
ಮಹಾರಾಷ್ಟ್ರ ಸಚಿವ ನರಹರಿ ಜಿರ್ವಾಲ್ ಅವರ ಅಧಿಕೃತ ಬಂಗಲೆಯಲ್ಲಿ ತೃತೀಯಲಿಂಗಿಯೊಂದಿಗೆ ಇರುವ ವಿಡಿಯೋ ವೈರಲ್ ಆಗಿ ವಿವಾದ ಸೃಷ್ಟಿಸಿದೆ. ಈ ಘಟನೆಯಿಂದಾಗಿ ಪ್ರತಿಪಕ್ಷಗಳು ಅವರ ರಾಜೀನಾಮೆಗೆ ಒತ್ತಾಯಿಸುತ್ತಿದೆ.
ಮುಂಬೈ (ಮಾ.26): ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಮತ್ತು ಎನ್‌ಸಿಪಿ ನಾಯಕ ನರಹರಿ ಜಿರ್ವಾಲ್ ಅವರು ದೊಡ್ಡ ವಿವಾದಕ್ಕೆ ಸಿಲುಕಿದ್ದಾರೆ. ಸಚಿವರ ಅಧಿಕೃತ ಬಂಗಲೆಯಲ್ಲಿ ತೃತೀಯಲಿಂಗಿಯೊಬ್ಬರ ಜೊತೆಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ (MVA) ಅವರ ತಕ್ಷಣದ ರಾಜೀನಾಮೆಗೆ ಆಗ್ರಹಿಸಿದೆ.
ಜಿರ್ವಾಲ್ ಅವರಿಗೆ ಇದು ಎರಡು ತಿಂಗಳಲ್ಲಿ ಎದುರಾಗಿರುವ ಎರಡನೇ ದೊಡ್ಡ ಹಿನ್ನಡೆ. ಇತ್ತೀಚೆಗಷ್ಟೇ ಮಂತ್ರಾಲಯದಲ್ಲಿ (ರಾಜ್ಯ ಸಚಿವಾಲಯ) 35,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಎಫ್‌ಡಿಎ (FDA) ಗುಮಾಸ್ತನೊಬ್ಬ ಭ್ರಷ್ಟಾಚಾರ ನಿರೋಧಕ ದಳಕ್ಕೆ (ACB) ಸಿಕ್ಕಿಬಿದ್ದಿದ್ದ. ಪ್ರಸ್ತುತ ವಿಡಿಯೋ ವಿವಾದದ ಜಿರ್ವಾಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಅವರು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ಅಧ್ಯಕ್ಷೆ ಸುನೇತ್ರಾ ಪವಾರ್ ಅವರಿಗೆ ಈ ಬಗ್ಗೆ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.
ರಾಜಕೀಯ ಹಿನ್ನೆಲೆ ಮತ್ತು ಹಳೇ ದ್ವೇಷದ ಶಂಕೆ
66 ವರ್ಷದ ಜಿರ್ವಾಲ್ ನಾಸಿಕ್ ಜಿಲ್ಲೆಯ ದಿಂಡೋರಿಯಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದವರು ಮತ್ತು ವಿಧಾನಸಭೆಯ ಮಾಜಿ ಉಪಸಭಾಪತಿಯೂ ಆಗಿದ್ದರು. ಅವರು ದಿವಂಗತ ಅಜಿತ್ ಪವಾರ್ ಅವರ ಆಪ್ತರಾಗಿದ್ದರು. ಅಜಿತ್ ಪವಾರ್ ಅವರ ನಿಧನದ ನಂತರ ಸುನೇತ್ರಾ ಪವಾರ್ ಅವರನ್ನು ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ಅಧ್ಯಕ್ಷರನ್ನಾಗಿ ಮಾಡಲು ಮೊದಲು ಧ್ವನಿ ಎತ್ತಿದವರೇ ಈ ಬುಡಕಟ್ಟು ನಾಯಕ ಜಿರ್ವಾಲ್. ಅಜಿತ್ ಪವಾರ್ ಅವರ ಅಕಾಲಿಕ ನಿಧನದ ನಂತರ ಎನ್‌ಸಿಪಿ ಒಳಗಿನ ಆಂತರಿಕ ಕಲಹವೇ ಈ ವಿಡಿಯೋ ಸೋರಿಕೆಗೆ ಕಾರಣವಿರಬಹುದು ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ವಿಡಿಯೋದ ಅಧಿಕೃತತೆ ಇನ್ನೂ ದೃಢಪಟ್ಟಿಲ್ಲ.
