Headlines

‘ಪೊಲೀಸ್ ಕೆಲಸಕ್ಕಿಂತ ಎಗ್ ರೈಸ್ ಮಾರೋದು ಬೆಟರ್’: ಮಾತೃ ಇಲಾಖೆ ವಿರುದ್ಧವೇ ಸ್ಟೇಟಸ್ ಹಾಕಿದ ಕೊಪ್ಪಳದ ಪೇದೆ! | Koppal Police Constable Whatsapp Status Egg Rice Business Better Than Police Job

‘ಪೊಲೀಸ್ ಕೆಲಸಕ್ಕಿಂತ ಎಗ್ ರೈಸ್ ಮಾರೋದು ಬೆಟರ್’: ಮಾತೃ ಇಲಾಖೆ ವಿರುದ್ಧವೇ ಸ್ಟೇಟಸ್ ಹಾಕಿದ ಕೊಪ್ಪಳದ ಪೇದೆ! | Koppal Police Constable Whatsapp Status Egg Rice Business Better Than Police Job



‘ಪೊಲೀಸ್ ಕೆಲಸಕ್ಕಿಂತ ಎಗ್ ರೈಸ್ ಮಾರೋದು ಬೆಟರ್’: ಮಾತೃ ಇಲಾಖೆ ವಿರುದ್ಧವೇ ಸ್ಟೇಟಸ್ ಹಾಕಿದ ಕೊಪ್ಪಳದ ಪೇದೆ! | Koppal Police Constable Whatsapp Status Egg Rice Business Better Than Police Job

ಕೊಪ್ಪಳ ಜಿಲ್ಲೆಯ ಪೊಲೀಸ್ ಕಾನ್ಸ್‌ಟೇಬಲ್ ಬ್ರಹ್ಮಾನಂದ ಅವರು, ವರ್ಷವಿಡೀ ರಜೆ ಇಲ್ಲದ ಕೆಲಸದ ಒತ್ತಡದಿಂದ ಬೇಸತ್ತು, ಪೊಲೀಸ್ ಕೆಲಸಕ್ಕಿಂತ ಎಗ್ ರೈಸ್ ಮಾರುವುದು ಉತ್ತಮ ಎಂದು ವಾಟ್ಸಾಪ್ ಸ್ಟೇಟಸ್ ಹಾಕಿದ್ದಾರೆ. ಈ ಸ್ಟೇಟಸ್ ವೈರಲ್ ಆಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ತನಿಖೆಗೆ ಆದೇಶಿಸಿದ್ದಾರೆ.

ಕೊಪ್ಪಳ (ಫೆ.02): ‘ವರ್ಷದ 365 ದಿನವೂ ಕೆಲಸ, ಒಂದು ದಿನವೂ ರಜೆ ಇಲ್ಲ. ಇಂತಹ ಪೊಲೀಸ್ ಕೆಲಸ ಮಾಡುವುದಕ್ಕಿಂತ ರಸ್ತೆಯಲ್ಲಿ ನಿಂತು ಎಗ್ ರೈಸ್ ಮಾರಿ ಬದುಕುವುದು ಎಷ್ಟೋ ಉತ್ತಮ…’ ಹೀಗೆಂದು ತಮ್ಮದೇ ಮಾತೃ ಇಲಾಖೆಯ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ಹಾಕಿರುವ ವಾಟ್ಸಾಪ್ ಸ್ಟೇಟಸ್ ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನಮಸಾಗರ ಪೊಲೀಸ್ ಠಾಣೆಯ ಪೇದೆ ಬ್ರಹ್ಮಾನಂದ ಅವರೇ ಈ ಸ್ಟೇಟಸ್ ಹಾಕುವ ಮೂಲಕ ಸುದ್ದಿಯಾದವರು.

ನೇಮಕಾತಿ ಸುದ್ದಿ ಕೇಳಿ ಸಿಡಿದ ಅಸಮಾಧಾನ:

ಇತ್ತೀಚೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು (DG-IGP) ಡಾ. ಎಂ.ಎ. ಸಲೀಂ ಅವರು ರಾಜ್ಯದಲ್ಲಿ ಖಾಲಿ ಇರುವ 8,300 ಪೊಲೀಸ್ ಹುದ್ದೆಗಳಿಗೆ ಶೀಘ್ರವೇ ನೇಮಕಾತಿ ಮಾಡಿಕೊಳ್ಳಲಾಗುವುದು ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪ್ರತ್ಯುತ್ತರ ಎಂಬಂತೆ ಪೇದೆ ಬ್ರಹ್ಮಾನಂದ ತಮ್ಮ ವಾಟ್ಸಾಪ್ ಸ್ಟೇಟಸ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಹೊಸದಾಗಿ ಇಲಾಖೆಗೆ ಸೇರಬಯಸುವ ಯುವಕರಿಗೆ ಎಚ್ಚರಿಕೆ ನೀಡುವ ಧಾಟಿಯಲ್ಲಿ, ‘ಪೊಲೀಸ್ ಠಾಣೆಗೆ ಬರುವ ಮುಂಚೆ ನೂರು ಬಾರಿ ಯೋಚನೆ ಮಾಡಿ, ಇದಕ್ಕಿಂತ ಬೇರೆ ಇಲಾಖೆಗೆ ಹೋಗುವುದು ಉತ್ತಮ’ ಎಂದು ಸಲಹೆ ನೀಡಿದ್ದಾರೆ.

