Hampi Utsav 2026: ಸೈನಿಕರಿಗಾಗಿ ವೇಶ್ಯಾವಾಟಿಕೆ ಆರಂಭಿಸಿದ್ದ ವಿಜಯನಗರ ಅರಸರು; ಇಂಟರೆಸ್ಟಿಂಗ್ ಮಾಹಿತಿ | The Hidden History Of Hampi Why Vijayanagara Kings Established Official Quarters For Soldiers

Hampi Utsav 2026: ಸೈನಿಕರಿಗಾಗಿ ವೇಶ್ಯಾವಾಟಿಕೆ ಆರಂಭಿಸಿದ್ದ ವಿಜಯನಗರ ಅರಸರು; ಇಂಟರೆಸ್ಟಿಂಗ್ ಮಾಹಿತಿ | The Hidden History Of Hampi Why Vijayanagara Kings Established Official Quarters For Soldiers


ಹಂಪಿ ಉತ್ಸವದ ವಿಚಾರಗೋಷ್ಠಿಯಲ್ಲಿ, ವಿಜಯನಗರ ಸಾಮ್ರಾಜ್ಯದ ವೈಭವದ ಹಿಂದೆ ಮಹಿಳೆಯರ ಶೋಷಣೆ, ವೇಶ್ಯಾವಾಟಿಕೆ  ಶ್ರಮಿಕರ ಇತಿಹಾಸವನ್ನು ಕಡೆಗಣಿಸಿದಂತಹ ಕರಾಳ ಸತ್ಯಗಳನ್ನು ವಿದ್ವಾಂಸರು ವಿಶ್ಲೇಷಿಸಿದರು. ರಾಜರ ಇತಿಹಾಸಕ್ಕೆ ಸೀಮಿತವಾಗದೆ, ಜನಪದ ನಾಯಕ ಕುಮಾರರಾಮನಂತಹ ಸಾಮಾನ್ಯರ ಕಥೆಗಳ ಮಹತ್ವ ಹೇಳಲಾಯ್ತು.

ಭೀಮಣ್ಣ ಗಜಾಪುರ

ಹಂಪಿ: ವಿಜಯನಗರ ಕಾಲದಲ್ಲಿ ರಾಜಪ್ರಭುತ್ವವಿತ್ತೇ ವಿನಃ ಜನರ ಪ್ರಭುತ್ವ ಇರಲಿಲ್ಲ. ಆದರೆ ರಾಬರ್ಟ್ ಸಿವಿಲ್ ಎಂಬ ವಿದೇಶಿ ಸಂಶೋಧಕ ಬರೆದ “ಮರೆತು ಹೋದ ಮಹಾ ಸಾಮ್ರಾಜ್ಯ” ಕೃತಿ ಮತೀಯ ಭೇದಗಳ ಚರಿತ್ರೆಯನ್ನು ಕಟ್ಟಿಕೊಟ್ಟಿದೆ ಎಂದು ಬಳ್ಳಾರಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಂಗನಾಥ ಆರನಕಟ್ಟೆ ಅವರು ವಿಜಯನಗರ ಸಾಮ್ರಾಜ್ಯದ ಸಾಮಾಜಿಕ ಸ್ಥಿತಿಗತಿ ಬಗ್ಗೆ ವಿಶ್ಲೇಷಿಸಿದರು.

ಹಂಪಿ ಉತ್ಸವದ ವಿರೂಪಾಕ್ಷ ವೇದಿಕೆಯಲ್ಲಿ 2ನೇ ದಿನದ ವೇದಿಕೆಯಲ್ಲಿ ಆಯೋಜಿಸಿದ ವಿಚಾರಗೋಷ್ಠಿಯಲ್ಲಿ ಆಶಯ ನುಡಿಗಳನ್ನಾಡಿದ ಅವರು, ವಿಜಯನಗರ ಸಾಮ್ರಾಜ್ಯ ಜಾಗತಿಕವಾಗಿ ಹೆಸರಾಗಿದ್ದರೂ ಸಾಮಾನ್ಯ ಜನತೆಗೆ ಕೊಡುಗೆ ವಿಚಾರ ಬಂದಾಗ ಶೂನ್ಯವಾಗುತ್ತದೆ. ಸೈನಿಕರ ಲೈಂಗಿಕ ವಾಂಛೆಗಳನ್ನು ಈಡೇರಿಸಲು ವಿಜಯನಗರ ಅರಸರು ವೇಶ್ಯಾವಾಟಿಕೆ ಆರಂಭಿಸುವ ಮೂಲಕ ಮಹಿಳೆಯರ ಶೋಷಣೆ, ಬೆವರಿನ ಮೇಲೆ ಸಾಮ್ರಾಜ್ಯ ಕಟ್ಟಿದರು. ಧರ್ಮ ಮತ್ತು ವೇಶ್ಯಾವಾಟಿಕೆ ಸಮೀಕರಿಸಿಕೊಂಡು ಶ್ರಮ ಸಂಸ್ಕೃತಿಯ ಜನರನ್ನು ಮರೆಯಲಾಗಿದೆ ಎಂದರು.

