
ಕೇವಲ ಓಟಿನ ಆಸೆಗಾಗಿ ಬಿಜೆಪಿಯನ್ನು ದಲಿತ ವಿರೋಧಿ ಪಕ್ಷ ಎಂದು ಬಿಂಬಿಸುತ್ತಿರುವ ಕಾಂಗ್ರೆಸ್‌ಗೆ ಈ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ನರಸಿಂಹನಾಯಕ (ರಾಜುಗೌಡ) ತೀವ್ರ ವಾಗ್ದಾಳಿ ನಡೆಸಿದರು.
ಕೆಂಭಾವಿ (ಮಾ.09): ಭಾರತೀಯ ಜನತಾ ಪಕ್ಷ ಶಿಸ್ತಿನ, ತತ್ವ ಸಿದ್ಧಾಂತದ, ಸಂವಿಧಾನ ಬದ್ಧವಾದ ಪಕ್ಷ. ಡಾ. ಬಿ. ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಎತ್ತಿ ಹಿಡಿಯುವ ಕೆಲಸ ಬಿಜೆಪಿ ಪಕ್ಷ ಮಾಡುತ್ತಿದೆ. ಕೇವಲ ಓಟಿನ ಆಸೆಗಾಗಿ ಬಿಜೆಪಿಯನ್ನು ದಲಿತ ವಿರೋಧಿ ಪಕ್ಷ ಎಂದು ಬಿಂಬಿಸುತ್ತಿರುವ ಕಾಂಗ್ರೆಸ್‌ಗೆ ಈ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ನರಸಿಂಹನಾಯಕ (ರಾಜುಗೌಡ) ತೀವ್ರ ವಾಗ್ದಾಳಿ ನಡೆಸಿದರು.
ನಗನೂರ ಗ್ರಾಮದ ಬಿಜೆಪಿ ಪಕ್ಷದ ಹಿರಿಯ ಮುಖಂಡ ರಾಜಶೇಖರ ಗೂಗಲ್ ಅವರು ನೂತನವಾಗಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ, ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮೀಸಲಾತಿಯಲ್ಲಿ ಶೇ.7ರಷ್ಟು ಹೆಚ್ಚಿಗೆ ಮಾಡುವ ಮೂಲಕ ಕೇಂದ್ರ ಸರ್ಕಾರ ಸಮಾನತೆಯ ನ್ಯಾಯ ಒದಗಿಸಿದೆ. ಊಟದ ತಟ್ಟೆಯಲ್ಲಿ ಮಣ್ಣು ಹಾಕುವ ಕೆಲಸ ಕಾಂಗ್ರೆಸ್ ಮಾಡುತ್ತಿದ್ದು, ವಿನಾಕಾರಣ ಮೀಸಲಾತಿ ವಿಷಯದಲ್ಲಿ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ಮೊದಲು ತಮ್ಮಲ್ಲಿರುವ ಗೊಂದಲಗಳನ್ನು ನಿವಾರಿಸಿಕೊಳ್ಳಲಿ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ದೇಶ ಕಾಯುವ ಸೈನಿಕರಂತೆ ನಮ್ಮ ಬಿಜೆಪಿ ಪಕ್ಷದ ಕಾರ್ಯಕರ್ತರು ಪಕ್ಷ ಕಟ್ಟುವ ಕೆಲಸ ಮಾಡಬೇಕು. ವಿಜಯೇಂದ್ರ ಅವರ ಅದ್ಯಕ್ಷತೆಯಲ್ಲಿ ನಮ್ಮ ಪಕ್ಷ ರಾಜ್ಯದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದು, ರಾಜ್ಯ ಸರ್ಕಾರವನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತಿದೆ. ಪಕ್ಷ ಮತ್ತಷ್ಟು ಸದೃಢವಾಗಬೇಕಿದ್ದರೆ ಮತ್ತು ಮುಂಬರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಬೇಕಿದ್ದರೆ ಕಾರ್ಯಕರ್ತರು ಹಗಲಿರುಳು ಪಕ್ಷಕ್ಕಾಗಿ ದುಡಿಯಬೇಕು ಎಂದು ಕರೆ ನೀಡಿದರು.
