
ಕಡಿಮೆ ಸಂಬಳವಿದ್ದರೂ, ಸುಲಭವಾಗಿ ಸಿಗುವ ಡಿಜಿಟಲ್ ಸಾಲಗಳಿಂದ Gen Z ಯುವಕರು ಲಕ್ಷಾಂತರ ರೂಪಾಯಿ ಸಾಲದ ಬಲೆಗೆ ಸಿಲುಕುತ್ತಿದ್ದಾರೆ. ಅಂಥ ಸಾಲದ ಸುಳಿಗೆ ನೀವೂ ಸಿಲುಕಿದೀರಾ? ಅದರ ಲಕ್ಷಣ ಮತ್ತು ಪಾರಾಗಲು 7 ಪ್ರಮುಖ ಎಚ್ಚರಿಕೆಯ ಸಂಕೇತಗಳು ಇಲ್ಲಿವೆ.
ಒಂದು ಘಟನೆ: ಪುಣೆಯ ನಿವಾಸಿ ವಿದ್ಯುತ್ ಶರ್ಮಾ 19ನೇ ವಯಸ್ಸಿನಲ್ಲಿ ಫ್ರೀಲಾನ್ಸ್ ಫೋಟೋಗ್ರಾಫರ್ ಆಗಲು ಪ್ರಯತ್ನಿಸಿದ. ಆರಂಭದಲ್ಲಿ ಆಧುನಿಕ ಕ್ಯಾಮೆರಾ ಮತ್ತು ಆಸೆಸ್ಸರೀಸ್ ಖರೀದಿಸಲು ಬೇರೆ ಬೇರೆ ಕಡೆ ಸಣ್ಣ ಸಣ್ಣ ಸಾಲಗಳನ್ನು ತೆಗೆದುಕೊಂಡ. ಆದರೆ ಕೆಲವು ವರ್ಷಗಳಲ್ಲಿ ಆ ಸಾಲಗಳ ಬಡ್ಡಿ ಏರುತ್ತಾ ಏರುತ್ತಾ ಅದರ ಒಟ್ಟು ಮೊತ್ತ 40 ಲಕ್ಷ ರೂಪಾಯಿಗೆ ತಲುಪಿತು. ಒಟ್ಟು 54 ಬೇರೆ ಬೇರೆ ಲೋನ್ ಖಾತೆಗಳು ಅವನ ಹೆಸರಿನಲ್ಲಿ ಇದ್ದವು. ಆಗ ಅವನಿಗಿದ್ದ ತಿಂಗಳ ಆದಾಯ 30,000 ರೂ.ಗಿಂತಲೂ ಕಡಿಮೆ.
ವಿದ್ಯುತ್ ಹೇಳುವುದು ಹೀಗೆ- “2021ರ ವೇಳೆಗೆ ನನಗೆ ನನ್ನ ಹಣವೇ ಬೇಕಾಗಿಲ್ಲ ಅನ್ನಿಸಿತು. ಮೊಬೈಲ್‌ನಲ್ಲಿ ತಕ್ಷಣ ಲೋನ್ ಸಿಗುತ್ತಿತ್ತು. ಯಾವುದೇ ಗ್ಯಾರಂಟಿ ಅಥವಾ ಕಾಗದ ಪತ್ರಗಳ ಅಗತ್ಯ ಇರಲಿಲ್ಲ. ಆದರೆ ತಿಂಗಳ EMI ತಪ್ಪಿದಾಗ ಅದರ ಪರಿಣಾಮ ಎಷ್ಟು ಭಯಾನಕವಾಗಿರಬಹುದು ಅನ್ನೋದನ್ನು ಊಹಿಸಿರಲಿಲ್ಲ,” ಎಂದು ಹೇಳುತ್ತಾನೆ. ಪ್ರತಿ ದಿನ ಸಾಲ ವಸೂಲಾತಿಯ 15–20 ಕರೆಗಳು, ಮನೆಗೆ ಬಂದು ಕಿರುಕುಳ ನೀಡುವುದು- ಈ ಒತ್ತಡ ತಡೆಯಲಾಗದೆ ಆತ ಡೆಟ್ ಕೌನ್ಸೆಲಿಂಗ್ ಕಂಪನಿಯ ಸಹಾಯ ಪಡೆದ. ಈಗ ಅವನ ಸಾಲ 5 ಲಕ್ಷ ರೂ.ಗೆ ಇಳಿದಿದೆ.
