ಸಿಬಿಯ ಈ ಸೀಸನ್ನ ಉತ್ತಮ ಬೌಲರ್ ಎನಿಸಿಕೊಂಡಿರುವ ಜೇಕಬ್ ಡಫಿ ಅವರ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ಹಾರ್ದಿಕ್ ಪಾಂಡ್ಯ ರೊಮಾರಿಯೋ ಶೆಪರ್ಡ್ಗೆ ಕ್ಯಾಚ್ ನೀಡಿ ಹಾರ್ದಿಕ್ ಪೆವಿಲಿಯನ್‌ಗೆ ನಡೆದರು.
ಹಾರ್ದಿಕ್ ಔಟಾಗುತ್ತಿದ್ದಂತೆ, ಕ್ಯಾಚ್ ಹಿಡಿದ ರೊಮಾರಿಯೋ ಶೆಪರ್ಡ್ ಜೊತೆ ಸೇರಿಕೊಂಡು ಕೃನಾಲ್ ಪಾಂಡ್ಯ ಜೋರಾಗಿ ಕುಣಿದು ಸಂಭ್ರಮಿಸಿದರು. ಅಣ್ಣನ ಈ ಅತಿಯಾದ ಸಂಭ್ರಮವನ್ನು ನೋಡಿದ ಹಾರ್ದಿಕ್, ಕೋಪದಿಂದಲೇ ತಿರುಗಿ ನೋಡಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.
ಹೀಗಿತ್ತು ನೋಡಿ ಆ ಕ್ಷಣ
Scroll to load tweet…
ವಾಂಖೆಡೆ ಸ್ಟೇಡಿಯಂ ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾದ ಜಾಗ ಎಂದು ಪಂದ್ಯದ ನಂತರ ಕೃನಾಲ್ ಹೇಳಿದರು. “ನಾನು ಇಲ್ಲಿ ಆರು ವರ್ಷಗಳ ಕಾಲ ಆಡಿದ್ದೇನೆ. ಈ ಅವಧಿಯಲ್ಲಿ ಮೂರು ಟ್ರೋಫಿಗಳನ್ನು ಗೆದ್ದಿದ್ದು ನನ್ನ ಅದೃಷ್ಟ,” ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
“ಇಲ್ಲಿಗೆ ಬರುವುದು ಯಾವಾಗಲೂ ವಿಶೇಷ. ಕಳೆದ ವರ್ಷ ಹೇಳಿದ ಹಾಗೆ, ಪಾಯಿಂಟ್ಸ್ ಅಂತಿಮವಾಗಿ ನಮ್ಮ ಮನೆಗೇ ಬರುತ್ತದೆ. ಪಾಂಡ್ಯ ಸಹೋದರರಲ್ಲಿ ಒಬ್ಬರು ಗೆಲ್ಲಲೇಬೇಕು, ಈ ಬಾರಿ ಆ ಅದೃಷ್ಟ ನನಗಿತ್ತು,” ಎಂದು ಕೃನಾಲ್ ಹೇಳಿದರು.
ದಾಯಾದಿಗಳಾದ್ರಾ ಅಣ್ತಮ್ಮಾಸ್?
ಕಳೆದೊಂದು ವರ್ಷದಿಂದೀಚೆಗೆ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ನಡುವೆ ಸಂಬಂಧ ಅಷ್ಟೊಂದು ಚೆನ್ನಾಗಿಲ್ಲವಾ ಎನ್ನುವ ಅನುಮಾನ ಕಾಡಲಾರಂಭಿಸಿದೆ. ಅಚ್ಚುಮೆಚ್ಚಿನ ಅಣ್ಣ ತಮ್ಮಂದಿರಾಗಿ ಗುರುತಿಸಿಕೊಂಡಿದ್ದ ಪಾಂಡ್ಯ ಬ್ರದರ್ಸ್, ನತಾಶಾ ಸ್ಟ್ಯಾಂಕೋವಿಚ್ ಅವರೊಂದಿಗೆ ಹಾರ್ದಿಕ್ ಡಿವೋರ್ಸ್ ಬಳಿಕ ಪಾಂಡ್ಯ ಬ್ರದರ್ಸ್ ಸಂಬಂಧದಲ್ಲಿ ಬಿರುಕು ಬಿಟ್ಟಿದೆ ಎನ್ನುವಂತಹ ಮಾತುಗಳು ಕೇಳಿ ಬಂದಿದ್ದವು. ಇದೀಗ ನಿನ್ನೆಯ ಕೃನಾಲ್ ಪಾಂಡ್ಯ ಸೆಲಿಬ್ರೇಷನ್ ಹಾಗೂ ಹಾರ್ದಿಕ್ ಪಾಂಡ್ಯ ಅವರ ಕಿರುನೋಟ ಗಮನಿಸಿದ್ರೆ ಇಬ್ಬರು ಅಣ್ತಮ್ಮಾಸ್ ದಾಯಾದಿಗಳಾದ್ರಾ ಎನ್ನುವ ಅನುಮಾನ ಕಾಡಲಾರಂಭಿಸಿದೆ.
ರನ್ ಮಳೆ ಹರಿದ ಈ ಪಂದ್ಯದಲ್ಲಿ ಕೃನಾಲ್ ಅವರ ಆಟವೂ ಗಮನ ಸೆಳೆಯಿತು. ನಾಲ್ಕು ಓವರ್‌ಗಳಲ್ಲಿ ಕೇವಲ 26 ರನ್ ನೀಡಿ, ನಿರ್ಣಾಯಕ ಹಂತದಲ್ಲಿ ಸೂರ್ಯಕುಮಾರ್ ಯಾದವ್ ಅವರ ವಿಕೆಟ್ ಪಡೆದು ಮುಂಬೈ ಇಂಡಿಯನ್ಸ್ ಓಟಕ್ಕೆ ತಡೆ ಹಾಕಿದರು. ಮುಂಬೈನ ತವರು ನೆಲವಾದ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸತತ ಮೂರನೇ ಸೋಲು ಅನುಭವಿಸಿತು.
ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದಾರ್ ಅವರ ಅರ್ಧಶತಕಗಳ ಬಲದಿಂದ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ, ಶೆರ್ಫಾನೆ ರುದರ್ಫೋರ್ಡ್ 31 ಎಸೆತಗಳಲ್ಲಿ ಅಜೇಯ 71 ರನ್ ಸಿಡಿಸಿ ಹೋರಾಡಿದರೂ, ಮುಂಬೈ ತಂಡ 18 ರನ್‌ಗಳಿಂದ ಸೋಲೊಪ್ಪಿಕೊಂಡಿತು.