ಎಗ್ ರೈಸ್ ವ್ಯಾಪಾರವೇ ಮೇಲು!

ಪೊಲೀಸ್ ಇಲಾಖೆಯಲ್ಲಿನ ಕೆಲಸದ ಒತ್ತಡ ಮತ್ತು ರಜೆ ರಹಿತ ದುಡಿಮೆಯ ಬಗ್ಗೆ ನೊಂದುಕೊಂಡಿರುವ ಬ್ರಹ್ಮಾನಂದ, ‘ವರ್ಷದ 365 ದಿನವೂ ಇಲ್ಲಿ ಡ್ಯೂಟಿ ಮಾಡಬೇಕು. ಹಬ್ಬ ಹರಿದಿನ ಎನ್ನದೆ ದುಡಿದರೂ ನೆಮ್ಮದಿ ಇಲ್ಲ. ಇದರ ಬದಲು ಎಗ್ ರೈಸ್ ಮಾರಿ ಬದುಕುವುದು ಎಷ್ಟೋ ವಾಸಿ’ ಎಂದು ತಮ್ಮ ನೋವನ್ನು ಹೊರಹಾಕಿದ್ದಾರೆ. ಸಾರ್ವಜನಿಕರ ರಕ್ಷಣೆ ಮಾಡುವ ಪೊಲೀಸರೇ ತಮ್ಮ ವೃತ್ತಿ ಬದುಕಿನ ಬಗ್ಗೆ ಇಷ್ಟು ಹತಾಶೆಗೊಂಡು ಸ್ಟೇಟಸ್ ಹಾಕಿರುವುದು ಇಲಾಖೆಯಲ್ಲಿನ ಕೆಳಹಂತದ ಸಿಬ್ಬಂದಿಯ ಮಾನಸಿಕ ಒತ್ತಡಕ್ಕೆ ಕನ್ನಡಿ ಹಿಡಿದಂತಿದೆ.

ಶಿಸ್ತು ಇಲಾಖೆಯಲ್ಲಿ ಅಶಿಸ್ತು?

ಪೊಲೀಸ್ ಇಲಾಖೆ ಎಂದರೆ ಶಿಸ್ತಿನ ಇಲಾಖೆ. ಇಲ್ಲಿನ ಕುಂದುಕೊರತೆಗಳನ್ನು ಹೇಳಿಕೊಳ್ಳಲು ಪ್ರತ್ಯೇಕ ವೇದಿಕೆಗಳಿವೆ. ಆದರೆ, ಪೇದೆ ಬ್ರಹ್ಮಾನಂದ ಅವರು ಬಹಿರಂಗವಾಗಿ ಸಾಮಾಜಿಕ ಜಾಲತಾಣದಲ್ಲಿ (WhatsApp Status) ಇಲಾಖೆಯ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿರುವುದು ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಸರ್ಕಾರಿ ನೌಕರರಾಗಿ, ಅದರಲ್ಲೂ ಸಮವಸ್ತ್ರ ಧರಿಸುವ ಸಿಬ್ಬಂದಿ ಹೀಗೆ ಸಾರ್ವಜನಿಕವಾಗಿ ಇಲಾಖೆಯನ್ನು ಟೀಕಿಸುವುದು ಶಿಸ್ತು ಉಲ್ಲಂಘನೆಯಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ.

ತನಿಖೆಗೆ ಎಸ್‌ಪಿ ಆದೇಶ

ವಾಟ್ಸಾಪ್ ಸ್ಟೇಟಸ್ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ರಾಮ್ ಎಲ್. ಅರಸಿದ್ದಿ ಅವರು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪೇದೆ ಬ್ರಹ್ಮಾನಂದ ಅವರ ವರ್ತನೆಗೆ ಸಂಬಂಧಿಸಿದಂತೆ ಮತ್ತು ಅವರು ಎತ್ತಿರುವ ಸಮಸ್ಯೆಗಳ ಬಗ್ಗೆ ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ತನಿಖಾ ವರದಿ ಬಂದ ಬಳಿಕ ಪೇದೆಯ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟಾರೆಯಾಗಿ, ಪೊಲೀಸ್ ಪೇದೆಯೊಬ್ಬರ ಈ ‘ಎಗ್ ರೈಸ್’ ಸ್ಟೇಟಸ್, ಪೊಲೀಸ್ ಸಿಬ್ಬಂದಿಯ ಕೆಲಸದ ಒತ್ತಡ, ರಜೆಗಳ ಲಭ್ಯತೆ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.



Source link

Leave a Reply

Your email address will not be published. Required fields are marked *