ಹೋಳಿ ಹಬ್ಬದ ಬಣ್ಣಗಳ ಬಗ್ಗೆ ಎಚ್ಚರ! ಇದು ಕಿವಿ ನೋವು, ಸೈನಸ್ ಸೋಂಕಿಗೂ ಕಾರಣವಾಗ್ಬೋದು | Warning Holi Colors Can Trigger Ear Pain And Sinus Infections

ಹೋಳಿ ಹಬ್ಬದ ಬಣ್ಣಗಳ ಬಗ್ಗೆ ಎಚ್ಚರ! ಇದು ಕಿವಿ ನೋವು, ಸೈನಸ್ ಸೋಂಕಿಗೂ ಕಾರಣವಾಗ್ಬೋದು | Warning Holi Colors Can Trigger Ear Pain And Sinus Infections



ಹೋಳಿ ಹಬ್ಬದ ಬಣ್ಣಗಳ ಬಗ್ಗೆ ಎಚ್ಚರ! ಇದು ಕಿವಿ ನೋವು, ಸೈನಸ್ ಸೋಂಕಿಗೂ ಕಾರಣವಾಗ್ಬೋದು | Warning Holi Colors Can Trigger Ear Pain And Sinus Infections

Holi color side effects: ಹೋಳಿ ಹಬ್ಬದ ಸಂಭ್ರಮದಲ್ಲಿ ಬಣ್ಣಗಳಾಟ ಸಾಮಾನ್ಯ. ಆದರೆ ಬಣ್ಣದಲ್ಲಿರುವ ರಾಸಾಯನಿಕಗಳು ಕೇವಲ ಚರ್ಮಕ್ಕಷ್ಟೇ ಅಲ್ಲದೆ, ಕಿವಿ, ಮೂಗಿನ ಆರೋಗ್ಯಕ್ಕೂ ಹಾನಿ ಉಂಟುಮಾಡಬಹುದು. ಈ ಬಗ್ಗೆ ಇಎನ್‌ಟಿ ಸರ್ಜನ್ ಡಾ. ಸೌಮ್ಯ ನೀಡಿರುವ ಮುನ್ನೆಚ್ಚರಿಕಾ ಕ್ರಮಗಳ ವಿವರ ಇಲ್ಲಿದೆ.     

ಹೋಳಿ ಹಬ್ಬ ಬಣ್ಣಗಳ ಹಬ್ಬ. ಸಂಗೀತ ಮತ್ತು ಸಂಭ್ರಮಾಚರಣೆಗಳ ಹಬ್ಬವೂ ಹೌದು. ಆದರೆ ಹೋಳಿ ಹಬ್ಬ ಇಎನ್‌ಟಿ (ಕಿವಿ, ಮೂಗು, ಗಂಟಲು) ತಜ್ಞರ ಪಾಲಿಗೆ ಕಿವಿ ಕಟ್ಟುವಿಕೆ, ಮೂಗಿನ ಕಿರಿಕಿರಿ ಮತ್ತು ಸೈನಸ್ ಸೋಂಕಿನ ಸಮಸ್ಯೆಗಳ ಜೊತೆಗೆ ರೋಗಿಗಳು ಸಾಲುಗಟ್ಟುವ ಸಮಯವೂ ಹೌದು. ಈ ಹಿನ್ನೆಲೆಯಲ್ಲಿ ಇಎನ್‌ಟಿ ಸರ್ಜನ್ ಡಾ. ಸೌಮ್ಯ ಎಂ.ಎಸ್ ಬಣ್ಣವು ಕಿವಿ ನೋವು ಮತ್ತು ಸೈನಸ್ ಸೋಂಕಿಗೆ ಹೇಗೆ ಕಾರಣವಾಗಬಹುದು ಎಂಬ ಮಾಹಿತಿ ನೀಡಿದ್ದಾರೆ ಓದಿ..

