
Mysuru Dasara 2025: 415ನೇ ನಾಡಹಬ್ಬ ಮೈಸೂರು ದಸರಾಕ್ಕೆ ಲೇಖಕಿ ಬಾನು ಮುಸ್ತಾಕ್ ಚಾಮುಂಡಿ ಬೆಟ್ಟದಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಮತ್ತೊಂದೆಡೆ, ಮೈಸೂರು ಅರಮನೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರತ್ನಖಚಿತ ಸಿಂಹಾಸನ ಏರಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.
ಮೈಸೂರು(ಸೆ.21) 415ನೇ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ದಸರಾಗಾಗು ಸಾಂಸ್ಕೃತಿಕ ನಗರಿ ಮೈಸೂರು ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಪರ-ವಿರೋಧದ ನಡುವೆ ಲೇಖಕಿ ಬಾನು ಮುಸ್ತಾಕ್ ದಸರಾ ಉದ್ಘಾಟನೆ ನೆರವೇರಿಸಲಿದ್ದು, ಚಾಮುಂಡಿ ಬೆಟ್ಟದಲ್ಲಿ ಪೊಲೀಸರ ಭಾರೀ ಭದ್ರತೆಯೊಂದಿಗೆ ಸಿದ್ಧವಾಗಿದೆ.
ಕಾರ್ಯಕ್ರಮ ಉದ್ಘಾಟನೆಗೆ ಹಾಸನದಿಂದ ಮೈಸೂರಿಗೆ ಆಗಮಿಸಿರುವ ಬಾನು ಮುಷ್ತಾಕ್ ರಾಡಿಸನ್ ಬ್ಲೂ ಹೊಟೆಲ್‌ನಲ್ಲಿ ತಂಗಿದ್ದಾರೆ. ಅಲ್ಲಿಂದ ಕುಟುಂಬ ಸಮೇತವಾಗಿ ಬೆಟ್ಟಕ್ಕೆ ಆಗಮಿಸುವ ಉದ್ಘಾಟಕರನ್ನು ಸಿಎಂ ಸಿದ್ದರಾಮಯ್ಯ ಜೊತೆ ಸೇರಿ ಜಿಲ್ಲಾಡಳಿತ ಬರಮಾಡಿಕೊಳ್ಳಿದ್ದಾರೆ. ನಂತರ ಎಲ್ಲರೂ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ವೇದಿಕೆ ಆಗಮಿಸುವರು.
ದಸರಾ ಉದ್ಘಾಟನೆಗೆ ಭವ್ಯ ವೇದಿಕೆ ನಿರ್ಮಾಣ
ಉದ್ಘಾಟನೆ ಕಾರ್ಯಕ್ರಮಕ್ಕಾಗಿ ಚಾಮುಂಡಿ ದೇವಸ್ಥಾನದ ಪಕ್ಕದಲ್ಲಿ ಭವ್ಯ ವೇದಿಕೆ ನಿರ್ಮಿಸಲಾಗಿದ್ದು, ವೀಕ್ಷಣೆಗಾಗಿ ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ದೇವರ ದರ್ಶನದ ನಂತರ ವೇದಿಕೆ ಆಗಮಿಸುವ ಗಣ್ಯರು ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಅಧಿಕೃತವಾಗಿ ದಸರಾವನ್ನು ಉದ್ಘಾಟನೆ ಮಾಡುವರು. ಬೆಳಿಗ್ಗೆ 10:10ರಿಂದ 10:40ರ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಲೇಖಕಿ ಬಾನು ಮುಸ್ತಾಕ್(Banu musthaq) ಪುಷ್ಪಾರ್ಚನೆ ಮಾಡಿ ದಸರಾ ಉದ್ಘಾಟನೆ ಮಾಡಿ, ಉದ್ಘಾಟನಾ ಭಾಷಣ ಮಾಡಲಿದ್ದಾರೆ.
ಮೈಸೂರು ದಸರಾ ಉತ್ಸವದ ಮೊದಲ ದಿನದ ಕಾರ್ಯಕ್ರಮಗಳ ವಿವರ:
ಇದರೊಂದಿಗೆ ಮೊದಲ ದಿನವೇ ಹಲವು ಕಾರ್ಯಕ್ರಮಗಳು ಉದ್ಘಾಟನೆಯಾಗಲಿವೆ. ಮಧ್ಯಾಹ್ನ 12.30 ಕ್ಕೆ ಕುಪ್ಪಣ್ಣ ಪಾರ್ಕ್ ನಲ್ಲಿ ಫಲಪುಷ್ಪ ಪ್ರದರ್ಶನ ಉದ್ಘಾಟನೆ, ಮ 1 ಕ್ಕೆ ಮಹಾರಾಜ ಕಾಲೇಜು ಮೈದಾಮದಲ್ಲಿ ಆಹಾರ ಮೇಳ ಉದ್ಘಾಟನೆ, ಸಂಜೆ 4 ಕ್ಕೆ ದೇವರಾಜ ಅರಸು ಕ್ರೀಡಾಂಗಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿ ಉದ್ಘಾಟನೆ, ಸಂಜೆ 4 ಕ್ಕೆ ಕಾವಾ ಸಭಾಂಗಣದಲ್ಲಿ ಚಿಕ್ರಕಲಾ ಶಿಬಿರ ಉದ್ಘಾಟನೆ, ಸಂಜೆ 5ಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಪುಸ್ತಕ ಮೇಳ ಉದ್ಘಾಟನೆ, ಸಂಜೆ 5 ಗಂಟೆಗೆ ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಮತ್ತು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭ, ಸಂಜೆ 5.30 ಕ್ಕೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ದಸರಾ ಸಿಎಂ ಕಪ್ ಉದ್ಘಾಟನೆ, ಸಂಜೆ 6.30 ಕ್ಕೆ ಸಯ್ಯಾಜಿರಾವ್ ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರ ಉದ್ಘಾಟನೆ ಹಾಗೂ ರಾತ್ರಿ 7.30 ಕ್ಕೆ ದಸರಾ ವಸ್ತು ಪ್ರದರ್ಶನ ಉದ್ಘಾಟನೆ ನೆರವೇರಲಿದೆ.
