
ಯುವತಿ ವಿಚಾರಕ್ಕೆ ಎರಡು ಮುಸ್ಲಿಂ ಕುಟುಂಬಗಳ ನಡುವೆ ಮಾರಾಮರಿ, ತುಮಕೂರು ರಸ್ತೆಯಲ್ಲಿ ಗಲಾಟೆ ನಡೆದಿದೆ. ಹಲವರ ಮೊಬೈಲ್‌ನಲ್ಲಿ ಗಲಾಟೆ ದೃಶ್ಯಗಳು ಸೆರೆಯಾಗಿದ್ದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.
ತುಮಕೂರು (ಏ.06) ಯುವತಿ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಶುರುವಾದ ಗಲಾಟೆ ವಿಕೋಪಕ್ಕೆ ತಿರುಗಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಇಲ್ಲಿನ ಕುಣಿಗಲ್ ಪಟ್ಟಣದ 15ನೇ ವಾರ್ಡ್‌ನ ರಸ್ತೆಯಲ್ಲಿ ಮಾರಾಮಾರಿ ನಡೆದಿದೆ. ಯುವತಿ ವಿಚಾರವಾಗಿ ಗಲಾಟೆ ಬಳಿಕ ತೀವ್ರ ಸ್ವರೂಪ ಪಡೆದುಕೊಂಡು ಎರಡು ಮುಸ್ಲಿಂ ಕುಟುಂಬಗಳು ಬಡಿದಾಡಿಕೊಂಡಿದ್ದಾರೆ. ಘಟನೆಯಲ್ಲಿ ಎರಡು ಕುಟುಂಬದ ಹಲವು ಸದಸ್ಯರು ಗಾಯಗೊಂಡಿದ್ದಾರೆ.
ಅಕ್ಕ ಪಕ್ಕದ ಮನೆಯವರ ಗಲಾಟೆ
ಯುವತಿ ವಿಚಾರಕ್ಕೆ ಅಕ್ಕಪಕ್ಕದ ಮನೆಯ ಎರಡು ಮುಸ್ಲಿಂ ಕುಟುಂಬಗಳ ಗಲಾಟೆ ಶುರುವಾಗಿದೆ. ಆರಂಭದಲ್ಲೇ ಕೈಕೈಮಿಲಾಯಿಸಿದ್ದಾರೆ. ಹೀಗಾಗಿ ಕುಟುಂಬ ಸದಸ್ಯರ ಸಂಖ್ಯೆ ಹೆಚ್ಚಾಗಿದೆ. ಗಲಾಟೆ ಜೋರಾಗಿದೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಾಳುಗಳನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಪೈಕಿ ಮೂವರಿಗೆ ಗಂಭೀರ ಗಾಯವಾಗಿದೆ. ಇತ್ತ ಹೊಡೆದಾಡಿಕೊಂಡ ಕುಟುಂಬದ ಹಲವು ಸದಸ್ಯರನ್ನು ವಶಕ್ಕೆ ಪಡೆದಿದ್ದಾರೆ.
ಎರಡು ಕುಟುಂಬದ ಪ್ರಮುಖ ಸದಸ್ಯರನ್ನು ಪೊಲೀಸ್ ಠಾಣೆಗೆ ಕರೆಯಿಸಿದ ಕುಣಿಗಲ್ ಪೊಲೀಸರು ರಾಜಿ ಮಾತುಕತೆ ಮಾಡಿದ್ದಾರೆ. ಇದೇ ವೇಳೆ ಮತ್ತೆ ಇದೇ ರೀತಿಯ ಘಟನೆ ಮರುಕಳಿಸಿದರೆ ಇಡೀ ಕುಟುಂಬವೇ ಜೈಲು ಸೇರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಂಡ್ಯದಲ್ಲಿ ಯುವಕರ ಗುಂಪುಗಳ ನಡುವೆ ಗಲಾಟೆ
ಕ್ಷುಲ್ಲಕ ವಿಚಾರಕ್ಕೆ ಎರಡು ಯುವಕರ ಗುಂಪುಗಳ ನಡುವೆ ಗಲಾಟೆ ನಡೆದ ಘಟನೆ ಮಂಡ್ಯದ ಮದ್ದೂರು ಪಟ್ಟಣದ ಪಟೇಲ್ ಸಾಮಿಲ್ ಬಳಿ ನಡೆದಿದೆ. ಸಿಗರೆಟ್ ವಿಚಾರವಾಗಿ ಎರಡು ಗುಂಪಗಳ ನಡುವೆ ಗಲಾಟೆ ಶುರುವಾಗಿದೆ ಎನ್ನಲಾಗಿದೆ. ಬಳಿಕ ಕಳೆದ ರಾತ್ರಿ ರಾಜೀ ಮಾತುಕತೆ ನಡೆಯುವಾಗ ಮತ್ತೆ ಗಲಾಟೆ ಶುರುವಾಗಿದೆ. ಇದು ಪರಿಸ್ಥಿತಿ ಕೈಮೀರಿದೆ. ದೊಣ್ಣೆಯಲ್ಲಿ ಯುವಕರು ಗುಂಪು ದಾಳಿ ಮಾಡಿದೆ. ಇದರ ಪರಿಣಾಮ ಈ ವೇಳೆ ಯುವಕ ಯಶ್ವಂತ್ ಸಾವು ಕಂಡರೆ ದರ್ಶನ್ ಹಾಗೂ ಸಚಿನ್ ಗಂಭೀರ ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡ ಇಬ್ಬರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಸ್‌ಪಿ ಡಾ.ವಿಜೆ ಶೋಭಾರಾಣಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮದ್ದೂರು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
.