ಬಣ್ಣಗಳ ಜೊತೆ ಹಬ್ಬವನ್ನು ಸಂಭ್ರಮಿಸುವುದು ಒಳ್ಳೆಯದೇ. ಆದರೆ ಈ ವೇಳೆ ಜನರು ವಿವಿಧ ರಾಸಾಯನಿಕ ಮಿಶ್ರಣಗಳು ಮತ್ತು ಬಣ್ಣಗಳನ್ನು ಒಳಗೊಂಡಿರುವ ಪುಡಿಗಳನ್ನು ಬಳಸಿದಾಗ ಅದು ತೊಂದರೆ ಉಂಟುಮಾಡುತ್ತದೆ. ಅಂತಹ ಕೃತಕ ಬಣ್ಣಗಳು, ಸೂಕ್ಷ್ಮ ಕಣಗಳು ಮತ್ತು ಕಲುಷಿತ ನೀರಿನ ಕಾರಣದಿಂದ ಚರ್ಮ, ಕಣ್ಣು, ಕಿವಿ ಮತ್ತು ಮೂಗಿನ ಮೇಲೆ ನೇರ ಪರಿಣಾಮ ಉಂಟಾಗುತ್ತದೆ. ಅದು ಕಿರಿಕಿರಿ, ಉರಿಯೂತ ಮತ್ತು ಸೋಂಕುಗಳಿಗೆ ಕಾರಣವಾಗುತ್ತದೆ. ಚರ್ಮ ಮತ್ತು ಕಣ್ಣುಗಳ ಮೇಲೆ ಪರಿಣಾಮ ಬೀರಿದಾಗ ಅಲರ್ಜಿ ಅಥವಾ ಕಣ್ಣಿನ ಸಮಸ್ಯೆಗಳನ್ನು ಗುರುತಿಸುವುದು ಸುಲಭ, ಆದರೆ ಬಣ್ಣಗಳು ಕಿವಿ ಮತ್ತು ಮೂಗಿನ ಮೇಲೆ ಪರಿಣಾಮ ಬೀರಿದಾಗ ತೊಂದರೆಯನ್ನು ತಕ್ಷಣ ಗುರುತಿಸುವುದು ಅಷ್ಟು ಸುಲಭವಲ್ಲ. ಆದರೆ ಆರೋಗ್ಯ ಸಮಸ್ಯೆ ಉಂಟಾಗುವುದನ್ನು ಹೇಗೆ ತಪ್ಪಿಸುವುದು ಎಂದು ಮೊದಲೆ ಅರ್ಥಮಾಡಿಕೊಂಡರೆ ಹಬ್ಬವನ್ನು ಸುರಕ್ಷಿತವಾಗಿ ಆಚರಿಸಬಹುದು.

ಅದರಲ್ಲೂ ಮುಖ್ಯವಾಗಿ ಮುಖಕ್ಕೆ ಹಚ್ಚುವ ಬಣ್ಣದ ಪುಡಿಗಳಿಂದ ಕಿವಿ ಮತ್ತು ಮೂಗನ್ನು ರಕ್ಷಿಸಿಕೊಂಡರೆ ಹೋಳಿ ಹಬ್ಬದ ಆಚರಣೆಯು ಮತ್ತಷ್ಟು ಆನಂದದಾಯಕವಾಗಿರುತ್ತದೆ.

ಕಿವಿಯೊಳಗೆ ಹೋದಾಗ

ಬಣ್ಣದ ಪುಡಿಯನ್ನು ನೇರವಾಗಿ ಮುಖಕ್ಕೆ ಎಸೆದಾಗ, ಸೂಕ್ಷ್ಮ ಕಣಗಳು ಕಿವಿಯ ನಳಿಕೆಯ ಮೂಲಕ ಒಳಗೆ ಪ್ರವೇಶಿಸುವ ಸಾಧ್ಯತೆ ಇರುತ್ತವೆ. ಕಿವಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಒಂದು ನೈಸರ್ಗಿಕ ವ್ಯವಸ್ಥೆಯನ್ನು ಹೊಂದಿದೆ. ಹೊರ ಕಿವಿಯ ನಳಿಕೆಯಲ್ಲಿ ಸ್ರವಿಸುವ ಸೆರುಮೆನ್ (ಕಿವಿ ಮೇಣ) ಧೂಳು ಮತ್ತು ಸೂಕ್ಷ್ಮ ಕಣಗಳನ್ನು ತಡೆಯುತ್ತದೆ. ಇದು ತೇವಾಂಶ ಮತ್ತು ಬಣ್ಣದ ಪುಡಿಯ ಜೊತೆಗೆ ಬೆರೆತು ದಪ್ಪನೆಯ, ಅಂಟಂಟಾದ ಪದರವನ್ನು ರೂಪಿಸುತ್ತದೆ. ಇದು ಕಿವಿಯ ನಳಿಕೆಯನ್ನು ಮುಚ್ಚಿ, ಕಿವಿ ತುಂಬಿದಂತಹ ಅನುಭವವನ್ನು ನೀಡುತ್ತದೆ. ಇದರಿಂದ ಸಹಜವಾಗಿಯೇ ಕೇಳುವ ಸಾಮರ್ಥ್ಯ ಕಡಿಮೆಯಾಗುತ್ತದೆ.

