
ಬಿಗ್‌ಬಾಸ್ ಖ್ಯಾತಿಯ ರೇಣು ಸುಧಿ, ತಮ್ಮ ಪತಿ ಕೊಲ್ಲಂ ಸುಧಿ ಅವರ ಫೋಟೋವನ್ನು ಇನ್‌ಸ್ಟಾಗ್ರಾಂ ಡಿಪಿಯಿಂದ ತೆಗೆದುಹಾಕಿದ್ದಕ್ಕೆ ಮತ್ತು ಪೇಯ್ಡ್ ಸಬ್‌ಸ್ಕ್ರಿಪ್ಷನ್ ಆರಂಭಿಸಿದ್ದಕ್ಕೆ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಬ್ಲೂ ಟಿಕ್‌ಗಾಗಿ ಡಿಪಿ ಬದಲಿಸಿದ್ದಾಗಿ ಸ್ಪಷ್ಟನೆ ನೀಡಿದ್ದಾರೆ.
ತಿರುವನಂತಪುರ: ಕೇರಳದಲ್ಲಿ ಸೋಶಿಯಲ್ ಮೀಡಿಯಾ ಬಳಸುವವರಿಗೆ ರೇಣು ಸುಧಿ ಹೆಸರು ಚಿರಪರಿಚಿತ. ಬಿಗ್‌ಬಾಸ್‌ನಲ್ಲಿ ಮಲೆಯಾಳಿಗಳ ಮನಗೆದ್ದಿರುವ ಅವರು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಚರ್ಚೆಯಾಗಿದ್ದು, ಟೀಕೆಗಳಿಗೆ ಗುರಿಯಾಗಿದ್ದು ಇದೇ ರೇಣು ಸುಧಿ. ಪತಿ, ನಟ ಕೊಲ್ಲಂ ಸುಧಿ ಅವರ ನಿಧನದ ನಂತರ ರೇಣು ನಟನೆಗೆ ಇಳಿದಿದ್ದರು. ಆಗಲೇ ಅವರ ವಿರುದ್ಧ ಮೊದಲ ಬಾರಿಗೆ ಟೀಕೆಗಳು ಶುರುವಾಗಿದ್ದವು. ನಂತರ ತಮ್ಮ ಮಾತುಗಳು, ರೀಲ್ಸ್‌ಗಳಿಂದಾಗಿ ಅವರು ಸಾಕಷ್ಟು ಟ್ರೋಲ್ ಮತ್ತು ಟೀಕೆಗಳನ್ನು ಎದುರಿಸಬೇಕಾಗಿ ಬಂತು. ಈಗ ಲೇಟೆಸ್ಟಾಗಿ, ಇನ್‌ಸ್ಟಾಗ್ರಾಂ ಡಿಪಿಯಿಂದ ಸುಧಿ ಫೋಟೋ ತೆಗೆದಿದ್ದು ಮತ್ತು ಪೇಯ್ಡ್ ಸಬ್‌ಸ್ಕ್ರಿಪ್ಷನ್ ಶುರು ಮಾಡಿದ್ದು ಹೊಸ ವಿವಾದಕ್ಕೆ ಕಾರಣವಾಗಿದೆ. ಆದರೆ, ಈ ಯಾವ ಟೀಕೆಗಳಿಗೂ ರೇಣು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಇದೀಗ ರೇಣು, ತಮ್ಮ ಇನ್‌ಸ್ಟಾಗ್ರಾಂ ಪ್ರೊಫೈಲ್‌ನಿಂದ ಕೊಲ್ಲಂ ಸುಧಿ ಅವರ ಫೋಟೋವನ್ನು ಯಾಕೆ ತೆಗೆದೆ ಅನ್ನೋದಕ್ಕೆ ಕಾರಣ ಕೊಟ್ಟಿದ್ದಾರೆ. ‘ಬ್ಲೂ ಟಿಕ್’ ಹೆಚ್ಚಿನ ಸೆಲೆಬ್ರಿಟಿಗಳ ಪ್ರೊಫೈಲ್‌ನಲ್ಲಿ ಬ್ಲೂ ಟಿಕ್ ಬರ್ತಿದೆ. ಅದರ ಅಪ್ರೂವಲ್‌ಗಾಗಿ ಮೆಟಾದಿಂದ ಮೆಸೇಜ್ ಬಂದಿತ್ತು. ಡಿಪಿ ಬದಲಾಯಿಸಲು ಹೇಳಿದ್ದರು. ಅದಕ್ಕಾಗಿಯೇ ಬದಲಾಯಿಸಿದ್ದು. ಸುಧಿ ಚೇಟನ್ ಫೋಟೋ ತೆಗೆದ ಮಾತ್ರಕ್ಕೆ ಅವರನ್ನು ನನ್ನ ಹೃದಯದಿಂದ ತೆಗೆದುಹಾಕಿದ್ದೀನಿ ಅಂತಲ್ಲ. ನಾನೀಗ ಬೇರೆ ಮದುವೆ ಆಗೋಕೂ ಹೋಗ್ತಿಲ್ಲ. ಬೇರೆ ಯಾರ ಮೇಲೂ ಪ್ರೀತಿ ಇಲ್ಲ. ನಾನು ದೇವರಿಗೆ ಮಾತ್ರ ಹೆದರೋದು” ಎಂದು ರೇಣು ಸುಧಿ ವಿವರಿಸಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಸಬ್‌ಸ್ಕ್ರಿಪ್ಷನ್ ಆರಂಭಿಸಿರುವ ರೇಣು
