ರಮಾಕಾಂತ ಎಂಬ ವ್ಯಕ್ತಿಯು ಫೇಸ್‌ಬುಕ್‌ನಲ್ಲಿ ಬಸವಣ್ಣ ಮತ್ತು ಅಕ್ಕಮಹಾದೇವಿಯವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಾನೆ. ಈ ಕೃತ್ಯವನ್ನು ಖಂಡಿಸಿ ವಿಜಯಪುರದಲ್ಲಿ ಬಸವ ಅನುಯಾಯಿಗಳು ಮತ್ತು ಕನ್ನಡಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿ, ಆರೋಪಿಯ ಬಂಧನಕ್ಕೆ ಆಗ್ರಹಿಸಿದ್ದಾರೆ.
ವಿಜಯಪುರ (ಮಾ.12): ಬಸವಣ್ಣನವರು ದೇವರಲ್ಲ, ಅವರು ಕಾಮುಕ ಹಾಗೂ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರು ಎಂಬ ಹಸಿಬಿಸಿ ಸುಳ್ಳುಗಳನ್ನು ಹರಡಿದ್ದಲ್ಲದೆ, ಅಕ್ಕಮಹಾದೇವಿಯೂ ಅಂಥವಳೇ ಎಂದು ರಮಾಕಾಂತ ಎಂಬ ವ್ಯಕ್ತಿ ತನ್ನ ಫೇಸ್‌ಬುಕ್ ಖಾತೆಯಲ್ಲಿ ಕೀಳುಮಟ್ಟದ ಪದಬಳಕೆಯೊಂದಿಗ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾನೆ. ಈ ಪೋಸ್ಟ್ ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಬಸವಾದಿ ಶರಣರ ಅನುಯಾಯಿಗಳು ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ವಿಶ್ವಗುರು ಬಸವಣ್ಣ ಹಾಗೂ ಶಿವಶರಣೆ ಅಕ್ಕಮಹಾದೇವಿ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಕೆಟ್ಟದಾಗಿ ಮತ್ತು ಅವಮಾನಕಾರಿಯಾಗಿ ಪೋಸ್ಟ್ ಮಾಡಿರುವ ಘಟನೆ ವಿಜಯಪುರದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಿಂದನಾತ್ಮಕ ಕೃತ್ಯ ಎಸಗಿದ ರಮಾಕಾಂತ ಎಂಬ ವ್ಯಕ್ತಿಯನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಜಿಲ್ಲೆಯಾದ್ಯಂತ ಬಸವ ಅನುಯಾಯಿಗಳು ಬೀದಿಗಿಳಿದಿದ್ದಾರೆ.
ಏನಿದು ಘಟನೆ?:
ರಮಾಕಾಂತ ಎಂಬ ವ್ಯಕ್ತಿ ತನ್ನ ಫೇಸ್‌ಬುಕ್ ಖಾತೆಯಲ್ಲಿ ಸಮಾಜದ ಆರಾಧ್ಯ ದೈವಗಳಾದ ಬಸವಣ್ಣ ಹಾಗೂ ಅಕ್ಕಮಹಾದೇವಿಯವರ ಬಗ್ಗೆ ಅತ್ಯಂತ ಅಶ್ಲೀಲ ಹಾಗೂ ನಿಂದನಾತ್ಮಕ ಶಬ್ದಗಳನ್ನು ಬಳಸಿ ಪೋಸ್ಟ್ ಮಾಡಿದ್ದಾನೆ. ಬಸವಣ್ಣನವರು ದೇವರಲ್ಲ, ಅವರು ಕಾಮುಕ ಹಾಗೂ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರು ಎಂಬ ಹಸಿಬಿಸಿ ಸುಳ್ಳುಗಳನ್ನು ಹರಡಿದ್ದಲ್ಲದೆ, ಅಕ್ಕಮಹಾದೇವಿಯವರ ಬಗ್ಗೆಯೂ ಅತ್ಯಂತ ಕೀಳುಮಟ್ಟದ ಪದಬಳಕೆ ಮಾಡಿದ್ದಾನೆ. ಈ ಆಕ್ಷೇಪಾರ್ಹ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನಾಡಿನಾದ್ಯಂತ ಶರಣರ ಅನುಯಾಯಿಗಳ ಮನಸ್ಸಿಗೆ ತೀವ್ರ ನೋವುಂಟಾಗಿದ್ದು, ಕಿಡಿಗೇಡಿಯ ವಿರುದ್ಧ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ.
ಡಿಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ:
ಘಟನೆಯನ್ನು ಖಂಡಿಸಿ ವಿಜಯಪುರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬಸವಾದಿ ಶರಣರ ಅನುಯಾಯಿಗಳು ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ರಮಾಕಾಂತ ಎಂಬ ವ್ಯಕ್ತಿ ಉದ್ದೇಶಪೂರ್ವಕವಾಗಿ ಸಮಾಜದ ಶಾಂತಿ ಕದಡಲು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಇಂತಹ ಕೃತ್ಯ ಎಸಗಿದ್ದಾನೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಘೋಷಣೆಗಳನ್ನು ಕೂಗುವ ಮೂಲಕ ಜಿಲ್ಲಾಡಳಿತದ ಗಮನ ಸೆಳೆದರು.

ಸರ್ಕಾರಕ್ಕೆ ಮನವಿ ಮತ್ತು ಎಚ್ಚರಿಕೆ:
ಪ್ರತಿಭಟನಾಕಾರರು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. “ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ. ಅಂತಹ ಮಹಾನ್ ಚೇತನಕ್ಕೆ ಅವಮಾನ ಮಾಡಿರುವುದು ಇಡೀ ಮಾನವಕುಲಕ್ಕೆ ಮಾಡಿದ ಅವಮಾನ. ಆರೋಪಿ ರಮಾಕಾಂತನನ್ನು ಕೂಡಲೇ ಪತ್ತೆ ಹಚ್ಚಿ ಅರೆಸ್ಟ್ ಮಾಡಬೇಕು. ಸೈಬರ್ ಕ್ರೈಂ ಅಡಿಯಲ್ಲಿ ಆತನ ವಿರುದ್ಧ ಕಠಿಣ ಪ್ರಕರಣ ದಾಖಲಿಸಬೇಕು” ಎಂದು ಒತ್ತಾಯಿಸಿದರು.
ಒಂದು ವೇಳೆ ಪೊಲೀಸರು ಆರೋಪಿಯನ್ನು ಬಂಧಿಸಲು ವಿಳಂಬ ಮಾಡಿದರೆ ಅಥವಾ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ‘ಉಗ್ರ ಹೋರಾಟ’ ಮಾಡಬೇಕಾಗುತ್ತದೆ ಎಂದು ಬಸವ ಅನುಯಾಯಿಗಳು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಸಮಾಜದಲ್ಲಿ ಸೌಹಾರ್ದತೆ ಕೆಡಿಸುವ ಇಂತಹ ವಿಕೃತ ಮನಸ್ಥಿತಿಯ ವ್ಯಕ್ತಿಗಳಿಗೆ ತಕ್ಕ ಶಾಸ್ತಿಯಾಗಬೇಕು ಎಂಬುದು ಜನರ ಆಗ್ರಹವಾಗಿದೆ.
ಸದ್ಯ ವಿಜಯಪುರ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಯ ಪತ್ತೆಗಾಗಿ ಜಾಲ ಬೀಸಿದ್ದಾರೆ. ಈ ಘಟನೆಯಿಂದಾಗಿ ಜಿಲ್ಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಲಾಗಿದೆ.