
ಸಿಎಂ ಸಿದ್ದರಾಮಯ್ಯ ಹಾಗೂ ದೆಹಲಿ ಹೈಕಮಾಂಡ್ ಬಳಿ ತೀವ್ರ ಲಾಬಿ ಮಾಡುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇನ್ನೆಷ್ಟು ದಿನ ಇರುತ್ತದೋ ಗೊತ್ತಿಲ್ಲ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ದಾವಣಗೆರೆ (ಏ.15): ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆ ನಂತರ ಸಿಎಂ ಕುರ್ಚಿಗಾಗೂ ಹಾಗೂ ಮಂತ್ರಿ ಸ್ಥಾನಕ್ಕಾಗಿ 38 ಶಾಸಕರು ಸಿಎಂ ಸಿದ್ದರಾಮಯ್ಯ ಹಾಗೂ ದೆಹಲಿ ಹೈಕಮಾಂಡ್ ಬಳಿ ತೀವ್ರ ಲಾಬಿ ಮಾಡುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇನ್ನೆಷ್ಟು ದಿನ ಇರುತ್ತದೋ ಗೊತ್ತಿಲ್ಲ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂತ್ರಿ ಸ್ಥಾನಕ್ಕೆ 38 ಶಾಸಕರು ತಮ್ಮದೇ ಪ್ರಯತ್ನ ನಡೆಸಿದ್ದಾರೆ.
3-4 ಸಲ ಶಾಸಕರಾದವರು ದೆಹಲಿಗೆ ಪ್ರಯಾಣ ಮಾಡಿದ್ದು, ಮೊದಲ ಸಲ ಶಾಸಕರಾದವರೂ ಮಂತ್ರಿ ಸ್ಥಾನಕ್ಕೆ ಲಾಬಿ ಮಾಡುತ್ತಿದ್ದಾರೆ. ಹಿರಿಯ ಶಾಸಕರಿಗೆ ಪಕ್ಷಕ್ಕೆ ಮುಜುಗರ ತಂದರೆ ಕ್ರಮದ ಎಚ್ಚರಿಕೆ ನೀಡದ ಡಿಸಿಎಂ ಡಿ.ಕೆ.ಶಿವಕುಮಾರ ಮೊದಲ ಸಲ ಶಾಸಕರಾದವರ ಬಗ್ಗೆ ಮೆದುಧೋರಣೆ ತೋರುತ್ತಾರೆ ಎಂದರು. ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಸತ್ತೇ ಹೋಗಿದೆ. ಸಿಎಂ ಕುರ್ಚಿಗಾಗಿ ಆಂತರಿಕ ಕಚ್ಚಾಟ ನಿರಂತರ ಇದೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ನಿಷ್ಕ್ರಿಯ ಸಚಿವರಿಗೆ ಕೈಬಿಡಿ, ಹೊಸ ಮುಖಗಳಿಗೆ ಅವಕಾಶ ನೀಡಿ, 2-3 ಸಲ ಶಾಸಕರಾದವರಿಗೆ ಸಚಿವ ಸ್ಥಾನ ಕೊಡಬೇಕೆಂಬು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹೈಕಮಾಂಡ್ ಮೇಲೆ ಶಾಸಕರು ಒತ್ತಡ ಹೇರುತ್ತಿದ್ದಾರೆ.
ಇದೆಲ್ಲ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಇನ್ನು ಹೆಚ್ಚು ದಿನಗಳಿಲ್ಲವೆಂಬ ಸಂದೇಶ ನೀಡುತ್ತಿವೆ ಎಂದು ಅವರು ತಿಳಿಸಿದರು. ಬೇಸಿಗೆಯಿಂದ ಜನರು ರೋಸಿಹೋಗಿದ್ದು, ಕುಡಿಯುವ ನೀರಿಗೆ ಹಾಹಾಕಾರ ಏಳುತ್ತಿದೆ. ಕುರ್ಚಿ ಕಿತ್ತಾಟ ಕೈಬಿಟ್ಟು, ಜನರಿಗೆ ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲು, ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕಾದ ಸರ್ಕಾರ ನಿಷ್ಕ್ರಿಯವಾಗಿದೆ. ಉಪ ಚುನಾವಣೆಯ ನಂತರ ಕಾಂಗ್ರೆಸ್ಸಿನ ಭಿನ್ನಮತ ಸ್ಫೋಟಗೊಂಡಿದೆ. ಹಿಂದೆ ಸಚಿವ ಕೆ.ಎನ್. ರಾಜಣ್ಣಗೆ ವಿವರಣೆ ಸಹ ಕೇಳದೇ, ಸಂಪುಟದಿಂದ ಕಾಂಗ್ರೆಸ್ಸಿನ ನಾಯಕರು ಕಿತ್ತು ಹಾಕಿದ್ದರು. ಈಗ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನದಿಂದ ಕೆ.ಅಬ್ದುಲ್ ಜಬ್ಬಾರ್ ಅವರನ್ನು ರಾಜೀನಾಮೆ ಕೊಡುವಂತೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮ್ಮದ್‌ಗೂ ಆ ಸ್ಥಾನದಿಂದ ಕಿತ್ತು ಹಾಕಿದ್ದಾರೆ. ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್‌ಗೆ ಭೇಟಿ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರೂ ಜಮೀರ್ ಭೇಟಿ ಮಾಡಿಲ್ಲ. ಮಂಗಳವಾರ ರಾತ್ರಿ ವೇಳೆಗೆ ಸಂಪುಟದಿಂದ ಜಮೀರ್‌ಗೂ ಕಿತ್ತು ಹಾಕುತ್ತಾರೆ. ಕಾಂಗ್ರೆಸ್ ಸರ್ಕಾರ ದಿಕ್ಕು ದೆಸೆ ಇಲ್ಲದಂತಾಗಿದೆ. ಸ್ವಾರ್ಥ, ಸಿಎಂ ಕುರ್ಚಿಗಾಗಿ ಕದನ, ಮಂತ್ರಿ ಸ್ಥಾನಕ್ಕೆ ಲಾಬಿ ಇಂತಹದ್ದರಲ್ಲಿ ಮಗ್ನವಾದ ಕಾಂಗ್ರೆಸ್ ಸರ್ಕಾರ ಬಹುಮತ ಕೊಟ್ಟ ಜನರ ಋಣ ತೀರಿಸುವ ಕೆಲಸ ಸಿಎಂ, ಡಿಸಿಎಂ, ಸಚಿವರು ಯಾರೂ ಸಹ ಮಾಡುತ್ತಿಲ್ಲ ಎಂದು ಅವರು ದೂರಿದರು.
