
ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ರೋಚಕ ಜಯ ಸಾಧಿಸಿ ಫೈನಲ್‌ಗೆ ಪ್ರವೇಶಿಸಿದೆ. 89 ರನ್ ಗಳಿಸಿ ಪಂದ್ಯಶ್ರೇಷ್ಠರಾದ ಸಂಜು ಸ್ಯಾಮ್ಸನ್, ಈ ಪ್ರಶಸ್ತಿಯನ್ನು ಜಸ್ಪ್ರೀತ್ ಬುಮ್ರಾಗೆ ಅರ್ಪಿಸಿದ್ದಾರೆ. ಬುಮ್ರಾ ಅವರ ಅದ್ಭುತ ಡೆತ್ ಓವರ್ ಬೌಲಿಂಗ್ ಇಲ್ಲದಿದ್ದರೆ ಕಷ್ಟವಾಗ್ತಿತ್ತು.
ಮುಂಬೈ: ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿದು ಭಾರತ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾದ ಟಾಪ್ ಸ್ಕೋರರ್ ಆಗಿದ್ದ ಸಂಜು ಸ್ಯಾಮ್ಸನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಕೇವಲ 42 ಎಸೆತಗಳಲ್ಲಿ 89 ರನ್ ಚಚ್ಚಿದ ಸಂಜು, ಭಾರತ ಬೃಹತ್ ಮೊತ್ತ ಕಲೆಹಾಕಲು ಪ್ರಮುಖ ಪಾತ್ರ ವಹಿಸಿದ್ದರು. ಇಂಗ್ಲೆಂಡ್ ಪರ ಜೇಕಬ್ ಬೆಥೆಲ್ ಶತಕ ಸಿಡಿಸಿದರೂ, ಪಂದ್ಯ ಗೆಲ್ಲಿಸಿದ್ದು ಸಂಜು ಅವರ ಇನ್ನಿಂಗ್ಸ್ ಆಗಿದ್ದರಿಂದ ಅವರಿಗೆ ಈ ಗೌರವ ಸಿಕ್ಕಿತು. ಸತತ ಎರಡನೇ ಪಂದ್ಯದಲ್ಲಿ ಸಂಜು ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಇದಕ್ಕೂ ಮುನ್ನ, ವರ್ಚುವಲ್ ಕ್ವಾರ್ಟರ್ ಫೈನಲ್‌ನಂತಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಸೂಪರ್ 8 ಪಂದ್ಯದಲ್ಲಿ 50 ಎಸೆತಗಳಲ್ಲಿ ಅಜೇಯ 97 ರನ್ ಗಳಿಸಿ ಮಿಂಚಿದ್ದರು. ಜತೆಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಅಭಿಮಾನಿಗಳ ಹೃದಯ ಗೆದ್ದ ಸಂಜು ಸ್ಯಾಮ್ಸನ್ ಮಾತು
ಆದರೆ, ಇಂಗ್ಲೆಂಡ್ ವಿರುದ್ಧ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ನಂತರ ಸಂಜು ಆಡಿದ ಮಾತುಗಳು ಈಗ ಅಭಿಮಾನಿಗಳ ಹೃದಯ ಗೆದ್ದಿವೆ. “ತುಂಬಾ ಖುಷಿಯಾಗುತ್ತಿದೆ. ಕಳೆದ ಪಂದ್ಯದಿಂದಲೇ ನಾನು ಉತ್ತಮ ಫಾರ್ಮ್‌ನಲ್ಲಿದ್ದೆ. ಈ ಫಾರ್ಮ್ ಅನ್ನು ಬಳಸಿಕೊಳ್ಳಬೇಕೆಂದು ನಿರ್ಧರಿಸಿದ್ದೆ. ಅಭಿಷೇಕ್ ಬೇಗ ಔಟಾದ ಕಾರಣ, ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ಇರಬೇಕೆಂದು ತೀರ್ಮಾನಿಸಿದೆ. ಯಾಕಂದ್ರೆ, ಇಲ್ಲಿ ಸಾಕಷ್ಟು ಕ್ರಿಕೆಟ್ ಆಡಿರುವ ನಮಗೆ ಗೊತ್ತು, ಯಾವುದೇ ಸ್ಕೋರ್ ಇಲ್ಲಿ ಸೇಫ್ ಅಲ್ಲ ಅಂತ. ಹಾಗಾಗಿ, ಗರಿಷ್ಠ ರನ್ ಗಳಿಸಲು ಪ್ರಯತ್ನಿಸಿದೆವು. ನಾನು ಮತ್ತು ಇಶಾನ್ ಬ್ಯಾಟ್ ಮಾಡಿದ ರೀತಿ ನೋಡಿದ್ರೆ, 250 ರನ್ ಸಾಧ್ಯವಿದೆ ಎಂದು ನಮಗೆ ಗೊತ್ತಿತ್ತು. ಪರಿಸ್ಥಿತಿಯನ್ನು ಸರಿಯಾಗಿ ಅಂದಾಜಿಸಿ ಆಡಿದ್ದು ಅನುಕೂಲವಾಯಿತು. ಇಂಗ್ಲೆಂಡ್ ಗೆಲುವಿನ ಸನಿಹಕ್ಕೆ ಬಂದಿತ್ತು, ಅವರು ನಿಜವಾಗಿಯೂ ಚೆನ್ನಾಗಿ ಆಡಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭ ಎಂದು ನಮಗೆ ತಿಳಿದಿತ್ತು” ಎಂದು ಸಂಜು ಹೇಳಿದರು.