ಮೈಸೂರು ಅರಮನೆ ಮೈದಾನದಲ್ಲಿ ಸಾಂಪ್ರದಾಯಿ ದಸರಾ ಆಚರಣೆ:
ಮತ್ತೊಂದೆಡೆ ಮೈಸೂರು ಅರಮನೆಯಲ್ಲಿ ನವರಾತ್ರಿ ಒಳಗೊಂಡ ಸಂಪ್ರದಾಯ ದಸರಾ ಆಚರಣೆಗಳು ಆರಂಭಗೊಂಡಿವೆ. ಇಂದಿನಿಂದ 11 ದಿನಗಳ ಕಾಲ ನಡೆಯುವ ಸಾಂಪ್ರದಾಯಿಕ ದಸರಾ ಆಚರಣೆಗಳನ್ನು ರಾಜ ವಂಶಸ್ಥ, ಸಂಸದ ಯದುವೀರ್ ನೆರವೇರಿಸಲಿದ್ದಾರೆ. ಮುಂಜಾನೆ 5 ಗಂಟೆಯಿಂದ ಅರಮನೆಯಲ್ಲಿ ನವರಾತ್ರಿ ಆಚರಣೆಗಳು ಜರುಗಲಿದ್ದು, ಮುಂಜಾನೆ 5:30 ರಿಂದ 5: 45ರ ಒಳಗೆ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಗುತ್ತದೆ. ಬೆಳಿಗ್ಗೆ 9:55 ರಿಂದ 10:15 ರ ಒಳಗೆ ಚಾಮುಂಡಿ ತೊಟ್ಟಿಯಲ್ಲಿ ಯದುವೀರ್‌ಗೆ ಕಂಕಣ ಧಾರಣೆ ಮಾಡಲಾಗುತ್ತದೆ. ಬೆಳಗ್ಗೆ 11: 35ಕ್ಕೆ ಕೋಡಿ ಸೋಮೇಶ್ವರ ದೇವಾಲಯದ ಬಳಿ ಪಟ್ಟದ ಆನೆ ಹಾಗೂ ಕುದುರೆ, ಹಸು ಸೇರಿದಂತೆ ಕಳಸ ಹೊತ್ತ ಮುತೈದೆಯರು ಆಗಮಿಸಿ ಪೂಜೆ ನೆರವೇರಿಸುವರು. ಮಂಗಳವಾದ್ಯದೊಂದಿಗೆ ಸವಾರಿ ತೊಟ್ಟಿಯಲ್ಲಿ ನೆರವೇರಲಿರುವ ಪೂಜಾ ಕಂಕೈರ್ಯಗಳು ನಡೆಯುವುವು.
ಮೈಸೂರು ದಸರಾ: ಯದುವೀರ್ ಒಡೆಯರ್ ಖಾಸಗಿ ದರ್ಬಾರ್:
ಮಧ್ಯಾಹ್ನ 12:42 ರಿಂದ 12:58 ನಡುವೆ ಯದುವೀರ್ ಖಾಸಗಿ ದರ್ಬಾರ್ ಆಚರಣೆ ಮಾಡಲಿದ್ದಾರೆ. ರತ್ನ ಖಚಿತ ಸಿಂಹಾಸನ ಏರಿ ದರ್ಬಾರ್ ನಡೆಸಲಿರುವ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್, ನಾಡಿನ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸುವರು. ಮದ್ಯಾಹ್ನ 2:05 ರ ಒಳಗೆ ಚಾಮುಂಡೇಶ್ವರಿ ಪೋಟೋವನ್ನು ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ರವಾನೆ ಮಾಡಲಾಗುವುದು. ಅದೇ ರೀತಿ ಸಂಜೆ ಮತ್ತೊಮ್ಮೆ ಯದುವೀರ್ ಖಾಸಗಿ ದರ್ಬಾರ್ ಮಾಡುವರು.
ಒಟ್ಟಾರೆ ಅರಮನೆ ನಗರಿಯಲ್ಲಿ ದಸರಾ ಸಂಭ್ರಮ ಅದ್ಧೂರಿಯಾಗಿದೆ. ಆದಾಗ್ಯೂ ಉದ್ಘಾಟಕರ ಮೇಲೆ ಕುಪಿತರಾಗಿರುವ ಹಲವು ಸಂಘಟನೆಗಳ ಭಯದಲ್ಲಿ ನಗರದಲ್ಲಿ ಬಾರಿ ಭದ್ರತೆಯನ್ನೇ ಮಾಡಲಾಗಿದೆ.
ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು.