Headlines

ಇಂದಿನಿಂದ ಗಲ್ಫ್‌ನಲ್ಲಿರುವ ಅಮೆರಿಕದ ಪ್ರಮುಖ ಐಟಿ ಕಂಪನಿಗಳ ಮೇಲೆ ದಾಳಿ: ಇರಾನ್ ಎಚ್ಚರಿಕೆ | Iran Warns Of Attacks On Major America S It Companies In Gulf From Today Mrq

ಇಂದಿನಿಂದ ಗಲ್ಫ್‌ನಲ್ಲಿರುವ ಅಮೆರಿಕದ ಪ್ರಮುಖ ಐಟಿ ಕಂಪನಿಗಳ ಮೇಲೆ ದಾಳಿ: ಇರಾನ್ ಎಚ್ಚರಿಕೆ | Iran Warns Of Attacks On Major America S It Companies In Gulf From Today Mrq



ಇಂದಿನಿಂದ ಗಲ್ಫ್‌ನಲ್ಲಿರುವ ಅಮೆರಿಕದ ಪ್ರಮುಖ ಐಟಿ ಕಂಪನಿಗಳ ಮೇಲೆ ದಾಳಿ: ಇರಾನ್ ಎಚ್ಚರಿಕೆ | Iran Warns Of Attacks On Major America S It Companies In Gulf From Today Mrq

ತನ್ನ ನಾಯಕರ ಹತ್ಯೆಗೆ ಪ್ರತೀಕಾರವಾಗಿ, ಗಲ್ಫ್‌ನಲ್ಲಿರುವ ಅಮೆರಿಕದ ಪ್ರಮುಖ ಐಟಿ ಕಂಪನಿಗಳ ಮೇಲೆ ದಾಳಿ ಮಾಡುವುದಾಗಿ ಇರಾನ್ ಎಚ್ಚರಿಸಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕವು ಇರಾನ್‌ನ ನೀರು ಶುದ್ಧೀಕರಣ ಘಟಕದ ಮೇಲೆ ದಾಳಿ ನಡೆಸಿದೆ.

ಟೆಹ್ರಾನ್‌: ಈಗಾಗಲೇ ತನ್ನ ಸರ್ವೋಚ್ಚ ನಾಯಕ ಸೇರಿದಂತೆ ಸರ್ಕಾರ ಹಾಗೂ ಸೇನೆಯ ಹಲವು ಉನ್ನತ ವ್ಯಕ್ತಿಗಳನ್ನು ಕಳೆದುಕೊಂಡಿರುವ ಇರಾನ್‌, ‘ಇನ್ನು ನಮ್ಮ ನಾಯಕರನ್ನು ಗುರಿಯಾಗಿಸಿ ಉದ್ದೇಶಿತ ಹತ್ಯೆಗಳನ್ನು ನಡೆಸಿದರೆ, ನಾವು ಗಲ್ಫ್‌ನಲ್ಲಿರುವ ಅಮೆರಿಕದ ಐಟಿ ಕಂಪನಿಗಳ ಮೇಲೆ ಏ.1ರಿಂದಲೇ ದಾಳಿ ಆರಂಭಿಸುತ್ತೇವೆ’ ಎಂದು ಎಚ್ಚರಿಸಿದೆ.

