
ಬೆಳಗಾವಿಯ ಬೈಲಹೊಂಗಲದ ವೈದ್ಯರೊಬ್ಬರು ತಮ್ಮ ಪೋಷಕರ ಕೊನೆಯಾಸೆಯಂತೆ ಅವರ ದೇಹಗಳನ್ನು ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ದಾನ ಮಾಡಿದ್ದಾರೆ. ತಂದೆಯ ಬಳಿಕ ಇತ್ತೀಚೆಗೆ ನಿಧನರಾದ ತಾಯಿಯ ದೇಹವನ್ನೂ ಮಗ ಡಾ.ಮಹಾಂತೇಶ ರಾಮಣ್ಣನವರ್ ಅವರು ವಿದ್ಯಾರ್ಥಿಗಳ ಪಾಠಕ್ಕಾಗಿ ಬಳಸಿಕೊಂಡಿದ್ದಾರೆ.
ಬದುಕಿದ್ದಾಗ ಅದೆಷ್ಟು ಪುಣ್ಯ ಕಾರ್ಯಗಳು ಮಾಡುತ್ತೆವೆಯೋ ಗೊತ್ತಿಲ್ಲ. ಅದೆಷ್ಟು ಜನರಿಗೆ ಸಹಾಯ ಮಾಡಿರುತ್ತೇವೋ ಇಲ್ಲವೋ ಗೊತ್ತಿರುವುದಿಲ್ಲ. ಆದರೆ ಸತ್ತ ಮೇಲೆಯೂ ಇತರರಿಗೆ ನೆರವಾಗುವುದು ಇದೆಯಲ್ಲ, ಅದಕ್ಕಿಂತ ಪುಣ್ಯಕಾರ್ಯ ಮತ್ತೊಂದಿಲ್ಲ ಎಂದೇ ಹೇಳಲಾಗುತ್ತದೆ. ಅದೆಷ್ಟೋ ಮಂದಿ ಕಣ್ಣು, ಕಿಡ್ನಿ ಸೇರಿದಂತೆ ತಮ್ಮ ಅಂಗಾಂಗಗಳನ್ನು ದಾನ ಮಾಡಿ ನಿಧನರಾದ ಮೇಲೂ ಇತರರ ಜೀವನದಲ್ಲಿ ಬೆಳಕಾಗಿ ಹೋಗಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಕಣ್ಣುಗಳು ನಾಲ್ವರಿಗೆ ಬೆಳಕು ನೀಡಿದ ಬೆನ್ನಲ್ಲೇ ಎಷ್ಟೋ ಮಂದಿ ಇಂಥ ಕಾರ್ಯಕ್ಕೆ ಮುಂದಾಗಿರುವುದೂ ಇದೆ. ಅಂಗಾಂಗಗಳನ್ನು ದಾನ ಮಾಡುವ ಮಂದಿ ಹಲವರು ಇದ್ದರೂ, ದೇಹ ದಾನವನ್ನು ಮಾಡುವವರು ಅಪರೂಪ ಎಂದೇ ಹೇಳಬೇಕು.
ದೇಹ ದಾನ
ಕೆಲ ತಿಂಗಳ ಹಿಂದೆ, ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಶಿಕ್ಷಕಿಯಾಗಿದ್ದ ತಮ್ಮ ತಾಯಿ ಸುಶೀಲಮ್ಮ ಅವರ ದೇಹ ಮತ್ತು ನೇತ್ರಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದರು. ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ಕಣ್ಣುಗಳನ್ನು ಮತ್ತು ರಾಮಯ್ಯ ಮೆಡಿಕಲ್ ಕಾಲೇಜಿಗೆ ದೇಹವನ್ನು ದಾನವಾಗಿ ನೀಡಿದ್ದರು. ಇದೀಗ ಅಂಥದ್ದೇ ಇನ್ನೊಂದು ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ವೈದ್ಯರೊಬ್ಬರ ಅಪ್ಪ-ಅಮ್ಮ. ದಾನಗಳಲ್ಲಿ ಯಾವುದು ಶ್ರೇಷ್ಠ ಎನ್ನುವುದು ಹೇಳುವುದು ಕಷ್ಟವೇ. ಒಬ್ಬೊಬ್ಬರು ಒಂದೊಂದು ಹೇಳುವುದು ಉಂಟು. ಆದರೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ತಮ್ಮ ಅಪ್ಪ-ಅಮ್ಮನ ದೇಹವನ್ನೇ ಕತ್ತರಿಸಿ ವಿದ್ಯಾರ್ಥಿಗಳ ಮುಂದೆ ಇಟ್ಟಿದ್ದಾರೆ ಈ ವೈದ್ಯ. ಅಷ್ಟಕ್ಕೂ ಅವರು ಸುಮ್ಮನೇ ಹಾಗೆ ಮಾಡಲಿಲ್ಲ. ಮಗನನ್ನು ವೈದ್ಯರನ್ನಾಗಿ ಮಾಡಿದ ಹೆಮ್ಮೆಯ ಅಪ್ಪ-ಅಮ್ಮ ಅವರ ಕೊನೆ ಆಸೆ ಇದೇ ಆಗಿತ್ತು ಎನ್ನುವುದು ಕುತೂಹಲವಾಗಿದೆ.
