Engineer s Wife Killed as Creta Car Hits Divider : ಬಾಗಲಕೋಟೆಯ ನವನಗರದಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಬಿಟಿಡಿಎ ಇಂಜಿನಿಯರ್ ಪತ್ನಿ ದೀಪು ನೋಟಗಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದುರ್ಘಟನೆಯಲ್ಲಿ ಅವರ 6 ವರ್ಷದ ಮಗನ ಸ್ಥಿತಿ ಗಂಭೀರವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಾಗಲಕೋಟೆ (ಫೆ.22): ವೇಗವಾಗಿ ಬಂದ ಕ್ರೆಟಾ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮವಾಗಿ ಓರ್ವ ಮಹಿಳೆ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ನವನಗರದ ತೇಜಸ್ ಶಾಲೆಯ ಸಮೀಪದಲ್ಲಿ ನಡೆದಿದೆ.
ಮೃತಪಟ್ಟ ಎಂಜಿನಿಯರ್ ಪತ್ನಿ
ಡಿಕ್ಕಿಯ ರಭಸಕ್ಕೆ ಕಾರು ರಸ್ತೆಯಲ್ಲೇ ಪಲ್ಟಿಯಾಗಿದ್ದು, ಸ್ಥಳದಲ್ಲೇ ಓರ್ವ ಮಹಿಳೆ ದುರ್ಮರಣಕ್ಕೀಡಾಗಿದ್ದಾರೆ. ಮೃತ ಮಹಿಳೆಯನ್ನು ದೀಪು ನೋಟಗಾರ (35) ಎಂದು ಗುರುತಿಸಲಾಗಿದೆ. ಇವರು ಬಿಟಿಡಿಎ (BTDA) ಸಹಾಯಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸೋಮಲಿಂಗ ನೋಟಗಾರ ಅವರ ಪತ್ನಿ ಎನ್ನಲಾಗಿದೆ. ಕುಟುಂಬದ ಜೊತೆ ಸಂಚರಿಸುತ್ತಿದ್ದ ವೇಳೆ ದುರಂತ ಸಂಭವಿಸಿದೆ
6 ವರ್ಷದ ಮಗನ ಸ್ಥಿತಿ ಗಂಭೀರ
ಈ ಭೀಕರ ಅಪಘಾತದಲ್ಲಿ ದೀಪು ಅವರ 6 ವರ್ಷದ ಪುಟ್ಟ ಮಗನಿಗೂ ಗಂಭೀರ ಗಾಯಗಳಾಗಿವೆ. ಸದ್ಯ ಬಾಲಕನನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಕಣ್ಣೀರು ತರಿಸುವ ದೃಶ್ಯಗಳು
ಅಪಘಾತ ನಡೆದ ಸ್ಥಳದಲ್ಲಿ ಹೃದಯ ವಿದ್ರಾವಕ ದೃಶ್ಯಗಳು ಕಂಡುಬಂದವು. ರಕ್ತದ ಮಡುವಿನಲ್ಲಿ ಬಿದ್ದಿದ್ದ ದೀಪು ಅವರನ್ನು ಕಂಡು ಸಂಬಂಧಿಕರು ಆಕ್ರಂದನ. ಮೃತಳನ್ನು ಮಾತಾಡಿಸಲು ಪ್ರಯತ್ನಿಸುತ್ತಿದ್ದ ದೃಶ್ಯ ನೆರೆದಿದ್ದವರ ಕಣ್ಣಾಲಿಗಳನ್ನು ಒದ್ದೆ ಮಾಡಿತು.
ಸ್ಥಳಕ್ಕೆ ಪೊಲೀಸರ ಭೇಟಿ
ಘಟನಾ ಸ್ಥಳಕ್ಕೆ ನವನಗರದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಅತಿ ವೇಗವೇ ಕಾರಣವೇ ಅಥವಾ ತಾಂತ್ರಿಕ ದೋಷವೇ ಎಂಬ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಕಾರನ್ನು ಸ್ಥಳದಿಂದ ತೆರವುಗೊಳಿಸಲಾಗಿದೆ.
