ಕ್ರಿಕೆಟ್ ಟೀಮ್‌ಗೆ ಸುಖ, ಶಾಂತಿ, ನೆಮ್ಮದಿ ಕೊಡಲಿ! | ಕೋರ್ಟ್‌ ಹಾಲ್‌ನಲ್ಲಿ ಉಮೇಶನ ಅವಾಂತರ | This Week Reporter S Diary May The Cricket Team Find Happiness Peace And Tranquility

ಕ್ರಿಕೆಟ್ ಟೀಮ್‌ಗೆ ಸುಖ, ಶಾಂತಿ, ನೆಮ್ಮದಿ ಕೊಡಲಿ! | ಕೋರ್ಟ್‌ ಹಾಲ್‌ನಲ್ಲಿ ಉಮೇಶನ ಅವಾಂತರ | This Week Reporter S Diary May The Cricket Team Find Happiness Peace And Tranquility



ಕ್ರಿಕೆಟ್ ಟೀಮ್‌ಗೆ ಸುಖ, ಶಾಂತಿ, ನೆಮ್ಮದಿ ಕೊಡಲಿ! | ಕೋರ್ಟ್‌ ಹಾಲ್‌ನಲ್ಲಿ ಉಮೇಶನ ಅವಾಂತರ | This Week Reporter S Diary May The Cricket Team Find Happiness Peace And Tranquility

ಕ್ರಿಕೆಟ್ ಪಂದ್ಯದ ಗೆಲುವಿಗಾಗಿ ಪೂಜೆ ಸಲ್ಲಿಸಿದ ಹಿರಿಯರೊಬ್ಬರು ಕ್ಯಾಮೆರಾ ಮುಂದೆ ತೋರಿದ ಉತ್ಸಾಹ ಮತ್ತು ನ್ಯಾಯಾಲಯದಲ್ಲಿ ಒಂದೇ ಹೆಸರಿನ ಹಲವು ಆರೋಪಿಗಳಿಂದ ಉಂಟಾದ ಗೊಂದಲದ ಸ್ವಾರಸ್ಯಕರ ಘಟನೆಗಳನ್ನು ಈ ಲೇಖನ ವಿವರಿಸುತ್ತದೆ.

– ಕ್ಯಾಮೆರಾ ಕಂಡು ಇಮ್ಮಡಿಸಿದ ಹಿರಿಯ ಜೀವಿಯ ಉತ್ಸಾಹ । ಕೋರ್ಟ್‌ ಹಾಲ್‌ನಲ್ಲಿ ‘ಉಮೇಶ’ನ ಅವಾಂತರ

ನಮ್ಮ ಟೀಮ್‌ ಗೆಲ್ಲಿಸಬೇಕು, ಟೀಮ್‌ಗೆ ಸುಖ, ಶಾಂತಿ, ನೆಮ್ಮದಿ ಕೊಡಲಿ ಎಂದು ಪ್ರಾರ್ಥನೆ ಮಾಡಿದ್ದೇವೆ ಎಂದು ಓತಪ್ರೋತವಾಗಿ ಹೇಳುತ್ತಿದ್ದಂತೆ ವರದಿಗಾರ ಥ್ಯಾಂಕ್ಯೂ ಸರ್‌… ಅಂದ್ರೂ ಮೈಕ್‌ ಬಿಡದೆ ‘ಭಾರತ್‌ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿದರು.

ಅದೊಂದು ದೇವಸ್ಥಾನ, ಟಿ-20 ವಿಶ್ವಕಪ್‌ ಫೈನಲ್‌ ಪಂದ್ಯ ಭಾರತ-ನ್ಯೂಜಿಲೆಂಡ್‌ ಮಧ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕ್ರಿಕೆಟ್‌ ಪ್ರೇಮಿ ಯುವಕರು ಭಾರತದ ಗೆಲುವಿಗೆ ವಿಶೇಷ ಪೂಜೆ ಸಲ್ಲಿಸಿ ಹೊರ ಬಂದಿದ್ದರು. ಈ ವೇಳೆ ಖಾಸಗಿ ವಾಹಿನಿಯ ವರದಿಗಾರ, ಕ್ಯಾಮರಾಮನ್‌ ಆಗಮಿಸಿ, ಭಾರತ ತಂಡದ ಆಟಗಾರರು, ಯಾರು ಹೆಚ್ಚು ರನ್‌ ಹೊಡೆಯಬಹುದು ಎಂದೆಲ್ಲಾ ಪ್ರಶ್ನಿಸಿ ಭಾರತಕ್ಕೆ ಶುಭ ಹಾರೈಸುವಂತೆ ಹೇಳಿ ಶೂಟ್‌ ಮಾಡುತ್ತಿದ್ದರು.

