
ಅಮೆರಿಕ-ಇಸ್ರೇಲ್ ವಿರುದ್ಧ ಇರಾನ್ ಪ್ರತೀಕಾರದ ದಾಳಿಗಳನ್ನು ತೀವ್ರಗೊಳಿಸಿದ್ದು, ಅಬುಧಾಬಿಯಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ ಪಾಕಿಸ್ತಾನಿ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ. ಈ ದಾಳಿಯು ಪಶ್ಚಿಮ ಏಷ್ಯಾ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ.
ಅಬುಧಾಬಿ: ಅಮೆರಿಕ-ಇಸ್ರೇಲ್ ಜಂಟಿ ದಾಳಿಗೆ ಇರಾನ್ ಕೊಟ್ಟಿರುವ ತಿರುಗೇಟು, ಪಶ್ಚಿಮ ಏಷ್ಯಾ ಮತ್ತು ಗಲ್ಫ್ ರಾಷ್ಟ್ರಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಯುಎಇಯಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿ ಪಾಕಿಸ್ತಾನದ ಪ್ರಜೆ ಎಂದು ಈಗ ಖಚಿತವಾಗಿದೆ. ಅಬುಧಾಬಿಯಲ್ಲಿ ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಈ ಸಾವು ಸಂಭವಿಸಿದೆ. ಯುಎಇಯ ರಕ್ಷಣಾ ವ್ಯವಸ್ಥೆಗಳು ಹೊಡೆದುರುಳಿಸಿದ ಕ್ಷಿಪಣಿಗಳ ಅವಶೇಷಗಳು ಜನವಸತಿ ಪ್ರದೇಶಗಳ ಮೇಲೆ ಬಿದ್ದಿದ್ದರಿಂದ ಈ ದುರ್ಘಟನೆ ನಡೆದಿದೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ.
ದೇಶಾದ್ಯಂತ ಹೈ ಅಲರ್ಟ್
ಈಗಾಗಲೇ ಇಸ್ರೇಲ್, ಬಹ್ರೇನ್, ಕತಾರ್, ಸೌದಿ ಮತ್ತು ಕುವೈತ್ ಮೇಲೆ ದಾಳಿ ನಡೆದಿತ್ತು. ಈಗ ಯುಎಇ ಮೇಲೂ ದಾಳಿಯಾಗಿರುವುದರಿಂದ ಈ ವಲಯದಲ್ಲಿ ಭದ್ರತಾ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಯುಎಇ ಅಧಿಕಾರಿಗಳು ದೇಶದಾದ್ಯಂತ ಹೈ ಅಲರ್ಟ್ ಘೋಷಿಸಿದ್ದಾರೆ. ಗಲ್ಫ್ ರಾಷ್ಟ್ರಗಳಿಗೆ ವಿಮಾನ ಸೇವೆಗಳು ಬಹುತೇಕ ಸ್ಥಗಿತಗೊಂಡಿವೆ. ಇಸ್ರೇಲ್ ಮೇಲೆ ಭಾರಿ ದಾಳಿ ನಡೆಸಿದ ಬೆನ್ನಲ್ಲೇ, ಇರಾನ್ ಬಹ್ರೇನ್ ಮೇಲೂ ತೀವ್ರವಾದ ದಾಳಿ ಮಾಡಿತ್ತು.
ಅಮೇರಿಕಾ ನೌಕಾಪಡೆಯ ಮೇಲೆ ದಾಳಿ
ಬಹ್ರೇನ್‌ನಲ್ಲಿರುವ ಅಮೆರಿಕದ 5ನೇ ನೌಕಾಪಡೆಯ (US 5th Fleet) ಪ್ರಧಾನ ಕಚೇರಿಯನ್ನು ಗುರಿಯಾಗಿಸಿ ಇರಾನ್ ಕ್ಷಿಪಣಿ ದಾಳಿ ನಡೆಸಿತ್ತು. ಬಹ್ರೇನ್‌ನಲ್ಲಿ ದೊಡ್ಡ ಸ್ಫೋಟಗಳು ಸಂಭವಿಸಿದ್ದು, ಅಪಾಯದ ಸೈರನ್‌ಗಳು ಮೊಳಗಿದ್ದವು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ಖಚಿತಪಡಿಸಿವೆ. ಈ ವಲಯದಲ್ಲಿರುವ ಎಲ್ಲಾ ಅಮೆರಿಕ ಮತ್ತು ಇಸ್ರೇಲ್ ಸೇನಾ ನೆಲೆಗಳು ತಮ್ಮ ಟಾರ್ಗೆಟ್ ಎಂದು ಇರಾನ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಇರಾನ್‌ನ ಪ್ರತೀಕಾರ ದಾಳಿ ಇನ್ನೂ ತೀವ್ರವಾಗಿರಲಿದೆ
ಇದೇ ವೇಳೆ, ಕತಾರ್ ಮತ್ತು ಯುಎಇಯಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗಳನ್ನು ಆರಂಭಿಸಿದೆ ಎಂಬ ವರದಿಗಳೂ ಹೊರಬಿದ್ದಿವೆ. ಇರಾನಿನ ಮಾಧ್ಯಮಗಳೇ ಈ ಮಾಹಿತಿಯನ್ನು ಬಹಿರಂಗಪಡಿಸಿವೆ. ಇರಾನ್‌ನ ಪ್ರತೀಕಾರದ ದಾಳಿ ತೀವ್ರವಾಗಿರಲಿದೆ ಎಂದು ಮೊದಲೇ ಎಚ್ಚರಿಕೆ ನೀಡಿದ್ದರಿಂದ, ಈ ಭಾಗದಲ್ಲಿ ದೊಡ್ಡ ಮಟ್ಟದ ಯುದ್ಧದ ಸಾಧ್ಯತೆಗಳು ದಟ್ಟವಾಗಿವೆ.
ಮಕ್ಕಳ ಕೊಂದಿದ್ದಕ್ಕೆ ತಕ್ಕ ಉತ್ತರ ಕೊಡ್ತೇವೆ
ಅಮೆರಿಕದ ಸಹಾಯದಿಂದ ಇಸ್ರೇಲ್ ನಡೆಸುತ್ತಿರುವ ದಾಳಿಗೆ ಇರಾನ್ ಕಠಿಣ ಎಚ್ಚರಿಕೆ ನೀಡಿದೆ. ‘ಮಕ್ಕಳನ್ನು ಕೊಂದಿದ್ದಕ್ಕೆ ತಕ್ಕ ಉತ್ತರ ನೀಡುತ್ತೇವೆ’ ಎಂದು ಇರಾನ್ ಗುಡುಗಿದೆ. ‘ನಾವು ಇದುವರೆಗೆ ಬಳಸಿದ್ದು ನಮ್ಮ ಹಳೆಯ ಶಸ್ತ್ರಾಸ್ತ್ರಗಳನ್ನು ಮಾತ್ರ. ಮುಂದೆ ಬರಲಿರುವುದು ನೀವು ಇಲ್ಲಿಯವರೆಗರ ನೋಡದ ಆಯುಧಗಳು’ ಎಂದು ಇರಾನ್ ಎಚ್ಚರಿಸಿದೆ.