
ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ಜವಳಿ ರಫ್ತು ಸ್ಥಗಿತಗೊಂಡಿದ್ದು, ಕಚ್ಚಾ ವಸ್ತುಗಳ ಕೊರತೆ ಉಂಟಾಗಿದೆ. ಇದರಿಂದಾಗಿ ಬೆಂಗಳೂರಿನ ಚಿಕ್ಕಪೇಟೆ ಸೇರಿದಂತೆ ದೇಶೀಯ ಮಾರುಕಟ್ಟೆಯಲ್ಲಿ ಏಪ್ರಿಲ್‌ನಿಂದ ರೆಡಿಮೇಡ್ ಬಟ್ಟೆಗಳ ದರ ಶೇ. 10-15 ರಷ್ಟು ಏರಿಕೆಯಾಗುವ ಆತಂಕ ಎದುರಾಗಿದೆ.
ಬೆಂಗಳೂರು (ಮಾ.19): ಮಧ್ಯಪ್ರಾಚ್ಯ ಭೀಕರ ಯುದ್ಧದ ಪರಿಣಾಮದಿಂದ ಕೇವಲ ಎಲ್‌ಪಿಜಿ, ಆಹಾರ ಪದಾರ್ಥಗಳ ಮೇಲೆ ಮಾತ್ರವಲ್ಲ ಈಗ ನಾವು ಧರಿಸುವ ಬಟ್ಟೆಗೂ ತಟ್ಟಿದೆ. ಹೌದು, ಇರಾನ್ ಇಸ್ರೇಲ್ ಯುದ್ಧದ ಎಫೆಕ್ಟ್‌ನಿಂದಾಗಿ ರೆಡಿಮೇಡ್ ಬಟ್ಟೆಗಳ ದರ ಏರಿಕೆಯಾಗುವ ಆತಂಕ ಶುರುವಾಗಿದೆ.
ಮಧ್ಯಪ್ರಾಚ್ಯ ಸಂಘರ್ಷ: ಚಿಕ್ಕಪೇಟೆ ಜವಳಿ ಉದ್ಯಮಕ್ಕೆ ಭಾರಿ ಪೆಟ್ಟು
ಬೆಂಗಳೂರಿನ ಪ್ರಸಿದ್ಧ ವಾಣಿಜ್ಯ ಕೇಂದ್ರವಾದ ಚಿಕ್ಕಪೇಟೆಯ ಜವಳಿ ಉದ್ಯಮಕ್ಕೆ ಯುದ್ಧದ ಬಿಸಿ ತಟ್ಟಿದೆ. ಹಬ್ಬಗಳ ಸಾಲು ಹತ್ತಿರ ಬರುತ್ತಿರುವ ಈ ಸಮಯದಲ್ಲಿ ದರ ಏರಿಕೆಯ ಭೀತಿ ಎದುರಾಗಿರುವುದು ವ್ಯಾಪಾರಸ್ಥರು, ಗ್ರಾಹಕರಲ್ಲಿ ಆತಂಕ ಶುರುವಾಗಿದೆ. ಒಂದು ವೇಳೆ ಬೆಲೆ ಏರಿಕೆಯಾದರೆ ವ್ಯಾಪಾರ ಕುಸಿಯುವ ಭೀತಿ ಒಂದೆಡೆಯಾದರೆ, ಗ್ರಾಹಕರಿಗೆ ಆರ್ಥಿಕ ಹೊರೆಯಾಗುವ ಚಿಂತೆ ಇನ್ನೊಂದೆಡೆ ಎದುರಾಗಿದೆ.
ರಫ್ತು ಸ್ಥಗಿತ: ಸ್ತಬ್ಧವಾದ ಮಾರುಕಟ್ಟೆ
ಭಾರತದಿಂದ ಕುವೈತ್, ಕತಾರ್ ಸೇರಿದಂತೆ ಹಲವು ದೇಶಗಳಿಗೆ ಭಾರಿ ಪ್ರಮಾಣದಲ್ಲಿ ಜವಳಿ ರಫ್ತಾಗುತ್ತಿತ್ತು. ಅದರಲ್ಲೂ ವಿಶೇಷವಾಗಿ ಡೆನಿಮ್ ಮತ್ತು ಕಾಟನ್ ಬಟ್ಟೆಗಳಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆಯಿತ್ತು. ಆದರೆ ಯುದ್ಧದ ಹಿನ್ನೆಲೆಯಲ್ಲಿ ಈ ರಫ್ತು ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿದೆ. ಇದು ದೇಶೀಯ ಮಾರುಕಟ್ಟೆಯ ಪರಿಣಾಮವಾಗಿ, ಉದ್ಯಮ ನೆಲಕಚ್ಚುವ ಆತಂಕ ಎದುರಾಗಿದೆ.
ಕಚ್ಚಾ ವಸ್ತುಗಳ ಕೊರತೆ, ಸಾಗಾಣಿಕೆ ಸಮಸ್ಯೆ
ಇರಾನ್ ಇಸ್ರೇಲ್ ಯುದ್ಧದಿಂದಾಗಿ ಬಟ್ಟೆ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳು, ರಾಸಾಯನಿಕಗಳು ಮತ್ತು ಡೈಗಳ ಆಮದು ಮಾಡಿಕೊಳ್ಳುವಲ್ಲಿ ತೊಂದರೆ ಉಂಟಾಗಿದೆ. ಅದರಲ್ಲೂ ಸಾಗಾಣಿಕೆ ವೆಚ್ಚ ಹೆಚ್ಚಾಗಿರುವುದು, ಆಮದು ಸಪ್ಲೈ ಚೈನ್ ಕಟ್ಟಾಗಿರುವುದು ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಗುಜರಾತ್‌ನ ಸೂರತ್‌ನಂತಹ ಪ್ರಮುಖ ಉತ್ಪಾದನಾ ಕೇಂದ್ರಗಳಲ್ಲಿ ಬಟ್ಟೆಗಳ ದಾಸ್ತಾನು ಕ್ರಮೇಣ ಕಡಿಮೆಯಾಗುತ್ತಿರುವುದು ದರ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಏಪ್ರಿಲ್‌ನಿಂದ ಶೇ. 10-15 ರಷ್ಟು ಬೆಲೆ ಏರಿಕೆ ಸಾಧ್ಯತೆ!
ಈ ಎಲ್ಲಾ ಬೆಳವಣಿಗೆಗಳಿಂದಾಗಿ ಏಪ್ರಿಲ್ ತಿಂಗಳಿನಿಂದ ರೆಡಿಮೇಡ್ ಬಟ್ಟೆಗಳ ದರದಲ್ಲಿ ಶೇ. 10 ರಿಂದ 15 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಸಿದ್ಧ ಉಡುಪುಗಳ ತಯಾರಿಕಾ ವೆಚ್ಚ ಹೆಚ್ಚಾಗಿರುವುದರಿಂದ, ಅನಿವಾರ್ಯವಾಗಿ ಆ ಹೊರೆಯನ್ನು ಗ್ರಾಹಕರ ಮೇಲೆ ಹಾಕಲು ಕಂಪನಿಗಳು ಮುಂದಾಗಿವೆ. ಇದು ಸದ್ಯಕ್ಕೆ ಬಟ್ಟೆ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನ ಮೂಡಿಸಿದೆ.