
ಗ್ರಾಹಕರಿಗೆ ತಮ್ಮ ಜಾತಿಯ ದೌಲತ್ತಿನಿಂದ ಧಮ್ಕಿ ಹಾಕಿದ್ದಾರೆ ಎನ್ನಲಾದ ಹೆಚ್‌ಡಿಎಫ್‌ಸಿ ಉದ್ಯೋಗಿ ಆಸ್ತಾ ಸಿಂಗ್ ಅವರ ವೀಡಿಯೋ ವೈರಲ್ ಆಗಿತ್ತು. ಈ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಅವರು, ಆ ವೀಡಿಯೋದಲ್ಲಿರುವುದು ಗ್ರಾಹಕರಲ್ಲ, ಬದಲಿಗೆ ಸಹೋದ್ಯೋಗಿ ಹಾಗೂ ಅದು ವೈಯಕ್ತಿಕ ಜಗಳವಾಗಿತ್ತು ಎಂದು ಹೇಳಿದ್ದಾರೆ.
ತಮ್ಮ ವೀಡಿಯೋಗೆ ಸ್ಪಷ್ಟನೆ ನೀಡಿದ ಹೆಚ್‌ಡಿಎಫ್‌ಸಿ ಉದ್ಯೋಗಿ:
ಹೆಚ್‌ಡಿಎಫ್‌ಸಿ ಉದ್ಯೋಗಿಯೊಬ್ಬರು ತಮ್ಮ ಜಾತಿಯನ್ನು ಹೇಳಿಕೊಂಡು ಗ್ರಾಹಕರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ತೋರಿಸುವ ವೀಡಿಯೋವೊಂದು ವೈರಲ್ ಅಗಿತ್ತು. ಈ ವೀಡಿಯೋಗೆ ಈಗ ಹೆಚ್‌ಡಿಎಫ್‌ಸಿ ಉದ್ಯೋಗಿ ಸ್ಪಷ್ಟನೆ ನೀಡಿದ್ದಾರೆ. ನಿನ್ನೆ ನಾನು ಠಾಕೂರ್ ನನ್ನ ಜೊತೆ ಆಟ ಆಡಬೇಡಿ ಎಂದು ಹೆಚ್‌ಡಿಎಫ್‌ಸಿ ಉದ್ಯೋಗಿ ಆಸ್ತಾ ಸಿಂಗ್ ಅವರು ಗ್ರಾಹಕರೊಬ್ಬರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅನೇಕರು ಆಕೆ ತನ್ನ ಜಾತಿಯನ್ನು ಉಲ್ಲೇಖಿಸಿ ದಬ್ಬಾಳಿಕೆ ಮಾಡುತ್ತಿದ್ದಾಳೆ ಎಂದು ಆಕ್ರೋಶ ಹೊರಹಾಕಿದ್ದರು. ಉತ್ತರ ಪ್ರದೇಶದ ಕಾನ್ಪುರದ ಹೆಚ್‌ಡಿಎಫ್‌ಸಿ ಶಾಖೆಯಲ್ಲಿ.
ತಮ್ಮ ವಿರುದ್ದದ ಈ ವೀಡಿಯೋ ವೈರಲ್ ಆಗ್ತಿದ್ದಂತೆ ಹೆಚ್‌ಡಿಎಫ್‌ಸಿ ಉದ್ಯೋಗಿ ಆಸ್ತಾ ಸಿಂಗ್ ಅವರು ಸ್ಪಷ್ಟನೆ ನೀಡಿದ್ದಾರೆ. ಈ ವೀಡಿಯೋವನ್ನು ಅರ್ಧದಿಂದ ಚಿತ್ರೀಕರಿಸಲಾಗಿದೆ. ಈ 33 ಸೆಕೆಂಡ್‌ಗಳ ವೀಡಿಯೋ ಒಂದು ತಿಂಗಳಿಗಿಂತಲೂ ಹಿಂದಿನದ್ದು, ಮತ್ತು ಅದರಲ್ಲಿ ವರದಿಯಾದಂತೆ ಆ ವೀಡಿಯೋದಲ್ಲಿ ಇರುವವರು ಗ್ರಾಹಕರಲ್ಲ, ಅವರು ಸಂಸ್ಥೆಯ ಉದ್ಯೋಗಿಯೇ ಆಗಿದ್ದರು ಎಂದು ಅವರು ಹೇಳಿದ್ದಾರೆ.