ಇನ್ನು, ರೇಣು ಸುಧಿ ಐದು ದಿನಗಳ ಹಿಂದೆಯಷ್ಟೇ ಇನ್‌ಸ್ಟಾಗ್ರಾಂನಲ್ಲಿ ಸಬ್‌ಸ್ಕ್ರಿಪ್ಷನ್ ಆರಂಭಿಸಿದ್ದಾರೆ. ಇಲ್ಲಿಯವರೆಗೆ 656 ಜನರು 180 ರೂಪಾಯಿ ಕೊಟ್ಟು ಸಬ್‌ಸ್ಕ್ರೈಬ್ ಆಗಿದ್ದಾರೆ. ಸಬ್‌ಸ್ಕ್ರೈಬರ್‌ಗಳಿಗಾಗಿ ರೇಣು ಒಂದು ರೀಲ್ ಮತ್ತು ಒಂಬತ್ತು ಸ್ಟೋರಿಗಳನ್ನು ಹಂಚಿಕೊಂಡಿದ್ದಾರೆ. ಇದರ ಮೂಲಕ ರೇಣು ಅವರಿಗೆ 1,18,080 ರೂಪಾಯಿ ಆದಾಯ ಬಂದಿದೆ ಎಂದು ಸೋಶಿಯಲ್ ಮೀಡಿಯಾ ಬಳಕೆದಾರರು ಕಾಮೆಂಟ್ ಮಾಡುತ್ತಿದ್ದಾರೆ. ಈ ಸಬ್‌ಸ್ಕ್ರಿಪ್ಷನ್ ಕುರಿತ ಟೀಕೆಗಳ ಬಗ್ಗೆಯೂ ರೇಣು ಮಾತನಾಡಿದ್ದಾರೆ.
“ಬಿಗ್ ಬಾಸ್‌ನಿಂದ ಹೊರಬಂದಾಗಿನಿಂದಲೂ ಸಬ್‌ಸ್ಕ್ರಿಪ್ಷನ್ ಶುರು ಮಾಡಬೇಕು ಅಂದುಕೊಂಡಿದ್ದೆ. ಆದರೆ ಸಮಯ ಸಿಕ್ಕಿರಲಿಲ್ಲ. ಆಲ್ಬಂ ಶೂಟ್, ದುಬೈ, ಬಹ್ರೇನ್ ಅಂತ ಓಡಾಟದಲ್ಲೇ ಬ್ಯುಸಿಯಾಗಿದ್ದೆ. ಮೊದಲು ಸಬ್‌ಸ್ಕ್ರಿಪ್ಷನ್‌ಗೆ 45 ರೂಪಾಯಿ ಇಟ್ಟಿದ್ದೆ. ಈಗ ಅದನ್ನು 180 ರೂಪಾಯಿಗೆ ಏರಿಸಿದ್ದೇನೆ. ಬೇರೆ ಸೆಲೆಬ್ರಿಟಿಗಳೆಲ್ಲಾ ಸಬ್‌ಸ್ಕ್ರಿಪ್ಷನ್ ಇಟ್ಟುಕೊಂಡಿದ್ದಾರೆ. ನಾನು ಶುರು ಮಾಡಿದ ತಕ್ಷಣ ಟೀಕೆ ಶುರುವಾಯ್ತು. ವ್ಲಾಗರ್‌ಗಳೆಲ್ಲಾ ನನ್ನನ್ನು ಹಿಡಿದು ತೊಳೆಯುತ್ತಿದ್ದಾರೆ. ನನಗೊಬ್ಬಳಿಗೆ ಯಾಕೆ ಈ ಸಮಸ್ಯೆ?” ಎಂದು ರೇಣು ಸುಧಿ ಹೇಳಿಕೊಂಡಿದ್ದಾರೆ.
ರೇಣು ಸುಧಿಗೆ ಲಕ್ಷಾಂತರ ಫಾಲೋವರ್ಸ್!
ಮಲೆಯಾಳಂ ಬಿಗ್‌ಬಾಸ್ ಏಳನೇ ಸೀಸನ್ ಸ್ಪರ್ಧಿ ಕೊಲ್ಲಂ ರೇಣು ಸುಧಿ, ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಇದುವರೆಗೂ ಇನ್‌ಸ್ಟಾಗ್ರಾಮ್‌ನಲ್ಲಿ ರೇಣು ಸುಧಿ 4,037 ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ 379 ಸಾವಿರ ಫಾಲೋವರ್ಸ್ ಇದ್ದಾರೆ.