ಮಂಡ್ಯ ಜಿಲ್ಲೆಯ ತಗ್ಗಹಳ್ಳಿ ಗ್ರಾಮ ಪಂಚಾಯ್ತಿ ಖಜಾನೆ ರಹಸ್ಯ: ₹53 ಲಕ್ಷ ವಾಪಸ್ ಬಂದ ಕಥೆ | Mandya District S Taggahalli Gram Panchayat Treasury Secret The Story Of Rs 53 Lakh Returns Mrq

ಮಂಡ್ಯ ಜಿಲ್ಲೆಯ ತಗ್ಗಹಳ್ಳಿ ಗ್ರಾಮ ಪಂಚಾಯ್ತಿ ಖಜಾನೆ ರಹಸ್ಯ: ₹53 ಲಕ್ಷ ವಾಪಸ್ ಬಂದ ಕಥೆ | Mandya District S Taggahalli Gram Panchayat Treasury Secret The Story Of Rs 53 Lakh Returns Mrq



ಮಂಡ್ಯ ಜಿಲ್ಲೆಯ ತಗ್ಗಹಳ್ಳಿ ಗ್ರಾಮ ಪಂಚಾಯ್ತಿ ಖಜಾನೆ ರಹಸ್ಯ: ₹53 ಲಕ್ಷ ವಾಪಸ್ ಬಂದ ಕಥೆ | Mandya District S Taggahalli Gram Panchayat Treasury Secret The Story Of Rs 53 Lakh Returns Mrq

ಮಂಡ್ಯ ತಾಲೂಕಿನ ತಗ್ಗಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ, ಪ್ರಭಾರಿ ಪಿಡಿಒ ಒಬ್ಬರು ಅಕ್ರಮವಾಗಿ ವರ್ಗಾಯಿಸಿದ್ದ ₹54 ಲಕ್ಷ ಹಣದಲ್ಲಿ, ಜಿಪಂ ಸಿಇಒ ಕೆ.ಆರ್.ನಂದಿನಿ ಅವರ ಸಮಯೋಚಿತ ಕ್ರಮದಿಂದ ₹53 ಲಕ್ಷ ಹಣವನ್ನು ಮರಳಿ ಪಂಚಾಯಿತಿ ಖಾತೆಗೆ ಜಮೆ ಮಾಡಲಾಗಿದೆ. 

ಮಂಡ್ಯ: ತಾಲೂಕಿನ ತಗ್ಗಹಳ್ಳಿ ಪಂಚಾಯಿತಿಗೆ ಪ್ರಭಾರಿಯಾಗಿ ಬಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಅಕ್ರಮವಾಗಿ ಹಣ ವರ್ಗಾಯಿಸಿದ್ದ ₹54 ಲಕ್ಷ ಹಣದಲ್ಲಿ ₹53 ಲಕ್ಷ ಹಣ ಮತ್ತೆ ಪಂಚಾಯಿತಿ ಖಾತೆಗೆ ಜಮೆ ಆಗಿದೆ.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ಈ ಪ್ರಕರಣದಲ್ಲಿ ವಹಿಸಿದ ಸಮಯಪ್ರಜ್ಞೆಯಿಂದ ಸಾರ್ವಜನಿಕರಿಗೆ ಸೇರಿದ ಲಕ್ಷಾಂತರ ರು. ಹಣ ದುರುಪಯೋಗವಾಗುವುದು ತಪ್ಪಿದಂತಾಗಿದೆ. ನಂದಿನಿ ಅವರ ಕಾರ್ಯವೈಖರಿಯನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.

ಮೂರೇ ದಿನದಲ್ಲಿ ಹಣ ಗುಳುಂ

ತಗ್ಗಹಳ್ಳಿ ಪಿಡಿಒ ಎಚ್.ಎಸ್.ಲಕ್ಷ್ಮೀ ಅವರು 16 ದಿನಗಳ ಕಾಲ ರಜೆಯ ಮೇಲೆ ತೆರಳಿದ್ದ ಹಿನ್ನೆಲೆಯಲ್ಲಿ ಪ್ರಭಾರಿ ಹುದ್ದೆ ವಹಿಸಿಕೊಂಡ ಮಂಡ್ಯ ತಾಲೂಕು ಆಲಕೆರೆ ಗ್ರಾಪಂ ಪಿಡಿಒ ಶ್ರೀನಿವಾಸಯ್ಯ ಮೂರೇ ದಿನದಲ್ಲಿ ₹48 ಲಕ್ಷ ಹಣವನ್ನು ಆನ್‌ಲೈನ್ ಪಾವತಿ ಮಾಡಿದ್ದರಲ್ಲದೆ, ₹4 ಲಕ್ಷ ಹಣವನ್ನು ಚೆಕ್ ಹಾಗೂ ತಗ್ಗಹಳ್ಳಿ ಗ್ರಾಮೀಣ ಬ್ಯಾಂಕ್‌ಗೆ ಒಂದೂವರೆ ಲಕ್ಷ ರು. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿತ್ತು.