ಹಿಂದಿನ ವೀಡಿಯೋದಲ್ಲಿ ಬ್ಯಾಂಕ್ ಉದ್ಯೋಗಿಯೂ ಆದ ಮತ್ತೊಬ್ಬಾಕೆಗೆ ಆಸ್ತಾ ಸಿಂಗ್‌ಗೆ ನಿಮ್ಮ ಮಾತಿನ ಮೇಲೆ ನಿಗಾ ಇರಲಿ ಎಂದು ಹೇಳುತ್ತಾರೆ. ಅದಕ್ಕೆ ಆಸ್ತಾ ಸಿಂಗ್ ಇದನ್ನು ನಿನ್ನ ಗಂಡನಿಗೆ ಹೇಳು ಎಂದು ಹೇಳುತ್ತಾರೆ. ಇದೇ ವೇಳೆ ಅಲ್ಲಿದ್ದ ಇತರ ಬ್ಯಾಂಕ್ ಉದ್ಯೋಗಿಗಳು ಸಿಟ್ಟಿಗೆದ್ದ ಆಸ್ತಾ ಸಿಂಗ್ ಅವರನ್ನು ಶಾಂತಗೊಳಿಸಲು ಯತ್ನಿಸುವುದನ್ನು ನೋಡಬಹುದು. ಇದೇ ವೇಳೆ ಆಸ್ತಾ ಸಿಂಗ್ ನಾನು ಠಾಕೂರ್ ನನ್ನ ಜೊತೆ ಆಟ ಬೇಡ ಎಂದು ಹೇಳುತ್ತಾಳೆ. ಆಕೆಯ ಈ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಯ್ತು. ಇದು ತಮ್ಮ ಜಾತಿಯನ್ನು ಬಳಸಿಕೊಂಡು ಬೆದರಿಸುವ ಯತ್ನ ಎಂದು ಸಾಮಾಜಿಕ ಜಾಲತಾಣದಲ್ಲಿ ಆರೋಪಗಳು ಕೇಳಿ ಬಂತು.
ಆಕೆ ಹೇಳಿದ್ದೇನು?
ಕಳೆದ 24 ಗಂಟೆಗಳಿಂದ ಇನ್‌ಸ್ಟಾಗ್ರಾಮ್ ಮತ್ತು ಇತರ ಹಲವು ಸಾಮಾಜಿಕ ಜಾಲತಾಣಗಳಲ್ಲಿ ನಾನು ಇರುವ ವೀಡಿಯೊ ವೈರಲ್ ಆಗುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಇಲ್ಲಿಯವರೆಗೆ, ಕಥೆಯ ಒಂದು ಆಯಾಮವನ್ನು ಮಾತ್ರ ನೀವು ನೋಡಿದ್ದೀರಿ. ಈ ವೀಡಿಯೊ ಜನವರಿ 6 ನೇ ದಿನಾಂಕದ್ದಾಗಿದೆ. ಮತ್ತು ಇದು ಯಾವುದೇ ಗ್ರಾಹಕನಿಗೆ ಸಂಬಂಧಿಸಿದ ವೀಡಿಯೋ ಅಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಗರ್ಲ್‌ಫ್ರೆಂಡ್ ಜೊತೆ ಶಾಪಿಂಗ್ ವೇಳೆ ಹೆಂಡ್ತಿಗೆ ಸಿಕ್ಕಿಬಿದ್ದ ಗಂಡ: ಇಬ್ಬರು ಕಿತ್ತಾಡುತ್ತಿದ್ದಂತೆ ಪತಿ ಪರಾರಿ
ನಾನು ಯಾವುದೇ ಗ್ರಾಹಕರೊಂದಿಗೆ ಕೆಟ್ಟದಾಗಿ ವರ್ತಿಸಿಲ್ಲ. ಇದು ನಮ್ಮ ಬ್ಯಾಂಕಿನಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರ ವಿಡಿಯೋ. ನಾನು ಅವರ ಪತಿಯೊಂದಿಗೆ ಜಗಳವಾಡಿದ್ದೆ. ಇದು ಅವರ ವಿಡಿಯೋ, ಇದನ್ನು ನಾನು ಗ್ರಾಹಕರೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದೇನೆ ಎಂದು ತಪ್ಪಾಗಿ ಅರ್ಥೈಸಲಾಗಿದೆ. ಮತ್ತು ಇದನ್ನು ಜಾತಿವಾದದ ವಿಷಯವನ್ನಾಗಿ ಮಾಡಲಾಗಿದೆ ಎಂದು ಅವರು ತಮ್ಮ ಸ್ಪಷ್ಟೀಕರಣದಲ್ಲಿ ತಿಳಿಸಿದ್ದಾರೆ.
ಆ ಮಹಿಳೆ ರಾಜೀನಾಮೆ ನೀಡಿದ್ದು, ಅದೇ ದಿನ ತನ್ನ ರಿಲೀವಿಂಗ್ ಪತ್ರವನ್ನು ಬಯಸಿದ್ದರು ಎಂದು ಹೇಳಿದರು. ಆ ಮಹಿಳೆಯ ಅತ್ತಿಗೆ ಬೆಳಿಗ್ಗೆಯಿಂದ ಶಾಖೆಯಲ್ಲಿ ಕುಳಿತಿದ್ದರು, ಮತ್ತು ಆಸ್ತಾ ಅವರೊಂದಿಗೆ ಸ್ವಲ್ಪ ಜಗಳವಾಡಿದ್ದರು. ಈ ವಿಚಾರವನ್ನು ಅವರು ತಮ್ಮ ಪತಿಗೆ ಹೇಳಿದರು. ಇದಾದ ನಂತರ ಆಕೆಯ ಪತಿ ಕಚೇರಿಗೆ ಬಂದು ನನ್ನ ಜೊತೆ ಜಗಳವಾಡಿದರು. ಆರಂಭದಲ್ಲಿ ಅವರೇ ನಿಮ್ಮ ಜಾತಿ ಯಾವುದು? ನಿಮಗೆ ಏಕೆ ಇಷ್ಟು ದುರಂಕಾರ ಎಂದು ಅಲ್ಲದೇ ನನ್ನ ಮೇಜಿನ ಬಳಿ ಬಂದು ನಾನು ನಿಮಗೆ ಪಾಠ ಕಲಿಸುತ್ತೇನೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ನಾನು ಠಾಕೂರ್ ಎಂದು ಹೇಳಿದ್ದೇನೆ.
ಇದನ್ನೂ ಓದಿ: ಸಂಸತ್ ಹೊರಗೆ ರಾಹುಲ್ ಪ್ರದರ್ಶಿಸಿದ್ದ ಪುಸ್ತಕ ಇನ್ನೂ ಪ್ರಕಟವಾಗಿಲ್ಲ: ವಿವಾದದ ನಂತರ ಸ್ಪಷ್ಟನೆ ನೀಡಿದ ಪೆಂಗ್ವಿನ್ ಪಬ್ಲಿಕೇಷನ್
ನಾನು ಸಾರ್ವಜನಿಕರ ಸೇವೆಗಾಗಿ ಇಲ್ಲಿದ್ದೇನೆಂದು ನನಗೆ ತಿಳಿದಿದೆ. ಮತ್ತು ನಾನು ನನ್ನ ಮಾತುಗಳನ್ನು ಬಹಳ ಎಚ್ಚರಿಕೆಯಿಂದ ಆರಿಸಿಕೊಳ್ಳಬೇಕು. ಆದರೆ ಯಾರಾದರೂ ನನ್ನ ಬಳಿಗೆ ಬಂದು ನಾನು ನಿನಗೆ ಪಾಠ ಕಲಿಸುತ್ತೇನೆ ಎಂದು ಹೇಳಿದರೆ, ನಾನು ಅದನ್ನು ಸಹಿಸುವುದಿಲ್ಲ ಎಂದು ಆಸ್ತಾ ಹೇಳಿದ್ದಾರೆ. ಆದರೆ ನಾನು ನನ್ನ ಹೇಳಿಕೆಗೆ ಬದ್ಧಳಾಗಿದ್ದೇನೆ. ನಾನು ಠಾಕೂರ್, ಮತ್ತು ನಾನು ಠಾಕೂರ್ ಆಗಿರುವುದಕ್ಕೆ ಹೆಮ್ಮೆಪಡುತ್ತೇನೆ ಎಂದು ಆಕೆ ಹೇಳಿದ್ದಾಳೆ.
Scroll to load tweet…