Headlines

ಸಂಬಳದ ಕಿರಿಕ್ ಬೆನ್ನಲ್ಲೇ ಮಾಲೀಕನಿಗೆ ಶಾಕ್: 80 ಲಕ್ಷ ಮೌಲ್ಯದ ಲ್ಯಾಪ್‌ಟಾಪ್ ಬಿಡಿಭಾಗ ಕದ್ದ ಅಪ್ಪ-ಮಗ ಅಂದರ್! | Bengaluru Father Son Arrested For Stealing Laptop Parts In Govindapura Sat

ಸಂಬಳದ ಕಿರಿಕ್ ಬೆನ್ನಲ್ಲೇ ಮಾಲೀಕನಿಗೆ ಶಾಕ್: 80 ಲಕ್ಷ ಮೌಲ್ಯದ ಲ್ಯಾಪ್‌ಟಾಪ್ ಬಿಡಿಭಾಗ ಕದ್ದ ಅಪ್ಪ-ಮಗ ಅಂದರ್! | Bengaluru Father Son Arrested For Stealing Laptop Parts In Govindapura Sat



ಸಂಬಳದ ಕಿರಿಕ್ ಬೆನ್ನಲ್ಲೇ ಮಾಲೀಕನಿಗೆ ಶಾಕ್: 80 ಲಕ್ಷ ಮೌಲ್ಯದ ಲ್ಯಾಪ್‌ಟಾಪ್ ಬಿಡಿಭಾಗ ಕದ್ದ ಅಪ್ಪ-ಮಗ ಅಂದರ್! | Bengaluru Father Son Arrested For Stealing Laptop Parts In Govindapura Sat

ಸಂಬಳದ ವಿಚಾರಕ್ಕೆ ಮಾಲೀಕನೊಂದಿಗೆ ಜಗಳವಾಡಿದ ಯುವಕನೊಬ್ಬ, ತನ್ನ ತಂದೆಯೊಂದಿಗೆ ಸೇರಿ 80 ಲಕ್ಷ ಮೌಲ್ಯದ ಲ್ಯಾಪ್‌ಟಾಪ್ ಬಿಡಿಭಾಗಗಳನ್ನು ಕದ್ದಿದ್ದಾನೆ. ಈ ವಿಲಕ್ಷಣ ಪ್ರಕರಣವನ್ನು ಭೇದಿಸಿದ ಗೋವಿಂದಪುರ ಪೊಲೀಸರು, ಕೃತ್ಯ ನಡೆದ 12 ಗಂಟೆಯೊಳಗೆ ಅಪ್ಪ-ಮಗನನ್ನು ಬಂಧಿಸಿದ್ದಾರೆ.

ಬೆಂಗಳೂರು (ಮಾ.18): ಸಾಮಾನ್ಯವಾಗಿ ಕಳ್ಳತನದ ಪ್ರಕರಣಗಳಲ್ಲಿ ವೃತ್ತಿಪರ ಕಳ್ಳರು ಶಾಮೀಲಾಗಿರುತ್ತಾರೆ. ಆದರೆ ಇಲ್ಲಿ ಸಂಬಳದ ವಿಚಾರಕ್ಕೆ ಮಾಲೀಕನ ಜೊತೆ ಜಗಳ ಮಾಡಿಕೊಂಡ ಯುವಕನೊಬ್ಬ, ತನ್ನ ಅಪ್ಪನನ್ನೇ ಕಳ್ಳತನಕ್ಕೆ ಕರೆದೊಯ್ದು ಸಿಕ್ಕಿಬಿದ್ದಿರುವ ವಿಲಕ್ಷಣ ಘಟನೆ ಬೆಂಗಳೂರಿನ ಗೋವಿಂದಪುರದಲ್ಲಿ ನಡೆದಿದೆ. ಸುಮಾರು 80 ಲಕ್ಷ ರೂಪಾಯಿ ಮೌಲ್ಯದ ಲ್ಯಾಪ್‌ಟಾಪ್ ಬಿಡಿಭಾಗಗಳನ್ನು ಕಳವು ಮಾಡಿದ್ದ ಅಪ್ಪ-ಮಗನನ್ನು ಗೋವಿಂದಪುರ ಪೊಲೀಸರು ಕೇವಲ 12 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆಯ ಹಿನ್ನೆಲೆ:

ಬಂಧಿತ ಆರೋಪಿಗಳನ್ನು ಹೇಮಂತ್ (ಮಗ) ಮತ್ತು ಮಂಜುನಾಥ್ (ಅಪ್ಪ) ಎಂದು ಗುರುತಿಸಲಾಗಿದೆ. ಹೇಮಂತ್ ಕಳೆದ 6 ತಿಂಗಳಿನಿಂದ ಗೋವಿಂದಪುರ ವ್ಯಾಪ್ತಿಯಲ್ಲಿರುವ ‘ನಿತೀಶ್ ಎಲೆಕ್ಟ್ರಾನಿಕ್ ಶಾಪ್’ನಲ್ಲಿ ಕೆಲಸ ಮಾಡುತ್ತಿದ್ದ. ಈ ನಡುವೆ ಸಂಬಳದ ವಿಚಾರಕ್ಕೆ ಸಂಬಂಧಿಸಿದಂತೆ ಹೇಮಂತ್ ಮತ್ತು ಮಾಲೀಕ ನಿತೀಶ್ ನಡುವೆ ತೀವ್ರ ಕಿರಿಕ್ ನಡೆದಿತ್ತು. ಇದೇ ಸಿಟ್ಟಿನಲ್ಲಿ ಹೇಮಂತ್ ಕೆಲಸ ಬಿಟ್ಟು ಹೊರಬಂದಿದ್ದನು. ಆದರೆ ಮಾಲೀಕನಿಗೆ ಬುದ್ಧಿ ಕಲಿಸಬೇಕೆಂಬ ಹಗೆತನ ಮತ್ತು ಹಣದ ಹಪಾಹಪಿಯಿಂದ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದನು.