ಊರಿನ ಗ್ರಾಮಸ್ಥರಿಗೆ ಈ ವಿಷಯ ತಿಳಿದು ಅದೇ ದಿನ ತಗ್ಗಹಳ್ಳಿ ಸರ್ಕಾರಿ ಶಾಲೆ ಭೇಟಿಗೆ ತೆರಳಿದ್ದ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಅವರಿಗೆ ಸುದ್ದಿ ಮುಟ್ಟಿಸಿದ್ದರು. ಕೂಡಲೇ ಪ್ರಕರಣದ ಪರಿಶೀಲನೆ ನಡೆಸಿ ತುರ್ತು ಕ್ರಮ ವಹಿಸುವಂತೆ ತಾಪಂ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ.ಲೋಕೇಶ್ ಮೂರ್ತಿ ಅವರಿಗೆ ಸೂಚಿಸಿದ್ದರು.

ಸಿಇಒ ಮಾರ್ಗದರ್ಶನದಲ್ಲಿ ತಕ್ಷಣವೇ ಕಾರ್ಯೋನ್ಮುಖರಾದ ಅಧಿಕಾರಿಗಳು ತಗ್ಗಹಳ್ಳಿ ಗ್ರಾಪಂಗೆ ತೆರಳಿ ಪರಿಶೀಲನೆ ನಡೆಸಿದರು. ಅಷ್ಟರಲ್ಲಿ ₹9 ಲಕ್ಷ ಹಣ ಆನ್‌ಲೈನ್ ಮೂಲಕ ಪಾವತಿಯಾಗಿದ್ದು, ಉಳಿದ ಹಣ ಪಾವತಿಯಾಗುವಷ್ಟರಲ್ಲಿ ಖಾತೆಯನ್ನು ಬಂದ್ ಮಾಡಿಸಿ ಅಕ್ರಮ ಹಣ ಪಾವತಿಗೆ ಬ್ರೇಕ್ ಹಾಕಿದ್ದರು.

ಆನ್‌ಲೈನ್ ಪಾವತಿ, ಚೆಕ್‌ಗಳ ಮೂಲಕ ಹಣ ಪಾವತಿ

ಪ್ರಭಾರಿ ಹುದ್ದೆ ವಹಿಸಿಕೊಂಡಿದ್ದ ಏಳು ದಿನದ ಅವಧಿಯಲ್ಲಿ ಜ.29, 30, 31ರಂದು ₹54 ಲಕ್ಷ ಹಣವನ್ನು ಹದಿನೈದನೇ ಹಣಕಾಸು ಯೋಜನೆಯಡಿ ಸೋಲಾರ್ ಲೈಟ್‌ಗಳು, ಪೈಪ್‌ಗಳು ಹಾಗೂ ಎಲೆಕ್ಟ್ರಿಕ್ ಸಾಮಗ್ರಿಗಳನ್ನು ಖರೀದಿ ಮಾಡಿರುವುದಕ್ಕೆ ಯಾವುದೇ ವೋಚರ್‌ಗಳಿಲ್ಲದಿದ್ದರೂ ಆನ್‌ಲೈನ್ ಪಾವತಿ, ಚೆಕ್‌ಗಳ ಮೂಲಕ ಹಣ ಪಾವತಿಸಿರುವುದು ಬೆಳಕಿಗೆ ಬಂದಿತ್ತು.

ತಗ್ಗಹಳ್ಳಿ ಪಂಚಾಯಿತಿ ಅಧಿಕಾರಿ ಎಚ್.ಎಸ್.ಲಕ್ಷ್ಮೀ ಅವರು ರಜೆಯ ಮೇಲೆ ತೆರಳಿದ್ದ ವೇಳೆ ಪಂಚಾಯಿತಿ ಖಾತೆಯಲ್ಲಿ ₹87 ಲಕ್ಷ ಇತ್ತು. ಜ.31ರಂದು ಇ- ಸ್ವರಾಜ್ ಆ್ಯಪ್‌ನಲ್ಲಿ ನೋಡಿದಾಗ ₹48 ಲಕ್ಷ ಆನ್‌ಲೈನ್ ಪಾವತಿಗೆ ಸಿದ್ಧಪಡಿಸಿರುವುದು ಗೊತ್ತಾಗಿ ಜಿಪಂ ಸಿಇo ಕೆ.ಆರ್.ನಂದಿನಿ ಅವರ ಗಮನಕ್ಕೆ ಗ್ರಾಮಸ್ಥರು ತಂದಿದ್ದರು.