ನೀರೊದಗಿಸುವ ಬಹುದೊಡ್ಡ ಕೆಲಸ
ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಯಾಳಗಿ ಮಾತನಾಡಿ, ಬಿಜೆಪಿ ಪಕ್ಷಕ್ಕೆ ತನ್ನದೆ ಆದ ಮಹತ್ವದ ತತ್ವ ಸಿದ್ಧಾಂತದ ತಳಹದಿ ಇದ್ದು, ಅದರ ಮೇಲೆ ನಾವೆಲ್ಲ ಕಾರ್ಯಕರ್ತರು ಕೆಲಸ ಮಾಡಬೇಕಿದೆ. ಸುರಪುರ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಜ್ವಲಂತ ಸಮಸ್ಯೆಯಾಗಿದ್ದ ಕುಡಿಯುವ ನೀರಿನ ಸಮಸ್ಯೆಯನ್ನು ರಾಜುಗೌಡರು ನಿವಾರಿಸಿ ಅಲ್ಲಿನ ಜನತೆಗೆ ದಿನದ 24 ಗಂಟೆ ನೀರೊದಗಿಸುವ ಬಹುದೊಡ್ಡ ಕೆಲಸ ಮಾಡಿದ್ದಾರೆ ಆದರೆ ಅನುಕಂಪ ಅವರ ಸೋಲಿಗೆ ಮುಖ್ಯಕಾರಣವಾಗಿದ್ದು, ಈ ಬಾರಿ ಅವರನ್ನು ಗೆಲ್ಲಿಸಲು ಎಲ್ಲ ಕಾರ್ಯಕರ್ತರು ಪಣ ತೊಡಬೇಕೆಂದು ಕರೆ ನೀಡಿದರು.
ಸನ್ಮಾನ ಸ್ವೀಕರಿಸಿದ ಮಾತನಾಡಿದ ಬಿಜೆಪಿ ಪಕ್ಷದ ನೂತನ ರಾಜ್ಯ ಕಾರ್ಯಕಾರಿಣಿ ಮಂಡಳಿ ಸದಸ್ಯ ರಾಜಶೇಖರ ಗೂಗಲ್, ಗ್ರಾಮೀಣ ಪ್ರದೇಶದ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ರಾಜ್ಯ ಮಟ್ಟದಲ್ಲಿ ಬಹುದೊಡ್ಡ ಹುದ್ದೆ ನೀಡಿದೆ. ಈ ಕಾರ್ಯಕ್ಕೆ ಮಾಜಿ ಸಚಿವ ರಾಜುಗೌಡರೇ ಮುಖ್ಯ ಕಾರಣರಾಗಿದ್ದು, ಮುಂದಿನ ದಿನಗಳಲ್ಲಿ ಅವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಇನ್ನಷ್ಟೂ ಬಲಪಡಿಸುವ ಕೆಲಸ ಮಾಡುವುದಾಗಿ ಹೇಳಿದರು.
ದಾಸೋಹ ಮಠದ ಶ್ರೀ ಶರಣಪ್ಪ ಶರಣರು ಸಾನ್ನಿಧ್ಯ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಅಧ್ಯಕ್ಷತೆ ವಹಿಸಿದ್ದರು, ಡಾ. ಚಂದ್ರಶೇಖರ ಸುಬೇದಾರ, ಶಿವರಾಜ ದೇಶಮುಖ, ಮಲ್ಲನಗೌಡ ಏವೂರ, ಚಂದ್ರು ಯಾಳಗಿ, ಅಡಿವೆಪ್ಪ ಜಾಕಾ, ದೇವೇಂದ್ರಪ್ಪ ಕೊನೇರ, ಶಂಕರ ನಾಯಕ, ಸಣ್ಣದೇಸಾಯಿ ದೇರಗೋನಾಲ, ಪರಶುರಾಮ ಕುರಕುಂದಿ, ಭೀಮಣ್ಣ ಬೇವಿನಹಳ್ಳಿ, ಶಾಂತಣ್ಣ ಚನ್ನೂರ, ಮಲ್ಲಿಕಾರ್ಜುನ ಶಾಕಾ, ಮಾಣಿಕರೆಡ್ಡಿ ದೇಶಪಾಂಡೆ ಇದ್ದರು. ಮೌನೇಶ ಹಯ್ಯಾಳಕರ್ ನಿರೂಪಣೆ ಮಾಡಿದರು, ಸಂಗಣ್ಣ ವಣಕ್ಯಾಳ ಸ್ವಾಗತಿಸಿ, ಮಲ್ಲಣ್ಣ ದೇಸಾಯಿ ವಂದಿಸಿದರು.