
Middle East war impact ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ಬೆಂಗಳೂರಿನಲ್ಲಿ ಅಡುಗೆ ಎಣ್ಣೆ ದರದಲ್ಲಿ ಗಣನೀಯ ಏರಿಕೆಯಾಗಿದೆ. ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಲೀಟರ್‌ಗೆ ₹7 ರಿಂದ ₹11 ರಷ್ಟು ಹೆಚ್ಚಳವಾಗಿದ್ದು, ಚಿಲ್ಲರೆ ವ್ಯಾಪಾರಿಗಳಿಗೆ ಬೇಡಿಕೆಯಷ್ಟು ಎಣ್ಣೆ ಪೂರೈಕೆಯಾಗುತ್ತಿಲ್ಲ.
ಬೆಂಗಳೂರು (ಮಾ.13): ಮಧ್ಯಪ್ರಾಚ್ಯ ಯುದ್ಧದಿಂದಾಗಿ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿರುವ ಬೆನ್ನಲ್ಲೇ ಜನತೆ ಅಡುಗೆ ಎಣ್ಣೆ ಬೆಲೆ ಹೆಚ್ಚಳದ ಶಾಕ್ ಅನುಭವಿಸುವಂತಾಗಿದೆ.
ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ಯುದ್ಧಕ್ಕೆ ಮುಂದಾದ ಬೆನ್ನಲ್ಲೇ ಅಡುಗೆ ಎಣ್ಣೆ ದರವೂ ನಿಧಾನವಾಗಿ ಹೆಚ್ಚಳವಾಗುತ್ತಿದೆ. ಮಾರ್ಚ್ ಮೊದಲ ವಾರದ ದರಕ್ಕೂ ಗುರುವಾರದ ದರಕ್ಕೂ ಹೋಲಿಸಿದರೆ ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಬ್ರ್ಯಾಂಡ್ ಆಧಾರದಲ್ಲಿ ಲೀಟರ್‌ಗೆ 7 ರಿಂದ 11 ರುಪಾಯಿಯವರೆಗೂ ಹೆಚ್ಚಳವಾಗಿದೆ.
ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಯಶವಂತಪುರದ ಭಾಗ್ಯಲಕ್ಷ್ಮೀ ಟ್ರೇಡಿಂಗ್ ಕಾರ್ಪೊರೇಷನ್‌ನ ಶಿವಶಂಕರ್, ‘ಒಂದು ಲೀಟರ್ ಸನ್‌ಫ್ಲವರ್ ಆಯಿಲ್‌ಗೆ ಮಾರ್ಚ್ ಮೊದಲ ವಾರದಲ್ಲಿ ₹165 ಇತ್ತು. ಮಾ.4ರಂದು ₹167 ಇದ್ದದ್ದು ಮಾ.12 ರಂದು ₹172ಕ್ಕೆ ಏರಿಕೆಯಾಗಿದೆ. ಮಧ್ಯಪ್ರಾಚ್ಯ ಯುದ್ಧದ ಪರಿಣಾಮದಿಂದ ಬೆಲೆಯಲ್ಲಿ ಗಣನೀಯ ಹೆಚ್ಚಳವಾಗಿದೆ’ ಎಂದು ಸ್ಪಷ್ಟಪಡಿಸಿದರು.
ಯಶವಂತಪುರದ ಪದ್ಮಶ್ರೀ ಟ್ರೇಡರ್ಸ್‌ನ ನಿಖಿಲ್ ಮಾತನಾಡಿ, ‘ಕಳೆದ 10 ದಿನದಲ್ಲಿ ಅಡುಗೆ ಎಣ್ಣೆ ಬೆಲೆ ಹೆಚ್ಚಳವಾಗುತ್ತಲೇ ಇದೆ. ಇದಕ್ಕೆ ಮಧ್ಯಪ್ರಾಚ್ಯ ಯುದ್ಧವು ಪ್ರಮುಖ ಕಾರಣವಾಗಿದೆ. ಮಾರ್ಚ್ ಮೊದಲ ವಾರದಲ್ಲಿ ಒಂದು ಲೀಟರ್ ಗೋಲ್ಡ್ ವಿನ್ನರ್ ಹೋಲ್‌ಸೇಲ್ ದರ ₹159 ಇದ್ದದ್ದು ಗುರುವಾರ ₹166 ಆಗಿದೆ’ ಎಂದು ವಿವರಿಸಿದರು.
ಆನ್‌ಲೈನ್ ಆ್ಯಪ್‌ನಲ್ಲಿ ದುಬಾರಿ:
‘ಅದೇ ರೀತಿ ಸನ್‌ಫ್ಲವರ್ ಆಯಿಲ್ ಲೀಟರ್‌ಗೆ ₹160 ನಿಂದ ₹171ಕ್ಕೆ, ಫ್ರೀಡಂ ಆಯಿಲ್ ₹158 ರಿಂದ ₹166ಕ್ಕೆ ಬಂದು ಮುಟ್ಟಿದೆ ಎಂದು ತಿಳಿಸಿದರು. ಮತ್ತೊಂದೆಡೆ, ಹೋಲ್‌ಸೇಲ್ ದರದಲ್ಲಿ ಇಷ್ಟೊಂದು ವ್ಯತ್ಯಾಸವಾಗಿದ್ದರೂ ಆನ್‌ಲೈನ್ ಶಾಪಿಂಗ್ ಆ್ಯಪ್‌ಗಳಲ್ಲಿ ಮಾತ್ರ ಲೀಟರ್‌ಗೆ ₹2 ರಿಂದ ₹4 ಅಧಿಕವಾಗಿದೆ.
ಆದರೆ, ಚಿಲ್ಲರೆ ಮಾರಾಟಗಾರರು ಹೇಳುವುದೇ ಬೇರೆ. ‘ನಮಗೆ ಬೇಡಿಕೆಯಷ್ಟು ಅಡುಗೆ ಎಣ್ಣೆಯನ್ನು ಹೋಲ್‌ಸೇಲ್ ಮಾರಾಟಗಾರರು ಪೂರೈಸುತ್ತಿಲ್ಲ. ಒಂದು ವಾರದಿಂದ ಸರಿಯಾಗಿ ಅಡುಗೆ ಎಣ್ಣೆ ಸರಬರಾಜಾಗುತ್ತಿಲ್ಲ. 100 ರಿಂದ 200 ಬಾಕ್ಸ್ ಬುಕ್ ಮಾಡಿದರೆ 20 ರಿಂದ 50 ಬಾಕ್ಸ್ ಕಳಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.