
ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ, ಹಿರಿಯ ನಾಯಕ ಚಮನ್‌ಸಾಬ್ ಗಂಭೀರ ಆರೋಪ ಮಾಡಿದ್ದಾರೆ. ಜಬ್ಬಾರ್ ಅವರು ಚುನಾವಣಾ ಪ್ರಚಾರಕ್ಕೆ ಗೈರುಹಾಜರಾಗಿ, ಕಾಂಗ್ರೆಸ್ ಸೋಲಿಸಲು ಪಕ್ಷೇತರರಿಗೆ ಹಣ ನೀಡಿದ್ದಾರೆ ಎಂದು ಚಮನ್‌ಸಾಬ್ ಆರೋಪಿಸಿದರು.
ದಾವಣಗೆರೆ (ಏ.11): ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಿತಿ (ಕೆಪಿಸಿಸಿ) ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ ಬೆನ್ನಲ್ಲೇ, ಅವರ ವಿರುದ್ಧ ಸ್ವಪಕ್ಷದ ನಾಯಕರೇ ಗಂಭೀರ ಆರೋಪಗಳನ್ನು ಮಾಡುತ್ತಾ ವೀರೋಚಿತವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ದಾವಣಗೆರೆಯ ಹಿರಿಯ ಮುಖಂಡ ಹಾಗೂ ಮಾಜಿ ಮೇಯರ್ ಚಮನ್‌ಸಾಬ್ ಅವರು ಜಬ್ಬಾರ್ ವಿರುದ್ಧ ಕೆಂಡಾಮಂಡಲವಾಗಿದ್ದು, ‘ಮಾಡಿದ್ದುಣ್ಣೋ ಮಾರಾಯ’ ಎಂದು ಹೇಳುವ ಮೂಲಕ ರಾಜೀನಾಮೆ ಪ್ರಹಸನದ ಹಿಂದಿನ ಮುಖವನ್ನು ಅನಾವರಣಗೊಳಿಸಿದ್ದಾರೆ.
ಇದು ಷಡ್ಯಂತ್ರದ ಫಲ: ಚಮನ್‌ಸಾಬ್ ಕಿಡಿ
ಅಬ್ದುಲ್ ಜಬ್ಬಾರ್ ರಾಜೀನಾಮೆ ಬಗ್ಗೆ ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಚಮನ್‌ಸಾಬ್, ‘ಯಾರು ಏನನ್ನು ಬಿತ್ತುತ್ತಾರೋ ಅದನ್ನೇ ಕೊಯ್ಯುತ್ತಾರೆ. ಅಬ್ದುಲ್ ಜಬ್ಬಾರ್ ಅವರು ಪಕ್ಷಕ್ಕೆ ನೀಡಿದ ಕೊಡುಗೆಗಿಂತ ಮಾಡಿರುವ ಹಾನಿಯೇ ಹೆಚ್ಚು ಎಂಬಂತಿದೆ. ಯಾರೂ ಏನು ಮಾಡ್ತಾರೆ ಅದಕ್ಕೆ ತಕ್ಕ ಪ್ರತಿಫಲ ಅಥವಾ ಪ್ರತಿಕ್ರಿಯೆ ಸಿಕ್ಕೇ ಸಿಗುತ್ತೆ. ಇವತ್ತು ಜಬ್ಬಾರ್ ಅವರಿಗೆ ಈ ಪರಿಸ್ಥಿತಿ ಬಂದಿದೆ ಎಂದರೆ ಅದಕ್ಕೆ ಅವರೇ ಕಾರಣ’ ಎಂದು ನೇರವಾಗಿ ವಾಗ್ದಾಳಿ ನಡೆಸಿದರು.
ಚುನಾವಣಾ ಪ್ರಚಾರಕ್ಕೆ ಬರದೇ ಅಜ್ಞಾತರಾಗಿದ್ದೇಕೆ?
ದಾವಣಗೆರೆ ಲೋಕಸಭಾ ಚುನಾವಣೆಯ ವೇಳೆ ಅಬ್ದುಲ್ ಜಬ್ಬಾರ್ ಅವರು ಕಾಣಿಸಿಕೊಳ್ಳದ ಬಗ್ಗೆ ಚಮನ್‌ಸಾಬ್ ಆಕ್ಷೇಪ ವ್ಯಕ್ತಪಡಿಸಿದರು. ‘ಇದು ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗನ ಲಗ್ನ ಅಲ್ಲ, ಬದಲಾಗಿ ಇದು ಚುನಾವಣೆ. ದೇಶದ ಹಿತದೃಷ್ಟಿಯಿಂದ ನಡೆಯುವ ಯುದ್ಧ. ಆದರೆ 3 ಬಾರಿ ಎಂಎಲ್‌ಸಿ ಆದವರು ಚುನಾವಣೆ ವೇಳೆ ಪ್ರಚಾರಕ್ಕೆ ಬರದೇ ಅಜ್ಞಾತರಾಗಿ ಇರುವುದೇ ಒಂದು ದೊಡ್ಡ ಷಡ್ಯಂತ್ರ. 2023ರ ವಿಧಾನಸಭಾ ಚುನಾವಣೆಯಲ್ಲೂ ಅವರು ಬಂದು ಹೋಗಿದ್ದರೇ ಹೊರತು ಪ್ರಾಮಾಣಿಕವಾಗಿ ಕೆಲಸ ಮಾಡಿರಲಿಲ್ಲ. ಈಗ ಉಪ ಚುನಾವಣೆಯಲ್ಲೂ ಅದೇ ಚಾಳಿಯನ್ನು ಮುಂದುವರಿಸಿದ್ದಾರೆ’ ಎಂದು ಆರೋಪಿಸಿದರು.
ಪಕ್ಷೇತರ ಅಭ್ಯರ್ಥಿಗಳಿಗೆ ಕೋಟಿ ಕೋಟಿ ಫಂಡಿಂಗ್ ಆರೋಪ!
ಕೇವಲ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದು ಮಾತ್ರವಲ್ಲದೆ, ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಪಕ್ಷೇತರ ಅಭ್ಯರ್ಥಿಗಳಿಗೆ ಜಬ್ಬಾರ್ ಹಣಕಾಸಿನ ನೆರವು ನೀಡಿದ್ದಾರೆ ಎಂಬ ಗಂಭೀರ ವಿಷಯವನ್ನೂ ಚಮನ್‌ಸಾಬ್ ಪ್ರಸ್ತಾಪಿಸಿದ್ದಾರೆ. ‘ಕಾಂಗ್ರೆಸ್ ನಾಯಕರಿಗೆ ಮತ್ತು ಕೆಲವು ಪಕ್ಷೇತರ ಅಭ್ಯರ್ಥಿಗಳಿಗೆ ಇವರು ಫಂಡಿಂಗ್ ಮಾಡಿದ್ದಾರೆ ಎಂಬ ಗಾಳಿ ಮಾತು ಜಿಲ್ಲೆಯಾದ್ಯಂತ ಹರಡಿದೆ. 50 ಲಕ್ಷದಿಂದ ಒಂದು ಕೋಟಿ ರೂಪಾಯಿವರೆಗೆ ಹಣ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಪಕ್ಷದ ವರಿಷ್ಠರು ಈಗಾಗಲೇ ಗಮನ ಹರಿಸಿದ್ದಾರೆ ಮತ್ತು ಸೂಕ್ತ ಸಮಯದಲ್ಲಿ ಕ್ರಮ ಕೈಗೊಳ್ಳುತ್ತಾರೆ’ ಎಂದರು.
ಹೊಸ ಅಧ್ಯಕ್ಷರ ನೇಮಕಕ್ಕೆ ಒತ್ತಾಯ:
ಜಬ್ಬಾರ್ ರಾಜೀನಾಮೆಯಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ ಎಂದ ಚಮನ್‌ಸಾಬ್, ‘ಪಕ್ಷವು ಶೀಘ್ರದಲ್ಲೇ ಒಬ್ಬ ಸಮರ್ಥ ಮತ್ತು ಪ್ರಾಮಾಣಿಕ ಅಧ್ಯಕ್ಷರನ್ನು ಅಲ್ಪಸಂಖ್ಯಾತ ಘಟಕಕ್ಕೆ ನೇಮಕ ಮಾಡಲಿದೆ. ಕಾಂಗ್ರೆಸ್ ಪಕ್ಷದ ಶಕ್ತಿಯನ್ನು ಕುಂದಿಸಲು ಯತ್ನಿಸುವವರನ್ನು ಹೈಕಮಾಂಡ್ ಸುಮ್ಮನೆ ಬಿಡುವುದಿಲ್ಲ. ದಾವಣಗೆರೆಯಲ್ಲಿ ನಡೆದ ಈ ಎಲ್ಲಾ ಬೆಳವಣಿಗೆಗಳ ವರದಿ ಈಗಾಗಲೇ ದೆಹಲಿ ತಲುಪಿದೆ’ ಎಂದು ತಿಳಿಸಿದರು.