ಅಪ್ಪ-ಅಮ್ಮನ ಕೊನೆಯ ಆಸೆ
ಈಚೆಗೆ, ಸುಶೀಲಾದೇವಿ ರಾಮಣ್ಣವರ್ 101ನೇ ವಯಸ್ಸಿನಲ್ಲಿ ನಿಧನರಾದರು. ಕೆಲ ವರ್ಷಗಳ ಹಿಂದೆ ಇವರ ಪತಿ ಬಸವಣಪ್ಪ ರಾಮಣ್ಣವರ್ ನಿಧನರಾಗಿದ್ದರು. ಆಗ ಅಪ್ಪ ಮತ್ತು ಈಗ ಅಮ್ಮ ಇಬ್ಬರೂ ತಮ್ಮ ಕೊನೆಯ ಆಸೆಯನ್ನು ಕೆಎಲ್ಇ ಕಂಕಣವಾಡಿ ಆಯುರ್ವೇದ ಕಾಲೇಜಿನಲ್ಲಿ ವೈದ್ಯರಾಗಿರುವ ಮಗ ಡಾ.ಮಹಾಂತೇಶ ರಾಮಣ್ಣನವರ ಅವರಿಗೆ ತಿಳಿಸಿದ್ದರು. ಅದರಂತೆ ಆಗಲೂ ವೈದ್ಯರು ಅಪ್ಪನ ಆಸೆಯನ್ನು ಈಡೇರಿಸಿ ಅಪ್ಪನ ದೇಹವನ್ನು ಪಾಠಕ್ಕಾಗಿ ಬಳಸಿಕೊಂಡಿದ್ದರು. ಇದೀಗ ಅಮ್ಮನ ದೇಹವನ್ನೂ ಛೇದಿಸಿ ಮಕ್ಕಳ ಮುಂದಿಟ್ಟಿದ್ದಾರೆ. ಈ ಕಾರ್ಯಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ.
ವಿಧಿ-ವಿಧಾನ
ಆಸ್ಪತ್ರೆಗೆ ದೇಹದಾನ ಮಾಡುವುದಕ್ಕೂ ಮುನ್ನ ಕೆಲ ಧಾರ್ಮಿಕ ವಿಧಿಗಳ ಪ್ರಕಾರ ಪೂಜೆ ಸಲ್ಲಿಸಿ, ಗೌರವವನ್ನ ಅರ್ಪಿಸಲಾಗಿದೆ. ಬಳಿಕ ಆಗ ತಂದೆ ಮತ್ತು ಈಗ ತಾಯಿಯ ದೇಹವನ್ನು ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಇಡಲಾಗಿದೆ. ಈ ಮೂಲಕ ರಾಮಣ್ಣನವರ ಕುಟುಂಬವು ಸಮಾಜಕ್ಕೆ ಮಾದರಿಯಾಗಿದೆ. ಇಂತಹ ಕೆಲಸಕ್ಕೆ ಸಾರ್ವಜನಿಕರು ಕೂಡ ಮುಂದಾಗಬೇಕು ಅಂತಾ ಕರೆ ಕೂಡ ಕೊಟ್ಟಿದ್ದಾರೆ.