ಈ ಬಗ್ಗೆ ಐಆರ್‌ಜಿಸಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಮೈಕ್ರೋಸಾಫ್ಟ್, ಗೂಗಲ್, ಆಪಲ್, ಇಂಟೆಲ್, ಐಬಿಎಂ, ಟೆಸ್ಲಾ, ಮೆಟಾ, ಬೋಯಿಂಗ್ ಸೇರಿದಂತೆ 18 ಕಂಪನಿಗಳನ್ನು ಹೆಸರಿಸಲಾಗಿದ್ದು, ‘ಇರಾನ್‌ನಲ್ಲಿ ನಡೆಸಲಾಗುವ ಉಗ್ರಕೃತ್ಯಗಳಿಗೆ ಬದಲಾಗಿ ಈ ಎಲ್ಲಾ ಕಂಪನಿಗಳು ತಮ್ಮ ಘಟಕಗಳನ್ನು ಕಳೆದುಕೊಳ್ಳಬೇಕಾಗುವುದು. ಈ ಷರತ್ತು ರಾತ್ರಿ 10.30ರಿಂದ(ಭಾರತೀಯ ಕಾಲಮಾನ) ಆರಂಭವಾಗುತ್ತದೆ. ಜೀವ ಉಳಿಸಿಕೊಳ್ಳಬೇಕಿದ್ದರೆ ಸಿಬ್ಬಂದಿ ಈ ಕಂಪನಿಯ ಕಟ್ಟಡಗಳಿಂದ ಹೊರಹೋಗಿ’ ಎನ್ನಲಾಗಿದೆ. ಈ ಮೊದಲು ಬ್ಯಾಂಕ್‌ನಂತಹ ಆರ್ಥಿಕ ಕೇಂದ್ರಗಳ ಮೇಲೆ ದಾಳಿ ಮಾಡುವುದಾಗಿ ಇರಾನ್‌ ಎಚ್ಚರಿಕೆ ನೀಡಿತ್ತು.

ಇರಾನ್‌ ನೀರು ಶುದ್ಧೀಕರಣ ಘಟಕ ಮೇಲೆ ಅಮೆರಿಕ ದಾಳಿ

ಇರಾನಿನ ನೀರು ಶುದ್ಧೀಕರಣ ಘಟಕ ಮೇಲೆ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆದರಿಕೆ ಬೆನ್ನಲ್ಲೇ ಕ್ವೆಶ್ಮ್ ದ್ವೀಪದಲ್ಲಿನ ಘಟಕದ ಮೇಲೆ ಅಮೆರಿಕ ವಾಯುದಾಳಿ ನಡೆಸಿದೆ. ಸೋಮವಾರವಷ್ಟೇ ಟ್ರಂಪ್‌, ಇರಾನ್‌ ಹೋರ್ಮುಜ್‌ ಜಲಸಂಧಿಯನ್ನು ಎಲ್ಲರಿಗೂ ಮುಕ್ತಗೊಳಿಸದೆ ಇದ್ದರೆ ಇರಾನ್‌ ತೈಲಬಾವಿ ಮತ್ತು ನೀರು ಶುದ್ಧೀಕರಣ ಘಟಕ ಮೇಲೆ ದಾಳಿ ನಡೆಸುತ್ತೇವೆ ಎಂದು ಟ್ರೂತ್‌ ಸೋಷಿಯಲ್‌ನಲ್ಲಿ ಎಚ್ಚರಿಸಿದ್ದರು. ಅದಾದ ಒಂದು ದಿನದಲ್ಲೇ ಈ ದಾಳಿ ನಡೆದಿದೆ. ಪರಿಣಾಮ ಇರಾನ್‌ ಘಟಕ ಸ್ಥಗಿತಗೊಳಿಸಿದೆ.

ಈ ನಡುವೆ ಅಮೆರಿಕ ಮತ್ತು ಇಸ್ರೇಲ್‌ ನಡೆಸಿದ ದಾಳಿಯಲ್ಲಿ ದೇಶದ ಅತಿದೊಡ್ಡ ಕ್ಯಾನ್ಸರ್‌ ಔಷಧ ಉತ್ಪಾದನೆ ಮತ್ತು ಅರಿವಳಿಕೆ ಉತ್ಪಾದನಾ ಘಟಕಕ್ಕೆ ಹಾನಿಯಾಗಿದೆ ಎಂದು ಇರಾನ್‌ ಆರೋಪಿಸಿದೆ.