ಯುದ್ಧ ಮಾಡಲು ಗುರಾಣಿ ತಯಾರು ಮಾಡುವವರನ್ನು, ಅಂದಿನ ವೈದ್ಯರನ್ನು, ದೇವಾಲಯ ಕಟ್ಟಿದ ಶ್ರಮಿಕರ ಇತಿಹಾಸ ಕೈಬಿಟ್ಟು ಕೇವಲ ರಾಜರ, ಉಳ್ಳವರ ಇತಿಹಾಸ ಮುಂಚೂಣಿಯಲ್ಲಿದೆ. ಶ್ರಮಿಕರ ಇತಿಹಾಸದ ಬಗ್ಗೆ ಸಂಶೋಧನೆ ಆಗಬೇಕಿದೆ ಎಂದರು.

ರಾಮನಗರದ ಸಂಶೋಧಕ ಎಚ್.ಡಿ. ಉಮಾಶಂಕರ ವಿಜಯನಗರ ಕಾಲದ ಸತಿಸಹಗಮನ ಪದ್ಧತಿ ಹಾಗೂ ದೇವದಾಸಿ ಪದ್ಧತಿ ಕುರಿತು ಮಾತನಾಡಿ, ವಿಜಯನಗರ ಸಾಮ್ರಾಜ್ಯ ವರ್ಣಾಶ್ರಮದ ಮೇಲೆ ನಿಂತಿತ್ತು. ಸತಿಸಹಗಮನ, ದೇವದಾಸಿ ಪದ್ಧತಿ ಮೂಲಕ ವಿಜಯನಗರ ಕೇವಲ ಧಾರ್ಮಿಕ ಕೇಂದ್ರವಾಗಿರದೇ ವ್ಯಾಪಾರ ಕೇಂದ್ರವೂ ಆಗಿತ್ತು. ವೇಶ್ಯಾವಾಟಿಕೆ ಮೂಲಕ ರಾಜಮನೆತನಕ್ಕೆ ಹೇರಳ ಆದಾಯವೂ ಬರುತ್ತಿತ್ತು. ಹೀಗಾಗಿ ರಾಜಪ್ರಭುತ್ವ ಜನಪ್ರಭುತ್ವ ಮರೆತು ಮಹಿಳೆಯರನ್ನು ಭೋಗದ ವಸ್ತುವನ್ನಾಗಿಸಿದ್ದು ಮಾತ್ರ ಮರೆಯಲಾರದ ಸಂಗತಿ ಎಂದರು.

ವಿಜಯನಗರ ವರ್ಷಗಳ ಕಾಲ ಆಳ್ವಿಕೆ ನಡೆಸಿದ ಮಹಾ ಸಾಮ್ರಾಜ್ಯವಾಗಿದ್ದು, ಮಹಿಳೆಯರ ಶೋಷಣೆ, ಶ್ರೀಸಾಮಾನ್ಯರ ಸಾಮಾಜಿಕ ಬದುಕಿಗೆ ವಿಮುಖವಾಗಿರುವುದು ಖೇದಕರ ಎಂದರು.

