
ಪಶ್ಚಿಮ ಏಷ್ಯಾದ ಸಂಘರ್ಷದ ನಡುವೆ, ಇರಾನ್ ಮತ್ತು ಅಮೆರಿಕ ತೀವ್ರ ಸೈಬರ್ ಯುದ್ಧದಲ್ಲಿ ತೊಡಗಿವೆ. ಇರಾನ್ ಇಂಟರ್ನೆಟ್ ಸ್ಥಗಿತಗೊಳಿಸಿ, ಗೆಲುವಿನ ಸುಳ್ಳು ಸಂದೇಶಗಳನ್ನು ಕಳುಹಿಸುತ್ತಿದ್ದರೆ, ಅಮೆರಿಕವು ಯುದ್ಧವನ್ನು ವೈಭವೀಕರಿಸುವ ವಿಡಿಯೋ ಗೇಮ್ ಮಾದರಿಯ ದೃಶ್ಯಗಳನ್ನು ಬಿಡುಗಡೆ ಮಾಡುತ್ತಿದೆ.
ಪಶ್ಚಿಮ ಏಷ್ಯಾದಲ್ಲಿ ರಕ್ತಸಿಕ್ತ ಸಂಘರ್ಷ ನಡೆಯುತ್ತಿದ್ದರೆ, ತೆರೆಮರೆಯಲ್ಲಿ ಅದಕ್ಕಿಂತಲೂ ತೀವ್ರವಾದ ಸೈಬರ್ ಯುದ್ಧದಲ್ಲಿ ಇರಾನ್ ಮತ್ತು ಅಮೆರಿಕ ತೊಡಗಿವೆ. ಕಳೆದ ಎರಡು ವಾರಗಳಿಂದ ಇರಾನ್ನಲ್ಲಿ ಇಂಟರ್ನೆಟ್ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇಂತಹ ಸಮಯದಲ್ಲಿ, ಅಲ್ಲಿನ ರೆವಲ್ಯೂಷನರಿ ಗಾರ್ಡ್ಸ್ (IRGC) ಜನರ ಮೊಬೈಲ್ ಫೋನ್ಗಳಿಗೆ ಕಳುಹಿಸುತ್ತಿರುವ ಸಂದೇಶಗಳು ಹೊಸ ವಿವಾದಕ್ಕೆ ಕಾರಣವಾಗಿವೆ. ‘ಇರಾನ್ ಯುದ್ಧದಲ್ಲಿ ಗೆಲ್ಲುತ್ತಿದೆ ಮತ್ತು ಅಮೆರಿಕದ ಸೇನಾ ನೆಲೆಗಳನ್ನು ನಾವು ನಿಷ್ಕ್ರಿಯಗೊಳಿಸಿದ್ದೇವೆ’ ಎಂಬಂತಹ ಮೆಸೇಜ್ಗಳು ಜನರಿಗೆ ರವಾನೆಯಾಗುತ್ತಿವೆ.