ಮತ್ತೊಂದೆಡೆ ಅಮೆರಿಕದ ಅತ್ಯಾಧುನಿಕ ಎಂಕ್ಯೂ-9 ರೀಪರ್‌ ಡ್ರೋನ್‌ವೊಂದನ್ನು ಹೊಡೆದುರುಳಿಸಿರುವುದಾಗಿ ಇರಾನ್‌ ಹೇಳಿಕೊಂಡಿದೆ. ಜತೆಗೆ, ದುಬೈ ಬಂದರು ಸಮೀಪದಲ್ಲಿ ನಿಂತಿದ್ದ ಕುವೈಟ್‌ ಪೆಟ್ರೋಲಿಯಂ ಕಾರ್ಪೊರೇಷನ್‌ಗೆ ಸೇರಿದ ಅಲ್‌ ಸಮಾಮಿ ತೈಲ ಟ್ಯಾಂಕರ್‌ ಮೇಲೂ ದಾಳಿ ನಡೆಸಿದೆ. ಅಲ್ಲದೆ ಇಸ್ರೇಲ್‌, ಕುವೈತ್‌, ಅಬುದಾಬಿಯನ್ನು ಗುರಿಯಾಗಿರಿಸಿ ಭಾರೀ ಕ್ಷಿಪಣಿ ದಾಳಿ ನಡೆಸಿದೆ.

ಇರಾನ್‌ ಕ್ಷಿಪಣಿ ದಾಳಿಗೆ ಇಸ್ರೇಲ್ ರಾಜಧಾನಿ ಟೆಲ್‌ಅವೀವ್‌ನಲ್ಲಿ ಹಲವು ಸ್ಫೋಟದ ಸದ್ದು ಕೇಳಿಸಿದ್ದರೆ, ಲೆಬನಾನ್‌ ಬಂಡುಕೋರರ ದಾಳಿಗೆ ಇಸ್ರೇಲ್‌ನ ನಾಲ್ವರು ಯೋಧರು ಹಾಗೂ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಇಬ್ಬರು ಯೋಧರು ಸಾವಿಗೀಡಾಗಿದ್ದಾರೆ.

ಹೋರ್ಮುಜ್‌ನಲ್ಲಿ ಹಡಗಿಗೆ ಸುಂಕ, ಅಮೆರಿಕ, ಇಸ್ರೇಲ್‌ ಶಿಪ್‌ಗೆ ನಿಷೇಧ

ಹೋರ್ಮುಜ್‌ ಜಲಸಂಧಿ ಹಾಯ್ದು ಹೋಗುವ ಹಡಗುಗಳಿಗೆ ಸುಂಕ ವಿಧಿಸುವ ಹೊಸ ನಿರ್ವಹಣಾ ಯೋಜನೆಯೊಂದನ್ನು ಇರಾನ್‌ ಸಂಸತ್‌ ಮಂಗಳವಾರ ಅನುಮೋದಿಸಿದೆ. ಇದರನ್ವಯ ಇಲ್ಲಿ ಸಂಚರಿಸುವ ಹಡಗುಗಳು ರಿಯಾಲ್‌ ಮೂಲಕ ಇರಾನ್‌ಗೆ ಸುಂಕ ಪಾವತಿಸಬೇಕು. ಈ ಹಣವನ್ನು ಹೋರ್ಮಜ್‌ ಕರಾವಳಿ ರಕ್ಷಣೆ, ಹಡಗುಗಳ ಭದ್ರತೆ, ಹೋರ್ಮಜ್ ನಿರ್ವಹಣೆಗೆ ಬಳಸಲಾಗುವುದು ಎಂದು ಇರಾನ್‌ ಹೇಳಿದೆ. ಆದರೆ ಈ ಹೊಸ ಯೋಜನೆಯು ಅಮೆರಿಕ, ಇಸ್ರೇಲ್‌ ಮತ್ತು ಇರಾನ್‌ ಮೇಲೆ ಏಕಪಕ್ಷೀಯ ನಿರ್ಬಂಧ ಹೇರುವ ದೇಶಗಳ ಹಡಗುಗಳಿಗೆ ಹೋರ್ಮಜ್‌ನಲ್ಲಿ ಸಂಪೂರ್ಣ ನಿಷೇಧ ಹೇರಿದೆ. ಜೊತೆಗೆ ಜಲಸಂಧಿ ಮೇಲೆ ತನ್ನ ಸಾರ್ವಭೌಮತ್ವವನ್ನು ಪುನರುಚ್ಚರಿಸಿದೆ.

Scroll to load tweet…



Source link

Leave a Reply

Your email address will not be published. Required fields are marked *