ಅಪ್ಪನನ್ನೂ ಕಳ್ಳತನಕ್ಕೆ ಇಳಿಸಿದ ಮಗ:

ಮಗ ಹೇಮಂತ್ ಮಾಲೀಕನ ಅಂಗಡಿಯಲ್ಲೇ ಕೆಲಸ ಮಾಡುತ್ತಿದ್ದರಿಂದ ಅಲ್ಲಿನ ಸಕಲ ಮಾಹಿತಿ ತಿಳಿದಿತ್ತು. ತನ್ನ ಸ್ಕೆಚ್‌ಗೆ ತನ್ನ ತಂದೆ ಮಂಜುನಾಥ್‌ನನ್ನೂ ಸಹಭಾಗಿ ಮಾಡಿಕೊಂಡಿದ್ದನು. ಮಂಜುನಾಥ್ ಅದೇ ಭಾಗದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದನು. ಕಳೆದ 13ನೇ ತಾರೀಖಿನಂದು ರಾತ್ರಿ ವೇಳೆ ಅಪ್ಪ-ಮಗ ಸೇರಿ ಎಲೆಕ್ಟ್ರಾನಿಕ್ಸ್ ಶಾಪ್‌ನ ಶಟರ್ ಮುರಿದು ಒಳ ನುಗ್ಗಿದ್ದಾರೆ.

80 ಲಕ್ಷದ ‘ರಾಮ್’ ಮತ್ತು ‘ಹಾರ್ಡ್ ಡಿಸ್ಕ್’ ಮಾಯ!

ಅಂಗಡಿಯಲ್ಲಿದ್ದ ಲ್ಯಾಪ್‌ಟಾಪ್‌ಗಳಿಗಿಂತ ಅವುಗಳ ಬಿಡಿಭಾಗಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಇದೆ ಎಂಬುದು ಹೇಮಂತ್‌ಗೆ ತಿಳಿದಿತ್ತು. ಹೀಗಾಗಿ ಆರೋಪಿಗಳು ಸುಮಾರು 700 ಲ್ಯಾಪ್‌ಟಾಪ್‌ಗಳನ್ನು ಬಿಚ್ಚಿ ಅವುಗಳಲ್ಲಿದ್ದ RAM ಬೋರ್ಡ್‌ಗಳು ಮತ್ತು ಹಾರ್ಡ್ ಡಿಸ್ಕ್‌ಗಳನ್ನು ಕಳವು ಮಾಡಿದ್ದಾರೆ. ಇದರ ಒಟ್ಟು ಮೌಲ್ಯ ಬರೋಬ್ಬರಿ 80 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಪೊಲೀಸರ ಮಿಂಚಿನ ಕಾರ್ಯಾಚರಣೆ:

ಕಳ್ಳತನದ ವಿಷಯ ತಿಳಿದ ಮಾಲೀಕ ನಿತೀಶ್ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಗಂಭೀರತೆ ಅರಿತ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾದರು. ಸಿಸಿಟಿವಿ ದೃಶ್ಯಾವಳಿ ಮತ್ತು ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಘಟನೆ ನಡೆದ ಕೇವಲ 12 ಗಂಟೆಯೊಳಗೆ ಆರೋಪಿಗಳಾದ ಹೇಮಂತ್ ಮತ್ತು ಮಂಜುನಾಥ್‌ನನ್ನು ಹೆಡೆಮುರಿ ಕಟ್ಟಿದ್ದಾರೆ.

ವಶಪಡಿಸಿಕೊಂಡ ಸೊತ್ತುಗಳು:

ಬಂಧಿತರಿಂದ 80 ಲಕ್ಷ ರೂಪಾಯಿ ಮೌಲ್ಯದ RAM ಬೋರ್ಡ್‌ಗಳು, ಹಾರ್ಡ್ ಡಿಸ್ಕ್‌ಗಳು ಹಾಗೂ ಕಳ್ಳತನ ಮಾಡಿದ್ದ ವಸ್ತುಗಳನ್ನು ಮಾರಾಟ ಮಾಡಿ ಇಟ್ಟುಕೊಂಡಿದ್ದ 2.29 ಲಕ್ಷ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಇಬ್ಬರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ. ಮಾಲೀಕನ ಜೊತೆಗಿನ ಕ್ಷುಲ್ಲಕ ಜಗಳಕ್ಕೆ ಅಪ್ಪ-ಮಗ ಇಬ್ಬರೂ ಈಗ ಜೈಲು ಪಾಲಾಗಿರುವುದು ಜನರಲ್ಲಿ ಚರ್ಚೆಗೆ ಕಾರಣವಾಗಿದೆ.



Source link

Leave a Reply

Your email address will not be published. Required fields are marked *