
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಣಜಿ ಫೈನಲ್ನ ಮೊದಲ ದಿನ ಜಮ್ಮು ಮತ್ತು ಕಾಶ್ಮೀರ ತಂಡವು ಕರ್ನಾಟಕದ ವಿರುದ್ಧ ಮೇಲುಗೈ ಸಾಧಿಸಿದೆ. ಶುಭಂ ಸಿಂಗ್ ಪುಂಡೀರ್ ಅವರ ಅಜೇಯ ಶತಕ (117*) ಹಾಗೂ ಯಾವರ್ ಹಸನ್ (88) ಮತ್ತು ಅಬ್ದುಲ್ ಸಮದ್ (52*) ಅವರ ಅರ್ಧಶತಕಗಳ ನೆರವಿನಿಂದ 2 ವಿಕೆಟ್ಗೆ 284 ರನ್ ಗಳಿಸಿದೆ.
ಅಜೀಜ್ ಅಹ್ಮದ ಬಳಗಾನೂರ, ಕನ್ನಡಪ್ರಭ
ಹುಬ್ಬಳ್ಳಿ: ಇಲ್ಲಿನ ರಾಜನಗರದ ಕೆಎಸ್ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಫೈನಲ್ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಮ್ಮು ಮತ್ತು ಕಾಶ್ಮೀರ ತಂಡ ಶುಭಂ ಸಿಂಗ್ ಪುಂಡೀರ್ ಅವರ ಅಜೇಯ ಶತಕದ ನೆರವಿನಿಂದ ಮೊದಲ ದಿನ ಮೇಲುಗೈ ಸಾಧಿಸಿದೆ. ದಿನವಿಡೀ ಕರ್ನಾಟಕದ ಬೌಲರ್ಗಳನ್ನು ಕಾಡಿದ ಜಮ್ಮು ಕಾಶ್ಮೀರದ ಬ್ಯಾಟರ್ಗಳು ದಿನದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 284 ರನ್ ಗಳಿಸಿದ್ದಾರೆ.
ಶುಭಂ ಪುಂಡೀರ್ (117) ಅಜೇಯ ಶತಕದ ಜೊತೆಗೆ ಆರಂಭಿಕ ಆಟಗಾರ ಯಾವರ್ ಹಸನ್ (88) ಹಾಗೂ ಅಬ್ದುಲ್ ಸಮದ್ (52*) ಅರ್ಧ ಶತಕ ದಾಖಲಿಸಿ ತಂಡ ದೊಡ್ಡ ಮೊತ್ತ ಗಳಿಸಲು ನೆರವಾದರು. ಕರ್ನಾಟಕದ ಪರವಾಗಿ ಪ್ರಸಿದ್ಧ ಕೃಷ್ಣ ಎರಡೂ ವಿಕೆಟ್ ಗಳಿಸಿದರೆ, ಉಳಿದವರು ವಿಫಲರಾದರು.
ಜಮ್ಮು ಕಾಶ್ಮೀರ 18 ರನ್ ಗಳಿಸಿದಾಗ ಕಮ್ರಾನ್ ಇಕ್ಬಾಲ್ (6)ರ ವಿಕೆಟ್ ಕಳೆದುಕೊಂಡಿತು. ನಂತರ ಯಾವರ್ ಹಸನ್ ಅವರನ್ನು ಕೂಡಿಕೊಂಡ ಶುಭಂ ದಿನವಿಡೀ ಕರ್ನಾಟಕದ ಬೌಲರ್ಗಳಿಗೆ ಸಿಂಹಸ್ವಪ್ನರಾದರು. ಪ್ರತಿಯೊಬ್ಬರನ್ನೂ ಲೀಲಾಜಾಲವಾಗಿ ಎದುರಿಸಿದ ಶುಭಂ ಕೆಟ್ಟ ಚೆಂಡನ್ನು ದಂಡಿಸಿದರು. ಯಾವರ್ ಜೊತೆ ಶತಕದ ಜತೆಯಾಟ ನೀಡಿದ ಅವರು ಬಳಿದ ಮೂರನೇ ವಿಕೆಟ್ಗೂ ಅಬ್ದುಲ್ ಸಮದ್ ಜೊತೆ ಅಜೇಯ ಶತಕದ ಜತೆಯಾಟದಲ್ಲಿ ಪಾಲ್ಗೊಂಡರು.
