
KN Rajanna ರಾಜ್ಯ ಸರ್ಕಾರದ ಜಾತಿ ಗಣತಿಯಲ್ಲಿ ಜಾತಿಗಳ ಮುಂದೆ ಕ್ರಿಶ್ಚಿಯನ್ ಎಂದು ನಮೂದಿಸಿರುವುದು ಮತಾಂತರಕ್ಕೆ ಪ್ರೋತ್ಸಾಹ ನೀಡಿದಂತೆ ಎಂದು ಕಾಂಗ್ರೆಸ್ ಶಾಸಕ ಕೆ.ಎನ್. ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತುಮಕೂರ (ಸೆ.23): ರಾಜ್ಯ ಸರ್ಕಾರ ನಡೆಸುತ್ತಿರುವ ಗಣತಿಯಲ್ಲಿ ವಿವಿಧ ಜಾತಿಗಳ ಮುಂದೆ ಕ್ರಿಶ್ಚಿಯನ್ ಅಂತ ಬರೆದಿರುವು ಸರ್ಕಾರವೇ ಮತಾಂತರಕ್ಕೆ ಪ್ರೋತ್ಸಾಹ ನೀಡಿದಂತೆ ಎಂದು ಕಾಂಗ್ರೆಸ್ ಶಾಸಕ ಕೆ.ಎನ್. ರಾಜಣ್ಣ ಅವರು ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಾತಿ ಮುಂದೆ ಕ್ರಿಶ್ಚಿಯನ್ ಅಂತ ಬರೆಯುವುದನ್ನು ನಾನೂ ವಿರೋಧ ಮಾಡಿದ್ದೇನೆ. ಅದನ್ನು ಈಗ ಡಿಲೀಟ್ ಮಾಡಿದ್ದಾರೆ. ಸರ್ಕಾರ ಈ ರೀತಿ ಬರೆದು ಸಮೀಕ್ಷೆ ಮಾಡೋದ್ರಿಂದ ಮತಾಂತರಕ್ಕೆ ಪ್ರೋತ್ಸಾಹ ಮಾಡಿದಂತೆ ಎಂದರು. ಅಲ್ಲದೇ, ಬೇರೆ ಧರ್ಮಕ್ಕೆ ಮತಾಂತರಗೊಂಡವರು ಮೂಲ ಜಾತಿಯ ಮೀಸಲಾತಿ, ಸವಲತ್ತು ಪಡೆಯುತ್ತಾರೆ. ಇದಕ್ಕೂ ಸರ್ಕಾರ ಅವಕಾಶ ಕೊಡಬಾರದು. ನಾನು ನಾಯಕ ಜಾತಿಯವನು ಕ್ರಿಶ್ಚಿಯನ್ಗೆ ಮತಾಂತರಗೊಂಡರೆ ನಾಯಕ ಜಾತಿಯ ಸವಲತ್ತು ತೆಗೆದುಕೊಳ್ಳಬಾರದು. ರಾಜ್ಯ ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ನಾವು ರಾಜಕಾರಣಿಗಳು ಸ್ವಾರ್ಥಕ್ಕೆ ಜಾತಿ ಬಳಸುತ್ತೇವೆ:
ನಾವು ರಾಜಕಾರಣಿಗಳು ಸ್ವಾರ್ಥಕ್ಕೆ ಜಾತಿ ಹೆಸರೇಳಿಕೊಂಡು ರಾಜಕೀಯದಲ್ಲಿ ಬದುಕುತ್ತೇವೆ. ನೀವು ಜಾತಿ ಸಮೀಕ್ಷೆ ಬಗ್ಗೆ ಬರಿತೀರಿ ಮುಂದಿನದು ಬಿಟ್ಟು ಬಿಡುತ್ತೀರಿ. ಜಾತಿ ವ್ಯವಸ್ಥೆ ಹೋಗಬೇಕೆಂದರೆ ಚುನಾವಣೆ ರದ್ದು ಮಾಡುವುದಕ್ಕೆ ಹೇಳಿ. ಇಲ್ಲದಿದ್ದರೆ ಇನ್ನೂ ಜಾತಿ ವ್ಯವಸ್ಥೆ ಗಟ್ಟಿಯಾಗುತ್ತಾ ಹೋಗುತ್ತದೆ ಎಂದರು.