ಟೀವಿಯಲ್ಲಿ ಪ್ರಸಾರವಾಗುತ್ತದೆ ಅಂತ ತಿಳಿದು ಯುವಕರು ಉತ್ಸಾಹದಿಂದಲೇ ನೆಚ್ಚಿನ ಕ್ರೀಡಾಪಟುವಿನ ಹೆಸರು ಹೇಳಿ, ಮೊದಲು ನಮ್ಮವರು ಬ್ಯಾಟಿಂಗ್‌ ಮಾಡಬೇಕು. ರನ್‌ ಚೇಸ್‌ ಮಾಡುವುದು ಸುಲಭ ಎಂದೆಲ್ಲಾ ಹೇಳಿ ವಿಶ್‌ ಮಾಡಿದರು. ಇನ್ನು ಕೆಲವರು ಓಪನಿಂಗ್‌ ಬ್ಯಾಟ್ಸ್‌ಮನ್‌ ಯಾರಾಗಬೇಕು? ಎಷ್ಟು ರನ್‌ ಹೊಡೆಯಬೇಕು ಎಂದೆಲ್ಲಾ ಹೇಳಿದರು. ಹೀಗೆ ನಾಲ್ಕೈದು ಹುಡುಗರು, ಯವಕರನ್ನು ಮಾತನಾಡಿಸಿದ ನಂತರ ಟಿವಿ ವರದಿಗಾರ ಅಲ್ಲೇ ನಿಂತಿದ್ದ ಹಿರಿಯ ವ್ಯಕ್ತಿಯನ್ನು ಮಾತನಾಡಿಸಿ ಫೈನಲ್‌ ಪಂದ್ಯದ ಬಗ್ಗೆ ಅಭಿಪ್ರಾಯ ಕೇಳಿದರು.

ಹಿರಿಯ ವ್ಯಕ್ತಿಯಾಗಿದ್ದರೂ ಉತ್ಸಾಹ ಮಾತ್ರ ಹುಡುಗರ ರೀತಿ ಇತ್ತು, ‘ಭಾರತವೇ ಗೆಲ್ಲುತ್ತದೆ. ಅದರಲ್ಲಿ ಅನುಮಾನ ಬೇಡವೇ ಬೇಡ. ಮ್ಯಾಚ್‌ನಲ್ಲಿ ಯಾವುದೇ ವಿಘ್ನ ಆಗದಂತೆ ವಿಘ್ನನಾಶಕ ವಿನಾಯಕನ ಪೂಜೆ ಮಾಡಿಸಿದ್ದೇವೆ’ ದೇವರ ಆಶೀರ್ವಾದ ನಮ್ಮ ಟೀಮ್‌ಗೆ ಇದೆ. ನಮ್ಮ ಟೀಮ್‌ ಗೆಲ್ಲಿಸಬೇಕು, ಟೀಮ್‌ಗೆ ಸುಖ, ಶಾಂತಿ, ನೆಮ್ಮದಿ ಕೊಡಲಿ ಎಂದು ಪ್ರಾರ್ಥನೆ ಮಾಡಿದ್ದೇವೆ ಎಂದು ಓತಪ್ರೋತವಾಗಿ ಹೇಳುತ್ತಿದ್ದಂತೆ ವರದಿಗಾರ ಥ್ಯಾಂಕ್ಯೂ ಸರ್‌… ಅಂದ್ರೂ ಮೈಕ್‌ ಬಿಡದೆ ‘ಭಾರತ್‌ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿದರು. ಕೊನೆಗೆ ಮೈಕ್‌ ಪಡೆದುಕೊಂಡ ವರದಿಗಾರ ಮತ್ತೊಮ್ಮೆ ಥ್ಯಾಂಕ್ಯೂ ಸಾರ್… ಎಂದು ಹೇಳಿ ಜಾಗ ಖಾಲಿ ಮಾಡಿದರು.