ಶುಭಂ 2 ಸಿಕ್ಸರ್, 12 ಬೌಂಡರಿಗಳೊಂದಿಗೆ 117 (221 ಎಸೆತ) ರನ್ ಕಲೆ ಹಾಕಿದರೆ, ಅಬ್ದುಲ್ ಸಮದ್ 1 ಸಿಕ್ಸ್, 5 ಬೌಂಡರಿ ನೆರವಿನೊಂದಿಗೆ 52 (67) ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡರು.
ಆಕರ್ಷಕ ಶತಕ ಸಿಡಿಸಿದ ಯಾವರ್ ಹಸನ್
ಆರಂಭಿಕ ಆಟಗಾರನಾಗಿ ಮೈದಾನಕ್ಕಿಳಿದಿದ್ದ ಯಾವರ್ ಹಸನ್ 77 ಎಸೆತದಲ್ಲಿ 10 ಬೌಂಡರಿಗಳೊಂದಿಗೆ ಅರ್ಧಶತಕ ಸಿಡಿಸಿದರು. ಭೋಜನ ವಿರಾಮಕ್ಕೆ ಜಮ್ಮು-ಕಾಶ್ಮೀರ ತಂಡವು 34 ಓವರ್ಗಳಲ್ಲಿ 104 ರನ್ ಗಳಿಸಿತು. 88 ರನ್ ಗಳಿಸಿ ಶತಕದ ಸನಿಹದಲ್ಲಿದ್ದ ಯಾವರ್ ಹಸನ್ ಪ್ರಸಿದ್ಧ ಕೃಷ್ಣ ಬೌಲಿಂಗ್ನಲ್ಲಿ ಕೆ.ಎಲ್. ರಾಹುಲ್ಗೆ ಕ್ಯಾಚ್ ನೀಡಿದರು. ಬಳಿಕ ಮೈದಾನಕ್ಕೆ ಬಂದ ನಾಯಕ ಪಾರಸ್ ಡೋಗ್ರಾ 1 ಬೌಂಡರಿಯೊಂದಿಗೆ 9 (48) ರನ್ ಗಳಿಸಿದಾಗ ವೈಶಾಖ್ ಬೌಲಿಂಗ್ನಲ್ಲಿ ಬೌನ್ಸರ್ಗೆ ಉತ್ತರಿಸುವ ಯತ್ನದಲ್ಲಿ ಗಾಯಗೊಂಡು ನಿವೃತ್ತಿ ಪಡೆದರು.
ಬಳಿಕ ಶುಭಂ ಅವರನ್ನು ಕೂಡಿಕೊಂಡ ಅನುಭವಿ ಸಮದ್ ಉತ್ತಮ ಬ್ಯಾಟಿಂಗ್ ನಡೆಸಿದರು. ಶಿಖರ್ ಶೆಟ್ಟಿ ಬೌಲ್ನಲ್ಲಿ ಸಿಕ್ಸ್ ಹೊಡೆಯುವ ಮೂಲಕ ಶುಭಂ ತಮ್ಮ ಶತಕ ಪೂರೈಸಿದರು.
ಸ್ಕೋರ್:
ಜಮ್ಮು-ಕಾಶ್ಮೀರ ಮೊದಲ ಇನ್ನಿಂಗ್ಸ್ (1ನೇ ದಿನದಂತ್ಯಕ್ಕೆ) 87 ಓವರಲ್ಲಿ 284/2 (ಶುಭಂ ಪುಂಡೀರ್ 117*, ಯಾವರ್ ಹಸನ್ 88, ಅಬ್ದುಲ್ ಸಮದ್ 52*, ಪ್ರಸಿದ್ 2-36)
ಮಾಜಿ ಕ್ರಿಕೆಟಿಗಗೆ ಕೆಎಸ್ಸಿಎ ಗೌರವ । ಪೆವಿಲಿಯನ್ ಅನಾವರಣಗೊಳಿಸಿದ ಬಿಸಿಸಿಐ ಅಧ್ಯಕ್ಷ
ಹುಬ್ಬಳ್ಳಿ: ಇಲ್ಲಿನ ರಾಜನಗದ ಕೆಎಸ್ಸಿಎ ಮೈದಾನದ ಪೆವಿಲಿಯನ್ಗೆ ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಅವರ ಹೆಸರಿಟ್ಟಿದ್ದು, ಪೆವಿಲಿಯನ್ ಅನ್ನು ಮಂಗಳವಾರ ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಅನಾವರಣಗೊಳಿಸಿದರು. ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಕಾರ್ಯದರ್ಶಿ ಸಂತೋಷ್ ಮೆನನ್, ಉಪಾಧ್ಯಕ್ಷ ಸುಜಿತ್ ಸೋಮ್ಸುಂದರ್, ವಕ್ತಾರ ವಿನಯ್ ಮೃತ್ಯುಂಜಯ ಸೇರಿ ರಾಜ್ಯ ಕ್ರಿಕೆಟ್ ಸಂಸ್ಥೆಯ ವಿವಿಧ ಪದಾಧಿಕಾರಿಗಳು, ಸುನಿಲ್ರ ಪತ್ನಿ ಡಾ.ರವ್ನೀತ್ ಜೋಶಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಮ್ಮ ಹೆಸರಿನ ಪೆವಿಲಿಯನ್ ನೋಡಿ ಜೋಶಿ ಭಾವುಕರಾದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಬಾಲ್ಯದಲ್ಲಿ ಗದಗ ಹಾಗೂ ಹುಬ್ಬಳ್ಳಿಯಲ್ಲಿ ಕಳೆದ ದಿನಗಳನ್ನು ಸ್ಮರಿಸಿದರು. ‘ನನಗೆ ಇಷ್ಟು ದೊಡ್ಡ ಕೀರ್ತಿ ಸಿಗುತ್ತದೆ ಎಂದುಕೊಂಡಿರಲಿಲ್ಲ. ರಾಷ್ಟ್ರ ಕವಿ ಕುವೆಂಪು ಅವರು ಹೇಳಿದಂತೆ ನಿನ್ನ ಇಂದಿನ ದಿನ ಯಾರಿಗಾದರೂ ಪ್ರೇರಣೆ ಆಗುತ್ತದೆ ಎಂಬ ಮಾತು ನನ್ನ ಜೀವನದಲ್ಲಿಂದು ಸತ್ಯವಾಗಿದೆ. ನನ್ನ ಜೀವಮಾನದಲ್ಲಿ ಭಾರತದ ಪರ ಆಡುತ್ತೇನೆ ಎಂದುಕೊಂಡಿರಲಿಲ್ಲ. ನನ್ನ ಕೋಚ್ ಆದ ದಯಾನಂದ ಶೆಟ್ಟಿ ಹಾಗೂ ಎ.ಕೆ. ಕ್ರಿಕೆಟ್ ಅಕಾಡೆಮಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದರು.
ಭವಿಷ್ಯ ನೀಡಿದ್ದು ಹುಬ್ಬಳ್ಳಿ:
‘ನನಗೆ ಜನ್ಮ ನೀಡಿದ ಸ್ಥಳ ಗದಗ ಆದರೂ ಕ್ರಿಕೆಟ್ ಭವಿಷ್ಯ ಕಟ್ಟಿಕೊಟ್ಟಿದ್ದು ಹುಬ್ಬಳ್ಳಿ. ನಾನು ಈ ಮಟ್ಟಕ್ಕೆ ಬೆಳೆಯಲು ನನ್ನ ಪರಿಶ್ರಮ ಕಾರಣ’ ಎಂದರು.