ತಮಿಳಿನ ಹೊಸ ತಲೆಮಾರಿನ ನಟರಲ್ಲಿ ಶಿವಕಾರ್ತಿಕೇಯನ್ ಮುಂಚೂಣಿಯಲ್ಲಿದ್ದಾರೆ. ನಟನಾಗಿ ಮಾತ್ರವಲ್ಲದೆ, ನಿರ್ಮಾಪಕನಾಗಿಯೂ ಅವರು ಚಿತ್ರರಂಗದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಇತ್ತೀಚೆಗೆ ತಮಿಳಿನಲ್ಲಿ ಭರ್ಜರಿ ಹಿಟ್ ಆದ ‘ತಾಯ್ ಕಿಳವಿ’ ಚಿತ್ರವನ್ನು ನಿರ್ಮಿಸಿದ್ದೇ ಶಿವಕಾರ್ತಿಕೇಯನ್. ಇದೀಗ, ತಮ್ಮ ಎಲ್ಲಾ ಹಣಕಾಸಿನ ವ್ಯವಹಾರಗಳನ್ನು ಪತ್ನಿ ಆರತಿ ನೋಡಿಕೊಳ್ಳುತ್ತಾರೆ ಎಂದು ಶಿವಕಾರ್ತಿಕೇಯನ್ ಹೇಳಿರುವ ಮಾತು ಎಲ್ಲರ ಗಮನ ಸೆಳೆದಿದೆ.

ಶಿವಕಾರ್ತಿಕೇಯನ್, "ನನ್ನ ಬ್ಯಾಂಕ್ ಅಕೌಂಟ್ ಬಗ್ಗೆ ನನಗೆ ಅಷ್ಟಾಗಿ ಗೊತ್ತಿಲ್ಲ. ನನ್ನ ಹೆಂಡತಿ ಆರತಿನೇ ನನ್ನ ಎಲ್ಲಾ ಹಣಕಾಸಿನ ವ್ಯವಹಾರಗಳನ್ನು ಜಾಗರೂಕತೆಯಿಂದ ನೋಡಿಕೊಳ್ಳೋದು. ಏನಾದ್ರೂ ಖರ್ಚು ಬಂದ್ರೆ, ನಾನು ಅವಳ ಹತ್ರನೇ ದುಡ್ಡು ಕೇಳ್ತೀನಿ. ಅವಳು ಹಣಕಾಸು ನಿರ್ವಹಣೆ ಮಾಡಿದ್ದರಿಂದಲೇ ನಾನು ನಿರ್ಮಾಪಕನಾಗಲು ಸಾಧ್ಯವಾಯ್ತು. ಅವಳಿಲ್ಲದಿದ್ರೆ ಇದೆಲ್ಲಾ ಆಗ್ತಿರಲಿಲ್ಲ," ಎಂದು ಹೇಳಿದ್ದಾರೆ. ‘ತಾಯ್ ಕಿಳವಿ’ ಚಿತ್ರದ ಸಕ್ಸಸ್ ಮೀಟ್ನಲ್ಲಿ ಅವರು ಈ ಬಗ್ಗೆ ಮನಬಿಚ್ಚಿ ಮಾತನಾಡಿದರು.

’ತಾಯ್ ಕಿಳವಿ’ ಬಗ್ಗೆ

ವರದಿಗಳ ಪ್ರಕಾರ, ‘ತಾಯ್ ಕಿಳವಿ’ ಸಿನಿಮಾ ಕೇವಲ 15 ದಿನಗಳಲ್ಲಿ 58.32 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಭಾರತದಲ್ಲೇ 48.72 ಕೋಟಿ ಗಳಿಸಿದ್ರೆ, ವಿದೇಶದಿಂದ 9.60 ಕೋಟಿ ರೂಪಾಯಿ ಗಳಿಸಿದೆ ಎಂದು ಟ್ರೇಡ್ ಅನಲಿಸ್ಟ್ ಸಂಸ್ಥೆ ಸ್ಯಾಕ್ನಿಲ್ಕ್ ವರದಿ ಮಾಡಿದೆ. ಈ ಚಿತ್ರದಲ್ಲಿ ರಾಧಿಕಾ ಶರತ್ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಮೇಕ್ಓವರ್ ಕೂಡಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.

ಶಿವಕಾರ್ತಿಕೇಯನ್ ಪ್ರೊಡಕ್ಷನ್ಸ್ ಜೊತೆಗೆ ಪ್ಯಾಶನ್ ಸ್ಟುಡಿಯೋಸ್ ಕೂಡ ಈ ಚಿತ್ರ ನಿರ್ಮಾಣದಲ್ಲಿ ಕೈಜೋಡಿಸಿದೆ. ಶಿವಕುಮಾರ್ ಮುರುಗೇಶನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಶಿವಕುಮಾರ್ ಮುರುಗೇಶನ್ ನಿರ್ದೇಶನದ ಹೊಸ ಚಿತ್ರ ‘ಸೇಯೋನ್’ನಲ್ಲಿ ಶಿವಕಾರ್ತಿಕೇಯನ್ ನಾಯಕರಾಗಿ ನಟಿಸುತ್ತಿದ್ದು, ಈ ಚಿತ್ರವನ್ನು ಕಮಲ್ ಹಾಸನ್ ಮತ್ತು ಆರ್. ಮಹೇಂದ್ರನ್ ಸೇರಿ ನಿರ್ಮಿಸುತ್ತಿದ್ದಾರೆ.

ತಮಿಳಿನ ಹಳ್ಳಿ ಸೊಗಡಿನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿನ ರಾಧಿಕಾ ಅವರ ನಟನೆ, ಅವರ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ಎಂದು ಪ್ರೇಕ್ಷಕರು ಒಕ್ಕೊರಲಿನಿಂದ ಹೇಳುತ್ತಿದ್ದಾರೆ. ದುಡ್ಡಿನ ವ್ಯವಹಾರ ಮಾಡುವ ಪಾತ್ರದಲ್ಲಿ ರಾಧಿಕಾ ಕಾಣಿಸಿಕೊಂಡಿದ್ದಾರೆ. ದುರಾಸೆಯ ಗಂಡು ಮಕ್ಕಳು ಆಕೆಯ ಆಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅದನ್ನು ಆ ತಾಯಿ ಹೇಗೆ ವಿರೋಧಿಸುತ್ತಾಳೆ ಅನ್ನೋದೇ ಚಿತ್ರದ ಕಥೆ. ಸಿಂಗಂಪುಲಿ, ಅರುಳ್ದೋಸ್, ಮುನಿಷ್ಕಾಂತ್, ಮತ್ತು ಬಾಲ ಶರವಣನ್ ಕೂಡ ‘ತಾಯ್ ಕಿಳವಿ’ ಚಿತ್ರದ ತಾರಾಗಣದಲ್ಲಿದ್ದಾರೆ.

Source link
Sivakarthikeyan: ಅವಳಿಲ್ಲದಿದ್ರೆ ಇದೆಲ್ಲಾ ಆಗ್ತಿರಲಿಲ್ಲ, ಖರ್ಚಿಗೆ ಹೆಂಡ್ತಿ ಹತ್ರ ದುಡ್ಡು ಕೇಳ್ತೀನಿ: ಅಮರನ್ ನಟ!