ಸಂಶೋಧಕ ಗಿರಿಜಾಪತಿ ಹಂಪಿಯ ಕುಮಾರರಾಮನ ಕಾವ್ಯಗಳು ಕುರಿತು ಮಾತನಾಡಿ, ಶ್ರೀಕೃಷ್ಣದೇವರಾಯ, ಪ್ರೌಢರಾಯನ ಬಗ್ಗೆ ಜನಸಾಮಾನ್ಯರು ಕಾವ್ಯ ಕಟ್ಟಲಿಲ್ಲ. ಕುಮಾರರಾಮನ ಬಗ್ಗೆ ನಮ್ಮ ಜನಪದರ ಮೌಖಿಕ ಕಾವ್ಯ ಪರಂಪರೆ ಹೇರಳವಾಗಿ ಸಿಗುತ್ತದೆ. ಕುಮಾರರಾಮನ ಬಗ್ಗೆ ಕೃತಿಗಳನ್ನು ಕವಿಗಳು ಚಿತ್ರಿಸಿದ್ದಾರೆ. ಕುಮಾರರಾಮನ ವರ್ಣನೆ ಬಣ್ಣಿಸಿದ್ದಾರೆ. ಕುಮಾರರಾಮನ ಜನಪದರ ಆಚರಣೆ ಹಂಪಿಯಿಂದ ಹಿಡಿದು ರಾಮನಗರದ ವರೆಗೂ ಹಬ್ಬಿತ್ತು. ರಾಮನಗರ ಎಂಬ ಹೆಸರು ಬಂದಿದ್ದು ಸಹ ಕುಮಾರರಾಮನಿಂದಲೇ ಎಂದು ತಿಳಿಸಿದರು.

ಕುಮಾರರಾಮ ಅವರ ಬಗ್ಗೆ ಡಾ. ರಾಜಕುಮಾರ್ ಚಲನಚಿತ್ರ ತೆಗೆಯುವ ಆಸೆ ಇತ್ತು; ಅದು ಈಡೇರಲಿಲ್ಲ. ಅದು ಈಡೇರಿದ್ದರೆ ಶ್ರೀಕೃಷ್ಣದೇವರಾಯ ಚಲನಚಿತ್ರದ ಸಾಲಿಗೆ ಬರುತ್ತಿತ್ತು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಮದ್ ಕೊಟ್ಟೂರು ಮಾತನಾಡಿ, ಹಂಪಿ ಬಯಲು ಮ್ಯೂಜಿಯಂ ಆಗಿದೆ. ಇಲ್ಲಿರುವ ಪ್ರಾಣಿ-ಪಕ್ಷಿಗಳು, ಸಸ್ಯ, ಜೀವ ವೈವಿಧ್ಯ ವಿಜಯನಗರ ಸಾಮ್ರಾಜ್ಯದ ಉನ್ನತಿಗೆ ಕಾರಣವಾಗಿದೆ ಎಂದು ಬಣ್ಣಿಸಿದರು. ಪ್ರಭೇದದ ಮೀನುಗಳು ತುಂಗಾಭದ್ರ ನದಿಯಲ್ಲಿರುವುದು ಗುರುತಿಸಿದ್ದರಿಂದ 2015ರಲ್ಲಿ ತುಂಗಭದ್ರಾ ನದಿ ಸಂರಕ್ಷಿತ ಪ್ರದೇಶವಾಗಿದೆ ಎಂದರು.

ಹಂಪಿ ಕನ್ನಡ ವಿವಿಯ ಹಸ್ತಪ್ರತಿ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಎಫ್‌.ಟಿ. ಹಳ್ಳಿಕೇರಿ ಅಧ್ಯಕ್ಷತೆ ವಹಿಸಿದ್ದರು. ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಗೋವಿಂದ, ಬಂಡೆ ಶ್ರೀಕಾಂತ, ರುದ್ರೇಶ್ ಮಾಡಿವಾಳ ಉಪಸ್ಥಿತರಿದ್ದರು. ಉಪನ್ಯಾಸಕ ನಾಗಾರಾಜ ಹವಾಲ್ದಾರ್ ಸ್ವಾಗತಿಸಿದರು. ಜೆ.ವಿ. ವಿಜಯಲಕ್ಷ್ಮಿ ಸಜ್ಜನ್ ಕೊಟ್ಟೂರು ನಿರೂಪಿಸಿದರು.

YouTube video player



Source link

Leave a Reply

Your email address will not be published. Required fields are marked *