ಇದನ್ನೂ ಓದಿ: ಕಠಿಣ 9 ಷರತ್ತುಗಳೊಂದಿಗೆ 22 ಹಿಂದುಳಿದ, ದಲಿತ ಮಠ, ಟ್ರಸ್ಟ್‌, ಸಂಘಗಳಿಗೆ 53 ಎಕ್ರೆ ಭೂಮಿ ಮಂಜೂರು

ಮಂಡ್ಯ ಜಿಲ್ಲಾ ಪಂಚಾಯಿತಿ, ಸಿಇಒ ಕೆ.ಆರ್.ನಂದಿನಿ ಹೇಳಿಕೆ

ನಾನು ತಗ್ಗಹಳ್ಳಿಗೆ ತೆರಳಿದ್ದ ವೇಳೆ ಗ್ರಾಮಸ್ಥರಿಂದ ನನಗೆ ವಿಷಯ ಗೊತ್ತಾಯಿತು. ಕೂಡಲೇ ಕಾರ್ಯಪ್ರವೃತ್ತರಾಗುವಂತೆ ತಾಪಂ ಇಒ ಅವರಿಗೆ ಸೂಚನೆ ನೀಡಿದೆ. ಅದರಂತೆ ಕ್ರಮವಹಿಸಿ ₹53 ಲಕ್ಷ ಹಣವನ್ನು ಮತ್ತೆ ಪಂಚಾಯಿತಿ ಖಾತೆಗೆ ಜಮೆ ಮಾಡಿಸಿದ್ದಾರೆ. ಪಿಡಿಒಗಳು ಎಂದಿಗೂ ಇಂತಹ ದುಸ್ಸಾಹಸಕ್ಕೆ ಕೈ ಹಾಕಬಾರದು. ಸಾರ್ವಜನಿಕ ಹಣ ದುರುಪಯೋಗವಾಗುವುದನ್ನು ನಾನು ಸಹಿಸುವುದಿಲ್ಲ. ಮತ್ತೆ ಇಂತಹ ಪ್ರಕರಣಗಳು ಮರುಕಳಿಸದಂತೆ ಪಿಡಿಒಗಳಿಗೆ ಸೂಚಿಸಿದ್ದೇನೆ ಎಂದು ಮಂಡ್ಯ ಜಿಲ್ಲಾ ಪಂಚಾಯಿತಿ, ಸಿಇಒ ಕೆ.ಆರ್.ನಂದಿನಿ ಹೇಳಿದ್ದಾರೆ.

ಗ್ರಾಮಸ್ಥರಿಂದ ದೂರು ಬಂದ ಹಿನ್ನೆಲೆಯಲ್ಲಿ ಸಿಇಒ ಮಾರ್ಗದರ್ಶನದಂತೆ ಕ್ರಮ ಕೈಗೊಂಡ ಪರಿಣಾಮ ಲಕ್ಷಾಂತರ ರು. ಹಣ ದುರುಪಯೋಗವಾಗುವುದು ತಪ್ಪಿದೆ. ₹53 ಲಕ್ಷ ಹಣ ಪಂಚಾಯಿತಿ ಖಾತೆಗೆ ಸೇರಿದೆ. ಈ ಹಣವನ್ನು ಸಾರ್ವಜನಿಕ ಉದ್ದೇಶಕ್ಕೆ ಸೀಮಿತವಾಗಿ ಬಳಸುವಂತೆ ಪಿಡಿಒಗೆ ಸೂಚನೆ ನೀಡಲಾಗಿದೆ ಎಂದು ಮಂಡ್ಯ ತಾಲೂಕು ಪಂಚಾಯಿತಿ ಇಒ, ಎಸ್.ಎಂ.ಲೋಕೇಶ್ ಮೂರ್ತಿ ಹೇಳುತ್ತಾರೆ.

ಇದನ್ನೂ ಓದಿ: ಶ್ರೀಶೈಲ ಯುಗಾದಿ ಜಾತ್ರೆ: 10 ದಿನ 4 ಹಂತಗಳಲ್ಲಿ ಮಾತ್ರ ಸ್ಪರ್ಶ ದರ್ಶನಕ್ಕೆ ಅವಕಾಶ



Source link

Leave a Reply

Your email address will not be published. Required fields are marked *