
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 17ನೇ ಬಜೆಟ್‌ನಲ್ಲಿ ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ನಾಲ್ಕು ಗ್ಯಾರಂಟಿ ಯೋಜನೆಗಳಿಗೆ 50,686 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದ್ದಾರೆ. ಆದರೆ, ಯುವನಿಧಿ ಯೋಜನೆಗೆ ಯಾವುದೇ ಪ್ರತ್ಯೇಕ ಅನುದಾನವನ್ನು ಘೋಷಿಸದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರು (ಮಾ.7) ದಾಖಲೆಯ 17ನೇ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿವೃದ್ಧಿ ಸವಾಲಿನ ನಡುವೆಯೇ ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿ ನಾಲ್ಕು ಗ್ಯಾರಂಟಿ ಯೋಜನೆಗಳಿಗೆ ಸಮರ್ಪಕ ಅನುದಾನ ಮೀಸಲಿಟ್ಟಿದ್ದಾರೆ. ಆದರೆ, ಯುವನಿಧಿಗೆ ಯಾವುದೇ ಅನುದಾನ ಒದಗಿಸದಿರುವುದು ಕುತೂಹಲ ಹುಟ್ಟು ಹಾಕಿದೆ.
ಪ್ರಸಕ್ತ ಸಾಲಿನ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಸಿಂಹಪಾಲು ಅನುದಾನ ಘೋಷಿಸಲಾಗಿದ್ದು, 50,686 ಕೋಟಿ ರು. ಒದಗಿಸಲಾಗಿದೆ. ಈ ಪೈಕಿ ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ರು, ಅನ್ನಭಾಗ್ಯ ಯೋಜನೆಗೆ 6,200 ಕೋಟಿ ರು, ಗೃಹಜ್ಯೋತಿ ಯೋಜನೆಗೆ 10,578 ಕೋಟಿ ರು. ಹಾಗೂ ಶಕ್ತಿ ಯೋಜನೆಗೆ 5,300 ಕೋಟಿ ರು. ಮೀಸಲಿಡಲಾಗಿದೆ. ಯುವನಿಧಿಗೆ ಪ್ರತ್ಯೇಕವಾಗಿ ಯಾವುದೇ ಅನುದಾನ ನೀಡಿಲ್ಲ.
ರಾಜ್ಯ ಸರ್ಕಾರ 2023-24ನೇ ಸಾಲಿನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಒಟ್ಟು 52 ಸಾವಿರ ಕೋಟಿ ರು. ಮೀಸಲಿಟ್ಟಿತ್ತು. ನಂತರ 2025-26ನೇ ಸಾಲಿನಲ್ಲಿ 1000 ಕೋಟಿ ರು.ನಷ್ಟು ಅನುದಾನ ಕಡಿತ ಮಾಡಿ 51,034 ಕೋಟಿ ರು. ಒದಗಿಸಲಾಗಿತ್ತು. ಶಕ್ತಿಯೋಜನೆಗೆ 5,300 ಕೋಟಿ ರು., ಗೃಹಲಕ್ಷ್ಮಿಗೆ 28608 ಕೋಟಿ ರು. ಮತ್ತು ಗೃಹಜ್ಯೋತಿಗೆ 10,100 ಕೋಟಿ ರು.ಅನುದಾನ ಕೊಡಲಾಗಿತ್ತು. ಈ ಬಾರಿ ಗೃಹಜ್ಯೋತಿ ಯೋಜನೆಗೆ 478 ಕೋಟಿ ರು.ಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಇಂದಿರಾ ಕಿಟ್‌ನಿಂದ ಉಳಿತಾಯ:
ಅನ್ನಭಾಗ್ಯ ಯೋಜನೆಯಲ್ಲಿ ಹೆಚ್ಚುವರಿ 5 ಕೆಜಿ ಅಕ್ಕಿಯೊಂದಿಗೆ ಕೇಂದ್ರ ಸರ್ಕಾರ ಕೊಡುತ್ತಿರುವ ಉಚಿತ 5 ಕೆಜಿ ಸೇರಿ ಪ್ರತಿ ಫಲಾನುಭವಿಗೆ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತಿತ್ತು. ಇದರಿಂದ ಅಕ್ಕಿ ದುರ್ಬಳಕೆ ಪ್ರಕರಣಗಳು ಹೆಚ್ಚಾಗಿದ್ದರಿಂದ ನಿಯಂತ್ರಣ ತರಲು ಪ್ರಸಕ್ತ ಸಾಲಿನಿಂದ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ಇಂದಿರಾ ಕಿಟ್ ಕೊಡಲು ಸರ್ಕಾರ ನಿರ್ಧರಿಸಿರುವುದರಿಂದ ವರ್ಷಕ್ಕೆ 300 ಕೋಟಿ ರು.ನಷ್ಟು ಉಳಿತಾಯದ ಗುರಿ ಹೊಂದಲಾಗಿದೆ.