ಮಲ್ಲಿಕಾರ್ಜುನ ಮುತ್ಯಾ ಕೇಸ್ ರದ್ದು ಮಾಡದಿದ್ದರೆ ಯಾದಗಿರಿ ಬಂದ್; ಜಿಲ್ಲಾಡಳಿತಕ್ಕೆ 2 ದಿನಗಳ ಗಡುವು ಕೊಟ್ಟ ಭಕ್ತರು | Mallikarjuna Mutya Pocso Case Devotees Gave Yadgir Bandh Warning And Protest To Dc 2 Day Deadline Sat

ಮಲ್ಲಿಕಾರ್ಜುನ ಮುತ್ಯಾ ಕೇಸ್ ರದ್ದು ಮಾಡದಿದ್ದರೆ ಯಾದಗಿರಿ ಬಂದ್; ಜಿಲ್ಲಾಡಳಿತಕ್ಕೆ 2 ದಿನಗಳ ಗಡುವು ಕೊಟ್ಟ ಭಕ್ತರು | Mallikarjuna Mutya Pocso Case Devotees Gave Yadgir Bandh Warning And Protest To Dc 2 Day Deadline Sat



ಮಲ್ಲಿಕಾರ್ಜುನ ಮುತ್ಯಾ ಕೇಸ್ ರದ್ದು ಮಾಡದಿದ್ದರೆ ಯಾದಗಿರಿ ಬಂದ್; ಜಿಲ್ಲಾಡಳಿತಕ್ಕೆ 2 ದಿನಗಳ ಗಡುವು ಕೊಟ್ಟ ಭಕ್ತರು | Mallikarjuna Mutya Pocso Case Devotees Gave Yadgir Bandh Warning And Protest To Dc 2 Day Deadline Sat

ಪೋಕ್ಸೋ ಪ್ರಕರಣ ಎದುರಿಸುತ್ತಿರುವ ವಿವಾದಿತ ಮಲ್ಲಿಕಾರ್ಜುನ ಮುತ್ಯಾ ಪರವಾಗಿ ನಿಂತಿರುವ ಅವರ ಭಕ್ತರು, ಇದು ಕಪೋಲಕಲ್ಪಿತ ಷಡ್ಯಂತ್ರ ಎಂದು ಆರೋಪಿಸಿದ್ದಾರೆ. ಎರಡು ದಿನಗಳಲ್ಲಿ ಪ್ರಕರಣವನ್ನು ರದ್ದುಗೊಳಿಸದಿದ್ದರೆ ‘ಯಾದಗಿರಿ ಬಂದ್’ ನಡೆಸುವುದಾಗಿ ಜಿಲ್ಲಾಡಳಿತಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.

ಯಾದಗಿರಿ (ಫೆ.27): ಅಪ್ರಾಪ್ತ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಪೋಕ್ಸೋ (POCSO) ಪ್ರಕರಣ ಎದುರಿಸುತ್ತಿರುವ ವಿವಾದಿತ ‘ಪವಾಡ ಪುರುಷ’ ಮಲ್ಲಿಕಾರ್ಜುನ ಮುತ್ಯಾ ಪರವಾಗಿ ಈಗ ಅವರ ಭಕ್ತ ಸಾಗರ ದನಿಯೆತ್ತಿದೆ. ಮುತ್ಯಾ ವಿರುದ್ಧ ದಾಖಲಾಗಿರುವ ಪ್ರಕರಣವು ಕಪೋಲಕಲ್ಪಿತ ಮತ್ತು ಷಡ್ಯಂತ್ರ ಎಂದು ಆರೋಪಿಸಿರುವ ಭಕ್ತರು, ಎರಡು ದಿನದೊಳಗೆ ಕೇಸ್ ರದ್ದುಗೊಳಿಸದಿದ್ದರೆ ‘ಯಾದಗಿರಿ ಬಂದ್’ ಮಾಡುವುದಾಗಿ ಜಿಲ್ಲಾಡಳಿತಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.

ಶ್ರೀಮಠದಲ್ಲಿ ಭಕ್ತರ ಬೃಹತ್ ಸಭೆ:

ಯಾದಗಿರಿಯ ಮಲ್ಲಿಕಾರ್ಜುನ ಮುತ್ಯಾ ಅವರ ಶ್ರೀಮಠದಲ್ಲಿ ಇಂದು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಭಕ್ತರು ತುರ್ತು ಸಭೆ ನಡೆಸಿದರು. ಈ ವೇಳೆ ಮುತ್ಯಾ ಅವರಿಗೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದ ಭಕ್ತರು, ಪ್ರಕರಣದ ಹಾದಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯ ನಂತರ ಮಾತನಾಡಿದ ಭಕ್ತರು, ‘ನಮ್ಮ ಅಪ್ಪಾಜಿಯ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ. ಅವರ ಹೆಸರನ್ನು ಹಾಳು ಮಾಡಲು ವಿಡಿಯೋವನ್ನು ತಿರುಚಲಾಗಿದೆ’ ಎಂದು ಆಕ್ರೋಶ ಹೊರಹಾಕಿದರು.

