
ಒಎನ್‌ಜಿಸಿ ತೈಲ ಘಟಕದಲ್ಲಿ ದುರಸ್ತಿ ಕಾರ್ಯದ ವೇಳೆ ಭಾರಿ ಸ್ಪೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ. ತೈಲ ಬಾವಿಯಿಂದ ಜ್ವಾಲೆಗಳು ಬಾನೆತ್ತರಕ್ಕೆ ಏಳುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸುತ್ತಮುತ್ತಲಿನ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಒಎನ್‌ಜಿಸಿ ತೈಲ ಬಾವಿಗೆ ಬೆಂಕಿ ಬಿದ್ದ ಪರಿಣಾಮ ತೈಲ ಬಾವಿಯಿಂದ ಬಾನ್ನೆತ್ತರಕ್ಕೆ ಜ್ವಾಲೆಗಳು ಏಳುತ್ತಿದ್ದು, ಬೆಂಕಿ ಧಗಧಗಿಸುತ್ತಿದೆ. ಬೆಂಕಿಯ ಕಾರಣದಿಂದಾಗಿ ಒಎನ್‌ಜಿಸಿ ತೈಲ ಘಟಕದ ಸುತ್ತಮುತ್ತಲೂ ವಾಸಿಸುವ ಜನರನ್ನು ಬೇರೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಆಂಧ್ರಪ್ರದೇಶದ ಕೋನಾಸೀಮಾ ಜಿಲ್ಲೆಯ ರಾಜೊಲೆ ಪ್ರದೇಶದ ಇರುಸುಮಂದ ಗ್ರಾಮದಲ್ಲಿರುವ ಒಎನ್‌ಜಿಸಿ ತೈಲ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಿನ್ನೆ ರಿಪೇರಿ ಕೆಲಸ ಮಾಡುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.
ತೈಲ ಬಾವಿ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ನಂತರ ವರ್ಕ್‌ಓವರ್ ರಿಗ್ ಬಳಸಿ ದುರಸ್ತಿ ಕಾರ್ಯಗಳು ನಡೆಯುತ್ತಿರುವಾಗ ಈ ಘಟನೆ ಸಂಭವಿಸಿದೆ. ದುರಸ್ತಿ ಸಮಯದಲ್ಲಿ, ಪ್ರಬಲವಾದ ಸ್ಪೋಟದೊಂದಿಗೆ ಕಚ್ಚಾ ತೈಲದೊಂದಿಗೆ ಬೆರೆಸಿದ ಬೃಹತ್ ಪ್ರಮಾಣದ ಅನಿಲ ಬಿಡುಗಡೆಯಾಗಿ ಅದು ಗಾಳಿಯಲ್ಲಿ ಎತ್ತರಕ್ಕೆ ಹಾರಿದೆ. ಈ ಲೀಕ್ ಆದ ಗ್ಯಾಸ್‌ನಿಂದ ಬೆಂಕಿ ಕಾಣಿಸಿಕೊಂಡಿತು ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಬೆಂಕಿ ತೀವ್ರಗೊಂಡ ಹಿನ್ನೆಲೆಯಲ್ಲಿ ಸುತ್ತಮುತ್ತಲೂ ವಾಸ ಮಾಡುವ ಗ್ರಾಮದ ಜನರನ್ನು ಬೇರೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಬೆಂಕಿ ಹಾಗೂ ಅನಿಲ ಸೋರಿಕೆಯಿಂದಾಗಿ ಇರುಸುಮಂಡ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟವಾದ ಮಂಜಿನಂತೆ ಅನಿಲ ಮತ್ತು ಹೊಗೆಯ ದಟ್ಟ ಮೋಡಗಳು ಹರಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ನನಗೆ ಅಪ್ಪ ಬೇಕು, ಅಪ್ಪನ ಜೊತೆ ಇರುವೆ: ಪೋಷಕರ ವಿಚ್ಚೇದನದ ನಂತರ ಗೋಳಾಡಿದ 11 ವರ್ಷದ ಬಾಲಕ