
ಡಿಸಿಎಂ ಡಿಕೆ ಶಿವಕುಮಾರ್ ಆಪ್ತ ಕಾರ್ಯದರ್ಶಿ ಕಾರು ಅಪಘಾತ, ಬೈಕ್ ಸವಾರ ಗಂಭೀರ, ಸವದತ್ತಿಯ ರೇಣುಕಾ ಯಲ್ಲಮ್ಮನ ದರ್ಶನ ಪಡೆದು ಮರಳುವಾಗ ಘಟನೆ ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಲಾಗಿದೆ.
ಬೆಳಗಾವಿ (ಡಿ.18) ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಕಾರು ಅಪಘಾತಕ್ಕೀಡಾಗಿದೆ. ಬೆಳಗಾವಿಯ ಸವದತ್ತಿ ಪಟ್ಟಣದ ಹೊರವಲಯದಲ್ಲಿ ಈ ಅಪಘಾತ ನಡೆದಿದೆ. ರಾಜೇಂದ್ರ ಪ್ರಸಾದ್ ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಇತ್ತ ರಾಜೇಂದ್ರ ಪ್ರಸಾದ್ ಹಾಗೂ ಕಾರು ಚಾಲನಿಗೂ ಗಾಯವಾಗಿದೆ. ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯಲ್ಲಮ್ಮನ ದರ್ಶನ ಪಡೆದು ಮರಳುವಾಗ ಅಪಘಾತ
ಬೆಳಗಾವಿ ಅಧಿವೇಶನದ ಕಾರಣದಿಂದ ಸಚಿವರು, ಕಾರ್ಯದರ್ಶಿಗಳು, ಅಧಿಕಾರಿಗಳು ಸೇರಿದಂತೆ ಪ್ರಮುಖರು ಬೆಳಗಾವಿಯಲ್ಲಿ ಬೀಡು ಬಿಟ್ಟಿದ್ದಾರೆ. ಇತ್ತ ಕೆಲಸ ಕಾರ್ಯಗಳ ಮುಗಿಸಿದ ರಾಜೇಂದ್ರ ಪ್ರಸಾದ್ ಸವದತ್ತಿಯ ರೇಣುಕಾ ಯಲ್ಲಮ್ಮನ ದರ್ಶನಕ್ಕೆ ತೆರಳಿದ್ದಾರೆ. ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದ ರಾಜೇಂದ್ರ ಪ್ರಸಾದ್ ವಿಶೇಷ ಪೂಜೆ ಸಲ್ಲಿಸಿದ್ದರು. ಬಳಿಕ ಕಾರಿನ ಮೂಲಕ ಮರಳಿದ್ದಾರೆ. ಸವದತ್ತಿ ಪಟ್ಟಣದ ಹೊರವಲಯದಲ್ಲಿ ಕಾರು ಹಾಗೂ ಬೈಕ್ ಡಿಕ್ಕಿಯಾಗಿದೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅಪಘಾತದಲ್ಲಿ ಬೈಕ್ ನಜ್ಜುಗುಜ್ಜು, ಕಾರು ಪಲ್ಟಿ
ಭೀಕರ ಅಪಘಾತದಲ್ಲಿ ಬೈಕ್ ಸಂಪೂರ್ಣ ನಜ್ಜು ಗುಜ್ಜಾಗಿದೆ. ಇತ್ತ ಕಾರು ಪಲ್ಟಿಯಾಗಿದೆ. ವೇಗದ ಕಾರಣದಿಂದ ಅಪಘಾತದ ತೀವ್ರತೆ ಹೆಚ್ಚಾಗಿದೆ. ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಇತ್ತ ಡಿಸಿಎಂ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್, ಕಾರು ಚಾಲಕನಿಗೂ ಗಾಯವಾಗಿದೆ.