ಜನರು ಇಯರ್ ಬಡ್ಸ್, ಪಿನ್ ಅಥವಾ ಇತರ ಚೂಪಾದ ವಸ್ತುಗಳನ್ನು ಬಳಸಿ ಕಿವಿ ಸ್ವಚ್ಛಗೊಳಿಸಲು ಪ್ರಯತ್ನಿಸಿದಾಗ, ಆ ಅಂಟಂಟಾದ ಮೇಣದಂತಹ ವಸ್ತುವು ಕಿವಿಯ ಆಳಕ್ಕೆ ತಳ್ಳಲ್ಪಡುತ್ತದೆ. ಇದು ಕಿವಿಯ ನಳಿಕೆಯಲ್ಲಿ ಸವೆತ ಅಥವಾ ಗಾಯಗಳಿಗೆ ಕಾರಣವಾಗುತ್ತದೆ.

ಈ ಸಣ್ಣ ಗಾಯಗಳು ಸೋಂಕು ಹರಡಲು ಪೂರಕವಾದ ವಾತಾವರಣವನ್ನು ನಿರ್ಮಿಸುತ್ತವೆ. ಕಿವಿಯ ನಳಿಕೆಯಲ್ಲಿ ಸಿಲುಕಿರುವ ತೇವಾಂಶ ಮತ್ತು ಉಳಿದ ಬಣ್ಣದ ಪುಡಿಯಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ವೇಗವಾಗಿ ಬೆಳೆಯುತ್ತವೆ. ಈ ಸ್ಥಿತಿಯನ್ನು ‘ಓಟಿಟಿಸ್ ಎಕ್ಸ್ಟರ್ನಾ’ ಎಂದು ಕರೆಯಲಾಗುತ್ತದೆ. ಇದು ಕಿವಿಯನ್ನು ಮುಟ್ಟಿದಾಗ ಅಥವಾ ಎಳೆದಾಗ ತೀವ್ರವಾಗುವ ನೋವನ್ನು ಉಂಟುಮಾಡುತ್ತದೆ. ಈ ನೋವಿನ ಜೊತೆಗೆ ಊತ ಮತ್ತು ತುರಿಕೆ ಕಾಣಿಸಿಕೊಳ್ಳಬಹುದು, ಇದು ದುರ್ವಾಸನೆಯಿಂದ ಕೂಡಿದ ಕಿವಿ ಸೋರಿಕೆಗೆ ಕಾರಣವಾಗಬಹುದು.

ಇಂತಹ ಸೋಂಕಿನಿಂದ ಕಿವಿಯ ನಳಿಕೆ ಕಿರಿದಾಗಬಹುದು ಮತ್ತು ಕೇಳುವ ಸಾಮರ್ಥ್ಯ ಕುಂಠಿತಗೊಳ್ಳಬಹುದು. ಮಧುಮೇಹಿಗಳು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳಲ್ಲಿ ಇಂತಹ ಸೋಂಕುಗಳು ಗಂಭೀರ ಸಮಸ್ಯೆಗಳನ್ನು ಉಂಟುಮಾಡುವ ಅಪಾಯ ಹೆಚ್ಚಿರುತ್ತದೆ. ಹೋಳಿಯಲ್ಲಿ ಬಳಸುವ ಬಣ್ಣದ ನೀರು ಸಹ, ಕಿವಿಯ ತಮಟೆಯಲ್ಲಿ ರಂಧ್ರವಿದ್ದರೆ ಅದರ ಮೂಲಕ ಮಧ್ಯ ಕಿವಿಯನ್ನು ಪ್ರವೇಶಿಸಿ, ಗಂಭೀರವಾದ ಸೋಂಕುಗಳಿಗೆ ದಾರಿ ಮಾಡಿಕೊಡಬಹುದು.