ವಿಡಿಯೋದಲ್ಲಿರುವ ಟ್ರಾನ್ಸ್‌ಜೆಂಡರ್ ಯಾರು?
ವಿಡಿಯೋದಲ್ಲಿದ್ದ ತೃತೀಯಲಿಂಗಿಯನ್ನು ಪವನ್ ಯಾದವ್ ಎಂದು ಗುರುತಿಸಲಾಗಿದೆ. ಆತನ ಸಹೋದರ ಮತ್ತು ವಕೀಲ ರವಿ ಯಾದವ್ ಪ್ರಕಾರ, ಪವನ್ ಜನರನ್ನು ಮರುಳಾಗಿಸಿ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡುವ ಮತ್ತು ಹಣ ವಸೂಲಿ ಮಾಡುವ ಇತಿಹಾಸ ಹೊಂದಿದ್ದಾನೆ ಎನ್ನಲಾಗಿದೆ.
Scroll to load tweet…
ವಿಪಕ್ಷಗಳ ಆಕ್ರೋಶ, ರಾಜೀನಾಮೆಗೆ ಒತ್ತಡ
ಸಂಜಯ್ ರಾವುತ್ (ಶಿವಸೇನಾ UBT) “ಜಿರ್ವಾಲ್ ಯಾರೆಂದು ಎಲ್ಲರಿಗೂ ತಿಳಿದಿದೆ. ಇದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ, ಇದು ನಾಚಿಕೆಗೇಡಿನ ಸಂಗತಿ” ಎಂದು ಕಿಡಿಕಾರಿದ್ದಾರೆ. ಶಿವಸೇನಾ UBT ನಾಯಕಿ ಪ್ರಿಯಾಂಕಾ ಚತುರ್ವೇದಿ “ಅಶೋಕ್ ಖರಾತ್ ಹಗರಣದ ಬೆನ್ನಲ್ಲೇ ಎನ್‌ಸಿಪಿಯ ಮತ್ತೊಬ್ಬ ಹಿರಿಯ ಸಚಿವರ ಹಗರಣ ಹೊರಬರುತ್ತಿದೆ. ಮಹಾರಾಷ್ಟ್ರ ಒಮ್ಮೆ ಬೌದ್ಧಿಕ ನಾಯಕತ್ವಕ್ಕೆ ಹೆಸರಾಗಿತ್ತು, ಆದರೆ ಈಗ ಮಹಾಯುತಿ ಸರ್ಕಾರದಲ್ಲಿ ಅಶ್ಲೀಲತೆ ಮತ್ತು ವಿಕೃತಿಗಳಿಗೆ ಹೆಸರುವಾಸಿಯಾಗುತ್ತಿದೆ” ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಾಲ್ “ಸಾರ್ವಜನಿಕ ನಂಬಿಕೆ ಮತ್ತು ತೆರಿಗೆದಾರರ ಹಣದ ಜವಾಬ್ದಾರಿ ಹೊತ್ತಿರುವ ಪ್ರತಿನಿಧಿಯಿಂದ ಇಂತಹ ಅನೈತಿಕ ನಡವಳಿಕೆ ಖಂಡನೀಯ. ಇದು ಮಹಾರಾಷ್ಟ್ರ ರಾಜಕಾರಣದ ನೈತಿಕ ಕುಸಿತಕ್ಕೆ ಸಾಕ್ಷಿ. ಮುಖ್ಯಮಂತ್ರಿಗಳು ತಕ್ಷಣ ಜಿರ್ವಾಲ್ ರಾಜೀನಾಮೆ ಪಡೆಯಬೇಕು” ಎಂದು ಒತ್ತಾಯಿಸಿದ್ದಾರೆ. ಈ ನಡುವೆ ಎನ್‌ಸಿಪಿ (ಎಸ್ಪಿ) ನಾಯಕ ಜಯಂತ್ ಪಾಟೀಲ್ ಅವರು ಈ ಬಗ್ಗೆ ತಮಗೆ ಸಂಪೂರ್ಣ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.