ಖಜಾನೆ ಖಾಲಿ
ಉಪ ಚುನಾವಣೆ ವೇಳೆ ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಚುನಾವಣೆ ಮಾಡಲಿಲ್ಲ. ರಾಜ್ಯದ ಜನರ ಮೇಲೆ ಆರ್ಥಿಕ ಹೊರೆ ಹೊರಿಸುವ ಗ್ಯಾರಂಟಿ ಹೆಸರಲ್ಲಿ ಚುನಾವಣೆ ಮಾಡಿದ್ದಾರೆ. ಗ್ಯಾರಂಟಿಗಾಗಿ ₹56 ಸಾವಿರ ಕೋಟಿ ಹೊಂದಿಸುವುದಕ್ಕೂ ಈ ಸರ್ಕಾರಕ್ಕೆ ಆಗುತ್ತಿಲ್ಲ. ರಾಜ್ಯದ ಜನರ ಮೇಲೆ ಕಾಂಗ್ರೆಸ್ ಸರ್ಕಾರ ಎಷ್ಟು ಲಕ್ಷ ಕೋಟಿ ರು. ಸಾಲ ಹೊರಿಸಿದೆದೆ ಎಂಬುದೂ ಜನರಿಗೆ ಗೊತ್ತಿದೆ. ಕಾಂಗ್ರೆಸ್ಸಿನ ಅಧಿಕಾರಸ್ಥರ ಮನೆ ಖಜಾನೆ, ತಿಜೋರಿ ತುಂಬಿದ್ದರೆ, ರಾಜ್ಯದ ಖಜಾನೆ ಖಾಲಿಯಾಗಿದೆ. ಶೇ.60 ಕಮೀಷನ್‌ನ ಈ ಸರ್ಕಾರದಿಂದಲೇ ಜನ ರೋಸಿ ಹೋಗಿದ್ದಾರೆ ಎಂದು ಹೇಳಿದರು.
ಅಭಿವೃದ್ಧಿ ವಿಚಾರದಲ್ಲಿ ದೇಶವನ್ನು 20 ವರ್ಷ ಮುಂದಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಯ್ದಿದೆ. ಸಿದ್ದರಾಮಯ್ಯನವರು ತಮ್ಮ ಸರ್ಕಾರ ಕೇಂದ್ರಕ್ಕಿಂತಲೂ ಆರ್ಥಿಕವಾಗಿ ಸದೃಢವೆಂದು ಹೇಳಿಕೊಳ್ಳುವುದು ಸರಿಯಲ್ಲ. ಕೇಂದ್ರಕ್ಕೆ ನಿಮ್ಮ ಸರ್ಕಾರ ಯಾವುದರಲ್ಲೂ ಸರಿಸಾಟಿಯಲ್ಲ. ವಿಧಾನಸೌಧದಲ್ಲಿ ರಾಜ್ಯದ ಜನರ, ಜನರ ಸಮಸ್ಯೆ ಬಗ್ಗೆ ಚರ್ಚೆಯನ್ನೇ ಮಾಡುತ್ತಿಲ್ಲ. ಸಚಿವ ಪ್ರಿಯಾಂಕ ಖರ್ಗೆಗೆ ಪ್ರಧಾನಿ ನರೇಂದ್ರ ಮೋದಿ, ಆರೆಸ್ಸೆಸ್, ಬಿಜೆಪಿಯನ್ನು ಟೀಕಿಸುವುದನ್ನು ಬಿಟ್ಟರೇ, ತನ್ನದೇ ಇಲಾಖೆ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಇಲಾಖೆ ಮಹತ್ವ ಸಹ ಪ್ರಿಯಾಂಕ್‌ಗೆ ಅರಿವಿಲ್ಲ ಎಂದು ಎಂ.ಪಿ. ರೇಣುಕಾಚಾರ್ಯ ಟೀಕಿಸಿದರು.