ಮೂಗು ಕೂಡ ಅಪಾಯಕ್ಕೆ ಒಳಗಾಗಬಹುದು

ಕಿವಿಗಳಷ್ಟೇ ಅಲ್ಲದೆ, ಮೂಗು ಮತ್ತು ಸೈನಸ್‌ ಗಳು ಕೂಡ ಸೋಂಕಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಮೂಗಿನ ಕುಳಿಯು ಲೋಳೆಯ ಪೊರೆ ಮತ್ತು ‘ಸಿಲಿಯಾ’ ಎಂದು ಕರೆಯಲ್ಪಡುವ ಸಣ್ಣ ಕೂದಲಿನಂತಹ ರಚನೆಗಳಿಂದ ಕೂಡಿರುತ್ತದೆ. ಹೋಳಿ ಆಚರಣೆಯ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಬಣ್ಣದ ಪುಡಿ ಗಾಳಿಯಲ್ಲಿ ಹರಡುತ್ತದೆ, ಇದನ್ನು ಆಚರಣೆಯಲ್ಲಿ ತೊಡಗಿರುವವರು ಸುಲಭವಾಗಿ ಉಸಿರಾಟದ ಮೂಲಕ ಒಳಗೆಳೆದುಕೊಳ್ಳುತ್ತಾರೆ.

ಈ ರಾಸಾಯನಿಕಯುಕ್ತ ಸೂಕ್ಷ್ಮ ಧೂಳು ಮೂಗಿನ ಹಾದಿಯಲ್ಲಿ ಕಿರಿಕಿರಿ ಉಂಟುಮಾಡಿ, ಉರಿಯೂತ ಮತ್ತು ಊತಕ್ಕೆ ಕಾರಣವಾಗಬಹುದು. ಮೂಗಿನ ಒಳಪದರದ ಊತವು ಸೈನಸ್‌ ಗಳಿಂದ ದ್ರವ ಹೊರಹೋಗುವ ಸಣ್ಣ ದ್ವಾರಗಳನ್ನು ಮುಚ್ಚಿಹಾಕುತ್ತದೆ. ಇದು ಲೋಳೆಯ ಸಹಜ ಹರಿವನ್ನು ತಡೆದು, ಸೈನಸ್‌ ಗಳಲ್ಲಿ ದ್ರವವು ನಿಂತುಹೋಗುವಂತೆ ಮಾಡುತ್ತದೆ.

ಸಾಮಾನ್ಯವಾಗಿ ಬಣ್ಣಗಳು ದೇಹ ಸೇರಿದ ಎರಡು ದಿನಗಳ ನಂತರ ದೇಹವು ಪ್ರತಿಕ್ರಿಯಿಸಲು ಪ್ರಾರಂಭಿಸುತ್ತದೆ. ಇದರಲ್ಲಿ ಮುಖದ ಭಾಗದಲ್ಲಿ ಒತ್ತಡ ಮತ್ತು ತಲೆನೋವು, ಮೂಗು ಕಟ್ಟುವುದು ಮತ್ತು ಗಟ್ಟಿಯಾದ ಲೋಳೆ ಸ್ರವಿಸುವುದು ಸಾಮಾನ್ಯ ಸಮಸ್ಯೆಗಳಾಗಿವೆ. ಕೆಲವು ಜನರಲ್ಲಿ ವಾಸನೆ ಗ್ರಹಿಸುವ ಸಾಮರ್ಥ್ಯ ಕಡಿಮೆಯಾಗಬಹುದು ಮತ್ತು ಲಘು ಜ್ವರ ಕಾಣಿಸಿಕೊಳ್ಳಬಹುದು. ಕೃತಕ ಬಣ್ಣಗಳು ಕಿರಿಕಿರಿ ಉಂಟುಮಾಡುವ ಪದಾರ್ಥಗಳಾಗಿದ್ದು, ಈಗಾಗಲೇ ಅಲರ್ಜಿಕ್ ರೈನೈಟಿಸ್ ಅಥವಾ ಆಸ್ತಮಾ ಇರುವವರಲ್ಲಿ ತೀವ್ರವಾದ ಉರಿಯೂತದ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಹೋಳಿ ಬಣ್ಣಗಳೊಂದಿಗೆ ಜಾಸ್ತಿ ಆಟವಾಡಿದರೂ ಅಥವಾ ಅಲ್ಪಾವಧಿಯಲ್ಲಿ ಬಣ್ಣ ದೇಹಕ್ಕೆ ತಾಗಿದರೂ ಜನರು ಮೂಗು ಕಟ್ಟುವುದು ಮತ್ತು ನಿಯಂತ್ರಿಸಲಾಗದ ಸೀನುವಿಕೆ ಸಮಸ್ಯೆಯನ್ನು ಅನುಭವಿಸಬಹುದು.

