Headlines

ಶಿವಮೊಗ್ಗ ರೈತನ ಟ್ರ್ಯಾಕ್ಟರ್ ಜಪ್ತಿ; 1 ಕಂತು ಬಾಕಿ ಉಳಿದಿದ್ದಕ್ಕೆ ₹6 ಲಕ್ಷದ ವಾಹನ 1.46 ಲಕ್ಷಕ್ಕೆ ಮಾರಾಟ! | Shivamogga Farmer Protest Against Chola Finance Over Illegal Tractor Seizure And Sale Sat

ಶಿವಮೊಗ್ಗ ರೈತನ ಟ್ರ್ಯಾಕ್ಟರ್ ಜಪ್ತಿ; 1 ಕಂತು ಬಾಕಿ ಉಳಿದಿದ್ದಕ್ಕೆ ₹6 ಲಕ್ಷದ ವಾಹನ 1.46 ಲಕ್ಷಕ್ಕೆ ಮಾರಾಟ! | Shivamogga Farmer Protest Against Chola Finance Over Illegal Tractor Seizure And Sale Sat



ಶಿವಮೊಗ್ಗ ರೈತನ ಟ್ರ್ಯಾಕ್ಟರ್ ಜಪ್ತಿ; 1 ಕಂತು ಬಾಕಿ ಉಳಿದಿದ್ದಕ್ಕೆ ₹6 ಲಕ್ಷದ ವಾಹನ 1.46 ಲಕ್ಷಕ್ಕೆ ಮಾರಾಟ! | Shivamogga Farmer Protest Against Chola Finance Over Illegal Tractor Seizure And Sale Sat

ಶಿವಮೊಗ್ಗದಲ್ಲಿ, ಒಂದು ಕಂತು ಪಾವತಿಸದ ಕಾರಣಕ್ಕೆ ಚೋಳ ಫೈನಾನ್ಸ್ ಕಂಪನಿಯು ರೈತ ಶ್ರೀನಿವಾಸ್ ಅವರ ಟ್ರ್ಯಾಕ್ಟರ್ ಅನ್ನು ಜಪ್ತಿ ಮಾಡಿದೆ. ಯಾವುದೇ ಮುನ್ಸೂಚನೆ ಇಲ್ಲದೆ ಜಪ್ತಿ ಮಾಡಿ, 6 ಲಕ್ಷದ ಟ್ರ್ಯಾಕ್ಟರ್ ಅನ್ನು ಕೇವಲ 1.46 ಲಕ್ಷಕ್ಕೆ ಹರಾಜು ಹಾಕಿದ್ದರಿಂದ ದಲಿತ ಸಮಿತಿ ಪ್ರತಿಭಟನೆ ನಡೆಸುತ್ತಿದೆ.

ಶಿವಮೊಗ್ಗ (ಫೆ.20): ಸಾಲದ ಸುಳಿಗೆ ಸಿಲುಕಿ ರೈತರು ಕಂಗಾಲಾಗುತ್ತಿರುವ ಬೆನ್ನಲ್ಲೇ, ಖಾಸಗಿ ಫೈನಾನ್ಸ್ ಕಂಪನಿಗಳ ದರ್ಪಕ್ಕೆ ಮತ್ತೊಬ್ಬ ಅನ್ನದಾತ ಬಲಿಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಕೇವಲ ಒಂದು ಕಂತಿನ ಹಣ ಪಾವತಿಸಿಲ್ಲ ಎಂಬ ಕಾರಣಕ್ಕೆ ರೈತನಿಗೆ ಯಾವುದೇ ಮುನ್ಸೂಚನೆ ನೀಡದೆ ಲಕ್ಷಾಂತರ ರೂಪಾಯಿ ಮೌಲ್ಯದ ಟ್ರ್ಯಾಕ್ಟರ್ ಜಪ್ತಿ ಮಾಡಿ, ಅದನ್ನು ಅತ್ಯಂತ ಕಡಿಮೆ ಬೆಲೆಗೆ ಹರಾಜು ಹಾಕಿರುವ ‘ಚೋಳ ಫೈನಾನ್ಸ್’ ವಿರುದ್ಧ ಈಗ ಆಕ್ರೋಶ ಭುಗಿಲೆದ್ದಿದೆ.

ಘಟನೆಯ ವಿವರ:

ಶಿವಮೊಗ್ಗದ ಹೊಳೆ ಸ್ಟಾಪ್ ಬಳಿ ಇರುವ ಚೋಳ ಫೈನಾನ್ಸ್ ಶಾಖೆಯಲ್ಲಿ ರೈತ ಶ್ರೀನಿವಾಸ್ ಅವರು ಕೃಷಿ ಚಟುವಟಿಕೆಗಾಗಿ ಟ್ರ್ಯಾಕ್ಟರ್ ಖರೀದಿಸಲು 6 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಕಷ್ಟಪಟ್ಟು ಕಂತುಗಳನ್ನು ಪಾವತಿಸುತ್ತಿದ್ದ ಶ್ರೀನಿವಾಸ್, ಅನಿವಾರ್ಯ ಕಾರಣಗಳಿಂದ ಕೇವಲ ಒಂದು ತಿಂಗಳ ಕಂತನ್ನು ಪಾವತಿಸಲು ಸಾಧ್ಯವಾಗಿರಲಿಲ್ಲ. ಇದನ್ನೇ ನೆಪವಾಗಿಸಿಕೊಂಡ ಫೈನಾನ್ಸ್ ಕಂಪನಿಯ ಸಿಬ್ಬಂದಿ, ರೈತನಿಗೆ ಯಾವುದೇ ನೋಟಿಸ್ ನೀಡದೆ ಹಠಾತ್ತನೆ ಟ್ರ್ಯಾಕ್ಟರ್ ಅನ್ನು ಜಪ್ತಿ ಮಾಡಿದ್ದರು.

ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಗೆ ಕವಡೆ ಕಾಸಿನ ಬೆಲೆ!

ಜಪ್ತಿ ಮಾಡಿದ ನಂತರ ಸಾಲ ತೀರಿಸಲು ರೈತ ಮುಂದಾದಾಗ ಫೈನಾನ್ಸ್ ಕಂಪನಿ ಅಘಾತಕಾರಿ ವಿಷಯವೊಂದನ್ನು ತಿಳಿಸಿದೆ. ಆರು ಲಕ್ಷ ರೂಪಾಯಿ ಸಾಲದ ಮೇಲೆ ಖರೀದಿಸಿದ್ದ ಟ್ರ್ಯಾಕ್ಟರ್ ಅನ್ನು ಆನ್‌ಲೈನ್ ಬಿಡ್ಡಿಂಗ್ ಮೂಲಕ ಕೇವಲ 1 ಲಕ್ಷದ 46 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದೇವೆ ಎಂದು ಕಂಪನಿ ಹೇಳಿದೆ. ಈ ವಿಚಾರ ತಿಳಿಯುತ್ತಿದ್ದಂತೆ ರೈತ ಶ್ರೀನಿವಾಸ್ ಕಂಗಾಲಾಗಿದ್ದಾರೆ.

ದಲಿತ ಸಂಘರ್ಷ ಸಮಿತಿ ಬೆಂಬಲ, ಬಿಗುವಿನ ವಾತಾವರಣ:

ರೈತ ಶ್ರೀನಿವಾಸ್ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಅವರಿಗೆ ಅನ್ಯಾಯವಾಗಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ (ದಸಂಸ) ಮೈದಾನಕ್ಕಿಳಿದಿದೆ. ದಸಂಸ ಮುಖಂಡ ಹರಮಘಟ್ಟ ರಂಗಪ್ಪ ಅವರ ನೇತೃತ್ವದಲ್ಲಿ ಫೈನಾನ್ಸ್ ಕಚೇರಿ ಮುಂದೆ ಭಾರಿ ಪ್ರತಿಭಟನೆ ನಡೆಸಲಾಯಿತು. ಫೈನಾನ್ಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರಂಗಪ್ಪ ಅವರು, ‘ಬಡ ರೈತರ ಮೇಲೆ ಸವಾರಿ ಮಾಡುವುದನ್ನು ನಿಲ್ಲಿಸಿ. ಲಕ್ಷಾಂತರ ರೂಪಾಯಿ ಮೌಲ್ಯದ ಟ್ರ್ಯಾಕ್ಟರ್ ಅನ್ನು ಕಾನೂನು ಬಾಹಿರವಾಗಿ ಜಪ್ತಿ ಮಾಡಿ, ಅತಿ ಕಡಿಮೆ ಬೆಲೆಗೆ ಹರಾಜು ಹಾಕಿರುವುದು ದಗಾಕೋರತನ’ ಎಂದು ಕಿಡಿಕಾರಿದರು.

ಪೊಲೀಸರ ಮಧ್ಯಸ್ಥಿಕೆ:

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಕೋಟೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಂತೋಷ್ ಬಾಗೋಜಿ ಆಗಮಿಸಿದರು. ಪ್ರತಿಭಟನಾಕಾರರು ಮತ್ತು ಫೈನಾನ್ಸ್ ಅಧಿಕಾರಿಗಳ ನಡುವೆ ಸಂಧಾನ ನಡೆಸಲು ಪ್ರಯತ್ನಿಸಿದರು. ‘ಜಪ್ತಿ ಮಾಡಿರುವ ಟ್ರ್ಯಾಕ್ಟರ್ ಅನ್ನು ಕೂಡಲೇ ರೈತನಿಗೆ ವಾಪಸ್ ನೀಡಬೇಕು. ಇಲ್ಲದಿದ್ದರೆ ಫೈನಾನ್ಸ್ ಕಚೇರಿಗೆ ಬೀಗ ಜಡಿದು ರಸ್ತೆ ತಡೆದು ಉಗ್ರ ಹೋರಾಟ ಮಾಡಲಾಗುವುದು’ ಎಂದು ದಲಿತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಈ ಘಟನೆಯು ಖಾಸಗಿ ಹಣಕಾಸು ಸಂಸ್ಥೆಗಳು ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯಕ್ಕೆ ಹಿಡಿದ ಕನ್ನಡಿಯಾಗಿದ್ದು, ಇಂತಹ ಸಂಸ್ಥೆಗಳ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



Source link

Leave a Reply

Your email address will not be published. Required fields are marked *