‘ಆರೋಪಿ ಜತೆ ಅವರಪ್ಪನ ಹೆಸರು ಕರೆಯಬೇಕು…’

ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಬೆಳಗ್ಗಿನಿಂದ ಒಂದೇ ಸಮನೆ ಅಹವಾಲುಗಳನ್ನು ಆಲಿಸುತ್ತಿದ್ದ ನ್ಯಾಯಾಧೀಶರು ಸ್ವಲ್ಪ ತಾಳ್ಮೆ ಕಳೆದುಕೊಂಡಂತಿತ್ತು. ಗುಮಾಸ್ತ ಒಂದೊಂದೇ ಕೇಸ್ ಫೈಲ್‌ ನಂಬರ್‌ನೊಂದಿಗೆ ಆರೋಪಿಗಳ ಹೆಸರು ಕೂಗುತ್ತಿದ್ದ. ಕೋರ್ಟ್‌ ಬಾಗಿಲಲ್ಲಿ ನಿಂತಿದ್ದ ಅಟೆಂಡರ್‌ ಆ ಹೆಸರನ್ನು ಮೂರು ಬಾರಿ ಪುನರಾವರ್ತಿಸುತ್ತಿದ್ದ. ಗುಮಾಸ್ತ, ಕೇಸಿನ ಫೈಲೊಂದನ್ನು ತೆಗೆದು ಉಮೇಶ (ಹೆಸರು ಬದಲಿಸಲಾಗಿದೆ) ಎಂದು ಕರೆಯುತ್ತಿದ್ದಂತೆ ಕೋರ್ಟ್‌ ಹಾಲ್‌ನಲ್ಲೇ ನಿಂತಿದ್ದ ಆರೋಪಿಯೊಬ್ಬ ನ್ಯಾಯಾಧೀಶರ ಮುಂದೆ ವಿನಯವಾಗಿ ಕೈಮುಗಿಯುತ್ತಲೇ ಬಂದು ನಿಂತ. ಅದನ್ನು ಕಂಡ ಜಡ್ಜ್‌, ‘ಹೇ ನೀನಲ್ಲ, ಅಲ್ಲೇ ಸೈಡ್‌ನಲ್ಲಿ ನಿಂತ್ಕೋ’ ಅನ್ನುತ್ತಿದ್ದಂತೆ ಅಷ್ಟೇ ವಿನಯವಾಗಿ ಬದಿಗೆ ಹೋಗಿ ನಿಂತ.

ಅದಾಗಿ 20 ನಿಮಿಷ ಕಳೆದಿರಬಹುದು. ಮತ್ತೊಮ್ಮೆ ಗುಮಾಸ್ತ, ಕೇಸ್‌ ನಂಬರ್‌ ಹೇಳಿ ಉಮೇಶ ಎಂದು ಕೂಗುತ್ತಿದ್ದಂತೆ, ಮತ್ತೆ ಅಲ್ಲೇ ಬದಿಯಲ್ಲಿ ನಿಂತಿದ್ದ ಅದೇ ವ್ಯಕ್ತಿ ಮತ್ತೆ ಕೈಮುಗಿಯುತ್ತ ಕೋರ್ಟ್‌ ಹಾಲ್‌ ಮಧ್ಯಕ್ಕೆ ಬರುತ್ತಿದ್ದಂತೆ, ಗುಮಾಸ್ತ ನೀನಲ್ಲ, ಹೋಗು ಕೂತ್ಕೋ ಅಂದ. ಇದನ್ನು ಕಂಡ ಜಡ್ಜ್‌, ಏ.. ನಿಮ್ಮ ಅಪ್ಪನ ಹೆಸರನೇನು ಅಂತ ಕೇಳಿದ್ದಕ್ಕೆ ಗಾಬರಿಯಾದ ಆರೋಪಿ ತೊದಲುತ್ತಲೇ ಶಿವರಾಮಯ್ಯ ಅಂತ ಉತ್ತರಿಸಿದ. ಸರಿ ನೀನಲ್ಲ, ಹೋಗಿ ಕೂತ್ಕೋ ಎಂದು ಕಳುಹಿಸಿದರು.