ಮಕ್ಕಳ ಆಯೋಗ ಮತ್ತು ಅಧಿಕಾರಿಗಳ ವಿರುದ್ಧ ಕಿಡಿ:

ಸಭೆಯಲ್ಲಿ ಪಾಲ್ಗೊಂಡಿದ್ದ ಶ್ರೀಮಠದ ಭಕ್ತೆ ಲಲಿತಾ ಅನಪೂರ ಅವರು ಮಾತನಾಡಿ, ‘ಮುತ್ಯಾ ಅವರ ವಿಡಿಯೋವನ್ನು ಎಡಿಟ್ ಮಾಡಿ ತಿರುಚಲಾಗಿದೆ. ಮಗು ವಿಡಿಯೋದಲ್ಲಿ ನಗುತ್ತಿರುವುದು ಕಾಣುತ್ತಿದೆ. ಬಾಲಕಿಯ ತಂದೆ-ತಾಯಿಯೇ ಮಠಕ್ಕೆ ಬಂದು ಇದು ಆಶೀರ್ವಾದದ ವಿಡಿಯೋ ಎಂದು ಸ್ಪಷ್ಟನೆ ನೀಡಿದ್ದಾರೆ. ಹೀಗಿದ್ದರೂ ಮಕ್ಕಳ ಆಯೋಗದವರು ತರಾತುರಿಯಲ್ಲಿ ಕೇಸ್ ದಾಖಲಿಸಿರುವುದು ಸರಿಯಲ್ಲ. ಈ ಪ್ರಕರಣವನ್ನು ನಿಭಾಯಿಸುವಲ್ಲಿ ಯಾದಗಿರಿ ಎಸ್ಪಿ ಮತ್ತು ಡಿಸಿ ಅವರು ಸಂಪೂರ್ಣವಾಗಿ ಎಡವಿದ್ದಾರೆ’ ಎಂದು ದೂರಿದರು. ಅಲ್ಲದೆ, ‘ಬಾಲಕಿಯ ಮುಖ ತೋರಿಸಿ ವಿಡಿಯೋ ಬಹಿರಂಗಪಡಿಸಿದ ಮಕ್ಕಳ ಆಯೋಗದ ಸದಸ್ಯರೇ ಈ ಪ್ರಕರಣದಲ್ಲಿ ಮೊದಲ ಆರೋಪಿಗಳಾಗಬೇಕು. ಅವರು ಮಗುವಿನ ಖಾಸಗಿತನಕ್ಕೆ ಧಕ್ಕೆ ತಂದಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು.

ಜಿಲ್ಲಾಡಳಿತಕ್ಕೆ 2 ದಿನಗಳ ಅಂತಿಮ ಗಡುವು:

ಮತ್ತೋರ್ವ ಭಕ್ತ ಮಹಾದೇವಪ್ಪ ಮಾತನಾಡಿ, ‘ಮುತ್ಯಾ ಅವರ ಏಳಿಗೆಯನ್ನು ಸಹಿಸದವರು ಮಕ್ಕಳ ಆಯೋಗದ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ. ತೆಲಂಗಾಣ ಮತ್ತು ಆಂಧ್ರಪ್ರದೇಶದಿಂದಲೂ ಅಪಾರ ಭಕ್ತರು ಈ ಮಠಕ್ಕೆ ಬರುತ್ತಾರೆ. ಭಕ್ತರು ದಂಗೆ ಏಳುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಎರಡು ದಿನದೊಳಗೆ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ ನಾವು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಮತ್ತು ಇಡೀ ಜಿಲ್ಲೆಯನ್ನು ಬಂದ್ ಮಾಡುತ್ತೇವೆ’ ಎಂದು ಎಚ್ಚರಿಸಿದ್ದಾರೆ.

ಪ್ರಕರಣಕ್ಕೆ ಹೊಸ ತಿರುವು:

ಇತ್ತೀಚೆಗಷ್ಟೇ ಸಂತ್ರಸ್ತ ಬಾಲಕಿಯ ಪೋಷಕರು ಸೊಲ್ಲಾಪುರದಿಂದ ವಿಡಿಯೋ ಬಿಡುಗಡೆ ಮಾಡಿ, ಮುತ್ಯಾ ಅವರು ನಮ್ಮ ಮಗಳಿಗೆ ಆಶೀರ್ವಾದ ಮಾಡುತ್ತಿದ್ದರು, ಅಶ್ಲೀಲವಾಗಿ ವರ್ತಿಸಿಲ್ಲ ಎಂದು ಹೇಳಿಕೆ ನೀಡಿದ್ದರು. ಪೋಷಕರ ಈ ಹೇಳಿಕೆಯನ್ನೇ ಅಸ್ತ್ರವಾಗಿಸಿಕೊಂಡಿರುವ ಭಕ್ತರು ಈಗ ಕಾನೂನು ಹೋರಾಟದ ಜೊತೆಗೆ ಬೀದಿ ಹೋರಾಟಕ್ಕೂ ಸಜ್ಜಾಗಿದ್ದಾರೆ. ಸದ್ಯ ಮುತ್ಯಾ ಪರವಾಗಿ ಭಕ್ತರು ಒಗ್ಗಟ್ಟಾಗುತ್ತಿರುವುದು ಜಿಲ್ಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಿಸಿದೆ.



Source link

Leave a Reply

Your email address will not be published. Required fields are marked *