ಹಾರ್ಮುಜ್ ಜಲಸಂಧಿಯ ನಿಯಂತ್ರಣವನ್ನು ನಾವು ಪಡೆದುಕೊಂಡಿದ್ದೇವೆ, ಇದರಿಂದ ಜಾಗತಿಕ ಆರ್ಥಿಕತೆಯನ್ನೇ ಮಂಡಿಯೂರುವಂತೆ ಮಾಡಿದ್ದೇವೆ ಎಂದು ಇರಾನ್ ಸರ್ಕಾರ ಹೇಳಿಕೊಳ್ಳುತ್ತಿದೆ. ಸಂಪರ್ಕ ವ್ಯವಸ್ಥೆಗಳೆಲ್ಲಾ ಕಡಿತಗೊಂಡಿರುವುದರಿಂದ, ಹೊರ ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಲಾಗದೆ ಇರಾನ್ ಜನರು ತೀವ್ರ ಗೊಂದಲದಲ್ಲಿದ್ದಾರೆ. ‘ಉತ್ತರ ಕೊರಿಯಾದಲ್ಲಿ ಹೇಗೋ, ಹಾಗೆ ಸರ್ಕಾರ ಕೊಡುವ ಸುದ್ದಿಯನ್ನೇ ನಂಬಬೇಕಾದ ಸ್ಥಿತಿ ನಮ್ಮದಾಗಿದೆ’ ಎಂದು ಇರಾನ್ನ ಸಾಮಾನ್ಯ ಜನರು ಅಂತರಾಷ್ಟ್ರೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸತ್ಯವನ್ನು ಮರೆಮಾಚಿ, ಯುದ್ಧ ಗೆಲುವಿನ ಕೃತಕ ವಾತಾವರಣವನ್ನು ಸೃಷ್ಟಿಸಲು ಇರಾನ್ ಪ್ರಯತ್ನಿಸುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕ ಕೂಡ ಕಮ್ಮಿ ಇಲ್ಲ!
ಇನ್ನೊಂದೆಡೆ, ಅಮೆರಿಕ ಕೂಡ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಪೆಂಟಗನ್ ಮತ್ತು ಟ್ರಂಪ್ ಆಡಳಿತ ಬಿಡುಗಡೆ ಮಾಡುತ್ತಿರುವ ಯುದ್ಧದ ದೃಶ್ಯಗಳು, ಜನಪ್ರಿಯ ವಿಡಿಯೋ ಗೇಮ್ಗಳಾದ ‘ಕಾಲ್ ಆಫ್ ಡ್ಯೂಟಿ’ ಮತ್ತು ‘ಜಿಟಿಎ’ ಯನ್ನು ನೆನಪಿಸುತ್ತಿವೆ ಎಂಬ ಟೀಕೆಗಳು ವ್ಯಕ್ತವಾಗಿವೆ. ಅಮೆರಿಕದ ಸೇನಾ ಶಕ್ತಿಯನ್ನು ವೈಭವೀಕರಿಸುವ ಈ ವಿಡಿಯೋಗಳಲ್ಲಿ, ಇರಾನ್ ಕಡೆ ಆದ ಪ್ರಾಣಹಾನಿಯ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಯುದ್ಧವನ್ನು ಒಂದು ಸಂಭ್ರಮದಂತೆ ಬಿಂಬಿಸುವ ಮೂಲಕ, ದೇಶದೊಳಗೆ ಜನಬೆಂಬಲ ಗಳಿಸುವುದು ವಾಷಿಂಗ್ಟನ್ನ ಗುರಿಯಾಗಿದೆ.
ಯುದ್ಧಭೂಮಿಯಲ್ಲಿ ಹಾರಾಡುವ ಕ್ಷಿಪಣಿಗಳಿಗಿಂತ ವೇಗವಾಗಿ ಎರಡೂ ದೇಶಗಳು ಸುಳ್ಳು ಸುದ್ದಿಗಳನ್ನು ಹರಡುತ್ತಿವೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇರಾನ್ನ ಇಂಟರ್ನೆಟ್ ಸ್ಥಗಿತ ಒಂದು ‘ಯುದ್ಧಾಪರಾಧ’ ಎಂದು ಮಾನವ ಹಕ್ಕುಗಳ ಸಂಘಟನೆಗಳು ಆರೋಪಿಸಿವೆ. ಸರಿಯಾದ ಮಾಹಿತಿ ಸಿಗದ ಕಾರಣ ಸಾಮಾನ್ಯ ನಾಗರಿಕರ ಜೀವಕ್ಕೆ ಅಪಾಯವಿದೆ. ಮುಂಬರುವ ದಿನಗಳಲ್ಲಿ ಈ ಮಾಹಿತಿ ತಂತ್ರಜ್ಞಾನ ಯುದ್ಧ ಇನ್ನಷ್ಟು ಜಟಿಲಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ.