
ಶಾಲೆಗಳಲ್ಲಿ ‘ವಂದೇ ಮಾತರಂ’ ಗೀತೆಯನ್ನು ಕಡ್ಡಾಯವಾಗಿ ಹಾಡಬೇಕೆಂಬ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ.. ಇದೇ ರೀತಿಯ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿರುವ ಹಿನ್ನೆಲೆ ಹೈಕೋರ್ಟ್ ವಿಚಾರಣೆಯನ್ನು ಏಪ್ರಿಲ್ 9ಕ್ಕೆ ಮುಂದೂಡಿದೆ.
ಬೆಂಗಳೂರು: ಶಾಲೆಗಳಲ್ಲಿ ಪ್ರತಿದಿನ ‘ವಂದೇ ಮಾತರಂ’ ಗೀತೆಯನ್ನು ಎಲ್ಲ ಆರು ಚರಣಗಳೊಂದಿಗೆ ಕಡ್ಡಾಯವಾಗಿ ಹಾಡುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಶಿಷ್ಟಾಚಾರ ಮಾರ್ಗಸೂಚಿಗಳನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏ.9ಕ್ಕೆ ಮುಂದೂಡಿದೆ.
ಈ ಕುರಿತು ಬೆಂಗಳೂರಿನ ವಕೀಲ ಸೋಮಶೇಖರ್ ರಾಜವಂಶಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಇದನ್ನೂ ಓದಿ:1 ಟಿಕೆಟ್ ಕೊಡ್ತಾರೆ, ಕುಟುಂಬ ಕರೆದೊಯ್ಯೋದ್ಹೇಗೆ? ಶಾಸಕರಿಗೆ ಕನಿಷ್ಠ 5 ಐಪಿಎಲ್ ಟಿಕೆಟ್ ನೀಡುವಂತೆ ವಿಧಾನಸಭೆಯಲ್ಲಿ ಆಗ್ರಹ!
ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಕೆ. ಅರವಿಂದ ಕಾಮತ್ ಹಾಜರಾಗಿ, ಸುಪ್ರೀಂಕೋರ್ಟ್‌ನಲ್ಲಿ ಇಂತಹದ್ದೇ ಮನವಿಯುಳ್ಳ ಅರ್ಜಿಯೊಂದು ಸಲ್ಲಿಕೆಯಾಗಿತ್ತು. ಈ ಅರ್ಜಿಯಲ್ಲಿ ಪ್ರಶ್ನಿಸಲಾಗಿರುವ ಆದೇಶವನ್ನೇ ಅಲ್ಲೂ ಸಹ ಪ್ರಶ್ನಿಸಲಾಗಿತ್ತು. ಆ ಅರ್ಜಿಯನ್ನು ನಿನ್ನೆಯಷ್ಟೇ (ಮಾರ್ಚ್ 25) ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಇನ್ನೂ ಆದೇಶ ಬಿಡುಗಡೆಯಾಗಿಲ್ಲ. ಅರ್ಜಿ ವಿಚಾರಣೆ ಮುಂದೂಡಿದರೆ, ಆದೇಶ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಏ.9ಕ್ಕೆ ಮುಂದೂಡಿತು.