ಹೋಳಿ ಹಬ್ಬದಲ್ಲಿ ಬಳಸುವ ಬಣ್ಣಗಳ ರಾಸಾಯನಿಕ ಸಂಯೋಜನೆಯೇ ಒಂದು ದೊಡ್ಡ ಸಮಸ್ಯೆಯಾಗಿದೆ. ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ನಡೆಸಲಾದ ಅಧ್ಯಯನಗಳ ಪ್ರಕಾರ, ಕೆಲವು ಅಕ್ರಮ ಬಣ್ಣದ ಪುಡಿಗಳಿಗೆ ಅವು ಹೆಚ್ಚು ಪ್ರಕಾಶಮಾನವಾಗಿ ಕಾಣಲು ಅವುಗಳಲ್ಲಿ ಕೈಗಾರಿಕಾ ಡೈಗಳು ಮತ್ತು ಸೀಸದ ಸಂಯುಕ್ತಗಳು, ತಾಮ್ರದ ಸಲ್ಫೇಟ್, ಕ್ರೋಮಿಯಂ ಮತ್ತು ಮೈಕಾ ಧೂಳಿನಂತಹ ಅಂಶಗಳನ್ನು ಬಳಸಲಾಗುತ್ತದೆ ಎಂದು ತಿಳಿದುಬಂದಿದೆ. ಈ ರಾಸಾಯನಿಕಗಳು ಮೂಗಿನ ಹಾದಿ ಮತ್ತು ಕಿವಿಯ ನಳಿಕೆಗಳನ್ನು ಪ್ರವೇಶಿಸಿದಾಗ ತೀವ್ರ ಕಿರಿಕಿರಿಯನ್ನು ಉಂಟುಮಾಡುತ್ತವೆ. ಇಂತಹ ಪುಡಿಗಳು ಪದೇ ಪದೇ ದೇಹ ಸೇರಿದಾಗ ಅದು ದೀರ್ಘಕಾಲದ ಸೈನಸೈಟಿಸ್ ಮತ್ತು ಕಿವಿಯ ನಳಿಕೆಯಲ್ಲಿ ಸತತವಾದ ಸೂಕ್ಷ್ಮಗ್ರಾಹಿ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಮಕ್ಕಳ ಕಿವಿಯ ನಳಿಕೆ ಮತ್ತು ಮೂಗಿನ ಒಳಪದರಗಳು ಇನ್ನೂ ಬೆಳವಣಿಗೆಯ ಹಂತದಲ್ಲಿರುವುದರಿಂದ ಹಾಗೂ ಅವರ ರೋಗನಿರೋಧಕ ಶಕ್ತಿಯು ಪೂರ್ಣಪ್ರಮಾಣದಲ್ಲಿ ವಿಕಸನಗೊಳ್ಳದ ಕಾರಣ, ಅವರು ಇಂತಹ ಸೋಂಕುಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ನೋವು ಕಾಣಿಸಿಕೊಂಡಾಗ ಅದನ್ನು ತಿಳಿಸಲು ವಿಳಂಬ ಮಾಡುವುದರಿಂದ, ಮಕ್ಕಳು ಮತ್ತು ವಯಸ್ಕರಿಬ್ಬರಲ್ಲೂ ಆರಂಭಿಕ ಅಸ್ವಸ್ಥತೆಯು ಸೋಂಕಿನ ಕಾಯಿಲೆಯಾಗಿ ಉಲ್ಬಣಗೊಳ್ಳಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.

ಹೋಳಿ ಆಚರಣೆಯ ನಂತರ, ಜನರು ತಮ್ಮ ಚರ್ಮ, ಕಿವಿ ಮತ್ತು ಮೂಗನ್ನು ಸ್ವಚ್ಛಗೊಳಿಸಲು ಕೆಲವು ಒರಟಾದ ಉತ್ಪನ್ನಗಳನ್ನು ಬಳಸಿ ತಪ್ಪು ಮಾಡುತ್ತಾರೆ. ಕಿವಿಯ ನಳಿಕೆಯು ತನ್ನನ್ನು ತಾನು ಸ್ವಚ್ಛಗೊಳಿಸಿಕೊಳ್ಳುವ ನೈಸರ್ಗಿಕ ವ್ಯವಸ್ಥೆಯನ್ನು ಹೊಂದಿರುತ್ತದೆ. ಕಿವಿಯಲ್ಲಿ ಸಂಗ್ರಹವಾಗಿರುವ ಪುಡಿಯನ್ನು ಒತ್ತಡದಲ್ಲಿ ನೀರು ಹಾಯಿಸಿ ಅಥವಾ ವಸ್ತುಗಳನ್ನು ಬಳಸಿ ಬಲವಂತವಾಗಿ ತೆಗೆಯಲು ಪ್ರಯತ್ನಿಸಿದರೆ, ಅದರಿಂದ ಕಿವಿಯ ರಕ್ಷಣಾತ್ಮಕ ಪೊರೆಯನ್ನು ಹಾನಿಯಾಗಬಹುದು.

ಅದೇ ರೀತಿ, ಮೂಗನ್ನು ಅತಿಯಾಗಿ ಅಥವಾ ಜೋರಾಗಿ ಉಜ್ಜುವುದು ಮೂಗಿನ ಉರಿಯೂತದ ಲಕ್ಷಣಗಳನ್ನು ಮತ್ತಷ್ಟು ಉಲ್ಬಣಗೊಳಿಸಬಹುದು. ಒಂದು ವೇಳೆ ಎಡೆಬಿಡದ ಕಿವಿ ನೋವಿನ ಜೊತೆಗೆ ಕಿವಿಯಿಂದ ದ್ರವ ಸೋರುವುದು, ಶ್ರವಣ ಸಾಮರ್ಥ್ಯ ಕಡಿಮೆಯಾಗುವುದು, ಮುಖದ ಭಾಗದಲ್ಲಿ ತೀವ್ರ ನೋವು ಅಥವಾ ಹೆಚ್ಚಿನ ಜ್ವರ ಕಾಣಿಸಿಕೊಂಡರೆ ತಕ್ಷಣವೇ ವೈದ್ಯಕೀಯ ಸಹಾಯ ಪಡೆಯುವುದು ಉತ್ತಮ. ಇಎನ್‌ಟಿ ವೈದ್ಯರು ಸಮಸ್ಯೆಯನ್ನು ಪರಿಶೀಲಿಸಿ, ಸೋಂಕಿನ ತೀವ್ರತೆಗೆ ಅನುಗುಣವಾಗಿ ಚಿಕಿತ್ಸೆ ನೀಡುತ್ತಾರೆ.

