
ಹಿರಿಯ ನಟ ಧರ್ಮೇಂದ್ರ 89 ನೇ ವಯಸ್ಸಿನಲ್ಲಿ ನಿಧನರಾದರು. ಉಸಿರಾಟದ ಸಮಸ್ಯೆಯಿಂದಾಗಿ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮುಂಬೈ (ನ.11): ಬಾಲಿವುಡ್‌ನ ಹೀಮ್ಯಾನ್ ಎಂದೇ ಪ್ರಸಿದ್ಧರಾಗಿದ್ದ ಹಿರಿಯ ನಟ ಧರ್ಮೇಂದ್ರ ತಮ್ಮ 89ನೇ ವಯಸ್ಸಿನಲ್ಲಿ ಮಂಗಳವಾರ ನಿಧನರಾದರು. ಉಸಿರಾಟದ ಸಮಸ್ಯೆಯಿಂದಾಗಿ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಕೆಲವು ದಿನಗಳ ಹಿಂದೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮಂಗಳವಾರ ಅಸುನೀಗಿದ್ದಾರೆ. ಸೋಮವಾರ ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಕಾರಣಕ್ಕೆ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಆಗಲೇ ಅವರ ನಿಧನದ ಸುದ್ದಿಗಳು ಹಬ್ಬಿದ್ದವು. ಆದರೆ, ಧರ್ಮೇಂದ್ರ ಅವರ ಪುತ್ರ ಸನ್ನಿ ಡಿಯೋಲ್ ಅವರ ಸೋಶಿಯಲ್ ಮೀಡಿಯಾ ಟೀಮ್ ಈ ಸುದ್ದಿಯನ್ನು ತಳ್ಳಿಹಾಕಿದ್ದವು.
ಆಸ್ಪತ್ರೆಗೆ ದಾಖಲಾದ ದಿನದಿಂದ 72 ಗಂಟೆಗಳಲ್ಲಿ ಅವರ ಸ್ಥಿತಿ ಗಂಭೀರವಾಗಿತ್ತು. ಧರ್ಮೇಂದ್ರ ಅವರ ಹೆಣ್ಣುಮಕ್ಕಳನ್ನು ಈಗಾಗಲೇ ವಿದೇಶದಿಂದ ಮುಂಬೈಗೆ ಕರೆಸಲಾಗಿದೆ. ನಿನ್ನೆ ರಾತ್ರಿ ಆಸ್ಪತ್ರೆಯ ಹೊರಗೆ ಸನ್ನಿ ಡಿಯೋಲ್ ತುಂಬಾ ಭಾವುಕರಾಗಿದ್ದರು, ಇನ್ನೊಂದೆಡೆ ಬಾಬಿ ಡಿಯೋಲ್ ಕೂಡ ಆಲ್ಫಾ ಚಿತ್ರದ ಚಿತ್ರೀಕರಣ ಮುಗಿಸಿ ಮುಂಬೈಗೆ ಮರಳಿದ್ದಾರೆ. ಶಾರುಖ್ ಮತ್ತು ಸಲ್ಮಾನ್ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸೋಮವಾರ ತಡರಾತ್ರಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಭೇಟಿ ನೀಡಿದ್ದರು.