Scroll to load tweet…
“ಈ ಗೆಲುವಿನ ಸಂಪೂರ್ಣ ಕ್ರೆಡಿಟ್ ಜಸ್ಪ್ರೀತ್ ಬುಮ್ರಾಗೆ ಸಲ್ಲಬೇಕು. ಅವರು ವಿಶ್ವದರ್ಜೆಯ ಬೌಲರ್, ಒಂದು ತಲೆಮಾರಿಗೆ ಒಮ್ಮೆ ಮಾತ್ರ ಸಿಗುವ ಅದ್ಭುತ ಆಟಗಾರ. ಈ ಪಂದ್ಯಶ್ರೇಷ್ಠ ಪ್ರಶಸ್ತಿ ನಿಜವಾಗಿಯೂ ಅವರಿಗೆ ಸಿಗಬೇಕಿತ್ತು. ಡೆತ್ ಓವರ್‌ಗಳಲ್ಲಿ ಅವರು ಅಷ್ಟು ಅದ್ಭುತವಾಗಿ ಬೌಲಿಂಗ್ ಮಾಡದಿದ್ದರೆ, ನಾನು ಇಂದು ಇಲ್ಲಿ (ಪ್ರಶಸ್ತಿ ವೇದಿಕೆಯಲ್ಲಿ) ನಿಂತಿರುತ್ತಿರಲಿಲ್ಲ” ಎಂದು ಸಂಜು ಭಾವುಕರಾಗಿ ನುಡಿದರು. ಈ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅವರ ಡೆತ್ ಓವರ್‌ಗಳೇ ನಿರ್ಣಾಯಕವಾದವು ಎಂದು ಸಂಜು ಒತ್ತಿ ಹೇಳಿದರು.
ಪಂದ್ಯದಲ್ಲಿ ತಾನೆಸೆದ ಮೊದಲ ಎಸೆತದಲ್ಲೇ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಅವರನ್ನು ಔಟ್ ಮಾಡಿ ಬುಮ್ರಾ ಇತಿಹಾಸ ಬರೆದರು. ವಾಂಖೆಡೆ ಸ್ಟೇಡಿಯಂನಲ್ಲಿ ಬುಮ್ರಾ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನದ 500ನೇ ವಿಕೆಟ್ ಪಡೆದು ಸಂಭ್ರಮಿಸಿದರು. ಇಂಗ್ಲೆಂಡ್ 254 ರನ್‌ಗಳ ಗುರಿ ಬೆನ್ನಟ್ಟುತ್ತಿದ್ದಾಗ, ಒತ್ತಡದ ಸಂದರ್ಭದಲ್ಲಿ ಕೇವಲ 33 ರನ್ ನೀಡಿ ಬುಮ್ರಾ ತೋರಿದ ಪ್ರದರ್ಶನ, ಭಾರತದ 7 ರನ್‌ಗಳ ರೋಚಕ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು.
ಪಂದ್ಯಕ್ಕೆ ತಿರುವುಕೊಟ್ಟ ಜಸ್ಪ್ರೀತ್ ಬುಮ್ರಾ ಸ್ಪೆಲ್:
ಭಾರತ ನೀಡಿದ್ದ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ಗೆಲುವಿನತ್ತ ದಾಪುಗಾಲಿಡುತ್ತಿತ್ತು. ಕೊನೆಯ ಐದು ಓವರ್‌ನಲ್ಲಿ ಇಂಗ್ಲೆಂಡ್ ತಂಡವು ಗೆಲ್ಲಲು 69 ರನ್‌ಗಳ ಅಗತ್ಯವಿತ್ತು. ಈ ವೇಳೆ 16ನೇ ಓವರ್‌ನಲ್ಲಿ ಬೌಲಿಂಗ್ ಮಾಡಲಿಳಿದ ಬುಮ್ರಾ ಕೇವಲ 8 ರನ್ ನೀಡಿದರು. ಇದಾದ ಬಳಿಕ 18ನೇ ಓವರ್‌ನಲ್ಲಿ ಬುಮ್ರಾ ಕೇವಲ 6 ರನ್ ನೀಡುವ ಮೂಲಕ ಇಂಗ್ಲೆಂಡ್ ಬ್ಯಾಟರ್‌ಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಒಂದು ವೇಳೆ ಬುಮ್ರಾ ದುಬಾರಿಯಾಗಿದ್ದರೇ, ಬಹುಶಃ ಫಲಿತಾಂಶ ಬೇರೆಯದ್ದೇ ಆಗುತ್ತಿತ್ತೇನೋ.