ತನ್ನ ನಂಬರ್‌ಗಾಗಿ ಕಾಯುತ್ತಿದ್ದ ಆರೋಪಿ ಬೆಳಗ್ಗೆ ಕೋರ್ಟ್‌ ಆರಂಭವಾದಾಗ ಬಂದು ನಿಂತವನು ಮಧ್ಯಾಹ್ನವಾದರೂ ಕೂತಿರಲೇ ಇಲ್ಲ. ಮತ್ತೆ, ಉಮೇಶ ಅಲಿಯಾಸ್‌ ಉಮಿ ಎಂದು ಗುಮಾಸ್ತ ಕೂಗಿದ್ದು ಕೋರ್ಟ್‌ ಹಾಲ್‌ನಲ್ಲಿದ್ದ ವಕೀಲರು ಸೇರಿ ಎಲ್ಲರಿಗೂ ಕೇಳಿಸಿತು. ಆದರೆ, ಕೇಸ್‌ ನಂಬರ್‌ ಮಾತ್ರ ಕೇಳಲಿಲ್ಲ. ಮತ್ತೆ ತಡಬಡಾಯಿಸಿ ಬಂದು ನಿಂತ ಅದೇ ಆರೋಪಿ ಕಂಡು ಜಡ್ಜ್‌ ಪಿತ್ತ ನೆತ್ತಿಗೇರಿತ್ತೇನೋ.. ಗುಮಾಸ್ತನಿಗೆ ಹೆಸರು ಕರೆಯುವಾಗ ಆರೋಪಿ ಜೊತೆಗೆ ಅವರ ಅಪ್ಪನ ಹೆಸರು ಕರೆಯೋಕೆ ಆಗೋಲ್ವೇನ್ರಿ ನಿಮ್ಗೆ… ಇನ್ಮೇಲೆ ಆರೋಪಿ ಜೊತೆ ಅವರ ಅಪ್ಪನ ಹೆಸರನ್ನೂ ಕರೆಯಬೇಕು ಗೊತ್ತಾಯ್ತಾ ಅಂತ ವಾರ್ನಿಂಗ್‌ ಮಾಡಿದರು.

ಇದರಿಂದ ಕಸಿವಿಸಿಗೊಂಡ ಗುಮಾಸ್ತ ಆರೋಪಿಯತ್ತ ನೋಡಿ ಕೆರಳುತ್ತಲೇ ನೀನಲ್ಲ ಹೋಗು ಎಂದು ಸನ್ನೆ ಮಾಡಿದ. ಅದಾಗಿ ಸ್ವಲ್ಪ ಹೊತ್ತಿನಲ್ಲೇ ಗುಮಾಸ್ತ ಉಮೇಶ ಬಿನ್‌ ಶಿವರಾಮಯ್ಯ ಎಂದು ಕೂಗುತ್ತಲೇ ಬೆದರಿದ ಕಣ್ಗಳಲ್ಲಿ ಕೈಮುಗಿಯುತ್ತಾ ಬಂದು ನಿಂತ ಆರೋಪಿಯನ್ನು ಕಂಡು, ಜಡ್ಜ್‌ … ಮುಂದಿನ ತಿಂಗಳಿಗೆ ವಾಯ್ದೆ ಹಾಕಿ ಹೋಗು ಎಂದು ಕಳುಹಿಸಿದರು. ಉಮೇಶ ಎಂಬ ಹೆಸರಿನ ನಾಲ್ವರು ಆರೋಪಿಗಳ ಕೇಸುಗಳು ಒಂದೇ ದಿನ ವಿಚಾರಣೆಗೆ ಬಂದಿದ್ದು ಈ ಎಡವಟ್ಟಿಗೆ ಕಾರಣ.

-ಸುರೇಶ್‌ ಪಿ.

-ಸಂಪತ್‌ ತರಿಕೆರೆ



Source link

Leave a Reply

Your email address will not be published. Required fields are marked *