ಇದು ಒಬ್ಬನ ಕಥೆಯಷ್ಟೇ ಅಲ್ಲ. ಸಾವಿರಾರು ಜೆನ್ ಝೀ (Gen Z) ಯುವಜನರ ವಾಸ್ತವ. ಪ್ರತೀ ತಿಂಗಳು 25–35 ವಯಸ್ಸಿನ ನೂರಾರು ಯುವಕರು ಸಾಲದ ಸಮಸ್ಯೆಯಿಂದ ಹೊರಬರಲು ಸಹಾಯ ಕೇಳುತ್ತಿದ್ದಾರೆ. ಇನ್ನೂ ಹಲವರು ಸಹಾಯ ಕೇಳದೆ ಸಾಲದ ಬಲೆಗೆ ಸಿಲುಕುತ್ತಿದ್ದಾರೆ. ತಿಂಗಳಿಗೆ ₹30,000–₹40,000 ಸಂಬಳ ಇದ್ದರೂ, ಲಕ್ಷಾಂತರ ರೂಪಾಯಿ ಸಾಲದಲ್ಲಿ ಸಿಲುಕುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಸುಲಭವಾಗಿ ಸಿಗುವ ಡಿಜಿಟಲ್ ಲೋನ್ ಆ್ಯಪ್‌ಗಳು, ಕ್ರೆಡಿಟ್ ಕಾರ್ಡ್‌ಗಳು ಮತ್ತು ಫಿನ್‌ಟೆಕ್ ಕಂಪನಿಗಳು ಈ ಸಮಸ್ಯೆಗೆ ಪ್ರಮುಖ ಕಾರಣಗಳಾಗಿ ಕಾಣಿಸುತ್ತಿವೆ.
1997ರಿಂದ 2012ರ ನಡುವೆ ಹುಟ್ಟಿದ Gen Z ಪೀಳಿಗೆ, ಹಿಂದಿನ ಪೀಳಿಗೆಗಳಿಗಿಂತ ಹೆಚ್ಚು ಸಾಲ ತೆಗೆದುಕೊಳ್ಳುತ್ತಿರುವ ಮೊದಲ ಪೀಳಿಗೆ ಎಂದು ಹೇಳಲಾಗುತ್ತಿದೆ. ಹಿಂದಿನ ಪೀಳಿಗೆಯಲ್ಲಿ ಸಾಲ ತೆಗೆದುಕೊಳ್ಳುವುದು ತಪ್ಪು ಎಂದು ಭಾವಿಸಲಾಗುತ್ತಿತ್ತು. ಆದರೆ ಈಗ ಸಾಲ ಒಂದು ಸಾಮಾನ್ಯ ಜೀವನಶೈಲಿಯ ಭಾಗವಾಗಿದೆ.
₹30,000 ಸಂಬಳ… ₹30–40 ಲಕ್ಷ ಸಾಲ ಹೇಗೆ?
ಹೆಚ್ಚಿನ Gen Z ಯುವಕರು ಮನೆ ಅಥವಾ ಕಾರಿಗಾಗಿ ಸಾಲ ತೆಗೆದುಕೊಳ್ಳುವುದಿಲ್ಲ. ಬದಲಾಗಿ, ಇವುಗಳಿಗೆ ಸಾಲ ತೆಗೆದುಕೊಳ್ಳುತ್ತಾರೆ:
ಹೊಸ ಮೊಬೈಲ್ ಮತ್ತು ಗ್ಯಾಜೆಟ್‌ಗಳು
ಪ್ರವಾಸ ಮತ್ತು ಲೈಫ್‌ಸ್ಟೈಲ್ ಖರ್ಚು
ಕೋರ್ಸ್ ಮತ್ತು ಕರಿಯರ್ ಅಪ್‌ಗ್ರೇಡ್
ದಿನನಿತ್ಯದ ಖರ್ಚು
ಮೊಬೈಲ್ ಆ್ಯಪ್‌ನಲ್ಲಿ ಕೆಲವೇ ನಿಮಿಷಗಳಲ್ಲಿ ಲೋನ್ ಸಿಗುತ್ತದೆ. ಇದು ಸುಲಭವಾಗಿರುವುದರಿಂದ ಯುವಕರು ಹೆಚ್ಚು ಯೋಚಿಸದೆ ಸಾಲ ತೆಗೆದುಕೊಳ್ಳುತ್ತಾರೆ. ನಂತರ EMI ಕಟ್ಟಲು ಸಾಧ್ಯವಾಗದಾಗ, ಹಳೆಯ ಸಾಲ ತೀರಿಸಲು ಹೊಸ ಸಾಲ ತೆಗೆದುಕೊಳ್ಳುತ್ತಾರೆ. ಹೀಗೆ ಸಾಲ ಹೆಚ್ಚುತ್ತಾ ಹೋಗುತ್ತದೆ.