ಬಣ್ಣಗಳಿಂದ ಉಂಟಾಗುವ ಹಾನಿಯನ್ನು ತಡೆಗಟ್ಟಲು ಸಲಹೆಗಳು
ಹೋಳಿ ಬಣ್ಣಗಳ ಸಡಗರದ ಹಬ್ಬ. ಈ ಸಂದರ್ಭದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸುವುದರಿಂದ ಕಿವಿ ಅಥವಾ ಮೂಗಿಗೆ ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಹಬ್ಬವನ್ನು ಆನಂದಿಸಬಹುದು. ಹಬ್ಬ ಆಚರಿಸುವವರು ಪಾಲಿಸಬಹುದಾದ ಕೆಲವು ಸಲಹೆಗಳು ಇಲ್ಲಿವೆ:
ನಂಬಿಕಸ್ತ ಬ್ರ್ಯಾಂಡ್‌ ಗಳ ಚರ್ಮ ಸ್ನೇಹಿ ಮತ್ತು ರಾಸಾಯನಿಕ ಮುಕ್ತ ಬಣ್ಣಗಳನ್ನು ಬಳಸಿ.
ಮುಖ, ಕುತ್ತಿಗೆ, ಕಿವಿಯ ಹಿಂಭಾಗ, ಹೊರ ಕಿವಿ ಮತ್ತು ಮೂಗಿನ ಹೊಳ್ಳೆಗಳಿಗೆ ಬಾದಾಮಿ ಎಣ್ಣೆ / ತೆಂಗಿನ ಎಣ್ಣೆ ಅಥವಾ ಪೆಟ್ರೋಲಿಯಂ ಜೆಲ್ಲಿಯನ್ನು ಹಚ್ಚಿಕೊಳ್ಳಿ.
ಸಾಧ್ಯವಾದರೆ ಮಾಸ್ಕ್ ಧರಿಸಿ. ನಿಮಗೆ ಆಸ್ತಮಾ ಅಥವಾ ಅಲರ್ಜಿಯ ಸಮಸ್ಯೆ ಇದ್ದರೆ, ನಿಮ್ಮ ಗುಂಪಿನವರು ನಿಮ್ಮ ಬಳಿ ಬಣ್ಣ ಎರಚುವಾಗ ಜಾಗರೂಕರಾಗಿರಲು ತಿಳಿಸಿ; ನಿಮ್ಮ ಇನ್ಹೇಲರ್ ಅನ್ನು ನಿಮ್ಮೊಂದಿಗೇ ಇಟ್ಟುಕೊಳ್ಳಿ.
ಮೂಗು ಕಟ್ಟುವಿಕೆಯನ್ನು ಕಡಿಮೆ ಮಾಡಲು ‘ಸಲೈನ್ ನೇಸಲ್ ಸ್ಪ್ರೇ’ ಅಥವಾ ಸ್ಟೀಮ್ ತೆಗೆದುಕೊಳ್ಳಿ.
ಕಿವಿ ಅಥವಾ ಮೂಗಿನಿಂದ ಯಾವುದೇ ವಸ್ತುವನ್ನು ಬಲವಂತವಾಗಿ ಹೊರತೆಗೆಯಲು ಪ್ರಯತ್ನಿಸಬೇಡಿ.
ಉಸಿರಾಟ ಅಥವಾ ಶ್ರವಣ ಸಾಮರ್ಥ್ಯದಲ್ಲಿ ತೊಂದರೆ ಉಂಟಾದರೆ, ಅಥವಾ ಕಿವಿ ಮತ್ತು ಮೂಗಿನಲ್ಲಿ ಯಾವುದೇ ಸಮಸ್ಯೆ ಅಥವಾ ನೋವು ಕಾಣಿಸಿಕೊಂಡರೆ ತಕ್ಷಣ ವೈದ್ಯಕೀಯ ಸಹಾಯ ಪಡೆಯಿರಿ.
ಹೋಳಿ ಭಾರತದ ಅತ್ಯಂತ ಸಂಭ್ರಮದ ಹಬ್ಬಗಳಲ್ಲಿ ಒಂದಾಗಿದೆ. ಈ ಸಂಭ್ರಮವನ್ನು ಬಣ್ಣಗಳ ಖುಷಿಗಾಗಿ ನೆನಪಿಟ್ಟುಕೊಳ್ಳಬೇಕೇ ಹೊರತು, ಸಮಸ್ಯೆ ಅಥವಾ ಸೋಂಕಿನಿಂದಲ್ಲ. ಹಾಗಾಗಿ ಜೋಪಾನವಾಗಿರಿ.



Source link

Leave a Reply

Your email address will not be published. Required fields are marked *