ಅಂಕಿಅಂಶಗಳು ಏನು ಹೇಳುತ್ತವೆ? ಹೊಸ ಲೋನ್ ತೆಗೆದುಕೊಳ್ಳುವವರಲ್ಲಿ 41% Gen Zಯವರು. NBFC ಮತ್ತು ಫಿನ್‌ಟೆಕ್ ಲೋನ್ ತೆಗೆದುಕೊಳ್ಳುವವರಲ್ಲಿ 65% ಮಂದಿ 26–35 ವಯಸ್ಸಿನವರು. ₹50,000ಕ್ಕಿಂತ ಕಡಿಮೆ ಸಾಲಗಳಲ್ಲಿ 26% ಮಂದಿ EMI ಕಟ್ಟಲು ವಿಫಲರಾಗಿದ್ದಾರೆ. ಇದು Gen Z ಯುವಕರು ಸಾಲ ನಿರ್ವಹಣೆಯಲ್ಲಿ ಸಂಕಷ್ಟ ಅನುಭವಿಸುತ್ತಿರುವುದನ್ನು ತೋರಿಸುತ್ತದೆ.
ತಜ್ಞರ ಎಚ್ಚರಿಕೆ
ಹಣಕಾಸು ತಜ್ಞ ಅನುರಾಗ್ ಮೆಹ್ರಾ ಹೇಳುತ್ತಾರೆ: “ಹೆಚ್ಚಿನ ಯುವಕರು ತಮ್ಮ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುತ್ತಿದ್ದಾರೆ. ಅವರು ತಿಂಗಳ ಸಂಬಳದಿಂದ ಸಂಬಳಕ್ಕೆ ಬದುಕುತ್ತಿದ್ದಾರೆ. ತಿಂಗಳ ಕೊನೆಯಲ್ಲಿ ಹಣ ಉಳಿಯುವುದಿಲ್ಲ.”
ಗಮನಿಸಬೇಕಾದ 7 ಎಚ್ಚರಿಕೆ ಸಂಕೇತಗಳು
EMI ಕಟ್ಟಲು ಮತ್ತೊಂದು ಲೋನ್ ತೆಗೆದುಕೊಳ್ಳುವುದು
ತಿಂಗಳ ಸಂಬಳದ 40%ಕ್ಕಿಂತ ಹೆಚ್ಚು EMIಗೆ ಹೋಗುವುದು
ಎಷ್ಟು ಲೋನ್ ಇದೆ ಎಂಬುದು ಸ್ಪಷ್ಟವಾಗಿ ಗೊತ್ತಿಲ್ಲದಿರುವುದು
ಪ್ರತಿದಿನ ಲೋನ್ ಆ್ಯಪ್‌ಗಳಿಂದ ಕರೆಗಳು ಬರುತ್ತಿರುವುದು
ಕ್ರೆಡಿಟ್ ಕಾರ್ಡ್ ಬಿಲ್ ಸಂಪೂರ್ಣ ಕಟ್ಟಲು ಸಾಧ್ಯವಾಗದಿರುವುದು
ಅಗತ್ಯವಿಲ್ಲದ ವಸ್ತುಗಳಿಗೆ ಲೋನ್ ತೆಗೆದುಕೊಳ್ಳುವುದು
ತಿಂಗಳ ಕೊನೆಯಲ್ಲಿ ಹಣ ಉಳಿಯದೇ ಹೋಗುವುದು
ಡಿಜಿಟಲ್ ಲೋನ್ ಸುಲಭ, ಆದರೆ ಅಪಾಯಕರ
ಇಂದಿನ ಡಿಜಿಟಲ್ ಯುಗದಲ್ಲಿ ಲೋನ್ ತೆಗೆದುಕೊಳ್ಳುವುದು ಸುಲಭವಾಗಿದೆ. ಆದರೆ ಅದರ ಪರಿಣಾಮ ಗಂಭೀರವಾಗಿರಬಹುದು. Gen Z ಯುವಕರು ತಮ್ಮ ಆದಾಯಕ್ಕೆ ಅನುಗುಣವಾಗಿ ಖರ್ಚು ಮಾಡುವುದು ಮತ್ತು ಲೋನ್ ತೆಗೆದುಕೊಳ್ಳುವ ಮೊದಲು ಯೋಚಿಸುವುದು ಅತ್ಯಂತ ಮುಖ್ಯ. ಇಲ್ಲದಿದ್ದರೆ, ₹30,000 ಸಂಬಳ ಇದ್ದರೂ ₹40 ಲಕ್ಷ ಸಾಲದ ಬಲೆಗೆ ಸಿಲುಕುವ ಅಪಾಯ ನಿಜವಾಗಿಯೂ ಇದೆ.